ಮೈಸೂರು

ಬಾಡಿಗೆ ಮನೆ ಇಲ್ಲವೇ ಸರ್ಕಾರಿ ಕ್ವಾಟರ್ಸ್ ಕೊಡಿಸಿ

ಬಾಡಿಗೆ ಮನೆ ಇಲ್ಲವೇ ಸರ್ಕಾರಿ ಕ್ವಾಟರ್ಸ್ ಕೊಡಿಸಿ
Published On :

ಕ.ಪ್ರ.ವಾರ್ತೆ , ಮೈಸೂರು , ಮೇ 4
ಮೈಸೂರಿನಲ್ಲಿ ವಾಸಿಸಲು ನನಗೊಂದು ಬಾಡಿಗೆ ಮನೆ ಇಲ್ಲವೆ ಸರ್ಕಾರಿ ಕ್ವಾಟರ್ಸ್ ಕೊಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರೇಮಕುಮಾರಿ ಮನವಿ ಮಾಡಿದರು.
ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವ ಎಸ್.ಎ. ರಾಮದಾಸ್ ಮತ್ತು ನನ್ನ ನಡುವಿನ ಪ್ರೇಮ ಸಂಬಂಧ ಪ್ರಕರಣ ಬೆಳಕಿಗೆ ಬಂದ ಮೇಲೆ ನಮ್ಮ ಕುಟುಂಬದ ಮೇಲೆ ಕಿರುಕುಳ ಹೆಚ್ಚಾಗಿದೆ. ಈಗಿರುವ ಬಾಡಿಗೆ ಮನೆಯನ್ನು ಖಾಲಿ ಮಾಡಿ ಎನ್ನುತ್ತಿದ್ದಾರೆ. 3 ತಿಂಗಳಿಂದ ಬಾಡಿಗೆಗಾಗಿ ಮನೆ ಹುಡುಕುತ್ತಿದ್ದರೂ ಇನ್ನೂ ಸಿಕ್ಕಿಲ್ಲ. ರಾಜಕೀಯ ಪ್ರೇರಿತ ಕಾರಣಕ್ಕೆ ನಮಗೆ ಸಾಮಾಜಿಕ ಬಹಿಷ್ಕಾರ ಹಾಕಿದಂಥ ವಾತಾವರಣ ನಿರ್ಮಿಸಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಮಹಿಳೆಗೆ ಅನ್ಯಾಯವಾಗುತ್ತಿದ್ದು, ಇದರತ್ತ ಅವರು ಗಮನಹರಿಸಿ ಸೂಕ್ತ ರಕ್ಷಣೆ ಒದಗಿಸಬೇಕು. ನನ್ನ ಹಿಂದೆ ಬೇಹುಗಾರಿಕೆ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಡಿಐಜಿ ಅವರಿಗೆ ವರ್ಷದ ಹಿಂದೆ ದೂರು ನೀಡಿದೆ. ಆದರೆ, ಈಗ ಮತ್ತೆ ಬೇಹುಗಾರಿಕೆ ಆರಂಭಿಸಿದ್ದಾರೆ. ನಾನು ಅಪರಾಧ ಮಾಡಿಲ್ಲ. ವೈಯಕ್ತಿಕ ಜೀವನದಲ್ಲಿ ಆದ ತೊಂದರೆ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ ಎಂದರು.
ಪ್ರಬಲ ವ್ಯಕ್ತಿಯಿಂದ ಅನ್ಯಾಯಕ್ಕೊಳಗಾಗಿ ನ್ಯಾಯಕ್ಕಾಗಿ ನಾನು ಧ್ವನಿ ಎತ್ತಿದ್ದು ತಪ್ಪೇ? ಸುಸಂಸ್ಕೃತ ಎಂದು ಕರೆಸಿಕೊಳ್ಳುವ ಮೈಸೂರಿನ ಜನತೆಗೆ ಇದು ಶೋಭೆ ತರುತ್ತದೆಯೇ? ನನಗೆ ಬಾಡಿಗೆ ಮನೆ ಕೊಡಲು ಪ್ರಭಾವಿ ವ್ಯಕ್ತಿಗಳು ಬಿಡುತ್ತಿಲ್ಲ. ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಿ ಬಾಡಿಗೆ ಮನೆ ಅಥವಾ ಸರ್ಕಾರಿ ಕ್ವಾಟರ್ಸ್ ಕೊಡಿಸಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಯವರ ಕಚೇರಿ ಎದುರು ಧರಣಿ ನಡೆಸುತ್ತೇನೆ ಎಂದರು.
ನಾನು ರಾಮದಾಸ್ ಪತ್ನಿ, ಅವರ ಜತೆ ಇರಬೇಕು. ಈ ಸಂಬಂಧ ಎಲ್ಲ ದಾಖಲೆಗಳಲ್ಲೂ ಪ್ರೇಮ ರಾಮದಾಸ್ ಎಂದಿದೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲೂ ಪ್ರೇಮ ರಾಮದಾಸ್ ಎಂದೇ ಉಲ್ಲೇಖಿಸಿದ್ದೇನೆ. ನಾನು ಯಾವುದೇ ಕಾರಣಕ್ಕೂ ಮೈಸೂರು ತೊರೆಯುವುದಿಲ್ಲ. ನನ್ನ ಗಂಡ ರಾಮದಾಸ್ ಅವರೊಂದಿಗೆ ವಾಸಿಸಬೇಕು ಎಂಬುದು ನನ್ನ ಹೆಬ್ಬಯಕೆ. ಹೀಗಾಗಿಯೇ ಕಾನೂನು ಹೋರಾಟ ನಡೆಸುತ್ತಿದ್ದೇನೆ. ನನಗೆ ನ್ಯಾಯ ದೊರಕುವ ವಿಶ್ವಾಸವಿದೆ. ಅಲ್ಲಿಯವರೆಗೂ ಮೈಸೂರಲ್ಲಿ ನೆಲೆಸಲು ನನಗೊಂದು ಮನೆಬೇಕು ಎಂದರು.
ಯಾರ ಪ್ರಭಾವವೂ ಇಲ್ಲ: ನನ್ನ ಹಿಂದೆ ಯಾರ ಪ್ರಭಾವ, ರಾಜಕೀಯ ಶಕ್ತಿ ಇಲ್ಲ. ಇದ್ದಿದ್ದರೇ ಮೈಸೂರಿನಲ್ಲಿ ಬಾಡಿಗೆ ಮನೆಗಾಗಿ ಪರದಾಡುತ್ತಿರಲಿಲ್ಲ. ಕಾಂಗ್ರೆಸ್ ಸಮಾವೇಶಕ್ಕೆ ಸಾಮಾನ್ಯ ಪ್ರಜೆಯಾಗಿ ಸೋನಿಯಾ ಗಾಂಧಿ ಅವರ ಭಾಷಣ ಕೇಳಲು ಹೋಗಿದ್ದೆ. ನಾನು ರಾಜಕೀಯಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನನ್ನಿಂದ ರಾಮದಾಸ್ ಅವರಿಗೆ ಕಪ್ಪು ಚುಕ್ಕೆ ಆಗಿಲ್ಲ. ಅವರಿಂದ ನನಗೆ ಸರ್ಕಾರಿ ಕೆಲಸದಲ್ಲಿ ಕಪ್ಪು ಚುಕ್ಕೆಯಾಗಿದೆ. ಮೈಸೂರಿನಿಂದ ತುಮಕೂರಿಗೆ ವರ್ಗಾವಣೆ ಆದಾಗ ನನಗೆ ಹೋಗಲು ಇಷ್ಟವಿರಲಿಲ್ಲ. ಆ ವರ್ಗಾವಣೆಯ ಆದೇಶವನ್ನು ನಮ್ಮ ಮನೆಗೆ ತಂದುಕೊಟ್ಟಿದ್ದು ಖಾಸಗಿ ವಾಹಿನಿಯ ವರದಿಗಾರ. ಕೆಲವು ದಿನ ಮಾತ್ರ ತುಮಕೂರಿನಲ್ಲಿ ಕೆಲಸ ಮಾಡಿ ನಂತರ ಗೈರು ಹಾಜರಾದೆ. ಇದರಿಂದಾಗಿ ನನ್ನನ್ನು ಸೇವೆಯಿಂದ ಅಮಾನತುಗೊಳಿಸಿದ್ದರು. ಈಗ ಮೈಸೂರು ಜಿಲ್ಲೆಗೆ ವರ್ಗಾವಣೆ ಆಗಿದೆ. ಆದರೆ, ಅಮಾನತು ಆದೇಶವು ತೆರವಾಗಿಲ್ಲ. ಅದು ತೆರವಾದ ಕೂಡಲೇ ಕೆಲಸಕ್ಕೆ ಹೋಗುವುದಾಗಿ ಅವರು ಹೇಳಿದರು.
ಬಾಡಿಗೆ ಮನೆಗಾಗಿ 98443 13365 ಸಂಪರ್ಕಿಸಿ!
ಮೈಸೂರು: ಮೈಸೂರಿನಲ್ಲಿ ಬಾಡಿಗೆ ಮನೆ ನೀಡುತ್ತಿಲ್ಲ ಎನ್ನುವ ಮೂಲಕ ಪ್ರೇಮಕುಮಾರಿ ಅವರು ಮೈಸೂರಿನವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಮೈಸೂರು ರಕ್ಷಣಾ ವೇದಿಕೆಯವರು ಅಗ್ರಹಾರ ವೃತ್ತದಲ್ಲಿ ಭಾನುವಾರ ಪ್ರತಿಭಟಿಸಿದರು. ಮೈಸೂರಿನ ಜನತೆ ಮಹಿಳಾ ವಿರೋಧಿಗಳಲ್ಲ. ಬಾಡಿಗೆ ಮನೆ ಕೊಡಿಸುವುದು ಮುಖ್ಯಮಂತ್ರಿಯವರ ಕೆಲಸವಲ್ಲ. ಪ್ರೇಮಕುಮಾರಿ ಅವರಿಗೆ ಮನೆ ಬೇಕಿದರೆ ನಮ್ಮ ವೇದಿಕೆಯವರನ್ನು (ಮೊ. 98443 13365) ಸಂಪರ್ಕಿಸಲಿ ಎಂದರು. ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್, ಮುಖಂಡರಾದ ರಾಜೇಶ್, ವಿಕ್ರಮ್, ರಾಘವೇಂದ್ರ, ಗುರುರಾಜ್, ದೀಪಕ್, ಗುರುರಾಜ ಶೆಟ್ಟಿ, ಚಂದ್ರು ಇದ್ದರು.
ಜಾಗ ಖಾಲಿ: ಯಾವುದೇ ಅನುಮತಿ ಪಡೆಯದೇ ಮೈಸೂರು ರಕ್ಷಣಾ ವೇದಿಕೆಯವರಿಗೆ ಅಗ್ರಹಾರ ವೃತ್ತದಲ್ಲಿ ಪ್ರತಿಭಟಿಸುತ್ತಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಕೆ.ಆರ್. ಠಾಣೆ ಪೊಲೀಸರು, ಪ್ರತಿಭಟನೆ ನಡೆಸಲು ಅನುಮತಿ ಪಡೆದಿದ್ದೀರಾ ಎಂದು ವೇದಿಕೆಯವರನ್ನು ಪ್ರಶ್ನಿಸಿದರು. ಇದಕ್ಕೆ ವೇದಿಕೆಯವರು ಇಲ್ಲವೆಂದು ಉತ್ತರಿಸಿದರು. ಅನುಮತಿ ಇಲ್ಲದೆ ಪ್ರತಿಭಟಿಸುವಂತಿಲ್ಲ ಎಂದು ಪೊಲೀಸರು ಹೇಳುತ್ತಿದ್ದಂತೆ ವೇದಿಕೆಯವರು ಜಾಗ ಖಾಲಿ ಮಾಡಿದರು.
97408 99413 ಗೂ ಕರೆ ಮಾಡಬಹುದು
ಮೈಸೂರು: ವಾಸಿಸಲು ಬಾಡಿಗೆ ಮನೆ ಇಲ್ಲವೆ ಸರ್ಕಾರಿ ಕ್ವಾಟರ್ಸ್ ಮಂಜೂರು ಮಾಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಯವರ ಮನೆ ಎದುರು ಪ್ರತಿಭಟಿಸುವುದಾಗಿ ಪ್ರೇಮಕುಮಾರಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಕೃಷ್ಣರಾಜ ಗೆಳೆಯರ ಬಳಗದ ಗೌರವಾಧ್ಯಕ್ಷ ಕಂಸಾಳೆ ರವಿ ಖಂಡಿಸಿದ್ದಾರೆ. ಪ್ರೇಮಕುಮಾರಿ ಅವರಿಗೆ ವಾಸಿಸಲು ಮನೆ ಬೇಕಿದ್ದರೇ ನಮ್ಮ ಬಳಗವನ್ನು (ಮೊ.97408 99413) ಸಂಪರ್ಕಿಸಲಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.