ಕಾರಂಜಿ ಕೆರೆಯಲ್ಲಿ ನೂರಾರು ಮೀನುಗಳ ಸಾವು
ಮೈಸೂರು: ನಗರದ ಕಾರಂಜಿ ಕೆರೆಗೆ ಕಲುಷಿತ ನೀರು ಸೇರಿದ್ದರಿಂದ ನೂರಾರು ಮೀನುಗಳು ಸಾವಿಗೀಡಾಗಿರುವುದು ಶನಿವಾರ ಪತ್ತೆಯಾಗಿದೆ. ಬನ್ನೂರು ರಸ್ತೆ ಮತ್ತು ಲಲಿತಮಹಲ್ ರಸ್ತೆ ಸಂಪರ್ಕಿಸುವ ಒಳಚರಂಡಿ ಪೈಪ್ ಒಡೆದು, ಕಲುಷಿತ ನೀರು ಕೆರೆಗೆ ಹರಿದಿರುವುದು ಈ ದುರಂತಕ್ಕೆ ಕಾರಣ. ಕಾರಂಜಿ ಕೆರೆಯು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಸೇರಿದೆ. ಮೃಗಾಲಯದ ಅದಿಕಾರಿಗಳು ನಗರ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಈ ವಿಷಯ ತಿಳಿಸಿ, ಒಳಚರಂಡಿ ಪೈಪ್ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಸಾವಿಗೀಡಾಗಿರುವ ಮೀನುಗಳನ್ನು ಕಾರಂಜಿ ಕೆರೆ ಸಿಬ್ಬಂದಿ, ಅವುಗಳನ್ನು ಸಂಗ್ರಹಿಸಿ, ನಂತರ ದಹಿಸಿದರು. ಸಾವಿಗೀಡಾದ ಮೀನುಗಳನ್ನು ಪಕ್ಷಿ, ಪ್ರಾಣಿಗಳು ತಿಂದಲ್ಲಿ ಅನಾಹುತವಾಗುತ್ತದೆ ಎಂಬ ಮುನ್ನೆಚ್ಚರಿಕೆಯಿಂದ ಸತ್ತ ಮೀನುಗಳನ್ನು ಸುಡಲಾಗಿದೆ. ನಗರದಲ್ಲಿ ಸತತವಾಗಿ ಮಳೆಯಾಗಿದ್ದರಿಂದ ಒಳಚರಂಡಿ ಪೈಪು ಕಟ್ಟಿಕೊಂಡು ಒಡೆದಿರಬೇಕು ಎಂದು ಶಂಕಿಸಲಾಗಿದೆ. ಯಾವುದೇ ಸಂದರ್ಭದಲ್ಲಿಯೂ ಕಲುಷಿತ ನೀರು ಕೆರೆಗೆ ಹರಿದು ಬಾರದಂತೆ ತಡೆಯಲು ಮೃಗಾಲಯ ಅದಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ.
ಬಸವ ಜಯಂತಿ ಆಚರಣೆ 15ಕ್ಕೆ
ಕೆ.ಆರ್. ನಗರ: ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಬಸವ ಬಳಗದ ವತಿಯಿಂದ ಮೇ 15ರಂದು ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಿಸಲಾಗುವುದು. ಹುಣಸೂರು ರಸ್ತೆಯಲ್ಲಿರುವ ಸೋಮೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿವೃತ್ತ ಹಿರಿಯ ವಿಭಾಗ ನಿಯಂತ್ರಣಾಧಿಕಾರಿ ಎಸ್.ಎಂ. ಹಂಪಯ್ಯ ಉದ್ಘಾಟಿಸುವರು. ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಅಧ್ಯಕ್ಷತೆ ವಹಿಸುವರು.
ಮಾಂಸ ನಿಷೇಧ
ಮೈಸೂರು: ಬುದ್ಧ ಪೂರ್ಣಿಮಾ ಅಂಗವಾಗಿ ನಗರಪಾಲಿಕೆ ವ್ಯಾಪ್ತಿಗೊಳಪಡುವ ಕುರಿ, ಮೇಕೆ ಕಸಾಯಿಖಾನೆ ಮತ್ತು ಇತರೆ ಎಲ್ಲ ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ಮೇ 14 ರಂದು ಮುಚ್ಚುವಂತೆ ನಗರಪಾಲಿಕೆ ಆರೋಗ್ಯಾಧಿಕಾರಿ ಆದೇಶಿಸಿದ್ದಾರೆ.
ಓಕುಳಿ ಹಬ್ಬ
ಕೆ.ಆರ್. ನಗರ: ತಾಲೂಕಿನ ಕುಪ್ಪೆ ಗ್ರಾಮದಲ್ಲಿ ಮೇ 11 ರಿಂದ 13 ರವರೆಗೆ ಓಕುಳಿ ಹಬ್ಬ ನಡೆಯಲಿದೆ. ಹಬ್ಬದ ಪ್ರಯುಕ್ತ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ರಂಗ ಸುಗ್ಗಿ ಯೋಜನೆಯಡಿ ಗ್ರಾಮಸ್ಥರು ರಕ್ತರಾತ್ರಿ ಅಥವಾ ಅಶ್ವತ್ಥಾಮನ ಪ್ರತಿಜ್ಞೆ ಎಂಬ ಪೌರಾಣಿಕ ನಾಟಕದಲ್ಲಿ ಅಭಿನಯಿಸುವರು.
ಹೇಳಿಕೆಗೆ ಖಂಡನೆ
ಕೆ.ಆರ್. ನಗರ: ಶಾಸಕರ ಚೇಲಾಗಳಾಗಿರುವ ಕುಪ್ಪಳಿ ಸೋಮು, ಬಂಡಹಳ್ಳಿ ಕುಚೇಲ ಮತ್ತು ಓಬೇಗೌಡ ತಾಲೂಕು ಎಪಿಎಂಸಿ ಅಧ್ಯಕ್ಷರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದಕ್ಕೆ ಎಪಿಎಂಸಿ ನಿರ್ದೇಶಕ ಎಚ್.ಎನ್. ರಾಜೇಗೌಡ, ಎಚ್.ಪಿ. ಪ್ರಶಾಂತ್ ಮತ್ತು ಜಿ.ಎಸ್. ಶಿವಕುಮಾರ್ ಖಂಡಿಸಿದ್ದಾರೆ. ಎಪಿಎಂಸಿ ಆವರಣಕ್ಕೆ ಕಾಂಪೌಂಡ್ ನಿರ್ಮಿಸಲು ಆಡಳಿತ ಮಂಡಳಿಯ ಸಭೆಯಲ್ಲಿಯೇ ನಿರ್ಧಾರ ಕೈಗೊಳ್ಳಲಾಗಿತ್ತು. ಆ ಸಭೆಯಲ್ಲಿ ನಿರ್ದೇಶಕರಾಗಿರುವ ಇವರೇ ಹಾಜರಿದ್ದರು. ಎಲ್ಲ ಕಾಮಗಾರಿಗಳಿಗೆ ಇವರು ಒಪ್ಪಿಗೆ ಸೂಚಿಸಿದ್ದು, ಈಗ ಶಾಸಕರನ್ನು ಓಲೈಸಲು ಹೇಳಿಕೆ ನೀಡುತ್ತಿರುವುದು ರಾಜಕೀಯ ಗೊಸುಂಬೆತನ ಎಂದು ಟೀಕಿಸಿದ್ದಾರೆ.
ಶೇ. 92.39
ಎಚ್.ಡಿ. ಕೋಟೆ: ಪಟ್ಟಣದ ವಿಶ್ವಭಾರತಿ ಎಜುಕೇಷನ್ ಟ್ರಸ್ಟ್ ನಡೆಸುವ ಪಿಯು ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.92.39 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಶೇ. 94.23, ಕಲಾ ವಿಭಾಗದಲ್ಲಿ ಶೇ.90 ರಷ್ಟು ಪಾಸಾಗಿ ದ್ದಾರೆ. ಅವರಲ್ಲಿ ತ್ರಿಶೂಲ್ 553, ವಾಣಿ 544, ಅಫ್ಸಲ್ 539, ಎಚ್.ಡಿ. ಪ್ರಿಯಾಂಕ 522, ಎಂ.ಕೆ. ಕಾವ್ಯ 512, ಎಂ.ಎನ್. ವಿನುಕುಮಾರ್ 508, ಬಿ. ರವಿಕುಮಾರ್ 505 ಅಂಕ ಗಳಿಸಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

