ಮೈಸೂರು

ಉಪನ್ಯಾಸ

Published On :

ಎಚ್.ಡಿ. ಕೋಟೆ: ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ ವತಿಯಿಂದ ಅಂತರಸಂತೆ ಸಂಚಾರಿ ಗಿರಿಜನ ಆರೋಗ್ಯ ಘಟಕದ ಆವರಣದಲ್ಲಿ ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳು ಹಾಗೂ ಬುಡಕಟ್ಟು ಜನಾಂಗದವರನ್ನು ಮದ್ಯಪಾನ ಮುಕ್ತರನ್ನಾಗಿಸುವ ಕುರಿತು ಒಂದು ದಿನದ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರವನ್ನು ಶಾಸಕ ಎಸ್. ಚಿಕ್ಕಮಾದು ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕ ಡಾ.ಟಿ.ಟಿ. ಬಸವನಗೌಡ, ತಾಪಂ ಅಧ್ಯಕ್ಷ ರವಿಕುಮಾರ್, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಎನ್. ರವೀಶ್, ಡಾ.ಎಂ.ಎ. ಬಾಲಸುಬ್ರಹ್ಮಣ್ಯ, ನಾಗೇಂದ್ರರ ಕಟ್ಟೇಮಳಲವಾಡಿ ಭಾಗವಹಿಸಿದ್ದರು. ಎಸ್. ಪ್ರತಿಭಾ ಸ್ವಾಗತಿಸಿದರು. ಸದಾಶಿವ ವಂದಿಸಿದರು.
ಪ್ರವೇಶ
ಕೆ.ಆರ್. ನಗರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ತಾಲೂಕಿನ ವಿವಿಧ ಪ.ಜಾತಿ, ವರ್ಗದ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ 2014-15ನೇ ಸಾಲಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಕೆ.ಆರ್. ನಗರದಲ್ಲಿರುವ ಪ.ಜಾತಿಯ ಬಾಲಕರು ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ ಹಾಗೂ ಪ.ವರ್ಗದ ಬಾಲಕರ ವಿದ್ಯಾರ್ಥಿ ನಿಲಯ, ಸಾಲಿಗ್ರಾಮದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರು ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ ಮತ್ತು ಹೊಸೂರಿನಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿಯ ದೂ. 08223-264049 ಸಂಪರ್ಕಿಸಬಹುದು.
ಸಭೆ ನಾಳೆ
ಕೆ.ಆರ್. ನಗರ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮೇ 19ರ ಬೆಳಗ್ಗೆ 10.30ಕ್ಕೆ ಜಿಪಂ ಅಧ್ಯಕ್ಷ ಮಹದೇವ್ ಅಧ್ಯಕ್ಷತೆಯಲ್ಲಿ ತಾಪಂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.
ಬಾಲಕ ನಾಪತ್ತೆ
ಭೇರ್ಯ: ಕೆ.ಆರ್. ನಗರ ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಪ್ರಜ್ವಲ್ (3) ಬುಧವಾರ ಮಧ್ಯಾಹ್ನ ಕಾಣೆಯಾಗಿದ್ದಾನೆ. ಸುಗ್ಗನಹಳ್ಳಿ ಗ್ರಾಮದ ಮೂರ್ತಿ ಎಂಬವವರ ಪುತ್ರ ಪ್ರಜ್ವಲ್ 3ನೇ ವರ್ಷದ ಹುಟ್ಟುಹಬ್ಬ ಬುಧವಾರ ಅದ್ಧೂರಿಯಾಗಿ ಆಚರಿಸಿಕೊಳ್ಳಲು ಕ್ಷೌರ ಮಾಡಿಸಲೆಂದು ಗ್ರಾಮಕ್ಕೆ ತಂದೆ ಮೂರ್ತಿಯೊಂದಿಗೆ ಬಂದಿದ್ದ. ಅಂಗಡಿಯಲ್ಲಿ ಹೆಚ್ಚು ಜನವಿದ್ದ ಕಾರಣ ತಂದೆ ಮಗುವನ್ನು ಅಲ್ಲಿಯೇ ಬಿಟ್ಟು ಪಕ್ಕದಲ್ಲಿದ್ದ ಶೌಚಾಲಯಕ್ಕೆ ಹೋಗಿದ್ದಾರೆ ನಂತರ ಬಂದು ನೋಡಿದಾಗ ಮಗು ಕಾಣೆಯಾಗಿದೆ. ಸಾಲಿಗ್ರಾಮ ಠಾಣೆಗೆ ದೂರು  ನೀಡಲಾಗಿದೆ.
ಪಾದಚಾರಿ ಸಾವು
ಮೈಸೂರು: ಬುಲೆಟ್ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಮೃತಪಟ್ಟಿರುವ ಘಟನೆ ಕೆ.ಆರ್.ಠಾಣೆ ಮುಂಭಾಗದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಅಗ್ರಹಾರ ನಿವಾಸಿ ಹಾಗೂ ರೇಲ್ವೆ ಇಲಾಖೆ ನಿವೃತ್ತ ಅಧಿಕಾರಿ ನಾಗರಾಜು (85) ಮೃತಪಟ್ಟವರು. ಇವರು ರಸ್ತೆಬದಿ ಹೋಗುತ್ತಿದ್ದಾಗ ವೇಗವಾಗಿ ಬಂದ ಬುಲೆಟ್ ದ್ವಿಚಕ್ರವಾಹನ ಡಿಕ್ಕಿಯಾಗಿದೆ. ಬುಲೆಟ್ ಸವಾರ ವೈಭವ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಕೆ.ಆರ್. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕ ಸಾವು
ಮೈಸೂರು: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಆಟೋ ಚಾಲಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ರಸ್ತೆ ಕಡಕೊಳ ಸಮೀಪದ ದಳವಾಯಿ ಕೆರೆ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ. ಮೈಸೂರಿನ ರಮಾಬಾಯಿನಗರ ನಿವಾಸಿ     ಹಾಗೂ ಆಟೋ ಚಾಲಕ ಲಿಂಗರಾಜ ಅರಸ್ ಅ.ಉಮೇಶ್ (32) ಮೃತಪಟ್ಟವರು. ಇವರು ಮೈಸೂರು ಕಡೆಯಿಂದ ಆಟೋದಲ್ಲಿ ಹೋಗುತ್ತಿದ್ದಾಗ ಮಹಿಳೆಯೊಬ್ಬರು ಅಡ್ಡ ಬಂದರು. ಆಕೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ಆಟೋ ಚಾಲಕ ಲಿಂಗರಾಜ ಅರಸ್, ನಂಜನಗೂಡು ಕಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಈ ಸಂಬಂಧ ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.