ಸ್ಮಾರಕ ನಿರ್ಮಾಣಕ್ಕೆ ಅಡ್ಡಿ ಬೇಡ: ಸಾಹಿತಿಗಳ ಮನವಿ
ಮೈಸೂರು: ಯುವಜನರಿಗೆ ಸ್ಫೂರ್ತಿಯ ಕೇಂದ್ರವಾಗಿ, ಪ್ರೇರಣೆಯ ನೆಲೆಯನ್ನಾಗಿ ಮಾಡಲು ಉದ್ದೇಶಿಸಿರುವ ಸ್ವಾಮಿ ವಿವೇಕಾನಂದರ ಸ್ಮಾರಕ ಕೇಂದ್ರಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಸಮಿತಿ ಅಧ್ಯಕ್ಷ ಡಾ.ಸಿಪಿಕೆ ಸೇರಿದಂತೆ ಅನೇಕ ಸಾಹಿತಿಗಳು ಮನವಿ ಮಾಡಿದ್ದಾರೆ.
ಮಹಾರಾಣಿ ಎನ್‌ಟಿಎಂ ಶಾಲಾ ಆವರಣವನ್ನು ಶ್ರೀ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸುವ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ಹೋರಾಟ ನಡೆಸುವುದು ಸರಿಯಲ್ಲ. ಶ್ರೀ ರಾಮಕೃಷ್ಣ ಆಶ್ರಮವು ಅನೇಕ ವರ್ಷಗಳಿಂದ ಸಾಮಾಜ ಪರ ಕೆಲಸ ಮಾಡುತ್ತಿದೆ. ಈಗ ವಿವೇಕಾನಂದರ ಹೆಸರಿನಲ್ಲಿ ಈ ಕೇಂದ್ರದ ಸುತ್ತಲಿನ ಸುಮಾರು 8 ಸಾವಿರ ಕನ್ನಡ ವಿದ್ಯಾರ್ಥಿಗಳಿಗೆ ನೇರವಾಗಿ ಮತ್ತು ಅಸಂಖ್ಯ ಕನ್ನಡ ಯುವಜನರಿಗೆ ಪರೋಕ್ಷವಾಗಿ ಸ್ಫೂರ್ತಿ, ಪ್ರೇರಣೆಗಳ ನೆಲೆಯೂ ಸೆಲೆಯೂ ಆಗಿ, ಅವರ ಸರ್ವತೋಮುಖ ವ್ಯಕ್ತಿತ್ವ ವಿಕಸನದ ಸತ್ ಸಾಧನವಾಗಿ ಸಾರ್ಥಕ್ಯ ಪಡೆಯಲಿದೆ ಎಂದು ತಿಳಿಸಿದ್ದಾರೆ.
ನಗರದ ಶ್ರೀ ರಾಮಕೃಷ್ಣ ಆಶ್ರಮವು ಕನ್ನಡ ನಾಡು ನುಡಿಗೆ ಸಲ್ಲಿಸಿರುವ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆ ಅನುಪಮವಾಗಿದೆ. ಈಗಾಗಲೆ ಸುಮಾರು 370 ಮೌಲಿಕ ಪುಸ್ತಕಗಳನ್ನು ಕನ್ನಡ ಭಾಷೆಯಲ್ಲಿ ಪ್ರಕಟಿಸುತ್ತಿದೆ. ಅಲ್ಲದೆ ವಿವೇಕಪ್ರಭ ಎಂಬ ಕನ್ನಡ ಮಾಸಿಕ ಪತ್ರಿಕೆಯನ್ನೂ ಪ್ರಕಟಿಸುತ್ತಿದೆ. ಮೇರು ಕವಿಗಳಾದ ಕುವೆಂಪು ಮೈಸೂರಿನ ರಾಮಕೃಷ್ಣ ಆಶ್ರಮದಿಂದ ಸ್ಪೂರ್ತಿ ಪಡೆದಿದ್ದಾರೆ. ಅಂತಹವರ ಸಾಲಿನಲ್ಲಿ ಡಿವಿಜಿ, ಟಿ.ಎಸ್. ವೆಂಕಣ್ಣಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ, ವಿ.ಕೃ. ಗೋಕಾಕ್, ಆರ್.ಆರ್. ದಿವಾಕರ, ದ.ರಾ. ಬೇಂದ್ರೆ, ದೇಜಗೌ, ಕೋ. ಚೆನ್ನಬಸಪ್ಪ, ಡಾ.ಜಿ.ಎಸ್. ಶಿವರುದ್ರಪ್ಪ, ಡಾ.ಪ್ರಭುಶಂಕರ ಮುಂತಾದವರು ಇರುವುದಾಗಿ ತಿಳಿಸಿದ್ದಾರೆ. ಆಶ್ರಮವು ಕಳೆದ ಹದಿನಾಲ್ಕು ವರ್ಷಗಳಿಂದ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತ ಕೋಚಿಂಗ್ ತರಗತಿ ನೀಡುತ್ತಿದೆ. ಆಶ್ರಮದ ಈ ಯೋಜನೆ ಸಕಾರಾತ್ಮಕವಾಗಿ ವಿಳಂಬವಾದರೂ ಈಗ ಉದಾರ ಹೃದಯದಿಂದ ಸ್ಪಂದಿಸಿದರೆ ಅವರಿಗೂ ಮನಶಾಂತಿ ಕೊಡುತ್ತದೆ. ಆದ್ದರಿಂದ ಉದ್ದೇಶಿತ ಯೋಜನೆಗೆ ಸರ್ವರು ಸಹಕರಿಸಬೇಕು ಎಂದು ಡಾ.ಸಿಪಿಕೆ, ಡಾ.ದೇಜಗೌ, ಡಾ. ಮಳಲಿ ವಸಂತಕುಮಾರ್, ಪ್ರೊ.ಕೆ. ಭೈರವಮೂರ್ತಿ, ಡಾ.ಪ್ರಭುಶಂಕರ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

