ಶಿಕ್ಷಕರೇ ಚೀಲಕ್ಕೆ ಪುಸ್ತಕಗಳನ್ನು ತುಂಬಿ
ಕ.ಪ್ರ.ವಾರ್ತೆ ್ಣ ಕೆ.ಆರ್. ನಗರ ್ಣ ಮೇ 27
ವರ್ಷವಿಡಿ ಶಾಲೆಗಳಲ್ಲಿ ಮಕ್ಕಳಿಗೆ ಬೋಧನೆ ಮಾಡುವುದರ ಜತೆಗೆ ಸರ್ಕಾರದ ಹತ್ತಾರು ಕೆಲಸಗಳನ್ನು ಮಾಡುವ ಶಿಕ್ಷಕರಿಗೆ ಈಗ ಹೊಸದೊಂದು ಕೆಲಸವನ್ನು ತಾಲೂಕು ಶಿಕ್ಷಣ ಇಲಾಖೆ ನೀಡಿದ್ದು, ಶಿಕ್ಷಕರೆ ಬಂದು ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಆರಿಸಿ ವಾಹನಗಳಿಗೆ ತುಂಬಬೇಕಾದ ಸ್ಥಿತಿ ಬಂದಿದೆ.
ನಿಯಮಾನುಸಾರ ಶಾಲಾ ಶೈಕ್ಷಣಿಕ ವರ್ಷದಲ್ಲಿ ತರಗತಿಗಳು ಆರಂಭವಾಗುವ ಮುಂಚೆ ಶಿಕ್ಷಣ ಇಲಾಖೆಯವರೆ ಆಯಾಯ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಬೇಕು. ಇದಕ್ಕಾಗಿ ಇಲಾಖೆಯು ಸರಬರಾಜು ವೆಚ್ಚವನ್ನು ನೀಡುತ್ತದೆ. ಆದರೆ ಕೆ.ಆರ್. ನಗರ ತಾಲೂಕಿನಲ್ಲಿ ಈ ಯಾವ ನಿಯಮಗಳು ಜಾರಿಯಲ್ಲಿರದೆ, ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಶಿಕ್ಷಕರನ್ನು ಪುಸ್ತಕ ಹೊರುವ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಶಿಕ್ಷಕರಿಂದಲೇ ಈ ಎಲ್ಲ ಕೆಲಸಗಳನ್ನು ಮಾಡಿಸುವುದಾದರೆ ಪುಸ್ತಕಗಳನ್ನು ಶಾಲೆಗಳಿಗೆ ಸರಬರಾಜು ಮಾಡಲು ಸರ್ಕಾರ ನೀಡುವ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದ್ದು, ಈ ವಿಚಾರ ಜನಪ್ರತಿನಿಧಿಗಳಿಗೆ ತಿಳಿಯದಿರುವುದು ಆಶ್ಚರ್ಯಕರ.
ಕಳೆದ ಮೂರು ವರ್ಷಗಳಿಂದಲೂ ಇದೇ ರೀತಿ ಪುಸ್ತಕ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು, ಇದನ್ನು ಹೇಳುವವರು ಕೇಳುವವರೇ ಇಲ್ಲದಂತಾಗಿದೆ. ಸೋಮವಾರ ಬೆಳಗ್ಗೆಯಿಂದಲೇ 50ಕ್ಕೂ ಹೆಚ್ಚು ಶಿಕ್ಷಕ ಶಿಕ್ಷಕಿಯರು ಪುಸ್ತಕ ವಿತರಿಸುತ್ತಿರುವ ಶಾಲೆಯ ಮುಂದೆ ಚೀಲ ಹಿಡಿದು ನಿಂತಿದ್ದರು.
ಶಿಕ್ಷಕರನ್ನು ಸುದ್ದಿಗಾರರು ಪ್ರಶ್ನಿಸಿದಾಗ ನಮ್ಮ ಸಮಸ್ಯೆ ಯಾರಿಗೆ ಹೇಳುವುದು. ಮೇಲಾಧಿಕಾರಿಗಳು ಹೇಳಿದಂತೆ ಕೇಳುವುದಷ್ಟೇ ನಮ್ಮ ಕೆಲಸ ಎಂದು ಹೆಸರು ಹೇಳಿಲಿಚ್ಚಿಸದೆ ಅಸಹಾಯಕತೆ ವ್ಯಕ್ತಪಡಿಸಿದರಲ್ಲದೆ, ಶಿಕ್ಷಣ ಸಂಯೋಜಕರೆ ಕರೆಮಾಡಿ ಪುಸ್ತಕ ಕೊಂಡೊಯ್ಯುವಂತೆ ಹೇಳುತ್ತಾರಲ್ಲದೆ, ವಿಳಂಬವಾದರೆ ಪುಸ್ತಕಗಳು ಸಿಗುವುದಿಲ್ಲ ಎನ್ನುತ್ತಾರೆ ಎಂದರು.
ಈ ಬಗ್ಗೆ ಕ್ಷೇತ್ರ ಶಿಕ್ಷಾಣಾಧಿಕಾರಿ ಎಸ್.ಟಿ. ಜವರೇಗೌಡ ಅವರನ್ನು ಪ್ರಶ್ನಿಸಿದಾಗ ನಾನು ಗಮನ ಹರಿಸಿ ಸರಿ ಮಾಡುತ್ತೇನೆ ಎಂಬ ಹಾರಿಕೆಯ ಉತ್ತರ ನೀಡಿದರೆ ಹೊರತು ಯಾವುದೆ ಅಗತ್ಯ ಕ್ರಮದ ಭರವಸೆ ನೀಡಲಿಲ್ಲ. ಸಂಬಂಧಿತ ಇಲಾಖೆಯ ಮೇಲಾಧಿಕಾರಿಗಳು ಮತ್ತು ಚುನಾಯಿತ ಜನ ಪ್ರತಿನಿಧಿಗಳು ಗಮನ ಹರಿಸಿ ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಈ ಅವ್ಯವಸ್ಥೆಯನ್ನು ಸರಿ ಪಡಿಸಿ ಶಿಕ್ಷಕರಿಗಾಗುತ್ತಿರುವ ಅನಗತ್ಯ ಕಿರುಕುಳವನ್ನು ತಪ್ಪಿಸಬೇಕಿದೆ.
ಡಿಡಿಪಿಐ ಸ್ಪಷ್ಟನೆ: ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕಗಳನ್ನು ತಾಲೂಕು ಕೇಂದ್ರದಿಂದ ಶಾಲೆಗಳಿಗೆ ಇಲಾಖೆಯೆ ಸರಬರಾಜು ಮಾಡಬೇಕು, ಇದಕ್ಕಾಗಿ ಯಾವ ಶಿಕ್ಷಕರು ತಾಲೂಕು ಕೇಂದ್ರಕ್ಕೆ ಬರುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ಬಸಪ್ಪ ಹೇಳಿದ್ದಾರೆ.
ನಿಯಮ ಬಾಹಿರವಾಗಿ ಶಿಕ್ಷಕರನ್ನು ಪಠ್ಯ ಪುಸ್ತಕ ವಿತರಣ ಕೇಂದ್ರಕ್ಕೆ ಕರೆಸಿ ಅವರಿಂದಲೇ ಚೀಲಗಳಿಗೆ ಪುಸ್ತಕ ತುಂಬಿಸುವ ಕೆಲಸ ಮಾಡಿಸಿರುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಕೆ.ಆರ್. ನಗರ ಕ್ಷೇತ್ರ ಶಿಕ್ಷಣಾಧಿಕಾರಿಯ ವಿರುದ್ದ ಇಂತಹ ಕರ್ತವ್ಯ ಲೋಪದ ದೂರುಗಳು ಆಗಾಗ ಕೇಳಿ ಬರುತ್ತಿದ್ದು, ಅವರಿಗೆ ನೋಟಿಸ್ ನೀಡಿ, ಕ್ರಮ ಜರುಗಿಸುವುದರ ಜತೆಗ ಪುಸ್ತಕ ವಿತರಣ ಕೇಂದ್ರ ಸಿಬ್ಬಂದಿಯ ವಿರುದ್ಧವು ತನಿಖೆಗೆ ಆದೇಶಿಸುತ್ತೇನೆ ಎಂದಿದ್ದಾರೆ. ಪುಸ್ತಕ ಸರಬರಾಜಿಗೆ ಇಲಾಖೆಯಿಂದಲೆ ಅಗತ್ಯ ಹಣ ನೀಡಲಿದ್ದು, ಖುದ್ದು ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಬೇಕು. ಕೆ.ಆರ್. ನಗರ ತಾಲೂಕಿನಲ್ಲಿ ಇಲಾಖೆಯ ನಿಯಮ ಮೀರಿ ಶಿಕ್ಷಕರುಗಳಿಗೆ ಪುಸ್ತಕ ಹೊರುವ ಹೊರೆ ನೀಡಿದ್ದರೆ ಅಂತಹವರ ವಿರುದ್ದ ಕಠಿಣ ಕ್ರಮ ನಿಶ್ಚಿತ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

