ಸರಿಯಾಗಿ ಕೆಲಸ ಮಾಡಿ, ಇಲ್ಲ ಬೇರೆ ಕಡೆ ಹೋಗಿ
ಪಿರಿಯಾಪಟ್ಟಣ: ಅಧಿಕಾರಿಗಳು ತಮಗಿಷ್ಟ ಬಂದಂತೆ ಕೆಲಸ ಮಾಡಬಾರದು. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳು ಬೇರೆ ಕಡೆಗೆ ಹೋಗಬಹುದು ಎಂದು ಶಾಸಕ ಕೆ.ವೆಂಕಟೇಶ್ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಕೆಲವು ಅಧಿಕಾರಿಗಳನ್ನೇ ನೇರವಾಗಿಯೇ ತರಾಟೆಗೆ ತೆಗೆದುಕೊಂಡರು. ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಪ್ರಸಾದ್, ಸರ್ಕಾರದ ಯೋಜನೆಗಳನ್ನು ಪಡೆದ ಫಲಾನುಭವಿಗಳ ಪಟ್ಟಿಯನ್ನು ಸಭೆಯಲ್ಲಿ ತಂದಿಲ್ಲ ಎಂಬ ಉತ್ತರಕ್ಕೆ ಕುಪಿತರಾದ ಶಾಸಕರು, ಸಭೆಗಳಿಗೆ ಸುಮ್ಮನೆ ಕಾಟಾಚಾರಕ್ಕೆ ಬರಬೇಡಿ. ಸರ್ಕಾರದ ಯೋಜನೆಗಳು ಜನರಿಗೆ ಗೊತ್ತಾಗಬೇಕು. ಅಧಿಕಾರಿಗಳಾದ ನೀವೇ ಬೇಕಾದವರಿಗೆ ಸರ್ಕಾರದ ಸವಲತ್ತುಗಳನ್ನು ನನ್ನ ಹಾಗೂ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರದೆ ನಿಮಗಿಷ್ಟ ಬಂದಂತೆ ಮಾಡುವುದು ಸರಿಯಲ್ಲ. ಫಲಾನುಭವಿಗಳಿಗೆ ನಿಮ್ಮ ಮನೆಯ ದುಡ್ಡು ತಂದು ನೀಡುತ್ತಿಲ್ಲ, ಸರ್ಕಾರದ ಹಣ ನೀಡುತ್ತಿರುವುದು. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಪಪಂ ಮುಖ್ಯಾಧಿಕಾರಿಯನ್ನು ಪಟ್ಟಣದ ಅಭಿವೃದ್ಧಿ ಕಾರ್ಯದ ಬಗ್ಗೆ ವಿವರ ನೀಡಿ ಎಂದಾಗ, ದೋಭಿ ಘಾಟ್ ನಿರ್ಮಿಸಲು 3 ಬಾರಿ ಪ್ರಸ್ತಾವನೆ ಕಳುಹಿಸಲಾಗಿದೆ. ಎಂಜಿನಿಯರ್ ಸರಿಯಾಗಿ ಕ್ರಿಯಾ ಯೋಜನೆ ತಯಾರಿಸದ ಕಾರಣ ಮೂರು ಬಾರಿಯೂ ತಿರಸ್ಕಾರಗೊಂಡಿದೆ ಎಂದರು. ಇದಕ್ಕೆ ಬೇಸರಗೊಂಡ ಶಾಸಕರು, ಕೆಲಸ ಮಾಡುವಾಗ ಜ್ಞಾನ ಇರಬೇಕು. ಇದಕ್ಕೆ ಎಂಜಿನಿಯರ್ ಅವರನ್ನು ಏಕೆ ಹೊಣೆಗಾರರನ್ನಾಗಿ ಮಾಡುತ್ತೀರಿ. ನೀವು ಮುಖ್ಯಾಧಿಕಾರಿ ನಿಮ್ಮ ಕೈಕೆಳಗೆ ಕೆಲಸ ಮಾಡುವವರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಆಸಕ್ತಿ ವಹಿಸಿ ಕೆಲಸ ಮಾಡಿ ಇಲ್ಲವಾದರೆ ಇಲ್ಲಿಂದ ಹೊರಡಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

