ಧರಂ ಸಾಮ್ರಾಜ್ಯ ಅಜಯ್ 'ಕೈ' ವಶ?
-ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಜೇವರ್ಗಿ ಏ.29
ತಂದೆ ಆಳಿದ ಸಾಮ್ರಾಜ್ಯ ಮಗನ 'ಕೈ' ವಶವಾಗುವುದೆ?
ಜೇವರ್ಗಿ ಸಾಕ್ಷಿಯಾಗುತ್ತಿರುವ 13ನೇ ಮತ ಸಮರದಲ್ಲೀಗ ಚರ್ಚೆಯಲ್ಲಿರುವ ಪ್ರಶ್ನೆ ಇದು. ಪ್ರಮುಖವಾಗಿ ಚರ್ಚೆಯಲ್ಲಿದೆ. 1972ರಿಂದ ಈ ಕಣದ ಚುನಾವಣೆಯಲ್ಲಿಳಿದು ಸತತ 8 ಬಾರಿ ಗೆಲ್ಲುವ ಮೂಲಕ ರಾಜ್ಯದ ಸಿಎಂ ಹುದ್ದೆಗೇರುವ ಮೂಲಕ ದಾಖಲೆ ಮಾಡಿರುವ ಧರಂಸಿಂಗ್ ಪುತ್ರ ಡಾ. ಅಜಯ್ಸಿಂಗ್ ಈ ಬಾರಿ ತವರು ಕ್ಷೇತ್ರ ಜೇವರ್ಗಿಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೊಡ್ಡಿದ್ದಾರೆ.
1972ರಿಂದ 2004ರವರೆಗೂ 8 ಬಾರಿ ಧರಂಗೆ ಒಲಿದಿದ್ದ ಜೇವರ್ಗಿ 2008ರಲ್ಲಿ ಧರಂ ಸೋಲುವಂತೆ ಮಾಡಿತ್ತು. ಸೋತ ನಂತರ ನಾರಾಜಾಗಿದ್ದ ಧರಂ ಕುಟುಂಬ ಈ ಕ್ಷೇತ್ರದ ಬಗ್ಗೆ ತುಸು ಬೇಸರದಲ್ಲಿದ್ದರೂ ಈ ಬಾರಿ ಅದನ್ನೆಲ್ಲ ಮರೆತು ಕಳೆದುಕೊಂಡಲ್ಲೇ ಹುಡುಕಬೇಕು ಎಂಬ ಹಿರಿಯ ಮಾತಿನಂತೆ ಜೇವರ್ಗಿ ವಶಕ್ಕೆ ಪ್ರಯತ್ನಿಸುತ್ತಿದೆ.
ಒಲವು ಅದ್ಯಾರಿಗೆ? ಇದರಿಂದಾಗಿ ಜೇವರ್ಗಿ ಚುನಾವಣಾ ಅಖಾಡ ರಂಗೇರಿದೆ. 2008ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹರಸಾಹಸ ಮಾಡಿ ಕಮಲ ಅರಳಿಸಿದ್ದ ದೊಡ್ಡಪ್ಪಗೌಡ ಸತತ 2ನೇ ಬಾರಿಗೆ ಆಯ್ಕೆ ಬಿಸಿ ಇಲ್ಲಿನ ಕಣದಲ್ಲಿದ್ದಾರೆ. ಇವರಿಗೆ ಎದುರಾಗಿ ಡಾ. ಅಜಯ್ಸಿಂಗ್ ತಂದೆಯ ಸಾಮ್ರಾಜ್ಯದ ಅಧಿನಾಯಕನಾಗುವ ಕಸರತ್ತಿಗೆ ಇಳಿದಿದ್ದಾರೆ.
ಇವರಿಬ್ಬರ ಜಂಗಿ ಕುಸ್ತಿಯ ಮಧ್ಯೆ ಜೆಡಿಎಸ್ನಿಂದ ಕೇದಾರಲಿಂಗಯ್ಯ, ಕೆಜೆಪಿಯಿಂದ ಮಲ್ಲೀನಾಥಗೌಡ, ಬಿಎಸ್ಆರ್ನಿಂದ ಬೈಲಪ್ಪ ಕಣದಲ್ಲಿದ್ದು ಗೆಲವಿಗೆ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ತೀವ್ರ ಪೈಪೋಟಿಯ ಈ ಮತ ಸಮರದಲ್ಲಿ ಜೇವರ್ಗಿ ಪ್ರಜ್ಞಾವಂತ ಮತದಾರರು ಅದ್ಯಾರಿಗೆ ತಮ್ಮ ಒಲವು ತೋರುವರೋ ಕಾದು ಎಂಬುದೇ ಕುತೂಹಲಕಾರಿ ಸಂಗತಿಯಾಗಿದೆ.
ರಾಜಕೀಯ ಬೆಳವಣಿಗೆ ಜೋರು: ಬಿಜೆಪಿಯಲ್ಲಿ ಅಸಮಾಧಾನಗೊಂಡು ರಾಜಿನಾಮೆ ನೀಡಿ ಹೊರಬಂದಿರುವ ಮುಖಂಡ ಮಲ್ಲೀನಾಥಗೌಡ ಪಾಟೀಲ್ ಯಲಗೋಡ ಅವರನ್ನು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಳೆದು ತೂಗಿ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿದ್ದು, ಲಿಂಗಾಯತ ಮತಗಳು ಹೆಚ್ಚಿರುವ ಈ ಕ್ಷೇತ್ರದಲ್ಲಿ ಆ ಸಮುದಾಯದವರಿಗೆ ಟಿಕೆಟ್ ದೊರೆತಿರುವುದು ಇತರ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ಅದರಲ್ಲೂ ಬಿಜೆಪಿ, ಕಾಂಗ್ರೆಸ್ಗೆ ಮಲ್ಲೀನಾಥಗೌಡ ಪಾಟೀಲ್ ಯಲಗೋಡ ಕಾಡುವುದಂತ್ತೂ ನಿಶ್ಚಿತ ಎನ್ನಲಾಗುತ್ತಿದೆ. ಕಳೆದ 3 ದಶಕಗಳಿಂದ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಅವರ ತಂದೆ ಶಿವಲಿಂಗಪ್ಪಗೌಡ ಪಾಟೀಲ್ ನರಿಬೋಳ ಅವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿ, ಸೋಲು- ಗೆಲವು ಸಮಾನವಾಗಿ ಸ್ವೀಕರಿಸುತ್ತ, ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ ಎದುರು ಪ್ರಬಲ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತಾ, ಕಾರ್ಯಕರ್ತರ ನೋವಿಗೆ ಸ್ಪಂದನೆ ಮಾಡುತ್ತ, ಪಕ್ಷ ಸಂಘಟನೆ ಮಾಡಿದವರು ಯಲಗೋಡ.
ವಲಸಿಗ ಹಕ್ಕಿ: ಅವರಿಗೆ ದೊಡ್ಡಪ್ಪಗೌಡ ಪಾಟೀಲ್ ಶಾಸಕರಾದ ಮೇಲೆ ತಮ್ಮನ್ನು ಸಂಪೂರ್ಣವಾಗಿ ಕಡೆಗಣನೆ ಮಾಡಲಾಗುತ್ತಿದೆ. ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ, ವಲಸಿಗರಿಗೆ ಮಣೆ, ಯಾವುದೇ ನಿಗಮ-ಮಂಡಳಿಗಳಿಗೆ ಕಾರ್ಯಕರ್ತರ ನೇಮಕ ಮಾಡಿಲ್ಲ ಎಂದು ಆರೋಪಿಸಿ ಯಲಗೋಡ ಪಾಟೀಲ್ ಅವರು ಕೊನೆಗೆ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ ಕೆಜೆಪಿ ಸೇರಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆ ಕ್ಷೇತ್ರದ ಕೆಜೆಪಿ ಅಭ್ಯರ್ಥಿಯಾಗಿ ಯಲಗೋಡ ಕಣಕ್ಕಿಳಿದು ಶಾಸಕ ನರಿಬೋಳ ಅವರಿಗೆ ಸಡ್ಡು ಹೊಡೆದು ನಿಂತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೂ ಪರವಾಗಿಲ್ಲ, ಯಾವುದೇ ಕಾರಣಕ್ಕೂ ನನ್ನ ಬೆನ್ನಿಗೆ ಚೂರಿ ಹಾಕಿದ ದೊಡ್ಡಪ್ಪಗೌಡ ಪಾಟೀಲ್ ಮಾತ್ರ ಗೆಲ್ಲಲು ಬಿಡುವುದಿಲ್ಲ ಎಂದು ಸಡ್ಡು ಹೊಡೆದು ನಿಂತಿದ್ದಾರೆ.
ಕೆಜೆಪಿ ಅಭ್ಯರ್ಥಿ ಯಲಗೋಡ ಅವರ ನಿಲುವಿಗೆ ಮತದಾರ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ. ಅದರಲ್ಲೂ ಧರ್ಮಸಿಂಗ್ ಅವರು ರಾಜಕೀಯವಾಗಿ ಬೆಳೆಯಲು ಕಾರಣೀಕರ್ತರಾದ ಅಬ್ದುಲ್ ಸತ್ತಾರಸಾಬ್ ಗಿರಣಿ, ಅಪ್ಪಾಸಾಹೇಬಗೌಡ ಪಾಟೀಲ್ ರದ್ದೇವಾಡಗಿ, ಬಸವರಾಜ ಗುಳಗಿ ಕಾಂಗ್ರೆಸ್ ರಾಜಿನಾಮೆ ನೀಡಿ ಕೆಜೆಪಿ ಜೊತೆ 'ಕೈ' ಜೋಡಿಸಿರುವುದರಿಂದ ಯಲಗೋಡ ಅವರಿಗೆ ಆನೆ ಬಲ ಬಂದಂತಾಗಿದೆ.
ಆದರೆ ಈ ಮೂರು ಜನ ಕಾಂಗ್ರೆಸ್ ಅತೃಪ್ತ ಮುಖಂಡರು ಯಾವುದೇ ಕಾರಣಕ್ಕೂ ಬಿಜೆಪಿ ಗೆದ್ದರೂ ಪರವಾಗಿಲ್ಲ. ಆದರೆ ಕಾಂಗ್ರೆಸ್ ಗೆಲ್ಲಬಾರದು ಎಂಬ ನಿಲುವಿಗೆ ಬಂದಿದ್ದಾರೆ. ಒಂದೇ ಪಕ್ಷದಲ್ಲಿ ಭಿನ್ನರಾಗ ಕೇಳಿ ಬರುತ್ತಿರುವುದರಿಂದ ಮುಂದೆ ಇದು ಯಾವ ಹಂತಕ್ಕೆ ಬಂದು ತಲುಪುವುದೋ ಕಾದು ನೋಡಬೇಕಷ್ಟೇ.
ಡಾ. ಅಜಯ್ ವಿಜಯಿಯಾಗುವರೆ?: ಕಾಂಗ್ರೆಸ್ನ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಡಾ. ಅಜಯಸಿಂಗ್ ಅವರಿಗೆ ಈ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಿದೆ. ಅವರು 10 ವರ್ಷಗಳಿಂದ ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಸಂಘಟಿಸುತ್ತ ಇತ್ತೀಚೆಗೆ ನಡೆದ ಎಲ್ಲ ಸ್ಥಳೀಯ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲವು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕಳೆದ ತಿಂಗಳಿನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್ಲ ವಿರೋಧಿ ಪಕ್ಷಗಳು ಮೈತ್ರಿ ಮಾಡಿಕೊಂಡರೂ 20 ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಅಜಯ್ಸಿಂಗ್ ತಂದೆಯಂತೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಾ ಈ ಚುನಾವಣೆಯಲ್ಲಿ ಗೆದ್ದು ಕ್ಷೇತ್ರದ ಅಭಿವೃದ್ಧಿ ಮಾಡಿ ದೊಡ್ಡ ಹೆಸರು ಮಾಡುವ ಕಾತರದಲ್ಲಿರುವ ಅವರು ಬಿಡುವಿಲ್ಲದೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಅನೇಕ ಮುಖಂಡರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಲಪ್ಪ ಪಡೆಯ ಮತಗಳು ಯಾರದ್ದು?: ಧರಂ ಸ್ವಗ್ರಾಮ ನೆಲೋಗಿದವರೇ ಆದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬೈಲಪ್ಪ ಕೂಡ ಕಾಂಗ್ರೆಸ್ ಸೋಲಿಸಲು ಪಣತೊಟ್ಟು ಹಿಂದುಳಿದ, ಅಲ್ಪಸಂಖ್ಯಾತ, ದಲಿತರ ಮತಗಳನ್ನು ಸೆಳೆಯುವಲ್ಲಿ ನಿರತರಾಗಿರುವ ಅವರು ವಂಶಾಡಳಿತಕ್ಕೆ ಕೊನೆ ಹಾಡಬೇಕೆಂದು ಮತದಾರರಲ್ಲಿ ಮನವಿ ಮಾಡುತ್ತ, ತಮ್ಮ ಪಕ್ಷದ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯ್ಸಿಂಗ್ ಅವರಿಗೆ ಬೈಲಪ್ಪ ತಲೆ ನೋವಾಗಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಬಿಜೆಪಿಗೆ ಯಲಗೋಡ ಮಲ್ಲೀನಾಥಗೌಡ ಅವರು, ಕಾಂಗ್ರೆಸ್ಗೆ ಬೈಲಪ್ಪ ದೊಡ್ಡ ಸಮಸ್ಯೆಯಾಗಿ ಕಾಡವುದಂತೂ ಸತ್ಯ.
ಕೇದಾರಲಿಂಗಯ್ಯ ಮುತ್ಯಾ ಗೆಲವಿನ ಸಾಧ್ಯತೆ: ನೆಲೋಗಿ ಜಿಪಂ ವ್ಯಾಪ್ತಿಯ ಹುಲ್ಲೂರು ಗ್ರಾಮದವರಾದ ಜೆಡಿಎಸ್ನ ಕೇದಾರಲಿಂಗಯ್ಯ ಹಿರೇಮಠ ಅವರು ಕೂಡ ಕಾಂಗ್ರೆಸ್, ಬಿಜೆಪಿ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಜೀವ ವಿಮೆ ಮಾಡಿಸುವ ಮೂಲಕ ರೈತರ, ಮಹಿಳೆಯರ, ಕಾರ್ಮಿಕರ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಎಸ್ಪಿಯಿಂದ ಸ್ಪರ್ಧಿಸಿರುವ ಅಲ್ಪಸಂಖ್ಯಾತ ಮುಖಂಡ ಹುಸೇನ್ ಪಟೇಲ್ ಕೂಡ ಬಿರುಸಿನ ಪ್ರಚಾರ ಕೈಗೊಂಡಿದ್ದು, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆಯಿಸಿ ತಮ್ಮ ಶಕ್ತಿ ಪ್ರದರ್ಶನ ತೋರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡಲಿದ್ದು, ಅಭ್ಯರ್ಥಿಗಳು ಮತದಾರರ ಬಳಿ ತೆರಳಿ ವಿವಿಧ ರೀತಿಯಲ್ಲಿ ಮತಯಾಚಿಸುತ್ತಿರುವುದು ಕಂಡು ಬರುತ್ತಿದೆ. ಒಟ್ಟಿನಲ್ಲಿ ಎಲ್ಲರಿಗಿಂತ ಯಲಗೋಡ, ಬೈಲಪ್ಪ ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ಗೆ ನಿದ್ದೆಗೆಡಿಸಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ರಾಜಕೀಯ ಕಾವು ಏರುವಂತೆ ಮಾಡಿದ್ದಾರೆ. ಇದು ಯಾರಿಗೆ ಲಾಭ, ಯಾರಿಗೆ ನಷ್ಟವಾಗುತ್ತದೆ ಎನ್ನುವುದು ಹೇಳುವುದು ಸುಲಭವಲ್ಲ. ಫಲಿತಾಂಶದ ಬಳಿಕವಷ್ಟೆ ಯಾರು ಯಾರ ಗೆಲವಿಗೆ, ಸೋಲಿಗೆ ಕಾರಣರಾಗಿದ್ದಾರೆ ಎನ್ನುವುದು ಗೊತ್ತಾಗಲಿದೆ. ಬಾಯ್ಮಾತಿನ ಲೆಕ್ಕಾಚಾರಕ್ಕೆ ಜೋತು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಣದಲ್ಲಿ 14 ಅಭ್ಯರ್ಥಿಗಳು
ಒಟ್ಟು ಅಭ್ಯರ್ಥಿಗಳು- 14. ಅಜಯ್ಸಿಂಗ್- ಕಾಂಗ್ರೆಸ್, ದೊಡ್ಡಪ್ಪಗೌಡ- ಬಿಜೆಪಿ, ಕೇದಾರಲಿಂಗಯ್ಯ- ಜೆಡಿಎಸ್, ಹುಸೇನ ಪಟೇಲ್- ಬಿಎಸ್ಪಿ, ಮಹೇಶಕುಮಾರ- ಸಿಪಿಐ, ಬೈಲಪ್ಪ- ಬಿಎಸ್ಆರ್(ಕಾಂಗ್ರೆಸ್), ಮಲ್ಲಿಕಾರ್ಜುನ ಗೌಡ- ಕೆಜೆಪಿ, ಅಖ್ತರ್ ಪರ್ವೀನ್- ಎಸ್ಪಿ, ಕೌಸರ್ ಬೇಗಂ- ಪಕ್ಷೇತರ, ಭೀಮಯ್ಯ- ಪಕ್ಷೇತರ, ಅಯ್ಯಪ್ಪ- ಪಕ್ಷೇತರ, ಲಕ್ಷ್ಮೀಕಾಂತ- ಪಕ್ಷೇತರ, ದೇವರಾಜ- ಪಕ್ಷೇತರ, ಕಲ್ಲಲಿಂಗ್- ಪಕ್ಷೇತರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

