ಕಲ್ಮಲಾ; 26ರಂದು ವಿದ್ಯುತ್ ವ್ಯತ್ಯಯ
ರಾಯಚೂರು: ತಾಲೂಕಿನ ಕಲ್ಮಲಾ ಹಾಗೂ ಅದರ ಸುತ್ತಲಿನ ಗ್ರಾಮಗಳಲ್ಲಿ ಡಿ.26ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪವರ್ಗ್ರಿಡ್ ಕಾರ್ಪೋರೇಷನ್ ಪ್ರಕಟಣೆ ತಿಳಿಸಿದೆ. ರಾಯಚೂರು ಹೊರವಲಯದಲ್ಲಿರುವ 765 ಕೆವಿ ವಿದ್ಯುತ್ ಮಾರ್ಗದ ಗೋಪುರಗಳನ್ನು ಅಳವಡಿಸುವ ಕಾರ್ಯದ ಹಿನ್ನೆಲೆಯಲ್ಲಿ ಡಿ.26ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಕಲ್ಮಲಾ ಮತ್ತು ಸುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.
ಕಾರ್ಯಕ್ರಮ ಯಶಸ್ವಿ
ರಾಯಚೂರು: ಇಲ್ಲಿನ ನಗರಸಭೆಯ ವಾರ್ಡ್ ಸಂಖ್ಯೆ 14ರಲ್ಲಿ ಇತ್ತೀಚೆಗೆ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಯ ಕುರಿತ ತಿಳಿವಳಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭೆಯಲ್ಲಿ ನಗರಸಭೆಯ ವಾರ್ಡಿನ ಸದಸ್ಯ ರಾಮು ಮಾತನಾಡಿದರು. ಯೋಜನೆಯ ಅನುಷ್ಠಾನಾಧಿಕಾರಿಗಳು ಹಾಗೂ ಪ್ರಮುಖರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾವಿತ್ರಮ್ಮ, ಸುಜಾತಾ, ನಿರ್ಮಲಾ, ಯಶೋಧಾಬಾಯಿ, ಯೋಜನಾಧಿಕಾರಿ ದಯಾನಂದ ಅನೇಕರಿದ್ದರು.
ಏಗನೂರು ನೇಮಕ
ರಾಯಚೂರು: ಕರ್ನಾಟಕ ಪ್ರದೇಶದ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಏಗನೂರು ನೇಮಕಗೊಂಡಿದ್ದಾರೆ. ಈ ಕುರಿತು ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವೇಣುಗೋಪಾಲ್ ಪ್ರಕಟಣೆ ನೀಡಿ, ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವರಿಷ್ಠರ ನಿರ್ದೇಶನದ ಮೇರೆಗೆ ಮಲ್ಲಿಕಾರ್ಜುನ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದು, ಪಕ್ಷದ ಸಂಘಟನೆಗೆ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ.
ಕಳಪೆ ರಸ್ತೆ; ಕ್ರಮಕ್ಕೆ ಎಸ್ಎಫ್ಐ ಆಗ್ರಹ
ರಾಯಚೂರು: ಮಾನವಿ ತಾಲೂಕಿನ ಪಾಮನಕಲ್ಲೂರು ಮತ್ತು ಹಟ್ಟಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿ ಕಳಪೆಯಾಗಿದ್ದು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಸ್ಎಫ್ಐ ಒತ್ತಾಯಿಸಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಸೋಮವಾರ ದೂರು ಸಲ್ಲಿಸಿರುವ ಸಂಘಟನೆಯ ರಮೇಶ್ ವೀರಾಪೂರ, ವೀರಭದ್ರ, ಅಜ್ಮೀರ್ ಪಾಷಾ ಮತ್ತಿತರರು, ಸುಮಾರು ಐದಾರು ತಿಂಗಳ ಹಿಂದೆ ಈ ಎರಡೂ ಸ್ಥಳಗಳಿಗೆ ರಸ್ತೆ ನಿರ್ಮಿಸಿ, 80 ಲಕ್ಷ ವೆಚ್ಚ ಮಾಡಲಾಗಿದೆ. ಆದರೆ ಕಾಮಗಾರಿ ಮಾತ್ರ ಗುಣಮಟ್ಟದ್ದಾಗಿಲ್ಲ ಎಂದು ದೂರಿದರು. ಕಾಮಗಾರಿ ಕಳಪೆಯಾಗಿರುವ ಬಗ್ಗೆ ಕಾಮಗಾರಿ ಜಾರಿಯಲ್ಲಿರುವಾಗಲೇ ಗ್ರಾಮಸ್ಥರು, ವಿದ್ಯಾರ್ಥಿಗಳು ದೂರಿದ್ದರೂ ಯಾವುದೇ ಕ್ರಮ ಮಾತ್ರ ಜರುಗಿರಲಿಲ್ಲ ಎಂದು ಆರೋಪಿಸಿದರು. ರಸ್ತೆಯ ಕಳಪೆ ಕಾಮಗಾರಿಯಲ್ಲಿ ಗುತ್ತಿಗೆದಾರರ ಜತೆ ಅಧಿಕಾರಿಗಳೂ ಶಾಮೀಲಾಗಿದ್ದು, ಅದರಿಂದ ಜನತೆ ತೊಂದರೆ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಉಪ್ಪಲದೊಡ್ಡಿ; ಸೈಕಲ್ ವಿತರಣೆ
ಸಿಂಧನೂರು: ತಾಲೂಕಿನ ಉಪ್ಪಲದೊಡ್ಡಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ತಾಪಂ ಸದಸ್ಯ ಅಮರೇಶ ಬಸಾಪುರ ಸೈಕಲ್ ವಿತರಿಸಿದರು. ಮುಖ್ಯಗುರು ಮಲ್ಲಪ್ಪ ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ಹೊಸಗೇರಪ್ಪ ಕರಡೋಣಿ, ಗ್ರಾಪಂ ಉಪಾಧ್ಯಕ್ಷ ಬಸಣ್ಣ, ಸದಸ್ಯರಾದ ಹಿರೇಬಸಲಿಂಗಪ್ಪ, ಕರಿಯಪ್ಪ, ವೀರನಗೌಡ, ಎಸ್ಡಿಎಂಸಿ ಉಪಾಧ್ಯಕ್ಷ ಶೇಖರಗೌಡ ಪೊಲೀಸ್ಪಾಟೀಲ್, ಸದಸ್ಯರಾದ ನಾಗಪ್ಪ ಗುಂಡೂರು, ಮಾಜಿ ಅಧ್ಯಕ್ಷ ಮಲ್ಲನಗೌಡ, ಸಿಆರ್ಪಿ ಈರಪ್ಪ, ಬುಡ್ಡಪ್ಪ ನೇಗಲಿ, ಶರಣೇಗೌಡ ಮಾಲಿಪಾಟೀಲ್, ವಿವಿಧ ಶಾಲೆಗಳ ಮುಖ್ಯಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕ ವೆಂಕೋಬ ಪೂಜಾರಿ ಪ್ರಾರ್ಥಿಸಿದರು. ಖಾಜೇಸಾಬ್, ಪುಷ್ಪಲತಾ, ಸುರೇಶ ಸ್ವಾಗತಿಸಿದರು. ರಂಗಪ್ಪ ನಿರೂಪಿಸಿದರು. ಕೊಟ್ರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಆರ್.ಕೆ. ವಂದಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ತಿಡಿಗೋಳ ಗ್ರಾ.ಪಂ.ಗೆ ನೂತನವಾಗಿ ಅಧ್ಯಕ್ಷೆಯಾಗಿ ಆಯ್ಕೆಯಾದ ಬಸಮ್ಮ ಗವಿಸಿದ್ದಪ್ಪ ನೇಗಿಲಿ ಅವರನ್ನು ಸನ್ಮಾನಿಸಲಾಯಿತು.
ಆರೋಗ್ಯ ಶಿಬಿರ
ರಾಯಚೂರು: ಪ್ರತಿ ತಿಂಗಳು ಆಯೋಜಿಸಲಾಗುವ ವಾಜಪೇಯಿ ಆರೋಗ್ಯಶ್ರೀ ಯೋಜನೆಯ ಶಿಬಿರವು ಡಿ.27ರಂದು ಈ ತಿಂಗಳು ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 25ರಂದು ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ಶಿಬಿರವನ್ನು 27ರಂದು ಆಯೋಜಿಸಿದ್ದು ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

