ಯುವ ವಿಜ್ಞಾನಿಗಾಗಿ ಅರ್ಜಿ
ಗುಲ್ಬರ್ಗ: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 2012-13ನೇ ಸಾಲಿನ ಯುವ ವಿಜ್ಞಾನಿ ಪ್ರಶಸ್ತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಅರ್ಜಿ ನಮೂನೆ ಭರ್ತಿ ಮಾಡಿ, ತಮ್ಮ ಮುಖ್ಯೋಪಾಧ್ಯಯರ ಪ್ರಾಂಶುಪಾಲರ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆ ನಾಮ ನಿರ್ದೇಶನಗಳನ್ನು ಮೊದಲ ಜಿಲ್ಲಾ ಹಂತದಲ್ಲಿ ನಂತರ ರಾಜ್ಯಮಟ್ಟದಲ್ಲಿ ಪರಿಶೀಲಿಸಿ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟ ವಿದ್ಯಾರ್ಥಿವಿದ್ಯಾರ್ಥಿನೀಯರು ಯುವವಿಜ್ಞಾನಿಯಾಗಿ ಆಯ್ಕೆಯಾಗುತ್ತಾರೆ. ಆಯಾ ವಿದ್ಯಾರ್ಥಿವಿದ್ಯಾರ್ಥಿನಿಯು ಕಳೆದ ಮೂರು ಶೈಕ್ಷಣಿಕ ವರ್ಷಗಳಲ್ಲಿ ಡಿಎಸ್ಇಆರ್ಟಿ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತಿತರ ಸಂಸ್ಥೆಗಳಿಂದ ಆಯೋಜನೆಗೊಂಡ ಮಕ್ಕಳ ವಿಜ್ಞಾನ ಗೋಷ್ಠಿ, ಪ್ರತಿಭಾ ಕಾರಂಜಿ, ವಿಜ್ಞಾನ ನಾಟಕ ಸ್ಪರ್ಧೆ, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ, ವಿಜ್ಞಾನ ವಸ್ತುಪ್ರದರ್ಶನ, ವಿಜ್ಞಾನ ರಸಪ್ರಶ್ನೆ ಸೇರಿದಂತೆ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪಡೆದುಕೊಂಡ ಬಹುಮಾನ, ಪ್ರಶಸ್ತಿ, ಗುಣಾಂಕಗಳು ಹಾಗೂ ಎನ್ಟಿಎಸ್ಸಿ ಪರೀಕ್ಷಾ ಫಲಿತಾಂಶಗಳನ್ನು ಯುವ ವಿಜ್ಞಾನಿ ಪ್ರಶಸ್ತಿ ಆಯ್ಕೆಗೆ ಪರಿಗಣಿಸಲಾಗುವುದು. 14 ರಿಂದ 18 ವರ್ಷದ ಪ್ರೌಢಶಾಲಾ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳು ಈ ಸ್ಫರ್ಧೆಗೆ ಅರ್ಹರಾಗಿರುತ್ತಾರೆ. ಮಾ.16ರವರೆಗೆ ಕೊನೆ ದಿನಾಂಕ ವಿಸ್ತರಿಸಲಾಗಿದೆ. ವಿವರಕ್ಕೆ 94488 30454ಗೆ ಸಂಪರ್ಕಿಸಬಹುದು.
ಬಿಕಾಂ: ಶಿಲ್ಪಾಗೆ ಚಿನ್ನದ ಪದಕ
ಲಿಂಗಸ್ಗೂರು: ಸ್ಥಳೀಯ ಒಳಬಳ್ಳಾರಿ ಚೆನ್ನಬಸವೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿನಿ ಶಿಲ್ಪಾ ಗುರುನಾಥ ನಾರಾಯಣಕೇರಿ ಅವರು 2011-12ನೇ ಸಾಲಿನ ಬಿಕಾಂ ಅಂತಿಮ ಪರೀಕ್ಷೆಯ ವಾಣಿಜ್ಯ ವಿಷಯದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾಳೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಆಡಳಿತಾಧಿಕಾರಿ ಸಿ.ಶರಣಪ್ಪ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ಡಿಕ್ಕಿ: ವ್ಯಕ್ತಿ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಬಸ್ಸಾಪುರ ಕ್ರಾಸ್ ಬಳಿ ಬೈಕ್ಗೆ ಬಸ್ ಡಿಕ್ಕಿ ಹೊಡೆದು ಅದರ ಸವಾರ ಸಾವಿಗೀಡಾಗಿದ್ದಾನೆ. ಮೃತನನ್ನು ಬಸವರಾಜ್ ಎಂದು ಗುರುತಿಸಲಾಗಿದೆ. ಈತ ಬೈಕ್ನಲ್ಲಿ ಸಿಂಧನೂರಿನಿಂದ ಲಿಂಗಸ್ಗೂರಿನತ್ತ ತೆರಳುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದಿದ್ದರಿಂದ ಆತ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
17ರಂದು ಉಚಿತತಪಾಸಣಾ ಶಿಬಿರ
ಸಿಂಧನೂರು: ನಗರದ ಜ್ಯೋತಿ ಮಹಿಳಾ ಸಮಾಜದಲ್ಲಿ ಮಾ.17 ರಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಜ್ಯೋತಿ ಮಹಿಳಾ ಸಮಾಜದ ಅಧ್ಯಕ್ಷೆ ಸುವರ್ಣ ಶೇಠ ತಿಳಿಸಿದ್ದಾರೆ.
ಶಿಬಿರದಲ್ಲಿ ವೈದ್ಯರಾದ ಅಭಿನೇತ್ರಿ ಪಾಟೀಲ್, ಎಚ್.ಮುತ್ಯಾವತಿ, ಅನ್ನಪೂರ್ಣರಡ್ಡಿ ಭಾಗವಹಿಸುವರು. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.
ಇಂದು ರಫ್ತು ಜಾಗೃತಿ ಕಾರ್ಯಕ್ರಮ
ರಾಯಚೂರು: ಜಿಲ್ಲಾ ವಾಣಿಜ್ಯೋದ್ಯಮ ಸಂಘದಿಂದ ನಗರದಲ್ಲಿ ಮಾ.13ರಂದು ರಫ್ತು ವ್ಯವಹಾರ ಏಕೆ ಹೇಗೆ ಮತ್ತು ಎಲ್ಲಿ ಎಂಬ ವಿಷಯದ ಕುರಿತು ಒಂದು ದಿನ ರಫ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂದು ಬೆಳಗ್ಗೆ 10.30ಕ್ಕೆ ಹೈದರಾಬಾದ್ ರಸ್ತೆಯ ಜಿಲ್ಲಾ ಕೈಗಾರಿಕೆ ಕೇಂದ್ರದ ಪಕ್ಕದಲ್ಲಿನ ತರಬೇತಿ ಕೇಂದ್ರದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಹಾಲಿ ರಫ್ತುದಾರ ಸಂಸ್ಥೆಗಳ ಮಾಲಿಕರು ಹಾಗೂ ಆಸಕ್ತರು ಪಾಲ್ಗೊಳ್ಳುವಂತೆ ಜಿಲ್ಲಾ ವಾಣಿಜ್ಯೋದ್ಯಮ ಸಂಘ ಮನವಿ ಮಾಡಿದೆ.
ವಿದ್ಯುತ್ ಪರಿವರ್ತಕ ಅಳವಡಿಕೆಗೆ ಮನವಿ
ಲಿಂಗಸ್ಗೂರು: ತಾಲೂಕಿನ ಗೋನವಾಟ್ಲ ತಾಂಡಾದಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು ಜೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸೂಚಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದಿಂದ ತಾಂಡಾ ನಿವಾಸಿಗಳು ಶಾಸಕ ಮಾನಪ್ಪ ವಜ್ಜಲರಿಗೆ ಇತ್ತೀಚಿಗೆ ಮನವಿ ಸಲ್ಲಿಸಿದರು.
ತಾಂಡಾದಲ್ಲಿ ಕಳೆದ ಒಂದು ತಿಂಗಳ ಹಿಂದೆ ವಿದ್ಯುತ್ ಪರಿವರ್ತಕ ಸುಟ್ಟು ತಾಂಡಾ ನಿವಾಸಿಗಳು ಪರಿತಪಿಸುವಂತಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾದ್ದರಿಂದ ಅಭ್ಯಾಸಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಕುಡಿಯುವ ನೀರು, ಹಿಟ್ಟಿನ ಗಿರಣಿ, ಅಂಗನವಾಡಿ, ಬಿಸಿಯೂಟಕ್ಕೆ ಪರದಾಡುವಂತಾಗಿದೆ. ಈ ಕುರಿತು ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಾರಣ ಕೂಡಲೇ ವಿದ್ಯುತ್ ಪರಿವರ್ತಕ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಡಾ.ನೀಲಪ್ಪ, ಕೂಟ್ಯಾ ರಾಠೋಡ, ಶಿವು ರಾಠೋಡ, ಹುಲ್ಲಪ್ಪ, ಮಾದೇಶ, ಗಂಗಾಧರ, ರಾಮಚಂದ್ರ, ತಿಪ್ಪಣ್ಣ, ಶಿವಾಜಿ ಸೇರಿದಂತೆ ಇದ್ದರು.
ಯುವತಿ ಸಂಸ್ಕಾರ ಶಿಬಿರ
ರಾಯಚೂರು: ನಗರದ ಜೈನ್ ಮಂದಿರದ ಜೈನ್ ಸ್ಥಾನಕ್ ಸಭಾಂಗಣದಲ್ಲಿ ಈಚೆಗೆ ಯುವತಿ ಸಂಸ್ಕಾರ ಶಿಬಿರವನ್ನು ಆಯೋಜಿಸಲಾಗಿತ್ತು.
ಮುಂಬಯಿಯಿಂದ ಆಗಮಿಸಿದ್ದ ಯುಗರಾಜ್ ಜೈನ್ ಅವರು ನಗರದ ಜೈನ್ ಸಮಾಜದ ಯುವತಿಯರು ಮತ್ತು ಅವರ ಪಾಲಕರಿಗೆ ಸಂಸ್ಕಾರಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜೈನ್ ಸಮುದಾಯ, ಮಹೇಶ್ವರಿ ಸಮುದಾಯ, ಅಗ್ರವಾಲ್ ಸಮುದಾಯ ಹಾಗೂ ಗುಜರಾತಿ ಜೈನ್ ಸಮುದಾಯದವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಜೈನ್ ಸಮುದಾಯದ ಪ್ರಮುಖರಾದ ಪಾರಸಮಲ್ ಸುಖಾಣಿ, ಪ್ರಕಾಶಚಂದ್ ಛೋರಡಿಯಾ, ಮಾಣಿಕಜೀ ಮರೋಠಿ, ಬಾಬುಲಾಲ್ ಖಿವನ್ಸರಾ, ಕಮಲ್ ಕುಮಾರ್ ಸೇರಿದಂತೆ ಅನೇಕರು ಇದ್ದರು.
ಎಡದಂಡೆ ಕಾಲುವೆ ನಿಷೇಧಾಜ್ಞೆ ಜಾರಿ
ರಾಯಚೂರು: ಸಿಂಧನೂರು ಮತ್ತು ಮಾನವಿ ನಗರಗಳಿಗೆ ಕುಡಿಯುವ ನೀರೊದಗಿಸುವ ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 36ರಿಂದ 89ರವರೆಗೆ ಕಾಲುವೆ ಪ್ರದೇಶ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಾ.12ರ ಬೆಳಗ್ಗೆ 6ರಿಂದ ಮಾ.20ರ ಬೆಳಗಿನ 6ರವರೆಗೆ 144ನೇ ಕಲಂ ಅನ್ವಯ ಕಾಲುವೆಯ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಈ ವೇಳೆ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ ಬೇರಾರೂ ಕಾಲುವೆಯ ತೂಬುಗಳನ್ನು ತೆರೆದು ನೀರು ಹರಿಸಿಕೊಳ್ಳುವಂತಿಲ್ಲ ಎಂದು ಎಚ್ಚರಿಸಿದ್ದಾರೆ. ಈ ಆದೇಶ ಉಲ್ಲಂಘಿಸಿದಲ್ಲಿ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸಿಂಧನೂರು ಮತ್ತು ಮಾನವಿ ನಗರಗಳಿಗೆ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿದ್ದು, ಪೂರ್ವಾನುಮತಿಯಿಲ್ಲದೇ ರಜೆ ಮೇಲೆ ತೆರಳದಂತೆ ಸೂಚಿಸಿದ್ದಾರೆ.
ನಾಳೆಯಿಂದ ರಾಜ್ಯ ಸಮ್ಮೇಳನ
ರಾಯಚೂರು: ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್ನಲ್ಲಿ ಮಾ.14 ಮತ್ತು 15ರಂದು ರಾಜ್ಯ ಚಿತ್ರಕಲಾ ಶಿಕ್ಷಕರ 9ನೇ ಮಹಾಸಮ್ಮೇಳನ ಮತ್ತು ಚಿತ್ರಕಲಾ ಪ್ರಾತ್ಯಕ್ಷಿಕೆ, ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ರಾಯಚೂರು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘವು, ಸಮ್ಮೇಳನದಲ್ಲಿ ಚಿತ್ರಕಲಾ ಶಿಕ್ಷಕರಿಗೆ ಮುಂದಿನ ದಿನಗಳಲ್ಲಿ ಬೋಧನೆಗೆ ಅನುಕೂಲವಾಗುವಂಥ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಚಿತ್ರಕಲಾ ಶಿಕ್ಷಕರು ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದು, ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಚಿತ್ರಕಲೆ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರಿನ ಕಚೇರಿಯು ಒಒಡಿ ಸೌಲಭ್ಯ ಮಂಜೂರು ಮಾಡಿದೆ ಎಂದು ತಿಳಿಸಿದೆ.
ಇಂದಿನಿಂದ ದಿಶಾ 2013 ಕಾರ್ಯಕ್ರಮ
ಗುಲ್ಬರ್ಗ: ನಗರದ ಅಪ್ಪ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟಿಕ್ನಾಲಜಿ, ಗೋದುತಾಯಿ ಕಾಲೇಜ ಅಫ್ ಎಂಜಿನಿಯರ್ ಫಾರ್ ಉಮನ್ಸ್, ಸುರಪುರದ ವೀರಪ್ಪ ನಿಷ್ಠಿ ಕಾಲೇಜ್ ಆಫ್ ಎಂಜಿನಿಯರಿಂಗ್ ಬೀದರ್ನ ಲಿಂಗರಾಜ ಅಪ್ಪ ಕಾಲೇಜ್ ಆಪ್ ಎಂಜಿನಿಯರ್ ಸಹಯೋಗದೊಂದಿಗೆ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ದೊಡ್ಡಪ್ಪ ಅಪ್ಪ ಇನ್ಸ್ಟಿಟ್ಯೂಟ್ ಆಫ್ ಎಂಬಿಎ ಮತ್ತು ಎಂಸಿಎದಲ್ಲಿ 13 ಮತ್ತು 14ರಂದು ದಿಶಾ 2013 ಸಂಕ್ರಮಣ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸ್ಥೆಯ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ ಉದ್ಘಾಟಿಸಲಿದ್ದಾರೆ. ಉದ್ಯಮಿ ವಿಜಯ ಸಂಕೇಶ್ವರ, ಅಲ್ಟ್ರಾಟೆಕ್ ಸಿಮೆಂಟ್ ಉಪಾಧ್ಯಕ್ಷ ಅನಿಲ್ ಜಿ. ತಿಪ್ಲೆ ಅತಿಥಿಯಾಗಿದ್ದಾರೆ. 14 ರಂದು ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಡಿಜಿಪಿ ಶಂಕರ ಬಿದರಿ, ವಾಡಿ ಎಸಿಸಿ ಸಿಮೆಂಟ್ಸ್ ಹಿರಿಯ ಪ್ರಧಾನ ವ್ಯವಸ್ಥಾಪಕ ಬಿ.ಡಿ. ದಲೇರ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಇಂದು ಕೃತಿಗಳ ಬಿಡುಗಡೆ
ಗುಲ್ಬರ್ಗ: ದಲಿತ ಲೋಕ ಮತ್ತು ಜನಪದ ಕಲೆ ಸಂಸ್ಕೃತಿ ಕೃತಿಗಳ ಬಿಡುಗಡೆ ಸಮಾರಂಭ ಹಾಗೂ ನೀರ ನೆಳಲು ಅಂಬೇಡ್ಕರ್ ಅಧ್ಯಯನಾತ್ಮಕ ಲೇಖನಗಳು ಕೃತಿಗೆ ಡಿ ಲಿಟ್ ಪದವಿ ಪಡೆದ ಪ್ರೊ. ಎಚ್.ಟಿ. ಪೋತೆ ಅವರಿಗೆ ಮಾ.13 ರಂದು ಡಾ. ಬಿ.ಆರ್. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದಲ್ಲಿ ಬೆಳಗ್ಗೆ 10.30ಕ್ಕೆ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಕಾರ್ಯಕ್ರಮ ಉದ್ಘಾಟಿಸುವರು. ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ. ಶಾಂತಿನಾಥ ದಿಬ್ಬದ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಅತಿಥಿಗಳಾಗಿ ಆಗಮಿಸುವರು. ಕರ್ನಾಟಕ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಮಾರುತಿರಾವ್ ಡಿ. ಮಾಲೆ ಅಧ್ಯಕ್ಷತೆವಹಿಸುವರು. ಬೆಂಗಳೂರು ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಡೊಮೆನಿಕ್, ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಪ್ರೊ. ಎಚ್.ಟಿ. ಪೋತೆ ಇರುವರು.
ಇಂದಿನಿಂದ ಗುರುಭಕ್ತಿ ಉತ್ಸವ
ಗುಲ್ಬರ್ಗ: ಇಲ್ಲಿರುವ ಬಿದ್ದಾಪುರ ಕಾಲೋನಿಯ ರಾಘವೇಂದ್ರಸ್ವಾಮಿ ಮಠದಲ್ಲಿ ಮಾ.13ರ ಬುಧವಾರ ಗುರುಸಾರ್ವಭೌಮರ ಪಟ್ಟಾಭಿಷೇಕ ದಿನದಿಂದ ರಾಯರ ಜನ್ಮದಿನ ಮಾ. 19ರವರೆಗೂ ಗುರುಭಕ್ತಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಈ ಸಪ್ತಾಹದಲ್ಲಿ ಬೆಳಗ್ಗೆ 8 ರಂದ 9 ರ ವರೆಗೆ ಅಷ್ಟೋತ್ತರ ಸೇವೆ ನಡೆಯುತ್ತದೆ. ಸಂಜೆ 6.30 ರಿಂದ 8ರವರೆಗೆ ಪಂಡಿತ ರಂಗಾಚಾರ್ಯ ಹಯಗ್ರೀವ ಬೆಂಗಳೂರು, ಇವರಿಂದ ರಾಯರ ಗ್ರಂಥಗಳ ಬಗ್ಗೆ ಪ್ರವಚನ ನಡೆಯಲಿದೆ. ಮಾ. 19ರಂದು ಸಪ್ತಾಹದ ಮಂಗಳ ಮಹೋತ್ಸವ ನಡೆಯಲಿದೆ. ಭಕ್ತಾದಿಗಳು ಸಪ್ತಾಹದಲ್ಲಿ ಭಾಗವಹಿಸಿ ರಾಯರ ಕೃಪೆಗೆ ಪಾತ್ರರಾಗಬೇಕೆಂದು ಮಠದ ನವಲಿ ಕಷ್ಣಾಚಾರ್ಯ ಮನವಿ ಮಾಡಿದ್ದಾರೆ.
ಇಂದು ಶ್ರದ್ಧಾಂಜಲಿ
ಗುಲ್ಬರ್ಗ: ನಗರದ ನೂತನ ವಿದ್ಯಾಲಯ ಸಂಸ್ಥೆಯ ಸತ್ಯಪ್ರಮೋದ ತೀರ್ಥ ಸಭಾಮಂಟಪದಲ್ಲಿ ಮಾ. 13ರಂದು ಸಾಯಂಕಾಲ 6 ಗಂಟೆಗೆ ನಿವೃತ್ತ ಹಿರಿಯ ಸೂಪರಿಂಟೆಂಡೆಂಟ್ ಎಂಜನೀಯರ್ ಜನಾರ್ದನ ಕಟ್ಟಿಯವರ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ. ಇವರು ರಂಗಮಾಧ್ಯಮ, ಕನ್ನಡ ಸಾಹಿತ್ಯ ಸಂಘ, ನೂತನ ವಿದ್ಯಾಲಯ ಸಂಸ್ಥೆಯ ಮಾಜಿ ವಿದ್ಯಾರ್ಥಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅಭಿಮಾನಿಗಳು ಈ ಸಭೆಯಲ್ಲಿ ಪಾಲ್ಗೊಳಲು ಪ್ರಭಾಕರ ಸಾತಖೇಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರದರ್ಶನ
ಗುಲ್ಬರ್ಗ: ನಗರದ ಚೇತನ್ಯಮಯಿ ಆರ್ಟ್ ಗ್ಯಾಲರಿ ಚಂದನ ಕಲರ್ ಲ್ಯಾಬ್ ಹಾಗೂ ಏಶಿಯನ್ ಬಿಲ್ಡರ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಛಾಯಾಚಿತ್ರ ಪ್ರದರ್ಶನ ಸ್ಪರ್ಧೆಯಲ್ಲಿ ನೈಸರ್ಗಿಕ ಚಿತ್ರಗಳ ವಿಜೇತ ಉದಯಕುಮಾರ ಜಿ. ಬಗಲಿಯವರಿಗೆ ಪ್ರಮಾಣ ಪತ್ರ ಹಾಗೂ ನಗದು ಹಣ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಆಕಾಶ, ಎಂ.ಎನ್. ಶಾಸ್ತ್ರಿ, ಎ.ಎಸ್ ಪಾಟೀಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

