ರಾಯಚೂರು

ಅಬ್ಬರದ ಪ್ರಚಾರಕ್ಕೆ ತೆರೆ

Published On :

ಕನ್ನಡಪ್ರಭ ವಾರ್ತೆ ರಾಯಚೂರು ಮೇ 3
ಅಬ್ಬರದ ಬಹಿರಂಗ ಪ್ರಚಾರ, ರೋಡ್ ಶೋ ಗಳ ಸದ್ದು ಗದ್ದಲ ಇನ್ನಿಲ್ಲ. ಕಳೆದ ಕೆಲ ದಿನಗಳಿಂದ ಜಿಲ್ಲಾದ್ಯಂತ ನಡೆಯುತ್ತಿದ್ದ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಶುಕ್ರವಾರ ಸಂಜೆ ತೆರೆ ಬಿದ್ದಿದ್ದು, ಮತದಾರರ ಓಲೈಕೆಗೆ ಅಭ್ಯರ್ಥಿಗಳು ಕಟ್ಟಕಡೆಯ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯ ಏಳೂ ವಿಧಾನಸಭೆ ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆಯ ಹಿನ್ನೆಲೆ ರಾಜಕೀಯ ಕಣ ರಂಗೇರಿತ್ತು. ವಿವಿಧ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ, ಪಾದಯಾತ್ರೆ ಮತ್ತಿತರೆ ತಂತ್ರಗಳ ಮೂಲಕ ಮತದಾರರ ಮನೆ ತಲುಪುವ ಪ್ರಯತ್ನ ಮಾಡಿದ್ದಾರೆ.
ಅಭ್ಯರ್ಥಿಗಳು ಮೇ 3ರಂದು ಸಂಜೆ 5ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆಯೇ ತೆರೆಮರೆಯಲ್ಲಿ ಮತದಾರರನ್ನು ಓಲೈಸುವ ತಂತ್ರಗಾರಿಕೆಗೆ ತೊಡಗಿದ್ದು, ತೆರೆಮರೆಯ ರಾಜಕೀಯ ಚಟುವಟಿಕೆ ರಂಗೇರಿದೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ರಾಷ್ಟ್ರೀಯ ನಾಯಕರು ಜಿಲ್ಲೆಯಲ್ಲಿ ಪ್ರಚಾರ ಕೈಗೊಂಡಿದ್ದಾರೆ.
ಮೇ 4ರ ರಾತ್ರಿಯತ್ತ ನೋಟ: ಹಾಗೆಯೇ ಜೆಡಿಯು ರಾಷ್ಟ್ರೀಯ ನಾಯಕ ಶರದ್ ಯಾದವ್ ಸಹ ಜಿಲ್ಲೆಗೆ ಬಂದು ಹೋಗಿದ್ದಾರೆ. ಅಭ್ಯರ್ಥಿಗಳ ಪರ ಮತಯಾಚಿಸುವ ಮೂಲಕ ಪೈಪೋಟಿ ಪ್ರದರ್ಶಿಸಿದ್ದಾರೆ. ಜಾತಿವಾರು ಮತಗಳ ಲೆಕ್ಕಾಚಾರ, ವಿವಿಧ ಆಮಿಷಗಳ ಹೊರತಾಗಿಯೂ ಮತದಾರ ತಮ್ಮ ಪರ ನಿಲ್ಲಲಿದ್ದಾನೆಯೇ ಎಂಬ ಆತಂಕದ ಮಧ್ಯೆಯೇ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಈಗ ಮೇ 4ರ ರಾತ್ರಿ ಅನುಸರಿಸಬೇಕಾದ ಓಲೈಕೆ ತಂತ್ರಗಳ ಲೆಕ್ಕಾಚಾರದಲ್ಲಿದ್ದಾರೆ.
ಅಬ್ಬರದ ಪ್ರಚಾರ: ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾದ ನಗರ ಸೇರಿದಂತೆ ಜಿಲ್ಲಾದ್ಯಂತ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಜೆಡಿಯು, ಬಿಎಸ್ಪಿ ಸೇರಿದಂತೆ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಜೋರಾದ ಪ್ರಚಾರ ನಡೆಸಿದರು. ನಗರದಲ್ಲಿ ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಆನಂತರದಲ್ಲಿ ಜೆಡಿಎಸ್‌ನ ಅಭ್ಯರ್ಥಿ ಡಾ. ಶಿವರಾಜ್ ಪಾಟೀಲ್ ಪಾದಯಾತ್ರೆ ನಡೆಸಿದರು.
ಸಾವಿರಾರು ಸಂಖ್ಯೆಯ ಕಾರ್ಯಕರ್ತರನ್ನು ಸೇರಿಸಿದ್ದ ಎರಡೂ ಪಕ್ಷಗಳು ಬಲಾಬಲ ಪ್ರದರ್ಶನಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ನಗರದ ಮುಖ್ಯ ರಸ್ತೆಯಲ್ಲಿ ಪಾದಯಾತ್ರೆ ಸಾಗಿದ ವೇಳೆ ರಸ್ತೆ ಸಂಚಾರಕ್ಕೆ ವ್ಯತ್ಯಯವಾಯಿತು. ಜನತೆ ರಾಜಕೀಯ ನಾಯಕರ ಬಲ ಪ್ರದರ್ಶನಕ್ಕೆ ಬೇಸರ ವ್ಯಕ್ತಪಡಿಸುತ್ತಲೇ ಸಾಗಿದ್ದು ಕಂಡುಬಂದಿತು.
ಜಿಲ್ಲಾಡಳಿತ ಸಜ್ಜು: ಈಗಾಗಲೇ ಜಿಲ್ಲಾಡಳಿತವು ಮೇ 5ರಂದು ನಡೆಯಲಿರುವ ಚುನಾವಣೆಗೆ ಅಗತ್ಯ ಸಿಬ್ಬಂದಿ ನಿಯೋಜಿಸಿದ್ದು, ತರಬೇತಿ ಕಾರ್ಯ ಪೂರ್ಣಗೊಳಿಸಿದೆ. ಮತಯಂತ್ರ ಮತ್ತು ಸಿಬ್ಬಂದಿಯನ್ನು ಅವರಿಗೆ ಸೂಚಿಸಿದ ಮತಗಟ್ಟೆಗಳಿಗೆ ರವಾನಿಸುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆಯಿಂದ 210 ಬಸ್ ಪಡೆಯಲಾಗಿದೆ. ಖಾಸಗಿ ವಾಹನಗಳನ್ನು ಬಳಸಲಾಗುತ್ತಿದೆ. ಮೇ 4ರ ಬೆಳಗ್ಗೆ ಮತಯಂತ್ರದೊಂದಿಗೆ ಸಿಬ್ಬಂದಿ ತೆರಳಲಿದ್ದು ಮೇ 5ರಂದು ಬೆಳಗ್ಗೆ ಮತದಾನ ಆರಂಭಗೊಳ್ಳಲಿದೆ.

ಕಾಂಗ್ರೆಸ್ ಗೆಲವು ಖಚಿತ: ಗುಂಡಳ್ಳಿ
ಮಸ್ಕಿ: ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದ್ದು, ಮಸ್ಕಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಗೆಲವು ಸಾಧಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಅಂದಾನಪ್ಪ ಗುಂಡಳ್ಳಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಕೆಜೆಪಿ ಹಾಗೂ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಂದಲೇ ಪೈಪೋಟಿಯಿದೆ. ಆದರೆ ಕಾಂಗ್ರೆಸ್‌ನತ್ತ ಮತದಾರರ ಒಲವಿದೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ತಮ್ಮ ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡಿರುವ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ಕೆಲ ಕಾಮಗಾರಿಗಳು ಬಾಕಿಯಿದ್ದು, ಅವುಗಳನ್ನು ಪೂರ್ಣಗೊಳಿಸಲು ಮತದಾರರು ಅವಕಾಶ ಕಲ್ಪಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಡಾ. ಶಿವಶರಣಪ್ಪ ಇತ್ಲಿ, ಅಪ್ಪಾಜಿಗೌಡ ಮತ್ತಿತರರಿದ್ದರು.

ಸಮಸ್ಯೆಗಳ ಸರಮಾಲೆ; ಅಪರ್ಣಾ
ಮೂಲ ಸೌಲಭ್ಯ, ವಿದ್ಯುತ್, ಶುದ್ಧ ಕುಡಿವ ನೀರಿನ ಕೊರತೆ
ಕನ್ನಡಪ್ರಭ ವಾರ್ತೆ ರಾಯಚೂರು  ಮೇ 3
ರಾಯಚೂರು ನಗರ ಕ್ಷೇತ್ರದಾದ್ಯಂತ ಸಂಕಷ್ಟ, ಸಮಸ್ಯೆಗಳ ಸರಮಾಲೆಯಿದ್ದು, ಇವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಅಗತ್ಯ. ಈ ನಿಟ್ಟಿನಲ್ಲಿ ಮತದಾರರಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಬಗ್ಗೆ ಬೇಸರವಿದೆ ಎಂದು ಎಸ್‌ಯುಸಿಐಸಿ ಪಕ್ಷದ ನಗರ ಕ್ಷೇತ್ರದ ಅಭ್ಯರ್ಥಿ ಅಪರ್ಣಾ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಕೊರತೆಯಿದೆ. ರಸ್ತೆಗಳು ಹದಗೆಟ್ಟಿದ್ದು, ವಿದ್ಯುತ್ ಕೊರತೆ ಜನರನ್ನು ಕಾಡುತ್ತಿದೆ. ತಾವು ನಡೆಸಿದ ಚುನಾವಣೆ ಪ್ರಚಾರದ ವೇಳೆ ಈ ಎಲ್ಲ ಸಮಸ್ಯೆಗಳನ್ನು ಮತದಾರರು ತಮ್ಮ ಮುಂದೆ ಬಿಚ್ಚಿಟ್ಟರು ಎಂದು ಹೇಳಿದರು.
ಮೂಲ ಸೌಲಭ್ಯಗಳ ಕೊರತೆಗೆ ಕೊನೆಯಿಲ್ಲವಾಗಿದೆ. ಒಳಚರಂಡಿ ಅವ್ಯವಸ್ಥೆ, ಅಸಮರ್ಪಕ ಆರೋಗ್ಯ ಸೇವೆಯಿಂದ ಗ್ರಾಮೀಣ ಭಾಗದ ಜನತೆ ತೊಂದರೆ ಎದುರಿಸುತ್ತಿದ್ದಾರೆ. ರೈತರ ಬೆಳೆಗಳಿಗೆ ಸಮರ್ಪಕ ನೀರು, ವೈಜ್ಞಾನಿಕ ಬೆಲೆ ದೊರೆಯದೇ ನಷ್ಟ ಅನುಭವಿಸುತ್ತಿದ್ದಾರೆಂದು ಟೀಕಿಸಿದರು.
ಜನತೆಗೆ ಕಾಯಂ ಕೆಲಸ, ಯೋಗ್ಯ ವೇತನ, ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿಲ್ಲ. ಇದರಿಂದಾಗಿ ಜನಪ್ರತಿನಿಧಿಗಳ ಬಗ್ಗೆ ಜನರಲ್ಲಿ ತಾತ್ಸಾರ ಮನೋಭಾವವಿರುವುದು ಗಮನಕ್ಕೆ ಬಂದಿದೆ ಎಂದ ಅವರು, ವಿಧಾನಸೌಧದೊಳಗೆ ಮತ್ತು ಹೊರಗೆ ಸಮಸ್ಯೆಗಳನ್ನು ಮುಂದುರಿಸಿಕೊಂಡು ಹೋರಾಡುವಂಥ ಎಸ್‌ಯುಸಿಐಸಿ ಪಕ್ಷಕ್ಕೆ ಬೆಂಬಲಿಸಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಡಾ. ಸುನೀತಕುಮಾರ್, ವೀರೇಶ್ ಎನ್.ಎಸ್. ಮತ್ತಿತರರಿದ್ದರು.

ಮತದಾರರ ಜಾಗೃತಿಗೆ ವೈದ್ಯರಿಗೆ ಮನವಿ, ಮೊಹರು ವಿತರಣೆ
ಕನ್ನಡಪ್ರಭ ವಾರ್ತೆ ರಾಯಚೂರು ಮೇ 3
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಸಹಾಯಕ ಆಯುಕ್ತೆ ಮಂಜುಶ್ರೀ ಅವರು ಭಾರತೀಯ ವೈದ್ಯಕೀಯ ಸಂಘದ ಸ್ಥಳೀಯ ಘಟಕದ ಪದಾಧಿಕಾರಿಗಳಿಗೆ ಮತದಾನ ಜಾಗೃತಿ ಕುರಿತ ಮೊಹರುಗಳನ್ನು ವಿತರಿಸಿದರು.
165 ಸರ್ಕಾರಿ ವೈದ್ಯರಿಗೆ ಮೊಹರು ವಿತರಿಸಿ ಮಾತನಾಡಿದ ಅವರು, ನಗರ ಮತ್ತು ಜಿಲ್ಲಾದ್ಯಂತ ವೈದ್ಯ ವೃತ್ತಿ ಯಲ್ಲಿರುವವರು ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ಮೇ 5 ಭಾನುವಾರದಂದು ತಪ್ಪದೇ ಮತದಾನ ಮಾಡಿ ಎಂಬ ಸಂದೇಶವಿರುವ ಮೊಹರುಗಳನ್ನು ವೈದ್ಯರು ಔಷಧಿ ಚೀಟಿಯಲ್ಲಿ ಹಾಕಿ ವಿತರಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ ನಾಯಕ, ಐಎಂಎ ಅಧ್ಯಕ್ಷ ಡಾ. ವಿ.ಎನ್. ಕುಲಕರ್ಣಿ, ಡಾ. ಮಾಲಿಪಾಟೀಲ್, ಡಾ. ರಾಜೇಶ್ ಕರ್ಕೇರಾ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.