ರಾಯಚೂರು

ದಲಿತ ಸಂಘಟನೆಗಳ ಪ್ರತಿಭಟನೆ

Published On :

ರಾಯಚೂರು: ಕೇಂದ್ರ ಸಚಿವ ಹಾಗೂ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದ ಸಿಎಂ ಪಟ್ಟ ನೀಡದೇ ದಲಿತ ವಿರೋಧಿ ನೀತಿ ಕಾಂಗ್ರೆಸ್ ಪಕ್ಷ ಅನುಸರಿಸಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದ ಏಳಿಗೆಗೆ ದುಡಿದಿದ್ದಾರೆ.ಅಂಥವರಿಗೆ ಸಿಎಂ ಪಟ್ಟ ನೀಡದೇ ಕಡೆಗಣಿಸಲಾಗಿದೆ ಎಂದು ದೂರಿದರು.
ಪ್ರಗತಿಯಲ್ಲಿ ಖರ್ಗೆ ಪಾತ್ರ ಮಹತ್ವ: ಖರ್ಗೆ ಅವರು 9 ಬಾರಿ ಶಾಸಕರಾಗಿ ಹಾಗೂ ಒಮ್ಮೆ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜ್ಯದ ಪ್ರಗತಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ರಾಜ್ಯದ ಪ್ರಗತಿಯಲ್ಲಿ ಖರ್ಗೆ ಅವರ ಪಾತ್ರ ಮಹತ್ವದ್ದಾಗಿದೆ. ಈ ವಿಚಾರಗಳನ್ನು ಅರಿತಿದ್ದರೂ ಕಾಂಗ್ರೆಸ್ ಪಕ್ಷವು ಅವರಿಗೆ ರಾಜ್ಯದ ಉನ್ನತ ಹುದ್ದೆ ನೀಡದೇ ವಂಚಿಸಿದೆ ಎಂದು ಟೀಕಿಸಿದರು.
ಹೈಕಮಾಂಡ್‌ನಿಂದ ಮೋಸ: ಕೆಪಿಸಿಸಿ ಅಧ್ಯಕ್ಷರಾಗಿಯೂ ಖರ್ಗೆ ಅವರು ಈ ಹಿಂದೆ ಸೇವೆ ಸಲ್ಲಿಸಿದ್ದಾರೆ. ಅಂಥ ಮಹಾನ್ ನಾಯಕರನ್ನು ಸಿಎಂ ಮಾಡುವುದಾಗಿ ಹೇಳುತ್ತಲೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರಿಗೆ ಮೋಸ ಮಾಡಿದೆ. ಆ ಮೂಲಕ ರಾಜ್ಯದ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದರು. ಈಚೇಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದಲಿತ ಸಮುದಾಯಕ್ಕೆ ಸೇರಿದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದ ಸಿಎಂ ಸ್ಥಾನ ನೀಡುವುದಾಗಿ ಹೇಳಿದ್ದರಿಂದ ದಲಿತ ಸಮುದಾಯದ ಎಲ್ಲರೂ ಬೆಂಬಲಿಸಿದ್ದಾರೆ. ಪರಿಣಾಮ ಕಾಂಗ್ರೆಸ್ ಪಕ್ಷವು ಬಹುಮತ ಪಡೆದಿದೆ. ಆದರೆ ಬಹುಮತ ದೊರೆಯುತ್ತಿದ್ದಂತೆಯೇ ಬೇರೊಬ್ಬರಿಗೆ ಸಿಎಂ ಸ್ಥಾನ ನೀಡಿರುವುದು ದಲಿತ ಸಮುದಾಯಕ್ಕೆ ಬೇಸರ ತಂದಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ರವೀಂದ್ರನಾಥ ಪಟ್ಟಿ, ಕೆ.ಈ.ಕುಮಾರ್, ಮಲ್ಲೇಶ ಕೊಲಿಮಿ, ರಾಮಕೃಷ್ಣ, ಆರ್.ತಿಮ್ಮಾರೆಡ್ಡಿ, ಆರ್.ಬಸವರಾಜ್, ಆಂಜಿನೇಯ್ಯ ಕೊಂಬಿನ್, ಮಹೇಶ್ ಹೊಸಪೇಟೆ, ಪ್ರಮೋದ್, ಮಲ್ಲೇಶ ಬೊಮ್ಮನಾಳ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

'ಕಡಿಮೆ ದರದಲ್ಲಿ ವಿದೇಶಗಳಿಗೆ ಕರೆ'
ರಾಯಚೂರು: ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದವರಿಗೆ ಕಡಿಮೆ ದರದಲ್ಲಿ ಮೊಬೈಲ್ ಕರೆ ಮಾಡುವ ಅವಕಾಶವನ್ನು ರೋಮ್-1 ಸಂಸ್ಥೆಯು ಕಲ್ಪಿಸಿಕೊಡುತ್ತಿದೆ ಎಂದು ರೋಮ್-1 ಸಂಸ್ಥೆಯ ಉಪಾಧ್ಯಕ್ಷ ಕೃಷ್ಣ ಹೆಗಡೆ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೋಮ್-1 ಗ್ಲೋಬಲ್ ಸಿಮ್ ಕಾರ್ಡ್ ವಿತರಣೆ ಮೂಲಕ ಇಂಥ ಕರೆ ಮಾಡುವ ಅವಕಾಶ ಲಭ್ಯವಿದ್ದು, ಸಿಮ್ ಕಾರ್ಡ್ ಬಳಕೆ ಮಾಡುವ ಮೂಲಕ ವಿಶ್ವದ ವಿವಿಧೆಡೆಯ 200 ದೇಶಗಳಿಗೆ 900 ಆಪರೇಟರ್‌ಗಳ ಮೂಲಕ ಕಾರ್ಯರ್ನಿಹಿಸಲಾಗುತ್ತಿದೆ ಎಂದು ಹೇಳಿದರು. ಕಡಿಮೆ ದರದಲ್ಲಿ..: ಸದ್ಯ ಸಂಸ್ಥೆಯು ಜೀವಮಾನವಿಡೀ ಬಳಕೆ ಮಾಡಬಹುದಾದ ಸಿಮ್ ಇದಾಗಿದ್ದು, ರಾಯಚೂರು, ಬೀದರ್, ಕರಾವಳಿ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಗಲ್ಫ್ ದೇಶಗಳಿಗೆ ತೆರಳಿರುವ ಸಂಬಂಧಿಗಳೊಂದಿಗೆ ಕಡಿಮೆ ದರದಲ್ಲಿ ಕರೆ ಮಾಡಬಹುದು ಎಂದರು. ಸಿಮ್ ವಿತರಿಸುವ ಮೊದಲು ಪಾಸ್ ಪೋರ್ಟ್, ವೀಸಾ ಮತ್ತಿತರೆ ದಾಖಲೆಗಳನ್ನು ಪಡೆಯುವ ಕಾರ್ಯ ಮಾಡಲಾಗುತ್ತಿದೆ. ಸದ್ಯಕ್ಕೆ ಪ್ರೀಪೇಯ್ಡ್ ವ್ಯವಸ್ಥೆಯಲ್ಲಿ ಸೇವೆ ಒದಗಿಸಲಾಗುತ್ತಿದೆ. ಜಿಲ್ಲೆಯ ಎಲ್ಲೆಡೆ ಸಿಮ್ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸಂಸ್ಥೆಯು ಜಿಲ್ಲಾ ಮಟ್ಟದಿಂದಲೇ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು. ವರ್ಷದಲ್ಲಿ ಸಾವಿರ ಮಳಿಗೆ: ಸಂಸ್ಥೆಯು ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ಮಳಿಗೆಗಳನ್ನು ದೇಶದಲ್ಲಿ ಆರಂಭಿಸಲು ಉದ್ದೇಶಿಸಿದೆ. 2010ರಲ್ಲಿ ದೇಶದಲ್ಲಿ ಕಾರ್ಯಾರಂಭಿಸಿರುವ ಸಂಸ್ಥೆಯು ಇದುವೆರೆಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆ ವಿಸ್ತರಣೆಗೆ ಸಿದ್ಧತೆ ನಡೆಸಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಮತ್ತು ಸ್ಥಳೀಯ ವಿತರಕರು ಇದ್ದರು.

ಜೂನ್‌ನಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ
ಸಿಂಧನೂರು: ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜೂನ್ ಎರಡನೇ ವಾರದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ತಿಳಿಸಿದ್ದಾರೆ. ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಿಂಧನೂರು ತಾಲೂಕು ದ್ವಿತೀಯ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಜೂನ್ ಎರಡನೆ ವಾರದಲ್ಲಿ ನಡೆಸುವ ಕುರಿತು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಯಿತು.
ಸಭೆಯಲ್ಲಿ  ಎಸ್.ದೇವೇಂದ್ರಗೌಡ, ಶ್ರೀಶೈಲ ಕೌದಿ, ವೀರೇಶ ಗೋನವಾರ, ನಾಗರತ್ನ ಬಂಗಾರಶೆಟ್ಟಿ,   ನರಸಿಂಹಾಚಾರ್ ಜೋಶಿ, ಬಾಬರ್ ಬೇಗ್, ಪಂಪಯ್ಯಸ್ವಾಮಿ ಸಾಲಿಮಠ, ಎಚ್. ಬಸವರಾಜ್, ಡಿ.ಎಚ್. ಕಂಬಳಿ, ನರಸಿಂಹಪ್ಪ, ಬೀರಪ್ಪ ಶಂಭೋಜಿ ಇದ್ದರು.   

ಸೂಕ್ತ ಪ್ರಾತಿನಿಧ್ಯ ನೀಡಲು ಮನವಿ
ರಾಯಚೂರು: ರಾಜ್ಯ ಮಂತ್ರಿ ಮಂಡಲದಲ್ಲಿ ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿಯನ್ನು ಒತ್ತಾಯಿಸಿದೆ.
  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್, ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಜಿಲ್ಲೆಯ ನಾಲ್ವರು ಶಾಸಕರು ಕಾಂಗ್ರೆಸ್ ಪಕ್ಷದವರಾಗಿದ್ದು, ದೇವದುರ್ಗ ಶಾಸಕ ಹಾಗೂ ಮಾಜಿ ಸಂಸದ ವೆಂಕಟೇಶ ನಾಯಕ ಅಥವಾ ಸಿಂಧನೂರಿನ ಶಾಸಕ ಬಾದರ್ಲಿ ಹಂಪನಗೌಡರಿಗೆ ಸಚಿವ ಸ್ಥಾನ ನೀಡಿ ಜಿಲ್ಲೆಗೆ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಕೆಪಿಸಿಸಿ ಪ್ರಮುಖರು   ಸಿದ್ದರಾಮಯ್ಯ ರನ್ನು ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ನಾಳೆ ದಲಿತರ ಸಭೆ
ರಾಯಚೂರು: ರಾಜ್ಯದ ಸಿಎಂ ಸ್ಥಾನವನ್ನು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡದ ಕಾಂಗ್ರೆಸ್ ಪಕ್ಷದ ವರ್ತನೆ ಹಿನ್ನೆಲೆ ವಿವಿಧೆಡೆ ಹೋರಾಟ ನಡೆದಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಹೋರಾಟ ಚುರುಕುಗೊಳಿಸುವ ಉದ್ದೇಶದಿಂದ ಚರ್ಚಿಸಲು ಮೇ 15ರಂದು ನಗರದಲ್ಲಿ ದಲಿತ ಸಂಘಟನೆಗಳ ಸಭೆ ಕರೆಯಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ದಲಿತ ಮುಖಂಡ ರವೀಂದ್ರನಾಥ ಪಟ್ಟಿ, ಆರ್.ಬಸವರಾಜ್, ಅಂದು ಬೆಳಗ್ಗೆ 11ಕ್ಕೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಸಭೆ ಕರೆದಿದ್ದು, ದಲಿತ ಸಂಘಟನೆಗಳ ಪ್ರಮುಖರು, ಮುಖಂಡರು ಹಾಗೂ ವಿವಿಧ ಪಕ್ಷಗಳಲ್ಲಿರುವ ದಲಿತ ನಾಯಕರು, ಪ್ರಗತಿಪರರು, ಸಾಹಿತಿಗಳು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಲು ಮನವಿ ಮಾಡಿದ್ದಾರೆ.

ವಿಗ್ರಹ ಪ್ರತಿಷ್ಠಾಪನೆ
ರಾಯಚೂರು: ಮಾನವಿ ತಾಲೂಕಿನ ಗಣದಿನ್ನಿ ಗ್ರಾಮದ ತಿಮ್ಮದುಂತ ಮಠದಲ್ಲಿ ಕಾಶಿ ವಿಶ್ವನಾಥ ಮತ್ತು ನಂದಿ ವಿಗ್ರಹಗಳ ಪ್ರತಿಷ್ಠಾಪನೆ ಮತ್ತು 25ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಈಚೆಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ನೀಲಗಲ್ ಮಠದ ಶ್ರೀ ಡಾ.ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿ ವಹಿಸಿ, ನವ ವಿವಾಹಿತರಿಗೆ ಆಶೀರ್ವದಿಸಿದರು.

ಸಿದ್ದು ಪ್ರಮಾಣ ವಚನ ಸ್ವೀಕಾರ; ವಿಜಯೋತ್ಸವ
ಲಿಂಗಸ್ಗೂರು: ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಲಿಂಗಸ್ಗೂರು ಪಟ್ಟಣದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ಪಟ್ಟಣದ ಗಡಿಯಾರ ಚೌಕ್, ಬಸ್ ನಿಲ್ದಾಣ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ಪಟಾಕಿ ಸಿಡಿಸಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಜಯಘೋಷ ಹಾಕಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಭೂಪನಗೌಡ ಕರಡಕಲ್, ಲಾಲಅಹ್ಮದ್ ಸಾಬ, ಖಾದರಪಾಶಾ, ಶರಣಗೌಡ ಪಾಟೀಲ ಬಯ್ಯಾಪುರ, ಗುಂಡಪ್ಪ ನಾಯಕ, ಮಲ್ಲಣ್ಣ ವಾರದ, ಚೆನ್ನಾರೆಡ್ಡಿ ಬಿರಾದಾರ, ಕುಮಾರಸ್ವಾಮಿ, ಎಂ.ಡಿ. ರಫೀ, ಶಂಕರಗೌಡ, ಅನೀಸ್ ಪಾಶಾ ಸೇರಿದಂತೆ ಇನ್ನಿತರರು ಇದ್ದರು.

'ಶಾಸಕ ತಂಗಡಗಿಗೆ ಸಚಿವ ಸ್ಥಾನ ನೀಡಿ'
ಲಿಂಗಸ್ಗೂರು: ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ನೂತನ ಶಾಸಕ ಶಿವರಾಜ ತಂಗಡಗಿ ಅವರಿಗೆ ಸಚಿವ ಸಂಪುಟ ದರ್ಜೆ ಮಂತ್ರಿ ಸ್ಥಾನ ನೀಡಬೇಕೆಂದು ಅಖಿಲ ಕರ್ನಾಟಕ ಭೋವಿ(ವಡ್ಡರ) ಯುವ ವೇದಿಕೆ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದೆ.
ರಾಜ್ಯದಲ್ಲಿ ಸುಮಾರು 60 ಲಕ್ಷ ಜನಸಂಖ್ಯೆ ಹೊಂದಿದ ಭೋವಿ ಸಮಾಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡು ಅಸಂಘಟಿತ, ದಲಿತ ಸಮುದಾಯವಾಗಿದೆ. ಈ ಸಮಾಜ ಮುಖ್ಯವಾಹಿನಿಗೆ ಬರಲು ಸಮಾಜದ ಏಕೈಕ ಶಾಸಕ ಶಿವರಾಜ ತಂಗಡಗಿ ಕ್ರೀಯಾಶೀಲ, ಹೋರಾಟಗಾರ  ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ಕಲ್ಪಿಸಿ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಸಮಾಜದ ಮುಖಂಡರಾದ ರವಿಕುಮಾರ ಚಿಗರಿ, ಚನ್ನಬಸವ, ವೀರೇಶ ಹಿರೇಮನಿ, ಸುರೇಶ ಹಿರೇಮನಿ ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.