ದೀಪದ ಬುಡದಲ್ಲೇ ಕತ್ತಲು
-ಜಗನ್ನಾಥ ಆರ್. ದೇಸಾಯಿ
ರಾಯಚೂರು: ರಾಜ್ಯಕ್ಕೇ ಬೆಳಕು ನೀಡುವ ಜಿಲ್ಲೆಗಿಂದು ವಿದ್ಯುತ್ ಇಲ್ಲದಂಥ ಸ್ಥಿತಿ. ನಿರಂತರ ವಿದ್ಯುತ್ನ ಬೇಡಿಕೆ ಈಡೇರುವ ಲಕ್ಷಣಗಳಂತೂ ಕಾಣಿಸುತ್ತಿಲ್ಲ. ಆದರೆ ವಿದ್ಯುತ್ ಕಡಿತವಾದರೂ ತಗ್ಗಲಿ ಎಂಬ ಜನರ ಬೇಡಿಕೆಗೂ ಕಿಮ್ಮತ್ತಿಲ್ಲ. ನಗರ ಸೇರಿದಂತೆ ಜಿಲ್ಲಾದ್ಯಂತ ಈಗ ವಿದ್ಯುತ್ ಕಡಿತ ಮಿತಿ ಮೀರಿದ್ದು ಜೆಸ್ಕಾಂ ಜನರ ತಾಳ್ಮೆ ಪರೀಕ್ಷಿಸುತ್ತಿದೆ.
ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಕಳೆದ ಕೆಲ ದಿನಗಳಿಂದ ದಿನದ ಬಹುಭಾಗ ವಿದ್ಯುತ್ ಕಡಿತ ಆರಂಭಗೊಂಡಿದ್ದು, ಸಮಯದ ಮಿತಿಯಿಲ್ಲದೇ ಗಂಟೆಗಟ್ಟಲೆ ವಿದ್ಯುತ್ ಕಡಿತವಾಗುತ್ತಿರುವುದು ನಾಗರಿಕರಲ್ಲಿ ತೀವ್ರ ಅಸಮಾಧಾನಕ್ಕೆ ದಾರಿ ಮಾಡಿದೆ. ರಾಜ್ಯಕ್ಕೆ ಶಕ್ತಿನಗರದಿಂದ ದಿನವೂ ವಿದ್ಯುತ್ ಉತ್ಪಾದಿಸಿ ಒದಗಿಸುತ್ತಿದ್ದರೂ ವಿದ್ಯುತ್ ಕೇಂದ್ರದ ಮಗ್ಗುಲಲ್ಲೇ ವಿದ್ಯುತ್ ಕಡಿತ ನಿರಂತರ ಎಂಬಂಥ ಸ್ಥಿತಿಯಿದೆ. ಕಳೆದೊಂದು ವಾರದಿಂದ ನಗರದಲ್ಲಿ ದಿನವೂ ಐದರಿಂದ ಆರು ಗಂಟೆ ವಿದ್ಯುತ್ ಕಡಿತ ಜಾರಿಗೊಳಿಸಲಾಗಿದೆ. ಪರಿಣಾಮ ನಗರದ ಜನತೆ ಜೆಸ್ಕಾಂಗೆ ಹಿಡಿಶಾಪ ಹಾಕುತ್ತಲೇ ಕಾಲ ಕಳೆಯುತ್ತಿದ್ದಾರೆ. ದಿನದ ಬಹುಭಾಗ ನಗರದ ಒಂದಿಲ್ಲೊಂದು ಪ್ರದೇಶದಲ್ಲಿ ವಿದ್ಯುತ್ ಕಡಿತ ಸರ್ವೇ ಸಾಮಾನ್ಯ ಎಂಬಂತಾಗಿದೆ.
ಬೇಡಿಕೆ ಹೆಚ್ಚಳ: ನಗರ ಸೇರಿದಂತೆ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ಸುರಿಯಲಾರಂಭಿಸಿಲ್ಲ. ಪರಿಣಾಮ ಬೇಸಿಗೆಯಲ್ಲಿ ಆರಂಭಗೊಂಡಿದ್ದ ಬಿರುಬಿಸಿಲಿನ ತಾಪ ಈಗಲೂ ಮುಂದುವರಿದಿದೆ. ಹಾಗಾಗಿ ವಿದ್ಯುತ್ ಬಳಕೆ ಪ್ರಮಾಣವೂ ತಗ್ಗಿಲ್ಲ. ಅದೇ ರೀತಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ ಕುಸಿತ ಕಾಣುತ್ತಿರುವುದು ಆತಂಕಕಾರಿ ಸಂಗತಿಯೇ ಆಗಿದೆ.
ಆದರೆ ರಾಜ್ಯದ ಇನ್ನಿತರೆ ಪ್ರಮುಖ ನಗರಗಳಿಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಕಡಿತ ರಾಯಚೂರು ಜಿಲ್ಲೆಗೆ ಏಕೆ ಎಂಬುದು ಜಿಲ್ಲೆಯ ಜನರ ಪ್ರಶ್ನೆ. ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರದಿಂದ ರಾಜ್ಯಕ್ಕೆ ದಿನವೂ 1300 ಮೆ.ವ್ಯಾ. ವಿದ್ಯುತ್ ಒದಗಿಸಲಾಗುತ್ತಿದೆ.
ಮೀನ ಮೇಷ: ಆದರೆ ಜಿಲ್ಲೆಗೆ ಬೇಕಿರುವ ಸುಮಾರು 150 ಮೆವ್ಯಾ ಒದಗಿಸಲೂ ಸರ್ಕಾರ ಮೀನ ಮೇಷ ಎಣಿಸುತ್ತಿರುವುದು ಅಸಹನೆಗೆ ಕಾರಣ. ಮುಖ್ಯ ನಿಯಂತ್ರಣಾ ಕೇಂದ್ರದಿಂದ ಜಿಲ್ಲೆಗೆ ಕೇವಲ 50ರಿಂದ 60 ಮೆವ್ಯಾ ಒದಗಿಸಲಾಗುತ್ತಿದೆ. ಅದೇ ಕಾರಣಕ್ಕೆ ಹೆಚ್ಚಿನ ಪ್ರಮಾಣದ ವಿದ್ಯುತ್ ಕಡಿತ ಅನಿವಾರ್ಯ ಎಂಬ ಮಾತು ಜೆಸ್ಕಾಂನ ಅಧಿಕಾರಿಗಳಿಂದ ಕೇಳಿಬಂದಿದೆ. ನಗರ ಪ್ರದೇಶದಲ್ಲಿ ದಿನವೂ ಅನಿಯಮಿತವಾಗಿ 5- 6 ಗಂಟೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 6- 8 ಗಂಟೆ ಮಾತ್ರ ವಿದ್ಯುತ್ ಒದಗಿಸಲಾಗುತ್ತಿದೆ.
15 ದಿನಗಳಿಂದ ಕಗ್ಗತ್ತಲಲ್ಲಿ ಜಕ್ಕೆರಮಡು ಗ್ರಾಮಸ್ಥರು
ಮುದಗಲ್: ವಿದ್ಯುತ್ ಪರಿವರ್ತಕ ಸುಟ್ಟು 15 ದಿನಗಳಾದರೂ ಹೊಸ ಪರಿವರ್ತಕ ಅಳವಡಿಸದೆ ಇದ್ದುದರಿಂದ ಜಕ್ಕೆರಮಡು ಗ್ರಾಮಸ್ಥರು ರಾತ್ರಿಯ ಕಗ್ಗತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡುತ್ತಿರುವ ಪರಿವರ್ತಕ ಸುಟ್ಟಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮಸ್ಥರು ಪಕ್ಕದ ಹಳ್ಳಕ್ಕೆ ಹೋಗಿ ನೀರು ತರುವಂತಾಗಿದೆ. ಹಿಟ್ಟಿನ ಗಿರಣಿಗಳು ಬಂದ್ ಆಗಿದ್ದರಿಂದ ಮುದಗಲ್ ಪಟ್ಟಣಕ್ಕೆ ಹೋಗಿ ಹಿಟ್ಟು ಬೀಸಿಕೊಂಡು ಬರಬೇಕಾದ ದುಸ್ಥಿತಿ ಒದಗಿದೆ. ರಾತ್ರಿಯಲ್ಲಿ ಗ್ರಾಮಸ್ಥರು ಚಿಮಣಿ ಬೆಳಕಿನಲ್ಲೇ ಊಟ ಮಾಡುವಂತಾಗಿದೆ. ರಾತ್ರಿಯಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಕಚ್ಚಿಸಿಕೊಂಡು ಪರಿತಪಿಸುವಂತಾಗಿದೆ. ವದ್ಧರು, ಮಕ್ಕಳು ಕತ್ತಲಲ್ಲಿ ತಿರುಗಾಡಲಾಗದೆ ಮನೆ ಸೇರಿಕೊಂಡಿದ್ದಾರೆ. ಹೊಸ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೆ 'ಹೊಸ ಪರಿವರ್ತಕ ಬಂದ ಮೇಲೆ ಅಳವಡಿಸುವುದಾಗಿ' ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆಂದು ಗ್ರಾಮಸ್ಥರಾದ ಅಮರೇಶ ನಾಯಕ, ಅಮರೇಶ ರಾಠೋಡ, ಹುಸೇನಸಾಬ್ ಕಂದಗಲ್, ಖಾಜಾಸಾಬ್, ತಿಪ್ಪಣ್ಣ ನಾಯಕ ಮುಂತಾದವರು ದೂರಿದ್ದಾರೆ. ಕೂಡಲೇ ಹೊಸ ವಿದ್ಯುತ್ ಪರಿವರ್ತಕ ಅಳವಡಿಸಿ ಕುಡಿವ ನೀರು ಸರಬರಾಜು ಆಗುವಂತೆ ಮಾಡಬೇಕು. ಕತ್ತಲಿಂದ ಮುಕ್ತಿಗೊಳಿಸಬೇಕು. ಇಲ್ಲದಿದ್ದರೆ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಜನಪ್ರತಿನಿಧಿಗಳ ಮೌನ
ಪ್ರತಿ ಬಾರಿ ಚುನಾವಣೆ ವೇಳೆ ಜಿಲ್ಲೆಯಲ್ಲಿ ವಿದ್ಯುತ್ ಕೇಂದ್ರವಿದೆ. ಹಾಗಾಗಿ ಆಯ್ಕೆಯಾದರೆ 24 ಗಂಟೆ ವಿದ್ಯುತ್ ಒದಗಿಸಲು ಪ್ರಯತ್ನಿಸುವ ಭರವಸೆಯನ್ನು ಎಲ್ಲ ಪಕ್ಷಗಳ ನಾಯಕರು ನೀಡಿದ್ದಾರೆ. ಆದರೆ ಕಳೆದೊಂದು ವಾರದಿಂದ ಉಂಟಾಗಿರುವ ವಿದ್ಯುತ್ ಕ್ಷಾಮಕ್ಕೆ ಶಾಸಕರ, ಸಂಸದರದ್ದು ದಿವ್ಯ ಮೌನವೇ ಉತ್ತರವಾಗಿದೆ. ಒಂದೆಡೆ ಉರಿಬಿಸಿಲು, ಮತ್ತೊಂದೆಡೆ ಮಳೆಯ ಅಭಾವದಿಂದ ಕಂಗೆಟ್ಟಿರುವ ಜಿಲ್ಲೆಯ ಜನತೆಗೆ ವಿದ್ಯುತ್ ಕಡಿತದ ಕಾಟದಿಂದ ಬದುಕು ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿಸಿದೆ. ಜನಪ್ರತಿನಿಧಿಗಳು ಜಿಲ್ಲೆಯ ಅಗತ್ಯ ಬೇಡಿಕೆಗೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ.
ಕುಡಿವ ನೀರಿನ ಸಮಸ್ಯೆ
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನಿಯಮಿತ ವಿದ್ಯುತ್ ಕಡಿತದಿಂದ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ಈಗಾಗಲೇ ನಗರಸಭೆ ಹರಸಾಹಸ ಪಡುತ್ತಿದೆ. ಈಗ ವಿದ್ಯುತ್ ಕಡಿತವೂ ಎದುರಾಗಿದ್ದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂಗೆ ಶಪಿಸುವ ಕಾರ್ಯವನ್ನು ನಗರಸಭೆ ಮಾಡುತ್ತಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಕಿರು ನೀರು ಸರಬರಾಜು ಯೋಜನೆಯ ಸಂಪರ್ಕಗಳಿಗೆ ವಿದ್ಯುತ್ ಅಡಚಣೆಯಾಗಿ ಗ್ರಾಮೀಣರು ವಿದ್ಯುತ್ ಪೂರೈಕೆಯಾಗುವವರೆಗೆ ನೀರಿಗಾಗಿ ಕಾಯುವಂತಾಗಿದೆ.
ಅಕ್ರಮ ವಿದ್ಯುತ್
ಸಿಂಧನೂರು: ನಗರದ ರಾಯಚೂರು- ಗಂಗಾವತಿ ಮುಖ್ಯ ರಸ್ತೆ ಹಾಗೂ ಕುಷ್ಟಗಿ ರಸ್ತೆಗಳ ಅಕ್ಕಪಕ್ಕದಲ್ಲಿರುವ ಅಂಗಡಿಗಳಿಗೆ ಲೈನ್ಮನ್ಗಳು ಅಕ್ರಮವಾಗಿ ಶ್ರೀಮಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆಂದು ಕನ್ನಡ ಯುವಸೇನೆ ಜಿಲ್ಲಾಧ್ಯಕ್ಷ ಕೆ.ಬಸವರಾಜ ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಆರ್.ಆರ್.ನಂ.17744 ಮತ್ತು 20012 ಸೇರಿದಂತೆ ಕೆಲ ನಂಬರ್ಗಳಿಗೆ ಅಕ್ರಮ ವಿದ್ಯುತ್ ನೀಡಿದ್ದು ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

