ನಾಲ್ವರಿಂದ ಆರು ನಾಮಪತ್ರ
ಕ.ಪ್ರ. ವಾರ್ತೆ ರಾಯಚೂರು ಮಾ.25
ರಾಯಚೂರು ಲೋಕಸಭೆ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಕೋಟ್ಯಾಧಿಪತಿ ಆಗಿದ್ದಾರೆ. ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ನೀಡಿದ ತಮ್ಮ ಚರ ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದ ವಿವರಗಳಲ್ಲಿ ಅವರು ಕೋಟ್ಯಾಧಿಪತಿ ಎಂದು ಹೇಳಿಕೊಂಡಿದ್ದು, ಯಾವುದೇ ರೀತಿಯ ಸಾಲ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಅವರ ಬಳಿ 1,55,700 ಮತ್ತು ಅವರ ಪತ್ನಿ ಲಕ್ಷ್ಮಿ ಅವರ ಬಳಿ 58,800 ನಗದು ಹಣವಿದೆ. ಇನ್ನು ವಿವಿಧೆಡೆ ಬಿ.ವಿ. ನಾಯಕ ಅವರ ಹೆಸರಿನಲ್ಲಿ 5,47,937 ಠೇವಣಿಯಿದೆ. ಮಹೀಂದ್ರಾ ರೆಕ್ಸಟನ್, ಇನ್ನೋವಾ ಕಾರು, ಸ್ಯಾಂಟ್ರೋ ಕಾರುಗಳಿವೆ. ಇವುಗಳ ಒಟ್ಟು ಬೆಲೆ 27.01 ಲಕ್ಷ ಆಗಿದೆ ಎಂದು ವಿವರಿಸಿದ್ದಾರೆ. ಅದೇ ರೀತಿ ಅಭ್ಯರ್ಥಿ ಬಳಿ 2.25 ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣ, 2 ಲಕ್ಷ ಮೌಲ್ಯದ 4 ಕೆಜಿ ಬೆಳ್ಳಿ ಹಾಗೆಯೇ ಪತ್ನಿ ಬಳಿ 24 ಲಕ್ಷ ಮೌಲ್ಯದ 800 ಗ್ರಾಂ ಚಿನ್ನಾಭರಣ, 25 ಲಕ್ಷ ಮೌಲ್ಯದ 8 ಕೆಜಿ ಬೆಳ್ಳಿ ಇದೆ ಎಂದು ತಿಳಿಸಿದ್ದಾರೆ. ಅಭ್ಯರ್ಥಿ ಹೆಸರಿನಲ್ಲಿ 38,30,454 ಮೌಲ್ಯದ ಚರಾಸ್ತಿಯಿದ್ದರೆ, ಪತ್ನಿ ಬಳಿ 27,08,800 ಮೌಲ್ಯದ ಚರಾಸ್ತಿಯಿದೆ. ಅಭ್ಯರ್ಥಿಯು ಯಾವುದೇ ಹಣಕಾಸು ಸಂಸ್ಥೆಯಿಂದ ಸಾಲ ಪಡೆದಿಲ್ಲ ಎಂದು ಹೇಳಿಕೊಂಡಿದ್ದು, ಇವರ ಬಳಿ ಕಟ್ಟಡ, ಕೃಷಿ ಜಮೀನು ಸೇರಿದಂತೆ ಒಟ್ಟು 6,35,88,212 ಮೊತ್ತದ ಸ್ಥಿರಾಸ್ತಿಯಿದ್ದರೆ, ಪತ್ನಿ ಲಕ್ಷ್ಮಿ ಬಳಿ 33,75,000 ಆಸ್ತಿಯಿದೆ ಎಂದು ತಿಳಿಸಿದ್ದಾರೆ.
ಕ.ಪ್ರ. ವಾರ್ತೆ ರಾಯಚೂರು ಮಾ.25
ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಏ.17ರಂದು ನಡೆಯಲಿರುವ ಚುನಾವಣೆಗೆ ಮಂಗಳವಾರ ನಾಲ್ವರು ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಭಗವಂತರಾಯ ನಾಯಕ(ಬಿ.ವಿ. ನಾಯಕ) ಅವರು ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಸಾವಿರಾರು ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಬೋಸರಾಜು, ಜಿಲ್ಲಾಧ್ಯಕ್ಷ ವಸಂತಕುಮಾರ್, ಸಿದ್ದಯ್ಯ ತಾತಾ ಗುರುವಿನ್, ಶ್ರೀಕಾಂತ್ ವಕೀಲರು ಇದ್ದರು.
ಜೆಡಿಎಸ್ ಅಭ್ಯರ್ಥಿ: ಜೆಡಿಎಸ್ ಅಭ್ಯರ್ಥಿ ದೇವೇಂದ್ರಪ್ಪ ನಾಯಕ(ಡಿ.ಬಿ. ನಾಯಕ) ಅವರು ಜೆಡಿಎಸ್ ಪಕ್ಷದಿಂದ ತಮ್ಮ ನಾಮಪತ್ರ ಸಲ್ಲಿಸಿದರು. ಪಕ್ಷದ ಪ್ರಮುಖರಾದ ಮಹಾಂತೇಶ್ ಪಾಟೀಲ್ ಅತ್ತನೂರು, ಶಾಸಕರಾದ ಮಾನಪ್ಪ ವಜ್ಜಲ್, ಡಾ. ಶಿವರಾಜ್ ಪಾಟೀಲ್, ಮಾಜಿ ಶಾಸಕ ವೆಂಕಟರಾವ್ ನಾಡಗೌಡರ ಜತೆಗೂಡಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು.
ಬಿಎಸ್ಪಿ ಅಭ್ಯರ್ಥಿ: ಲೋಕಸಭೆ ಚುನಾವಣೆಗೆ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಯಾಗಿ ರಾಜಾ ತಿಮ್ಮಪ್ಪ ನಾಯಕ ತಮ್ಮ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಎಸ್ಪಿ ಪಕ್ಷದ ಪ್ರಮುಖರಿದ್ದರು.
ಎನ್ಡಿಪಿಯಿಂದ..: ಹಾಗೆಯೇ ನ್ಯಾಷನಲ್ ಡೆವಲಪ್ಮೆಂಟ್ ಪಾರ್ಟಿಯ ಅಭ್ಯರ್ಥಿಯಾಗಿ ಮಾರುತಿ ಎಂಬುವವರು ತಮ್ಮ ನಾಮಪತ್ರ ಸಲ್ಲಿಸಿದರು. ಒಟ್ಟಿನಲ್ಲಿ ಮಂಗಳವಾರ ನಾಲ್ವರು ಅಭ್ಯರ್ಥಿಗಳು 6 ನಾಮಪತ್ರ ಸಲ್ಲಿಸಿದ್ದು, ಪ್ರಸಕ್ತ ಚುನಾವಣೆಗೆ ಇದುವರೆಗೆ ಒಟ್ಟು 8 ಜನ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದಂತಾಗಿದೆ.
ಜೆಡಿಎಸ್ ಅಭ್ಯರ್ಥಿ ಲಕ್ಷಾಧೀಶ
ರಾಯಚೂರು: ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಜೆಡಿಎಸ್ನ ರಾಯಚೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ದೇವೇಂದ್ರಪ್ಪ ನಾಯಕ (ಡಿ.ಬಿ. ನಾಯಕ) ಅವರು ಲಕ್ಷಾಧೀಶರು. ಚುನಾವಣೆ ಆಯೋಗಕ್ಕೆ ಅವರು ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರ ಸಲ್ಲಿಸಿದ್ದಾರೆ.
ಅವರ ಒಟ್ಟು ಚರ ಆಸ್ತಿ 18,38,337 ಆಗಿದ್ದು, ಅವರ ಪತ್ನಿ ಸುವರ್ಣ ಅವರ ಚರಾಸ್ತಿ 25,53,551 ಆಗಿದೆ. ಅದರಲ್ಲಿ ಇಬ್ಬರ ಬಳಿ ತಲಾ 2 ಲಕ್ಷ ನಗದು ಇದ್ದು, ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಡಿ.ಬಿ. ನಾಯಕ ಹೆಸರಿನಲ್ಲಿ 4,75,337 ಠೇವಣಿಯಿದೆ.
ಪತ್ನಿಯ ಹೆಸರಿನಲ್ಲಿ 6,28,551 ಠೇವಣಿ ಇರುವುದಾಗಿ ಘೋಷಿಸಿದ್ದಾರೆ. ಅಂಚೆ ಸೇರಿದಂತೆ ವಿವಿಧ ಉಳಿತಾಯ ಯೋಜನೆಗಳಲ್ಲಿ 2.60 ಲಕ್ಷ ಹಣ ತೊಡಗಿಸಿದ್ದು, ನಾಯಕ ಅವರ ಬಳಿ 300 ಗ್ರಾಂ ಚಿನ್ನಾಭರಣವಿದ್ದು ಅದರ ಮೌಲ್ಯ 9 ಲಕ್ಷ. ಅವರ ಪತ್ನಿಯ ಬಳಿ 500 ಗ್ರಾಂ ಚಿನ್ನಾಭರಣವಿದ್ದು ಅದರ ಮೊತ್ತ 15 ಲಕ್ಷ ಹಾಗೂ 5 ಕೆಜಿ ಬೆಳ್ಳಿಯಿದ್ದು ಅದರ ಮೌಲ್ಯ 25 ಲಕ್ಷ ಆಗುತ್ತದೆ ಎಂದಿದ್ದಾರೆ. ಡಿ.ಬಿ. ನಾಯಕ ಅವರ ಹೆಸರಿನಲ್ಲಿರುವ ಕೃಷಿ ಜಮೀನು, ಮತ್ತಿತರೆ ಸ್ಥಿರಾಸ್ತಿಯ ಒಟ್ಟು ಮೌಲ್ಯ 62 ಲಕ್ಷ ಆಗಿದ್ದು, ಇವರು ಯಾವುದೇ ರೀತಿಯ ಸಾಲ ಪಡೆದಿಲ್ಲ. ಇವರ ವಿರುದ್ಧ ಲಂಚ ಸ್ವೀಕಾರದ ಆರೋಪವಿರುವ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

