ಪೂರ್ವಭಾವಿ ಸಭೆ ಇಂದು
ರಾಯಚೂರು: ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಂ ಮತ್ತು ಭಾರತ ರತ್ನ ಡಾ. ಅಂಬೇಡ್ಕರ್ ಜನ್ಮ ದಿನಾಚರಣೆಗಳನ್ನು ಆಚರಿಸಲು ಮಾ.27ರಂದು ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಏ.5 ಹಾಗೂ ಏ.14 ರಂದು ಜಯಂತಿ ಕಾರ್ಯಕ್ರಮ ಆಚರಿಸುವ ಹಿನ್ನೆಲೆಯಲ್ಲಿ ಚರ್ಚಿಸಲು ಮಾ.27 ರಂದು ಜಿಲ್ಲಾಧಿಕಾರಿ ನಾಗರಾಜು ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10ಕ್ಕೆ ಪೂರ್ವಭಾವಿ ಸಿದ್ಧತಾ ಸಭೆ ಕರೆದಿದ್ದು, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಸಭೆಯಲ್ಲಿ ಹಾಜರಿರಲು ಜಿಲ್ಲಾಡಳಿತ ಸೂಚಿಸಿದೆ.
29ರಂದು ಪುಣ್ಯಸ್ಮರಣೆ
ರಾಯಚೂರು: ನಗರದ ಡಾ. ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದ 10ನೇ ವಾರ್ಷಿಕೋತ್ಸವ, ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಲಿಂ.ಡಾ.ಎಂ.ನಾಗಪ್ಪ ಅವರ ಮೂರನೇ ಪುಣ್ಯಸ್ಮರಣೆ ಕಾರ್ಯಕ್ರಮ ಮಾ.29 ರಂದು ಆಯೋಜಿಸಲಾಗಿದೆ. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಂದು ಸಂಜೆ 5ಕ್ಕೆ ಸಮಾರಂಭದ ಸಾನಿಧ್ಯವನ್ನು ಬೇಲಿಮಠದ ಶಿವರುದ್ರ ಸ್ವಾಮೀಜಿ ವಹಿಸಲಿದ್ದಾರೆ. ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ವಿಶ್ರಾಂತ ನ್ಯಾಯಮೂರ್ತಿ ಡಾ.ಬಿ.ಎಸ್. ರಾಯಕೋಟೆ ಅವರಿಗೆ ಪ್ರದಾನ ಮಾಡಲಾಗುತ್ತದೆ. ಮುಖ್ಯ ಅತಿಥಿಯಾಗಿ ಮಾಜಿ ಸಚಿವ ವೈಜನಾಥ ಪಾಟೀಲ್ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ತಿಪ್ಪಾರೆಡ್ಡಿ ವಹಿಸಲಿದ್ದಾರೆಂದು ತಿಳಿಸಿದೆ.
ವಿಶ್ವ ರಂಗಭೂಮಿ ದಿನಾಚರಣೆ ಇಂದು
ರಾಯಚೂರು: ಲೋಹಿಯಾ ಪ್ರತಿಷ್ಠಾನ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವತಿಯಿಂದ ನಗರದಲ್ಲಿ ಮಾ.27 ರಂದು ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿರುವ ದಿನಾಚರಣೆ ಸಮಾರಂಭವನ್ನು ರಂಗಕಲಾವಿದೆ ಶಾಂತಾ ಕುಲಕರ್ಣಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಭೀಮನಗೌಡ ಇಟಗಿ ವಹಿಸುವರು. ಮುಖ್ಯ ಅತಿಥಿಯಾಗಿ ರಂಗನಿರ್ದೇಶಕ ತಾಯಣ್ಣ ಯರಗೇರಾ, ಡಾ. ದಸ್ತಗೀರಸಾಬ್ ದಿನ್ನಿ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಮೋಹಿನಿ ಭಸ್ಮಾಸುರ ಪ್ರದರ್ಶನ ಇಂದು
ರಾಯಚೂರು: ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಗರದಲ್ಲಿ ಮಾ.27ರಂದು ಮಂಗಳಮುಖಿಯರಿಂದ ಮೋಹಿನಿ ಭಸ್ಮಾಸುರ ನಾಟಕದ ಪ್ರದರ್ಶನ ಆಯೋಜಿಸಲಾಗಿದೆ. ಈ ಕುರಿತು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗಕರ್ಮಿ ಅಲ್ತಾಫ್ ರಂಗಮಿತ್ರ, ವಿಶ್ವರಂಗಭೂಮಿ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಒಂದು ನಾಟಕ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ಕಡೆಯ ನಾಟಕ ಪ್ರದರ್ಶನ ಮಾ.27ರಂದು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು. ಬಳ್ಳಾರಿಯ ಮರಿಯಮ್ಮನ ಹಳ್ಳಿಯ ಮಂಗಳಮುಖಿ ಕಲಾವಿದರ ತಂಡವು ಮಾ.27ರಂದು ನಗರದ ರಂಗಮಂದಿರದಲ್ಲಿ ಮೋಹಿನಿ ಭಸ್ಮಾಸುರ ನಾಟಕದ ಪ್ರದರ್ಶನ ನೀಡಲಿದೆ. ರಂಗಭೂಮಿಯನ್ನು ಮತ್ತಷ್ಟು ವಿಸ್ತಾರಗೊಳಿಸುವ ಪ್ರಯತ್ನ ಇದಾಗಿದ್ದು, ಪ್ರದರ್ಶನ ಉಚಿತವಾಗಿದ್ದು, ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಪಿಯು ಪರೀಕ್ಷೆ ಮುಗಿಸಿದ ಖುಷಿ
ಸಿಂಧನೂರು: ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಏರ್ಪಡಿಸಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳ ಅಂತಿಮ ವರ್ಷದ ವಾರ್ಷಿಕ ಪರೀಕ್ಷೆ ಬುಧವಾರ ಅಂತ್ಯಗೊಂಡಿತು. ಮಾ.12ರಿಂದ 26ರ ವರೆಗೆ 16 ದಿನಗಳ ಅವಧಿಯಲ್ಲಿ ಈ ಪರಿಕ್ಷೆಗಳು ನಡೆದಿದ್ದು, ವಿದ್ಯಾರ್ಥಿಗಳು ಯಾವಾಗ ಪರೀಕ್ಷೆ ಮುಗಿಯುತ್ತೆ, ಯಾವಾಗ ಹೊರೆ ಇಳಿಯುತ್ತೆ ಎಂಬ ಮನೋಭಾವದಲ್ಲಿದ್ದರು. ಆದರೆ 26ರಂದು ಇಂಗ್ಲಿಷ್ ವಿಷಯದ ಪರೀಕ್ಷೆ ಬರೆಯುವ ಮೂಲಕ ನಿರಾಳರಾದರು. ಕೊನೆಯ ಪರೀಕ್ಷೆ ಮುಗಿದ ತಕ್ಷಣವೇ ವಿದ್ಯಾರ್ಥಿಗಳು ತಮ್ಮ ಕೊಠಡಿಗಳಿಂದ ಹೊರಬಂದು ಹರ್ಷೋತ್ತರವಾಗಿ ಕುಣಿದು ಕುಪ್ಪಳಿಸಿ, ಬೈಕ್ಗಳ ಸವಾರಿ ಮೂಲಕ ಕೆಲ ನಿಮಿಷಗಳ ಕಾಲ ಜನರಲ್ಲಿ ಅಚ್ಚರಿ ಮೂಡಿಸಿದ ಘಟನೆಯು ನಗರದ ಪ್ರಮುಖ ಸೆಂಟರ್ಗಳಲ್ಲಿ ಕಂಡುಬಂದಿತು. ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಂದ ಯಾವುದೇ ರೀತಿಯು ಅಸಭ್ಯ ವರ್ತನೆ, ಅಹಿತಕರ ಘಟನೆ ಕಂಡು ಬಂದಿಲ್ಲ. ಶಿಸ್ತು, ಕ್ರಮಬದ್ಧವಾಗಿ ಎಲ್ಲ ವಿದ್ಯಾರ್ಥಿಗಳು ಸಂತೋಷದಿಂದ ಪರೀಕ್ಷೆ ಬರೆದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ತಮ್ಮ ಕಡೆಯಿಂದ ಧನ್ಯವಾದಗಳು ಎಂದು ಪರೀಕ್ಷೆ ನಡೆಸಿದ ಕೊಠಡಿ ಮೇಲ್ವಿಚಾರಕ ಉಪನ್ಯಾಸಕರ ಪ್ರತಿಕ್ರಿಯೆಯಾಗಿತ್ತು.
ಶ್ರೀಶೈಲಕ್ಕೆ ವಿಶೇಷ ಬಸ್ ಸೌಕರ್ಯ
ಸಿಂಧನೂರು: ಯುಗಾದಿ ಹಬ್ಬದ ಪ್ರಯುಕ್ತ ಶ್ರೀಶೈಲಕ್ಕೆ ತೆರಳುವ ಭಕ್ತಾದಿಗಳಿಗೆ ವಿಶೇಷ ರೀತಿಯ ಬಸ್ಗಳ ಸೌಲಭ್ಯ ಒದಗಿಸಲಾಗಿದೆ ಎಂದು ಸಾರಿಗೆ ಘಟಕದ ವ್ಯವಸ್ಥಾಪಕ ಕರೇಗೌಡ ಕುರುಕುಂದಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕೆಗೆ ಹೇಳಿಕೆ ನೀಡಿರುವ ಅವರು, ಪ್ರತಿ ವರ್ಷದಂತೆ ಶ್ರೀಶೈಲಕ್ಕೆ ಸಿಂಧನೂರು ಸೇರಿದಂತೆ ತಾಲೂಕಿನ ವಿವಿಧ ಕಡೆಗಳಿಂದ ಹೋಗುವ ಭಕ್ತಾದಿಗಳ ಅನುಕೂಲಕ್ಕಾಗಿ ಸಿಂಧನೂರು ಡಿಪೋದಿಂದ 20 ಬಸ್ಗಳು, ಮಸ್ಕಿ, ಮಾನವಿ, ಲಿಂಗಸ್ಗೂರು, ಬಳ್ಳಾರಿ ಇನ್ನಿತರ ಡಿಪೋದಿಂದ 40ಕ್ಕೂ ಹೆಚ್ಚು ವಿಶೇಷ ಬಸ್, ಜೊತೆಗೆ 20 ಹೊಸ ಬಸ್ಗಳ ವ್ಯವಸ್ಥೆ ಇದೆ. ಒಟ್ಟು 60ಕ್ಕೂ ಹೆಚ್ಚು ಬಸ್ಗಳನ್ನು ಭಕ್ತಾದಿಗಳ ಅನುಕೂಲಕ್ಕಾಗಿ ನಮ್ಮ ಡಿಪೋದಿಂದ ಬಿಡಲಾಗಿದ್ದು, ಯಾವುದೇ ರೀತಿಯ ಗೊಂದಲವಿಲ್ಲದೆ ಸುಖಕರವಾಗಿ ಪ್ರಯಾಣಿಸಲು ಭಕ್ತಾದಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕಲುಷಿತ ನೀರು ಸೇವನೆ: 9 ಜನ ಅಸ್ವಸ್ಥ
ರಾಯಚೂರು: ದೇವದುರ್ಗ ತಾಲೂಕಿನ ಪಲಕನಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 9ಜನ ಬುಧವಾರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮದಲ್ಲಿ ಪೂರೈಕೆಯಾಗುತ್ತಿರುವ ಕಲುಷಿತ ನೀರು ಸೇವಿಸಿದ್ದರಿಂದ ವಾಂತಿ, ಬೇಧಿಯಿಂದ ಬಳಲಿದ 9 ಜನರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಜಾಲಹಳ್ಳಿ ಸಮುದಾಯ ಆರೋಗ್ಯಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮತದಾರರಿಗೆ ಜಾಗೃತಿ
ರಾಯಚೂರು: ನಗರದ ವಿವಿಧೆಡೆಯ ಬಾಲ ಕಾರ್ಮಿಕರ ಪುನಾರ್ವಸತಿ ಶಾಲೆಗಳಲ್ಲಿ ಕಡ್ಡಾಯ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇಲ್ಲಿನ ಕಮಲಾ ನೆಹರು ಬಾಲಕಾರ್ಮಿಕ ಪುನಾರ್ವಸತಿ ಶಾಲೆ ಹಾಗೂ ಜಿ. ಭೀಮಣ್ಣ ಬಾಲಕಾರ್ಮಿಕ ಪುನಾರ್ವಸತಿ ಶಾಲೆಗಳಲ್ಲಿ ಆಯೋಜಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಸ್ಥಿರ ಹಾಗೂ ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಮತದಾನ ಕಡ್ಡಾಯ ಮಾಡುವಂತೆ ಮನವಿ ಮಾಡಲಾಯಿತು.
ಈ ಸಂದರ್ಭ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಯೋಜನಾಧಿಕಾರಿ ಮಂಜುನಾಥರೆಡ್ಡಿ, ಧಾನಪ್ಪ, ರವಿಕುಮಾರ, ಶಾಂತರಾಂ ಹೆಗಡೆ, ಉರುಕುಂದಿ ಈರಣ್ಣ ಟ್ರಸ್ಟ್ ಸದಸ್ಯ ಪವನಕುಮಾರ ಸೇರಿ ಅನೇಕರಿದ್ದರು. ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ಮಕ್ಕಳು ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ನಾಳೆ: ನಿಷೇಧಾಜ್ಞೆ ಜಾರಿ
ರಾಯಚೂರು: ಜಿಲ್ಲಾದ್ಯಂತ ಮಾ.28 ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು ತಡೆಗೆ ಬಿಗಿ ಕ್ರಮ ಕೈಗೊಳ್ಳಲಾಗಿದ್ದು, ಪರೀಕ್ಷೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಾ.28 ರಿಂದ ಏ.9 ರವರೆಗೆ ಜರುಗಲಿರುವ ಪರೀಕ್ಷೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಹಾಗೂ ನಕಲು ತಡೆಗೆ ಕ್ರಮಗಳನ್ನು ತೆಗೆದುಕೊಂಡಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿದ್ದಾರೆ. ಪರೀಕ್ಷೆ ದಿನಗಳಂದು ಪರೀಕ್ಷೆ ವೇಳೆಯಲ್ಲಿ ಈ ಆದೇಶ ಜಾರಿಯಲ್ಲಿರಲಿದ್ದು, ಪರೀಕ್ಷಾ ಕೇಂದ್ರಗಳಿಗೆ ನಿಯೋಜಿತ ಸಿಬ್ಬಂದಿ ಹಾಗೂ ಪರೀಕ್ಷಾರ್ಥಿ ಹೊರತುಪಡಿಸಿ ಇತರರಿಗೆ ಪ್ರವೇಶ ನಿಷೇಧಿಸಿದ್ದಾರೆ.
ವಿಶ್ವ ರಂಗಭೂಮಿ ದಿನಾಚರಣೆ ಇಂದು
ರಾಯಚೂರು: ಲೋಹಿಯಾ ಪ್ರತಿಷ್ಠಾನ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವತಿಯಿಂದ ನಗರದಲ್ಲಿ ಮಾ.27 ರಂದು ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿರುವ ದಿನಾಚರಣೆ ಸಮಾರಂಭವನ್ನು ರಂಗಕಲಾವಿದೆ ಶಾಂತಾ ಕುಲಕರ್ಣಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಭೀಮನಗೌಡ ಇಟಗಿ ವಹಿಸುವರು. ಮುಖ್ಯ ಅತಿಥಿಯಾಗಿ ರಂಗನಿರ್ದೇಶಕ ತಾಯಣ್ಣ ಯರಗೇರಾ, ಡಾ. ದಸ್ತಗೀರಸಾಬ್ ದಿನ್ನಿ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಮೋಹಿನಿ ಭಸ್ಮಾಸುರ ಪ್ರದರ್ಶನ ಇಂದು
ರಾಯಚೂರು: ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಗರದಲ್ಲಿ ಮಾ.27ರಂದು ಮಂಗಳಮುಖಿಯರಿಂದ ಮೋಹಿನಿ ಭಸ್ಮಾಸುರ ನಾಟಕದ ಪ್ರದರ್ಶನ ಆಯೋಜಿಸಲಾಗಿದೆ. ಈ ಕುರಿತು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗಕರ್ಮಿ ಅಲ್ತಾಫ್ ರಂಗಮಿತ್ರ, ವಿಶ್ವರಂಗಭೂಮಿ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಒಂದು ನಾಟಕ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ಕಡೆಯ ನಾಟಕ ಪ್ರದರ್ಶನ ಮಾ.27ರಂದು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು. ಬಳ್ಳಾರಿಯ ಮರಿಯಮ್ಮನ ಹಳ್ಳಿಯ ಮಂಗಳಮುಖಿ ಕಲಾವಿದರ ತಂಡವು ಮಾ.27ರಂದು ನಗರದ ರಂಗಮಂದಿರದಲ್ಲಿ ಮೋಹಿನಿ ಭಸ್ಮಾಸುರ ನಾಟಕದ ಪ್ರದರ್ಶನ ನೀಡಲಿದೆ. ರಂಗಭೂಮಿಯನ್ನು ಮತ್ತಷ್ಟು ವಿಸ್ತಾರಗೊಳಿಸುವ ಪ್ರಯತ್ನ ಇದಾಗಿದ್ದು, ಪ್ರದರ್ಶನ ಉಚಿತವಾಗಿದ್ದು, ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

