ಮಧು ಪರ ಕುಟುಂಬ ಪ್ರಚಾರ
ಕ.ಪ್ರ.ವಾರ್ತೆ ಸೊರಬ ಮೇ 2
ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಗುರುವಾರ ತಮ್ಮ ತಾಯಿ ಶಕುಂತಲಾ ಬಂಗಾರಪ್ಪ ಮತ್ತು ಸಹೋದರಿಯರಾದ ಸುಜಾತ ತಿಲಕ್ ಕುಮಾರ್, ಗೀತಾ ಶಿವರಾಜಕುಮಾರ್, ಅನಿತಾ ಪವನ್ ಕುಮಾರ್ ಹಾಗೂ ಪತ್ನಿ ಅನಿತಾ ಮಧು ಬಂಗಾರಪ್ಪ ಇವರೊಂದಿಗೆ ಸೊರಬ ವಿಧಾನಸಭಾ ಕ್ಷೇತ್ರದ ಹೋಬಳಿ ಪ್ರದೇಶಗಳಾದ ಜಡೆ, ಚಂದ್ರಗುತ್ತಿ, ತಾಳಗುಪ್ಪ, ಉಳವಿ, ಕುಪ್ಪಗಡ್ಡೆ, ಆನವಟ್ಟಿಗಳಲ್ಲಿ ಪ್ರಚಾರ ಸಭೆ ನಡೆಸಿದರು.
ತಂದೆಯ ಜನಪರ ಸೇವಾ ಗುಣ ಮೈಗೂಡಿಸಿಕೊಂಡಿರುವ, ಬರಗಾಲದಲ್ಲಿ ಉಚಿತವಾಗಿ ಬಿತ್ತನೆ ಬೀಜದ ಬತ್ತ, ಅಕ್ಕಿ, ಜೋಳ ಹಂಚುವಾಗ ತಂದೆಗೆ ಬೆನ್ನೆಲುಬಾಗಿ ನಿಂತ ಹೆಮ್ಮೆಯ ಪುತ್ರ, ಆರೈಕೆಯ ರೂವಾರಿ, ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಪಾದಯಾತ್ರೆ ನಡೆಸಿದ, ಲಕ್ಷಾಂತರ ಕುಟುಂಬಗಳಿಗೆ ಉಚಿತ ತೆಂಗಿನ ಸಸಿ ನೀಡಿದ ಸಹೃದಯಿ, ಎರಡು ಬಾರಿ ಸೋತರೂ ಎದೆಗುಂದದ ನನ್ನ ಮಗ ಎಸ್. ಮಧು ಬಂಗಾರಪ್ಪ ಅವರಿಗೆ ಮತ ನೀಡಿ ಎಂಬ ಒಕ್ಕಣೆಯುಳ್ಳ ಶಕುಂತಲಾ ಬಂಗಾರಪ್ಪ ಕರಪತ್ರಗಳನ್ನು ನೀಡಿ ಮತಯಾಚಿಸಿದರು.
ರೋಡ್ ಶೋ ನಡೆಸಿದ ಹೋಬಳಿ ಪ್ರದೇಶದಲ್ಲಿ ಶಕುಂತಲಾ ಹಾಗೂ ಅವರ ಪುತ್ರಿಯರು, ಮಧು ಪತ್ನಿಯವರನ್ನು ನೋಡಲು ಜನಸ್ತೋಮವೆ ಸೇರಿತ್ತು.
ಮತದಾರರ ಪಟ್ಟಿ ನೀಡದ್ದಕ್ಕೆ ಪ್ರತಿಭಟನೆ
ಕ.ಪ್ರ.ವಾರ್ತೆ ಸಾಗರ ಮೇ 2
ಚುನಾವಣಾ ಆಯೋಗ ಪಕ್ಷೇತರ ಅಭ್ಯರ್ಥಿಗಳಿಗೆ ಮತದಾರರ ಪಟ್ಟಿ ನೀಡದ ಕ್ರಮವನ್ನು ಖಂಡಿಸಿ ಲೋಕಸತ್ತಾ ಪಕ್ಷದ ಅಭ್ಯರ್ಥಿ ಟಿ.ಆರ್. ಕೃಷ್ಣಪ್ಪ ಗುರುವಾರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಎಲ್ಲಾ ರಾಜಕೀಯ ಪಕ್ಷಗಳಂತೆ ಪಕ್ಷೇತರ ಅಭ್ಯರ್ಥಿಗಳೂ ರು. 10,000 ಪಾವತಿ ಮಾಡಿದ್ದಾರೆ. ಆದರೆ ಅವರಿಗೆ ಮತದಾರರ ಪಟ್ಟಿ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಕೃಷ್ಣಪ್ಪ, ಬ್ಯಾಲೆಟ್ ಪೇಪರ್ನಲ್ಲಿಯೂ ರಾಷ್ಟ್ರೀಯ, ಪ್ರಾದೇಶಿಕ ಹಾಗೂ ಪಕ್ಷೇತರ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ನಮೂದಿಸುವ ಮೂಲಕ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ. ಚುನಾವಣಾ ಆಯೋಗ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡಕ್ಕೇ ಕೊಡಲಿ ಪೆಟ್ಟು ನೀಡುತ್ತಿದೆ ಎಂದು ಆರೋಪಿಸಿದರು.
ಪೊಲೀಸರ ಸಮ್ಮುಖದಲ್ಲೇ ಹಣ: ರಿಪ್ಪನಪೇಟೆ ಡಿಸಿಸಿ ಬ್ಯಾಂಕಿಗೆ ಅಕ್ರಮವಾಗಿ ರು. 50 ಲಕ್ಷ ಬಂದಿರುವುದನ್ನು ಪ್ರಸ್ತಾಪಿಸಿದ ಅವರು, ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿಯೇ ಹಣ ಬಂದಿದ್ದರೂ, ಇದರ ಬಗ್ಗೆ ನಿಗಾ ವಹಿಸಲಿಲ್ಲ. ಆದರೆ ನಾವು ರು. 50,000 ಡೆಯುಲು ಸಾಗರದ ರಾಷ್ಟ್ರ್ಞೀಟ ಬ್ಯಾಂಕೊಂದರಲ್ಲಿ 3 ಚೆಕ್ಕುಗಳ ಮೂಲಕ ಹಣ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು. ಚುನಾವಣಾ ಆಯೋಗ ಇದ್ದವರಿಗೆ ಒಂದು, ಇಲ್ಲದವರಿಗೆ ಒಂದು ಎನ್ನುವ ಕಾನೂನು ಜಾರಿಗೆ ತರುತ್ತಿದೆ ಎಂದು ದೂರಿದರು.
ಚುನಾವಣಾ ಆಯೋಗ ಕಡ್ಡಾಯ ಮತದಾನ ಕುರಿತು ಅಳವಡಿಸಿರುವ ನಾಮಫಲಕಗಳ ಲೆಕ್ಕವನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಬಿ.ಎಸ್.ಆರ್. ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಬೆಳ್ಳಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

