ನಿರಶನ ಕೈ ಬಿಟ್ಟ ಪ್ರಸನ್ನ
ಸಾಗರ: ಕೈಮಗ್ಗ ನೇಕಾರರ ಸಮಸ್ಯೆ ಈಡೇರಿಸುವ ಕುರಿತಂತೆ ರಾಜ್ಯ ಸರ್ಕಾರ ಲಿಖಿತ ಭರವಸೆ ನೀಡಿದ ಹಿನ್ನೆಲೆ ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ ಜ.30 ರಿಂದ ಚರಕದ ಮುಖ್ಯಸ್ಥ ಪ್ರಸನ್ನ ತಾವು ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಭಾನುವಾರ ಬೆಳಗ್ಗೆ ಅಂತ್ಯಗೊಳಿಸಿದರು.
ಕೆರೂರಿನ ಬನಶಂಕರಿ ಸ್ವಸಹಾಯ ಸಂಘದ ಮುಖ್ಯಸ್ಥ ಎಲ್.ಎಲ್.ಘಂಟಿ ಪ್ರಸನ್ನ ಅವರಿಗೆ ಲಿಂಬೆಹಣ್ಣಿನ ರಸ ನೀಡಿ ಉಪವಾಸಕ್ಕೆ ಮುಕ್ತಾಯ ಹಾಡಿದರು.
ಈ ಸಂದರ್ಭ ಮಾತನಾಡಿಒದ ಪ್ರಸನ್ನ, ರಾಜ್ಯ ಸರ್ಕಾರ ಪಾರಂಪರಿಕ ಕೈಮಗ್ಗ ನೇಕಾರರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದೆ. ಪಾರಂಪರಿಕ ನೇಕಾರಿಕಾ ಕ್ಷೇತ್ರಗಳಲ್ಲಿ ವಿದ್ಯುತ್ ಮಗ್ಗಗಳನ್ನು ಒದಗಿಸುವುದಿಲ್ಲ ಹಾಗೂ ಕೈಮಗ್ಗ ಮೀಸಲಾತಿ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಭರವಸೆ ನೀಡಿದೆ. ಕೈಮಗ್ಗ ನೇಕಾರರ ಆರ್ಥಿಕ ಬೇಡಿಕೆಗಳು ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ನೇಕಾರರ ಪ್ರತಿನಿಧಿಗಳನ್ನು ಮಾತುಕತೆಗೆ ಆಹ್ವಾನಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ನೇಕಾರರ ಪ್ರತಿನಿಧಿಗಳ ನಿಯೋಗ ದೆಹಲಿಗೆ ತೆರಳಲಿದೆ. ಈ ನಿಯೋಗದ ನೇತೃತ್ವವನ್ನು ರಾಜ್ಯ ಜವಳಿ ಖಾತೆ ಸಚಿವರನ್ನು ವಹಿಸಿಕೊಳ್ಳಲು ಕೋರಲಾಗುವುದು ಎಂದರು.
ನೇಕಾರರ ಸತ್ಯಾಗ್ರಹಕ್ಕೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಾಹಿತಿಗಳು, ಕಲಾವಿದರು, ಪ್ರಗತಿಪರ ಚಿಂತಕರು ಹಾಗೂ ವಿವಿಧ ಸಂಘಟನೆಗಳು ಸಮಸ್ಯೆ ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವುದು ನೇಕಾರರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ನೇಕಾರರು ಪಾದಯಾತ್ರೆ ಮೂಲಕ ತಮ್ಮ ಸಮಸ್ಯೆಗಳನ್ನು ಸರ್ಕಾರದ ಎದುರು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಸಮಾಲೋಚನೆಗೆ ಸರ್ಕಾರ ಕರೆದಿರುವುದು ಸಂತೋಷದ ಸಂಗತಿ. ಸಮಾಲೋಚನಾ ಸಂದರ್ಭದಲ್ಲಿ ಎಲ್ಲ ವರ್ಗದ ನೇಕಾರರ ಪ್ರತಿನಿಧಿಗಳು ಇರುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟದ ಸಂಚಾಲಕಿ ಗೌರಮ್ಮ ಮಾತನಾಡಿ, ರಾಜ್ಯ ಸರ್ಕಾರ ನೇಕಾರರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಮಗ್ಗ ಸತ್ಯಾಗ್ರಹವನ್ನು ಮುಂದೂಡುವ, ಉಪವಾಸ ಸತ್ಯಾಗ್ರಹ ಮುಕ್ತಾಗೊಳಿಸುವ ನಿರ್ಧಾರಕ್ಕೆ ಅಖಿಲ ಭಾರತ ಕೈಮಗ್ಗ ಸಂಘಟನೆಗಳ ರಾಜ್ಯ ಒಕ್ಕೂಟ ಬಂದಿರುತ್ತದೆ. ಭಾರತದ ಇತರೆ ರಾಜ್ಯಗಳಲ್ಲಿ ಸತ್ಯಾಗ್ರಹ ಮುಂದುವರೆಯಲಿದೆ. ಕೈಮಗ್ಗ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳಿಗೆ, ಜವಳಿ ಸಚಿವರು ಹಾಗೂ ಅಧಿಕಾರಿಗಳಿಗೆ ಒಕ್ಕೂಟದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ರಂಗಕರ್ಮಿ ಡಾ.ಗುರುರಾವ್ ಬಾಪಟ್, ಲೇಖಕ ವಿಲಿಯಂ, ಶ್ರೀಪಾದ ಭಟ್, ಪದ್ಮಶ್ರೀ, ಎನ್.ಎಂ.ಕುಲಕರ್ಣಿ, ರಾಜಶೇಖರ್, ಸುಂದರ್, ರಮೇಶ್, ಮಹಾಲಕ್ಷ್ಮೀ ಇನ್ನಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

