ತುಮಕೂರು

ಆಧಾರ್ ಅಧ್ವಾನ ನಿತ್ಯ ನಿರಂತರ...

Published On :

-ಅದಲಗೆರೆ ನಾಗೇಂದ್ರಕುಮಾರ್
ಕನ್ನಡಪ್ರಭ ವಾರ್ತೆ ತುಮಕೂರು ಆ.22

'ಒಂದು ಭಾರತ ಒಂದು ಗುರುತು' ಎಂಬ ಮಹತ್ವಾಕಾಂಕ್ಷೆ ಯೋಜನೆಯ 12 ಅಂಕಿಗಳ ಜೀವಿತಾವಧಿಯ ಆಧಾರ್ ಅಂಕಿ ನೀಡುವ ಕಾರ್ಯಕ್ರಮ ತುಮಕೂರು ಜಿಲ್ಲೆಯಲ್ಲಿ ಕುಂಟುತ್ತಾ ಸಾಗಿದೆ.  
ಆಧಾರ್ ಅಂಕಿ ನೀಡುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಾಯೋಗಿಕವಾಗಿ ಜಾರಿಯಾದ ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆ ಕೂಡ ಆಯ್ಕೆಯಾಗಿದ್ದು, ರಾಜ್ಯದ ಎರಡನೇ ಅತಿದೊಡ್ಡ ಜಿಲ್ಲೆಯಾಗಿರುವುದು ಗಮನಾರ್ಹ. ಆದರೆ, ಪ್ರಗತಿ ಸರ್ಕಾರ ಹೇಳಿಕೊಂಡಂತೆ ಆಗಿಲ್ಲ. ಜಿಲ್ಲಾಡಳಿತ ಕೇವಲ ಭರವಸೆ ನೀಡುವುದರಲ್ಲೇ ಕಾಲ ಕಳೆಯುತ್ತಿದ್ದು, ಜನತೆಯ ಗೋಳು ಹೇಳ ತೀರದಾಗಿದೆ. ಆಧಾರ್ ಕೇಂದ್ರಗಳಲ್ಲಿ ಬೆಳಗಿನಿಂದ ಸಂಜೆವರೆಗೆ ಜನತೆ ಕ್ಯೂನಲ್ಲಿ ನಿಂತು -ನಿಂತು ಬೇಸತ್ತು ಹೋಗಿದ್ದಾರೆ.
ಆಧಾರ್ ಕುರಿತಂತೆ ಸೊಲ್ಲೆತ್ತಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರ ಗಮನಕ್ಕೆ ಆ. 15 ರಂದು ಆಧಾರ್ ಅಧ್ವಾನ ಕುರಿತಂತೆ ಪತ್ರಕರ್ತರು ತಂದಿದ್ದರೂ ಜನಸಂಖ್ಯೆಗನುಗುಣವಾಗಿ ಜಿಲ್ಲಾದ್ಯಂತ ಆಧಾರ್  ನೊಂದಣಿ ಕೇಂದ್ರಗಳನ್ನು ತೆರೆಯದಿರುವುದು ಸರ್ಕಾರದ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ, ಚರ್ಚಿಸಲಾಗುವುದು ಎಂದಿದ್ದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಈ ವರೆಗೆ ಆಧಾರ್ ಕುರಿತಂತೆ ಸೊಲ್ಲೆತ್ತಿಲ್ಲ. ಜಿಲ್ಲಾಡಳಿತ ಈ ವರೆಗೆ ಆಧಾರ್ ಪ್ರಗತಿ ಕುರಿತಂತೆ ಸ್ವತಃ ಮುಂದಾಗಿ ತಾನೇ ಮಾಹಿತಿ ನೀಡದಿರುವುದು ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಆಧಾರ್ ಕುರಿತಂತೆ ಯಾವ್ಯಾವ ತಾಲೂಕುಗಳಲ್ಲಿ ಏನೇನಾಗಿದೆ ಎಂಬುದರ ಕುರಿತು ಈವರೆವಿಗೆ ಜಿಲ್ಲಾಡಳಿತ ಮಾಹಿತಿ ನೀಡಿಲ್ಲ ಎಂಬುದು ಗಮನಾರ್ಹ.    
ಹೆಚ್ಚುವರಿ ಕೇಂದ್ರಗಳಿಲ್ಲದೆ ಪರದಾಟ: ತುಮಕೂರು ಜಿಲ್ಲೆಯಲ್ಲಿ 2,68,977 ಮಂದಿ ಎಲ್‌ಪಿಜಿ ಗ್ರಾಹಕರಿದ್ದು, ಇವರಲ್ಲಿ ಆ.19 ರ ವೇಳೆಗೆ 2 ಲಕ್ಷದ 4 ಸಾವಿರ ಮಂದಿ ಎಲ್‌ಪಿಜಿ ಗೆ ಆಧಾರ್ ಲಿಂಕ್ ಮಾಡಿಸಿದ್ದಾರೆ. ಇವರಲ್ಲಿ ಬ್ಯಾಂಕ್ ಖಾತೆಗೆ ಜೋಡಣೆ ಮಾಡಿರುವ ಗ್ರಾಹಕರ ಸಂಖ್ಯೆ 1 ಲಕ್ಷದ 44 ಸಾವಿರ ಮಂದಿ ಮಾತ್ರ. ಈಗ ಬಾಕಿ ಉಳಿದಿರುವ 64,977 ಮಂದಿ ಆಧಾರ್ ಕೇಂದ್ರಗಳಲ್ಲಿ ನೊಂದಣಿ ಮಾಡಿಸಬೇಕಿದ್ದು, ಹೆಚ್ಚುವರಿ ಕೇಂದ್ರಗಳಿಲ್ಲದೆ ಪರದಾಡುತ್ತಿರುವುದು ಕಣ್ಣಿಗೆ ರಾಚುತ್ತಿದೆ.
ಇನ್ನೊಂದೇ ವಾರ ಬಾಕಿ: ಆ. 31  ರೊಳಗೆ ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಅಂಕಿ ನೀಡುವುದು ಕಡ್‌ಡಾಯ ಮಾಡಲಾಗಿದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಘೋಷಿಸಿದೆ. ಆಧಾರ್ ನೊಂದಣಿಗೆ ಜನತೆ ಸಿದ್ದರಿದ್ದಾರೆ. ಆದರೆ ಹೆಚ್ಚುವರಿ ಆಧಾರ್ ನೊಂದಣಿ ಕೇಂದ್ರಗಳಿಲ್ಲದೆ ಪರದಾಡುವಂತಾಗಿದೆ. ಆಧಾರ್ ನೀಡದಿದ್ದಲ್ಲಿ ಗ್ಯಾಸ್ ಸಿಲಿಂಡರ್‌ಗೆ ಸಹಾಯಧನ ನಿಲುಗಡೆಯಾಗಲಿದ್ದು, ಮಾರುಕಟ್ಟೆ ಬೆಲೆ ಪಾವತಿಸಿ ಜನತೆ ಸಿಲಿಂಡರ್ ಪಡೆಯುವುದು ಕಡ್‌ಡಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಜನತೆ ಆತಂಕದಲ್ಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಇದಕ್ಕೆ ಸಂಬಂಧಪಟ್ಟಿಲ್ಲವೆಂಬಂತೆ ಇರುವುದು ಸೋಜಿಗದ ಸಂಗತಿಯಾಗಿದೆ. ಜಿಲ್ಲಾಡಳಿತ ಜನತೆಯ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬ ಆಕ್ರೋಶದ ನುಡಿಗಳು ಆಧಾರ್ ನೊಂದಣಿ ಕೇಂದ್ರಗಳಲ್ಲಿ ಕೇಳಿ ಬರುತ್ತಿದೆ.

ಹೇಳಿದ್ದು 90, ಇರೋದು 30
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಆಧಾರ್ ಕೇಂದ್ರಗಳನ್ನು ಜನಸಂಖ್ಯೆಗೆ ಅನುಗುಣವಾಗಿ ತೆರೆಯಲಾಗಿಲ್ಲ. ಇದಕ್ಕೆ ಸರ್ಕಾರ ನೇರ ಹೊಣೆ. ಶೀಘ್ರದಲ್ಲೇ ಜಿಲ್ಲೆಯಲ್ಲಿ ಹೆಚ್ಚುವರಿ 90 ಆಧಾರ್ ನೊಂದಣಿ ಕೇಂದ್ರಗಳನ್ನು ತೆರೆದು ಜನತೆಯ ಆತಂಕ ನಿವಾರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಹೇಳಿ ಆ. 22 ಕ್ಕೆ 2 ತಿಂಗಳೇ ಕಳೆಯಿತು. ಆದರೆ ಈವರೆಗೆ ಶಾಲಿನಿ ರಜನೀಶ್ ಅವರ ಹೇಳಿಕೆಗೆ ಯಾವುದೇ ಬೆಲೆಯಿಲ್ಲ ಎಂಬುದು ಸಾಬೀತಾಗಿದೆ. ಶಾಲಿನಿ ರಜನೀಶ್ ಅವರು ಹೇಳಿದಂತೆ 90 ಕೇಂದ್ರಗಳು ಬೇಡ, ಇದರಲ್ಲಿ ಕನಿಷ್ಟ ಅರ್ಧದಷ್ಟಾದರೂ ಆಧಾರ್ ಕೇಂದ್ರಗಳನ್ನು ಸಹ ಜಿಲ್ಲೆಯಲ್ಲಿ ತೆರೆದಿಲ್ಲ. ಆ. 22 ರವರೆಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್ ಕೇಂದ್ರಗಳ ಸಂಖ್ಯೆ ಕೇವಲ 20 ರಿಂದ 22 ಮಾತ್ರ. ಆ. 22 ರಂದು ಜಿಲ್ಲಾಡಳಿತ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಬೇಡಿಕೆ ಹಿನ್ನೆಲೆಯಲ್ಲಿ ಈಗ 8 ಆಧಾರ್ ಕೇಂದ್ರಗಳನ್ನು ಹೆಚ್ಚುವರಿಯಾಗಿ ತೆರೆಯಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ತಿಳಿಸಿದ್ದಾರೆ. ಇದರಲ್ಲಿ ಪಾವಗಡಕ್ಕೆ 2 ಕೇಂದ್ರಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ಒಂದು ವಾರದಿಂದ ಈಚೆಗೆ ಹೆಚ್ಚುವರಿಯಾಗಿ 4 ಕಂಪ್ಯೂಟರ್‌ಗಳನ್ನು ನೀಡಲಾಗಿದೆ. ಒಟ್ಟು 8 ಕಂಪ್ಯೂಟರ್‌ಗಳಲ್ಲಿ ಆಧಾರ್ ನೊಂದಣಿ ನಡೆಯುತ್ತಿದೆ. ಕೇಂದ್ರ ಮಾತ್ರ ಅದೇ ಆಗಿದೆ.

ನೋಂದಣಿಗೆ ಆಧಾರವೇನು?
ತುಮಕೂರು:
ಆಧಾರ್ ನೊಂದಣಿ ತುಮಕೂರು ಜಿಲ್ಲೆಯಲ್ಲಿ ಶೇ. 95 ರಷ್ಟಾಗಿದೆ ಎಂದು ಈಗ್ಗೆ ಒಂದು ವರ್ಷಕ್ಕಿಂತಲೂ ಮುಂಚೆ ಟಾಂ-ಟಾಂ ಮಾಡಲಾಗಿತ್ತು. ಅಂದಿನ ಜಿಲ್ಲಾಧಿಕಾರಿಗಳು ಆಧಾರ್ ನೋಂದಣಿ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ ಎಂದು ಬೀಗಿದ್ದರು. ಆದರೆ ಶೇ. 95 ರಷ್ಟು ಆಧಾರ್ ನೊಂದಣಿಗೆ ಆಧಾರವೇನು ಎಂಬುದು ಈಗ ಜಿಲ್ಲೆಯಲ್ಲಿ ಬಹು ಚರ್ಚೆಗೀಡಾಗಿರುವ ಸಂಗತಿ. ಒಂದು ವರ್ಷಕ್ಕಿಂತಲೂ ಮುಂಚೆ ಶೇ. 95 ರಷ್ಟು ಆಧಾರ್ ನೋಂದಣಿ ಯಾಗಿದ್ದರೆ, ಈಗಲೂ ಜನತೆ ಆಧಾರ್ ನೊಂದಣಿಗಾಗಿ ಪರದಾಡಬೇಕಿತ್ತೆ ಎಂಬ ಪ್ರಶ್ನೆ ಸಹಜವಾಗಿ ಉದ್ಬವಿಸಿದೆ. ಈ ಕುರಿತು ಇದೇ ತಿಂಗಳ ಆ.15 ರಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಹಾಗೂ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಇಬ್ಬರಿಂದಲೂ ಸಮರ್ಪಕ ಉತ್ತರ ಬರಲಿಲ್ಲ. ಹಿಂದಿನ ಜಿಲ್ಲಾಧಿಕಾರಿಗಳ ಆಡಳಿತದಲ್ಲಿ ಎಷ್ಟು ಆಧಾರ್ ನೋಂದಣಿಯಾಗಿತ್ತು ಎಂಬುದರ ಕುರಿತು ತಾವು ಚರ್ಚೆ ಮಾಡಲು ಹೋಗುವುದಿಲ್ಲ ಎಂದು ಇಂದಿನ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಸಮಜಾಯಿಷಿ ನೀಡಿ ಜಾರಿಕೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಸಹ ಶೇ. 95ರಷ್ಟು ಆಧಾರ್ ನೋಂದಣಿ ಕುರಿತಂತೆ ಯಾವುದೇ ತಕರಾರು ತೆಗೆಯಲಿಲ್ಲ. ಆಧಾರ್‌ಗಾಗಿ ಜನತೆ ಪರದಾಟ ಇನ್ನೂ ತಪ್ಪಿಲ್ಲ.

ಸಬ್ಸಿಡಿ ಅವಧಿ ವಿಸ್ತರಣೆ ಅನಿವಾರ್ಯ
ತುಮಕೂರು:
ಅಂದಿನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಹೇಳಿದಂತೆ ತುಮಕೂರು ಜಿಲ್ಲೆಯಲ್ಲಿ 90 ಆಧಾರ್ ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗಿಲ್ಲ. ಜಿಲ್ಲಾಡಳಿತ ಮಾತಿಗೆ ತಪ್ಪಿದೆ. ಗ್ಯಾಸ್ ಸಿಲಿಂಡರ್ ಸಬ್ಸಿಡಿಗಾಗಿ ಇನ್ನೊಂದು ವಾರದಲ್ಲಿ 64,977 ಮಂದಿಗೆ ಆಧಾರ್ ನೊಂದಣಿಯಾಗಬೇಕಿದೆ. ಉಳಿದಿರುವ ಅವಧಿ ತೀರ ಕಡಿಮೆ. ಹೀಗಾಗಿ ಆ. 31 ಕ್ಕೆ ನೀಡಿರುವ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಗಡುವನ್ನು ವಿಸ್ತರಿಸುವ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.