ಜೈಲಿನಿಂದಲೇ ಭೂಮಾಫಿಯಾ ಆಪರೇಟ್
ಜನಪ್ರತಿನಿಧಿಗಳಿಗೆ ಪೊಲೀಸರಿಂದ ಕಪ್ಪ ಕಾಣಿಕೆ ್ಣ ಮರಳು ಲಾರಿ ಹಿಂದೆ ಖಾಕಿ ಪಡೆ
ಕ.ಪ್ರ.ವಾರ್ತೆ ತುಮಕೂರು ಆ.27
ಜೈಲಿನಲ್ಲೇ ಕುಳಿತು ಭೂ ಮಾಪಿಯಾವನ್ನು ಕೆಲ ಶಕ್ತಿಗಳು ಆಪರೇಟ್ ಮಾಡುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಜಿ ಸಚಿವ ಸೊಗಡು ಶಿವಣ್ಣ ಮಾಡಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪೊಲೀಸರ ಬಗ್ಗೆ ಯಾರೊಬ್ಬರಿಗೂ ಭಯವಿಲ್ಲ. ಲ್ಯಾಂಡ್ ಮಾಫಿಯಾವನ್ನು ಕೆಲವರು ಜೈಲಿನಲ್ಲೇ ಕುಳಿತು ಮಾಡುತ್ತಿದ್ದಾರೆ. ಅಂತವರಿಗೆ 3-4 ಮಂದಿ ಬೆಂಬಲ ನೀಡುತ್ತಿದ್ದಾರೆ ಎಂದಿದ್ದಾರೆ.
ಅಲ್ಲದೇ ಜನಪ್ರತಿನಿಧಿಗಳಿಗೆ ಪೊಲೀಸರು ಕಪ್ಪ ಕಾಣಿಕೆ ಕೊಡುತ್ತಿದ್ದಾರೆ. ಕಪ್ಪ ಕಾಣಿಕೆ ಪಡೆದವರು ಪೊಲೀಸರ ಎದುರು ಮಂಡಿಯೂರಿ ಕುಳಿತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಲ್ಲಾ ಸಚಿವರು ಹಿರಿಯರಾಗಿದ್ದು ರಾಜಕೀಯವಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಜಯಚಂದ್ರ ಅವರ ಕಾರ್ಯವೈಖರಿ ನೋಡಿದರೆ ಅವರು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೋತು ಬಿಟ್ಟಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದರು. ಆಡಳಿತ ಪಕ್ಷದ ಶಾಸಕರೊಬ್ಬರು ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬ ಆರೋಪ ಮಾಡಿರುವುದನ್ನು ನೋಡಿದರೆ ಪೊಲೀಸ್ ವ್ಯವಸ್ಥೆ ಯಾವ ರೀತಿ ಇದೆ ಎಂಬುದು ವೇದ್ಯವಾಗುತ್ತದೆ ಎಂದಿದ್ದಾರೆ.
ದಿನಕ್ಕೊಂದು ಕೊಲೆ: ತಾವು 20 ವರ್ಷದ ಶಾಸಕರಾಗಿದ್ದಾಗ ಒಂದು ನಯಾಪೈಸೆ ಪೊಲೀಸರಿಂದ ಕಪ್ಪು ವಸೂಲಿ ಮಾಡಲಿಲ್ಲ. ಹಾಗಾಗಿ ತಮ್ಮ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಬಿಗಿ ಇತ್ತು. ಆದರೆ ಈಗ ದಿನಕ್ಕೊಂದು ಕೊಲೆ, ಸುಲಿಗೆ, ಚೈನು ಅಪಹರಣದಂತಹ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ವ್ಯವಸ್ಥೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಹರಿಹಾಯ್ದರು.
ತುಮಕೂರು ನಗರದಲ್ಲಿ ಹಾಡು ಹಗಲೇ ಪ್ರತಿ ದಿನ ಕೊಲೆ ನಡೆಯುತ್ತಿದೆ. ಇಷ್ಟೆಲ್ಲಾ ಕೊಲೆ ಪ್ರಕರಣವನ್ನು ಬೇಧಿಸಿ ನಗರದ ಜನ ನೆಮ್ಮದಿಯಿಂದ ಇರುವಂತೆ ಮಾಡಬೇಕಾದ ಪೊಲೀಸರು ಅದರ ಗೋಜಿಗೆ ಹೋಗದೆ ಮರಳು ಲಾರಿ ಹಿಂದೆ ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಗಸ್ತು ತಿರುಗುತ್ತಿಲ್ಲ: ನಗರದ ಎಲ್ಲಾ 35 ವಾರ್ಡ್ಗಳಲ್ಲಿ ಪೊಲೀಸರು ಗಸ್ತು ತಿರುಗಿದರೆ ಪ್ರಕರಣಗಳು ಕಡಿಮೆಯಾಗುತ್ತಿತ್ತು. ಆದರೆ ಪೊಲೀಸರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಾ ಹೋಗುತ್ತಿದೆ. ಹೀಗಾದರೆ ನಗರದ ಜನ ನೆಮ್ಮದಿಯಿಂದ ಬಾಳುವುದು ಹೇಗೆ ಎಂದು ಸೊಗಡು ಪ್ರಶ್ನಿಸಿದರು.
ತುಮಕೂರಿನ ಬಸ್ ನಿಲ್ದಾಣದ ಒಳ ಹೊರಗೆ ಅವ್ಯಾಹತವಾಗಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸ್ ವ್ಯವಸ್ಥೆ ಕಣ್ಣುಮುಚ್ಚಿ ಕುಳಿತುಕೊಂಡಿರುವುದನ್ನು ನೋಡಿದರೆ ಯಾವ ರೀತಿ ಪೊಲೀಸ್ ವ್ಯವಸ್ಥೆ ಕೆಲಸ ಮಾಡುತ್ತಿದೆ ಎಂಬುದು ಅರ್ಥವಾಗುತ್ತದೆ ಎಂದಿದ್ದಾರೆ.
ಬರ ಇದೆ: ತುಮಕೂರು ಜಿಲ್ಲೆಯಲ್ಲಿ ಬರ ಇದೆ. ಜನ ಜಾನುವಾರುಗಳಿಗೆ ನೀರಿನ ಸೌಕರ್ಯ ಕಲ್ಪಿಸುವ ಗೋಜಿಗೆ ಜಿಲ್ಲಾಡಳಿತ ಹೋಗಿಲ್ಲ. ಇಷ್ಟರೊಳಗೆ ಹೇಮಾವತಿಯಿಂದ ಕೆರೆ ಕಟ್ಟೆ ತುಂಬಿಸಬೇಕಿತ್ತು. ಅದನ್ನು ಕೂಡ ಮಾಡಿಲ್ಲ. ಬುಗುಡನಹಳ್ಳಿ, ಕುಪ್ಪೂರು, ಅಮಾನಿಕೆರೆ ಹಾಗೂ ಹೆಬ್ಬಾಕ ಕೆರೆ ತುಂಬಿಲ್ಲ. ಅಷ್ಟೇಕೆ ಜಿಲ್ಲೆಯ ಯಾಮೊಂದು ಕೆರೆ ಕಟ್ಟೆಯನ್ನು ತುಂಬಿಸುವ ಕೆಲಸ ಆಗಿಲ್ಲ ಎಂದು ಹರಿಹಾಯ್ದರು.
ಮೆಡಿಕಲ್ ಕಾಲೇಜು100 ಕೋಟಿ ಭ್ರಷ್ಟಾಚಾರ
ರಾಜ್ಯದ 7 ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಡ್ಡಗಾಲು ಹಾಕುತ್ತಿರುವ ಹಿಂದೆ ಸರ್ಕಾರ 100 ಕೋಟಿ ಭ್ರಷ್ಟಾಚಾರ ನಡೆಸಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತುಮಕೂರು ಸೇರಿದಂತೆ 7 ಕಡೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಮೆಡಿಕಲ್ ಕಾಲೇಜು ಆರಂಭಿಸಲು ಮೀನಮೇಷ ನಡೆಸುತ್ತಿದೆ. ಇದರ ಹಿಂದೆ ಭರ್ತಿ 100 ಕೋಟಿ ಭ್ರಷ್ಟಾಚಾರದ ವಾಸನೆ ಬರುತ್ತಿದೆ ಎಂದು ಆರೋಪಿಸಿದರು. ತುಮಕೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ 45 ಎಕರೆ ಜಾಗವಿದೆ. ಆದರೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಹಣ ನೀಡದೇ ಇರುವುದರ ಹಿಂದೆ ಲಾಬಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದೆ ಎಂದಿದ್ದಾರೆ.
ಅಭಿವೃದ್ಧಿ ಕೆಲಸಗಳೆಲ್ಲಾ ನಿಂತಿವೆ
ತುಮಕೂರು: ತುಮಕೂರು ನಗರದಲ್ಲಿ ಬಹುತೇಕ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ನಿಂತು ಹೋಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ಸರ್ಕಾರ ಇದ್ದಾಗ ಶೆಟ್ಟಿಹಳ್ಳಿ ಕೆಳ ಸೇತುವೆ ನಿರ್ಮಾಣಕ್ಕೆ ಹಣ ನೀಡಿದ್ದೆವು. ಆದರೆ ಹೊಸ ಸರ್ಕಾರ ಆ ಯೋಜನೆ ಆರಂಭಿಸುವ ಗೋಜಿಗೆ ಹೋಗಿಲ್ಲ. ಇಷ್ಟರಲ್ಲಾಗಲೇ ಅಮಾನಿಕೆರೆಗೆ ನೀರು ತುಂಬಿಸಬೇಕಾಗಿತ್ತು. ಆ ಕೆಲಸವನ್ನು ಮಾಡಿಲ್ಲ. ಈಗಾಗಲೇ ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಂತರ್ಜಲ ಬತ್ತಿ ಹೋಗಿದೆ. ಯಾವುದಕ್ಕೂ ನೂತನ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಎಂದು ಶಿವಣ್ಣ ಆರೋಪಿಸಿದರು. ಅಂತರಸನಹಳ್ಳಿಯಲ್ಲಿ ಟ್ರಾನ್ಸ್ಫಾರ್ಮರ್ ಕೆಟ್ಟು 28 ದಿನವಾದರೂ ಇನ್ನೂ ಟ್ರಾನ್ಸ್ಫಾರ್ಮರ್ ಬದಲಿಸಿಲ್ಲ. ಕೋಡಿ ಬಸವೇಶ್ವರ ಬಳಿ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೆವು. ಆ ಕಾರ್ಯವನ್ನು ಕೈಗೆತ್ತಿಕೊಂಡಿಲ್ಲ. 200 ಕೋಟಿ ರು. ಯುಜಿಡಿ ಕೆಲಸವೂ ಕೂಡ ಸ್ಥಗಿತವಾಗಿದೆ. ಒಟ್ಟಾರೆಯಾಗಿ ಯಾವೊಂದು ಕೆಲಸವೂ ಆಗುತ್ತಿಲ್ಲ ಎಂದಿದ್ದಾರೆ.
ಡಿಸಿ ಲಘುವಾಗಿ ಮಾತನಾಡಬಾರದು...
ರೈತರ ಬಗ್ಗೆ ಜಿಲ್ಲಾಧಿಕಾರಿಗಳು ಲಘುವಾಗಿ ಮಾತನಾಡಬಾರದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ. ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ ಸಂಬಂಧ ಪರಿಹಾರದ ಬಗ್ಗೆ ಚರ್ಚಿಸಲು ಹೋದ ರೈತರ ಬಗ್ಗೆ ಜಿಲ್ಲಾಧಿಕಾರಿಗಳು ಲಘುವಾಗಿ ಮಾತನಾಡಿದ್ದಾರೆ ಎಂದು ರೈತರು ದೂರಿದ್ದಾರೆ. ಈ ರೀತಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ ಸಂಬಂಧ ಭೂಮಿ ಕಳೆದುಕೊಳ್ಳುವ ರೈತರಿಗೆ ಒಳ್ಳೆಯ ಬೆಲೆ ನೀಡಬೇಕು ಎಂದು ಜಿಲ್ಲಾಡಳಿತವನ್ನು ಅವರು ಆಗ್ರಹಿಸಿದ್ದಾರೆ.
ಬೆಳೆವಿಮೆಯಲ್ಲಿ ಅನ್ಯಾಯ....
ರೈತರಿಗೆ ನೀಡುವ ಬೆಳೆ ವಿಮೆಯಲ್ಲಿ ಅಧಿಕಾರಿಗಳು ಅನ್ಯಾಯವೆಸಗುತ್ತಿದ್ದಾರೆ ಎಂದು ಸೊಗಡು ಶಿವಣ್ಣ ಆರೋಪಿಸಿದ್ದಾರೆ. ಬಡ ರೈತರಿಗೆ ಬರುವ 2 ಸಾವಿರ ರು.ಗಳನ್ನು ಬಿಡುಗಡೆ ಮಾಡಲು ಸಹ ಅಧಿಕಾರಿಗಳು ಲಂಚ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ಕಡೆ 2 ಸಾವಿರ ಹಣ ನೀಡಲು 600 ರು. ಲಂಚ ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

