ರಸ್ತೆಗೆ ಗೋಡೆ ಕಟ್ಟಲು ಯತ್ನ
ಪುರಸಭಾಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಆಕ್ರೋಶ
ಕ.ಪ್ರ.ವಾರ್ತೆ ಕುಣಿಗಲ್ ಜು.29
ಸಾರ್ವಜನಿಕ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿ, ರಸ್ತೆಗೆ ಗೋಡೆ ಕಟ್ಟಲು ಮುಂದಾಗಿದ್ದರೂ, ಪುರಸಭಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯಧೋರಣೆ ಅನುಸರಿಸಿದ್ದರ ವಿರುದ್ಧ 20ನೇ ವಾರ್ಡ್ನ ನಾಗರಿಕರು ಸೋಮವಾರ ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪುರಸಭೆಯ 20ನೇ ವಾರ್ಡ್ನ ಬೈರಪ್ಪಮನೆ ರಸ್ತೆಯಲ್ಲಿ, ಈ ಹಿಂದೆ ಕಂದಾಯ ಭೂಮಿಯಾಗಿದ್ದು, ಜಮೀನು ಮಾಲೀಕರು ಪಶ್ಚಿಮಕ್ಕೆ ರಸ್ತೆ ಎಂದು ನಮೂದಿಸಿ ಹಲವಾರು ಮಂದಿಗೆ ನಿವೇಶನ ವಿತರಣೆ ಮಾಡಿದ್ದು, ಸದರಿ ಜಾಗದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಕಳೆದ ಇಪ್ಪತ್ತು ವರ್ಷಗಳಿಂದಲೂ ಪುರಸಭೆಗೆ ಅಗತ್ಯ
ತೆರಿಗೆ ಪಾವತಿಸಿ, ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸದರಿ ಪ್ರದೇಶಕ್ಕೆ ಖಾಸಗಿ ಜಮೀನಿನವರು, ಹಾಲಿ ರಸ್ತೆಗೆಂದು ಬಿಡಲಾಗಿರುವ ಪ್ರದೇಶವು ತಮಗೆ ಸೇರಿದೆ ಎಂದು ವಾದಿಸಿ, ಕಳೆದ 2 ದಿನಗಳ ಹಿಂದೆ ಸಾರ್ವಜನಿಕ ರಸ್ತೆಗೆ ಜೆಸಿಬಿ ಯಂತ್ರ ಬಳಸಿ ಗುಂಡಿ ತೋಡಿ, ಗೋಡೆ ನಿರ್ಮಾಣಕ್ಕೆ ಮುಂದಾದದ್ದರಿಂದ ಈ ರಸ್ತೆಯಲ್ಲಿ ಸಂಚರಿಸುವ ನೂರಕ್ಕೂ ಹೆಚ್ಚು ಮನೆಯವರು ಪರದಾಡುವಂತಾಯಿತು.
ಗುಂಡಿಗೆ ಬಿದ್ದ ಮಹಿಳೆ: ಖಾಸಗಿ ವ್ಯಕ್ತಿ ಸಾರ್ವಜನಿಕ ರಸ್ತೆಗೆ ಜೆಸಿಬಿ ಬಳಸಿ ಗುಂಡಿ ತೋಡುತ್ತಿರುವ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಮೊದಲೆ ಮನವಿ ನೀಡಿದ್ದರೂ, ಯಾವುದೇ ಸಿಬ್ಬಂದಿ ಸ್ಥಳಕ್ಕಾಗಮಿಸಿ, ರಸ್ತೆ ಅಗೆದಿರುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯವಹಿಸಿದ ಕಾರಣ, ಕಳೆದೆರಡು ದಿನಗಳಿಂದಲೂ ಈ ಭಾಗದ ಜನರಿಗೆ ಓಡಾಡಲು ತೊಂದರೆಯಾಯಿತಲ್ಲದೆ, ರಸ್ತೆಗೆ ಗುಂಡಿ ತೋಡಿಸಿದ್ದ ಕಾರಣ, ಸೋಮವಾರ ಗುಂಡಿಗೆ ಬಿದ್ದು ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಯಿತು.
ಇದರಿಂದ ರೋಸಿಹೋದ ನಾಗರಿಕರು, ಸೋಮವಾರ ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆಹಾಕಿ, ರಸ್ತೆ ಸಂರಕ್ಷಿಸುವಲ್ಲಿ ವಿಫಲರಾದ ಪುರಸಭಾಧಿಕಾರಿಗಳ ಧೋರಣೆ ಖಂಡಿಸಿ, ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ಮುಖಂಡ ಭೈರಪ್ಪ, ಪಟ್ಟಣದಲ್ಲಿ ಪುರಸಭೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಸಾರ್ವಜನಿಕ ರಸ್ತೆ ಅತಿಕ್ರಮಿಸುತ್ತಿದ್ದರೂ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ, ಅಧಿಕಾರಿಗಳ ವರ್ತನೆ ನೋಡಿದರೆ, ಅತಿಕ್ರಮಣಕಾರರೊಂದಿಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತದೆ ಎಂದು ಆರೋಪಿಸಿದರು.
ಈ ಭಾಗದ ಪುರಸಭೆ ಸದಸ್ಯೆ ನಳಿನಾ, ಈ ಹಿಂದೆಯೂ ಇದೇ ಸಮಸ್ಯೆ ತಲೆದೋರಿದ್ದು, ಆಗಲೆ ಪುರಸಭೆಯಿಂದ ಅಗತ್ಯ ಕ್ರಮಕ್ಕೆ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ಇಂದು ಸಮಸ್ಯೆ ಎದುರಾಗಿದೆ. ಈಗಾಗಲೆ ಸಮಸ್ಯೆಯನ್ನು ಪುರಸಭಾಧಿಕಾರಿಗಳು ನಿರ್ಲಕ್ಷಿಸಿದ ಕಾರಣ ತಹಸೀಲ್ದಾರ್ ಗಮನಕ್ಕೆ ತಂದಿದ್ದು, ತಹಸೀಲ್ದಾರ್ ಭೇಟಿ ನೀಡಿ ಮಂಗಳವಾರ ಸಂಜೆಯೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ನಾಗರಿಕರೊಂದಿಗೆ ಸೇರಿ ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಖ್ಯಾಧಿಕಾರಿ ಹೇಮಂತ್ ಶರಣ್, ಸಮಸ್ಯೆ ಸಂಬಂಧಿಸಿದಂತೆ ವಿವರಗಳನ್ನು ಸಂಗ್ರಹಿಸಲಾಗಿದ್ದು, ಸಾಧ್ಯವಿರುವ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ, ಪ್ರತಿಭಟನೆ ಹಿಂಪಡೆದರು. ಕಂದಾಯಧಿಕಾರಿ ಮುರುಳಿ, ನಿರೀಕ್ಷಕ ರಮೇಶ್, ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

