ನಿಲ್ಲದ ಮಹಿಳೆಯರ ಶೋಷಣೆ
ಕ.ಪ್ರ.ವಾರ್ತೆ ತುಮಕೂರು ಮಾ 24
ಭಾರತೀಯ ಸಮಾಜದಲ್ಲಿ ಮಹಿಳೆಯರಿಗೆ ಪೂಜ್ಯ ಸ್ಥಾನ ನೀಡಿದ್ದೇವೆ. ಆದರೆ ನಿರಂತರವಾಗಿ ಶೋಷಣೆ ಮಾಡುತ್ತಿದ್ದೇವೆ ಎಂದು ನ್ಯಾ. ಸದಾನಂದ ಎಂ. ದೊಡ್ಡಮನಿ ಮಾರ್ಮಿಕವಾಗಿ ನುಡಿದರು.
ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ವಿಭಾಗ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಮಹಿಳಾ ಕಾನೂನುಗಳ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಾನೂನು ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಸಂವಿಧಾನಬದ್ಧವಾಗಿ ಎಲ್ಲರಿಗೂ ಸಮಾನ ಹಕ್ಕು, ಕರ್ತವ್ಯಗಳಿವೆ. ಮಹಿಳೆಯರಿಗೆ ವಿಶೇಷ ಕಾನೂನುಗಳಿವೆ. ಇಷ್ಟೆಲ್ಲಾ ಇದ್ದರೂ ಸಹ ಭಾರತೀಯ ಸಮಾಜದಲ್ಲಿ ಮಹಿಳಾ ತಾರತಮ್ಯ, ಶೋಷಣೆ ನಿರಂತರವಾಗಿ ನಡೆಯುತ್ತಲೇ ಇದೆ. ಮನುಷ್ಯನ ಮನಸ್ಥಿತಿ ಬದಲಾಗದ ಹೊರತು ಸುಧಾರಣೆ ಸಾಧ್ಯವಿಲ್ಲ ಎಂದರು.
ಮಹಿಳಾ ಕಾನೂನುಗಳ ಬಗ್ಗೆ ಅನೇಕ ವೇದಿಕೆಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಅಲ್ಲದೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಎಲ್ಲ ವರ್ಗದ ಜನರಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಕಾನೂನುಗಳ ಅರಿವಿದ್ದಲ್ಲಿ ಆಗುವ ಶೋಷಣೆ, ದೌರ್ಜನ್ಯ ತಡೆಗಟ್ಟಬಹುದು ಎಂದರು.
ಸಮಾರಂಭ ಉದ್ಘಾಟಿಸಿದ ಪ್ರಭಾರ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶೆ ಖಾಜಿ ಜಯೀಬುನ್ನೀಸಾ ಮೊಹಿಯುದ್ದೀನ್ ಮಾತನಾಡಿ, ಈ ಹಿಂದೆ ವರದಕ್ಷಿಣೆ ಎನ್ನುವುದು ಒತ್ತಾಯವಾಗಿರಲಿಲ್ಲ. ಪ್ರೀತಿಯಿಂದ ಕೊಡುಗೆ ನೀಡುತ್ತಿದ್ದರು. ಆದರೆ ಇಂದು ವರದಕ್ಷಿಣೆ ಪಿಡುಗಾಗಿದೆ. ವರದಕ್ಷಿಣೆ ಪಿಡುಗು ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಮಹಿಳೆಯರ ಶೋಷಣೆಗಳು ವಿವಿಧ ರೀತಿಯಲ್ಲಿ ನಡೆಯುತ್ತಲೇ ಇವೆ ಎಂದು ವಿಷಾದಿಸಿದರು.
ಸದುಪಯೋಗಪಡಿಸಿಕೊಳ್ಳಿ: ಸಣ್ಣ-ಪುಟ್ಟ ವಿಷಯಗಳಿಗೆ ಸಂಸಾರದಲ್ಲಿ ಬಿರುಕುಂಟಾಗಬಾರದು. ಮಹಿಳೆಯರಿಗಾಗಿಯೇ ಅನೇಕ ಕಾನೂನುಗಳಿವೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಮಾತನಾಡಿ, ಕಾನೂನುಗಳ ಮಾಹಿತಿಯಿದ್ದರೆ, ಅನ್ಯಾಯವಾದಾಗ, ನ್ಯಾಯಾಲಯದ ಮೊರೆ ಹೋಗಲು ಸಾಧ್ಯ. ಹಕ್ಕುಗಳ ಉಲ್ಲಂಘನೆಯಾದಾಗ ಸಮಾಜಕ್ಕೆ ಹೆದರಿ ಕುಳಿತುಕೊಳ್ಳಬಾರದು. ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡಲೇಬೇಕು ಎಂದರು. ಮಹಿಳೆಯರಿಂದ, ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ. ಇದು ತಪ್ಪಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎನ್. ಸುಜಾತ ಮಾತನಾಡಿ, ಇತ್ತೀಚೆಗೆ ಮಹಿಳೆಯರ ಮೇಲೆ ನಡೆಯುವ ಹಿಂಸಾಚಾರಗಳು ಹೆಚ್ಚುತ್ತಿವೆ. ಮಹಿಳೆಯರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತ್ಯೇಕ ಇಲಾಖೆ, ನಿಗಮ, ಆಯೋಗವನ್ನು ರಚಿಸಿದೆ. ಇವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ನ್ಯಾ. ದೇವರಾಜ್ ಮಾತನಾಡಿ, ಕುಟುಂಬದ ಒಳಗೆ ನಡೆಯುವ ದೌರ್ಜನ್ಯಗಳಾದ ಆರ್ಥಿಕ ಹಿಂಸೆ, ಭಾವನಾತ್ಮಕ ಹಿಂಸೆ, ದೈಹಿಕ ಹಿಂಸೆಗಳ ವಿರುದ್ದ ಈ ಕಾಯ್ದೆ ಬಂದಿದೆ ಎಂದರು.
ಆಸ್ತಿಯ ಹಕ್ಕು ಕುರಿತು ವಕೀಲ ಜಗನ್ನಾಥ್ ಮಾತನಾಡಿದರು. ವರದಕ್ಷಿಣೆ ನಿಷೇಧ ಕಾಯ್ದೆ ಬಗ್ಗೆ ವಕೀಲ ಸಾ.ಚಿ. ರಾಜಕುಮಾರ್ ಮಾತನಾಡಿದರು. ವೈದ್ಯಕೀಯ ಗರ್ಭಪಾತ ಕಾಯ್ದೆ 1977 ರ ಬಗ್ಗೆ ಡಾ. ಡಿ.ಎಂ. ಶಂಕರ್ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

