'ಮರಳು ಮಾಫಿಯಾ ಮಟ್ಟಹಾಕುವೆ'
ತುಮಕೂರು: ತುಮಕೂರು ಜಿಲ್ಲೆಯಲ್ಲಿ ನಡೆದಿರುವ ಮರಳು ಮಾಫಿಯಾ ಹತ್ತಿಕ್ಕುವುದಾಗಿ ಸಚಿವ ಟಿ.ಬಿ. ಜಯಚಂದ್ರ ಘೋಷಿಸಿದರು. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಸಿದ್ದಗಂಗಾ ಮಠಕ್ಕೆ ಬೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸೂಚನೆ ನೀಡುವೆ ಎಂದರು. ಯಾವುದೇ ಖಾತೆ ನೀಡಿದರೂ ನಿಭಾಯಿಸುವೆ. ಖಾತೆ ಹಂಚಿಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಯೋಗ್ಯತೆ ಇರುವವರಿಗೆ ಸಮರ್ಥ ಖಾತೆ ಹಂಚಿಕೆ ಮಾಡುತ್ತಾರೆ ಎಂದು ಜಯಚಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲಕ್ಷ್ಮೀ ನರಸಿಂಹ ಸ್ವಾಮಿ ಕಲ್ಯಾಣೋತ್ಸವ
ಕೊರಟಗೆರೆ: ಪಟ್ಟಣದ ಸುವರ್ಣಮುಖಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ನರಸಿಂಹ ಜಯಂತಿ ಅಂಗವಾಗಿ ಮೇ 23 ರಂದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಕಲ್ಯಾಣೋತ್ಸವದೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಅಷ್ಟಮುಖ ಗಂಡ ಭೇರುಂಡ ನರಸಿಂಹ ಹೋಮ ಸೇರಿದಂತೆ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಾಗೂ ಮೇ 23 ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ನರಸಿಂಹಸ್ವಾಮಿಗೆ ಹೂವಿನ ಅಲಂಕಾರದೊಂದಿಗೆ ಕಲ್ಯಾಣೋತ್ಸವ, ಮಹಾ ಮಂಗಳಾರತಿ, ಪ್ರಸಾದವಿಯೋಗ ಸಂಜೆ 6 ಗಂಟೆಗೆ ಪಟ್ಟಣದ ವಾಸವಿ ಮಹಿಳಾ ಸಂಘದ ಮಹಿಳೆಯರಿಂದ ದಾಸರ ಪದಗಳ ಕಾರ್ಯಕ್ರಮ ಏರ್ಪಡಿಸಲಾಗಿದೆ.
ದೇವೇಗೌಡರನ್ನು ಮರೆತರೇ...?
ತುರುವೇಕೆರೆ: ಜಾತ್ಯತೀತ ಜನತಾದಳದ ಜನಕ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರ 81 ನೇ ಜನುಮದಿನ ಶನಿವಾರದಂದು ಇತ್ತು. ರಾಜ್ಯದಲ್ಲಿ ದೇವೇಗೌಡರ ಜನ್ಮದಿನಾಚರಣೆಯನ್ನು ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು ನೀಡುವ ಮೂಲಕ, ರಕ್ತದಾನ ಮಾಡುವ ಮೂಲಕ ಇನ್ನಿತರ ವಿಧಾನದಲ್ಲಿ ಆಚರಿಸುವುದು ಸಹಜ. ದೇವೇಗೌಡರ ಪ್ರತಿಮೆಯನ್ನು ಪಟ್ಟಣದ ಮಿನಿ ವಿಧಾನಸೌಧದ ಎದುರು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಅಲ್ಲದೇ ಏಕೈಕವಾಗಿ ಪ್ರತಿಷ್ಠಾಪಿಸಲಾಗಿದೆ. ಇಂತಹ ಪ್ರತಿಮೆಗೆ ಜೆಡಿಎಸ್ನ ಮುಖಂಡರಾಗಲೀ ಕಾರ್ಯಕರ್ತರಾಗಲೀ ಕನಿಷ್ಠ ಹೂವಿನ ಹಾರವನ್ನೂ ಸಹ ಹಾಕದೇ ಇದ್ದುದು ಕಂಡು ಬಂತು. ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ದಿನ ಜೆಡಿಎಸ್ನ ಅಭ್ಯರ್ಥಿಯಾಗಿದ್ದ ಎಂ.ಟಿ. ಕೃಷ್ಣಪ್ಪ ಅವರು ಗೆಲವು ಸಾಧಿಸಿದ್ದರಿಂದ ದೇವೇಗೌಡರ ಪ್ರತಿಮೆಗೆ ಎಣ್ಣೆಯ ಅಭ್ಯಂಜನ ಮಾಡಿಸಿ ಭಾರಿ ಗಾತ್ರದ ಹೂವಿನ ಹಾರವನ್ನು ಹಾಕಲಾಗಿತ್ತು. ಒಣಗಿ ಹೋಗಿರುವ ಆ ಹಾರವೇ ಜನುಮದಿನದ ರಾತ್ರಿಯ ತನಕವೂ ದೇವೇಗೌಡರ ಕೊರಳಿನಲ್ಲಿತ್ತು.
ವಾಸವಿ ಜಯಂತಿ
ಹುಳಿಯಾರು: ಇಲ್ಲಿನ ಶ್ರೀಕನ್ನಿಕಾಪರಮೇಶ್ವರಿ ಪ್ರತಿಷ್ಠಾನ, ಆರ್ಯವೈಶ್ಯ ಮಹಿಳಾ ಸಂಘ ಹಾಗೂ ಆರ್ಯವೈಶ್ಯ ಮಂಡಲಿವತಿಯಿಂದ ಗಾಂಧಿಪೇಟೆಯ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ 22ನೇ ವಾರ್ಷಿಕೋತ್ಸವ ಹಾಗೂ ಶ್ರೀವಾಸವಿ ಜಯಂತಿಯ ಸೋಮವಾರ ನಡೆಯಲಿದೆ. ವಾಸವಿ ಜಯಂತಿ ಅಂಗವಾಗಿ ಬೆಳಿಗ್ಗೆ ಶ್ರೀ ಕನ್ನಿಕಾಪರಮೇಶ್ವರಿಗೆ ಟಿ.ಎಸ್. ದುರ್ಗರಾಜಗುಪ್ತ ಅವರ ಕುಟುಂಬದವರಿಂದ ಹಾಲಿನ ಪಂಚಾಮೃತಾಭಿಷೇಕ, ನಂತರ ಆರತಿ ಸೇವೆ ಹಾಗೂ ಕನ್ಯಕಾ ಬಾಲನಗರು ಪೂಜೆ, ಮಡಲಕ್ಕಿ ಸೇವೆ ನಡೆಯಲಿದೆ. ಇದೇ ದಿನ ರಾತ್ರಿ ವಾಸವಿ ಯುವಜನ ಸಂಘದವರಿಂದ ಅಮ್ಮನವರ ರಾಜಬೀದಿ ಉತ್ಸವ ಚಿಟ್ಟಿಮೇಳ ವಾದ್ಯದೊಂದಿಗೆ ನಡೆಯಲಿದ್ದು, ಅಷ್ಟಾವಧಾನ, ಮಹಾಮಂಗಳಾರತಿ, ಪಡುವಟ್ಟು ಸೇವೆ, ಅನ್ನಸಂತರ್ಪಣೆ ನಡೆಯಲಿವೆ. ತಾ.29ರ ಬುಧವಾರದವರೆಗೆ ಪ್ರತಿದಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ದಿನಾಂಕ ವಿಸ್ತರಣೆ
ತುಮಕೂರು: ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ಪ್ರವೇಶಕ್ಕೆ ಅರ್ಜಿಗಳನ್ನು ವಿತರಿಸುವ ದಿನಾಂಕವನ್ನು ವಿದ್ಯಾರ್ಥಿಗಳ ಬೇಡಿಕೆಯ ಮೇರೆಗೆ ಮೇ 23 ರವರೆಗೆ ವಿಸ್ತರಿಸಲಾಗಿದೆ. ಹಲವು ಕೋರ್ಸುಗಳು ಲಭ್ಯ ಇವೆ. ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.
ಇಂದು ಶಾಸಕರ ಕಚೇರಿ ಉದ್ಘಾಟನೆ
ತುಮಕೂರು: ಇಲ್ಲಿನ ತಾ.ಪಂ. ಕೊಠಡಿ ಸಂಖ್ಯೆ 11 ರಲ್ಲಿ ತುಮಕೂರು ಗ್ರಾಮಾಂತರ ಶಾಸಕರ ನೂತನ ಕಾರ್ಯಾಲಯದ ಉದ್ಘಾಟನೆ ಮೇ. 20 ರ ಮಧ್ಯಾಹ್ನ 12.30 ಕ್ಕೆ ನಡೆಯಲಿದೆ.
ಸಿದ್ದರಾಮಯ್ಯಗೆ ಅಭಿನಂದನೆ
ತುಮಕೂರು: ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತುಮಕೂರು ನಜೀರ್ಸಾಬ್ ವೇದಿಕೆ ಅಭಿನಂದಿಸಿದೆ. ದಿ. ದೇವರಾಜ ಅರಸ್ ನಂತರ ಹಿಂದುಳಿದ ವರ್ಗಗಳ ಮುಖಂಡರಾಗಿ, ರಾಜ್ಯದ ಉಪಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿ, ಉತ್ತಮ ಸಂಘಟಕರಾಗಿ ಹೆಸರುಗಳಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿಯಾದ ಮೊದಲ ದಿನವೇ ಒಂದು ರು. ಗೆ ಕೆಜಿ ಅಕ್ಕಿ ಎಂಬ ಜನಪ್ರಿಯ ಯೋಜನೆಯನ್ನು ಜಾರಿಗೊಳಿಸಿರುವುದು ಸ್ವಾಗತಾರ್ಹ ಎಂದು ವೇದಿಕೆ ರಾಜ್ಯಾಧ್ಯಕ್ಷ ಡಿ.ಎಸ್. ಬಾಬು, ತುಮಕೂರಿನ ಪಿ.ಎಸ್. ಕಾಲೋನಿಯ ಸಲೀಮ್ ಅಹಮದ್, ಹುಮಾಯೂನ್ಖಾನ್, ಗೂಡ್ಶೆಡ್ ಕಾಲೋನಿಯ ಸಿರಾಜ್ ಅಹಮದ್, ಸಿದ್ದಾರ್ಥನಗರದ ನಟರಾಜ್, ಹೆಗ್ಗೆರೆ ಪರಮೇಶ್ ತಿಳಿಸಿದ್ದಾರೆ.
ರೈತರ ಆತ್ಮಹತ್ಯೆ ತಡೆಗಟ್ಟಲು ಮುಂದಾಗಿ
ತುಮಕೂರು: ರೈತರ ಆತ್ಮಹತ್ಯೆ ತಡೆಗಟ್ಟಲು ಹೊಸ ಸರ್ಕಾರ ತ್ವರಿತ ಗತಿಯಲ್ಲಿ ಮುಂದಾಗಬೇಕೆಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ. ಸರ್ಕಾರ ಕೃಷಿ ಸಾಲ ಮನ್ನಾ, ಹಾಗೆನೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲ ಮನ್ನಮಾಡಬೇಕು ಆ ಮೂಲಕ ಜಿಲ್ಲೆಯಲ್ಲಿ ಕಳೆದ 3 ವರ್ಷದಿಂದ ಬರಗಾಲಕ್ಕೆ ಸಿಕ್ಕ ರೈತರ ನೆರವಿಗೆ ಹೊಸ ಸರ್ಕಾರ ಮುಂದಾಗಬೇಕೆಂದು ಸಿಪಿಐ (ಎಂ)ಕಾರ್ಯದರ್ಶಿ ಸೈಯದ್ ಮುಜೀಬ್ ತಿಳಿಸಿದ್ದಾರೆ.
ವಚನ ಗಾಯನ ತರಬೇತಿ
ತುಮಕೂರು: ನಗರದ ಅನಂತ ಕಿರಣ ಸುಗಮ ಸಂಗೀತ ಕೇಂದ್ರದಲ್ಲಿ ದೇವರ ನಾಮ, ಭಾವ ಗೀತೆ, ಕನ್ನಡ ಗೀತೆ, ವಚನ ಗಾಯನ ತರಬೇತಿ ಹಮ್ಮಿಕೊಳ್ಳಲಾಗಿದೆ. ತರಬೇತಿಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಘುನಂದನ್ ನೀಡಲಿದ್ದಾರೆ. ತರಬೇತಿಯನ್ನು ವಾದ್ಯ ಸಲಕರಣೆಯೊಂದಿಗೆ ನೀಡಲಾಗುವುದು. ಅರ್ಹ ಗಾಯಕರಿಗೆ ವೇದಿಕೆಯಲ್ಲಿ ಹಾಡುವ ಅವಕಾಶವನ್ನು ಒದಗಿಸಲಾಗುವುದು. ಹೆಚ್ಚಿನ ವಿವರಗಳಿಗೆ ಅನಂತ ಕಿರಣ ಸುಗಮ ಸಂಗೀತ ಕೇಂದ್ರ, ಭಾನುಪ್ರಿಯ-ಹಿಂಬದಿಯ ಮನೆ, ಎರಡನೇ ಅಡ್ಡರಸ್ತೆ, ಸೋಮೇಶ್ವರಪುರಂ, ಇಲ್ಲಿ ನೇರವಾಗಿ, ಅಥವಾ ದೂರವಾಣಿ ಸಂಖ್ಯೆ 9342833753 ಇಲ್ಲಿ ಸಂಪರ್ಕಿಸಬಹುದು ಎಂದು ಕೇಂದ್ರದ ಮುಖ್ಯಸ್ಥ ರವಿ ಕಿರಣ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

