ಶಾಂತಿ ಕದಡುವ ಸೊಗಡು ಯತ್ನ
ಕ.ಪ್ರ. ವಾರ್ತೆ ತುಮಕೂರು ಮೇ 22
ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ತುಮಕೂರು ನಗರ ಕೆಜೆಪಿ ಪರಾಜಿತ ಅಭ್ಯರ್ಥಿ ಜ್ಯೋತಿಗಣೇಶ್ ನಡುವಿನ ವಾಕ್ಸಮರ ಮುಂದುವರೆದಿದೆ. ಕೆಜೆಪಿ ಕಟ್ಟಿದಾಗಿನಿಂದಲೂ ಆಗಾಗ್ಗೆ ಸೊಗಡು ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿರುವ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಪುತ್ರ ಜ್ಯೋತಿಗಣೇಶ್ ಚುನಾವಣೆ ಸೋಲಿನ ನಂತರ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜ್ಯೋತಿಗಣೇಶ್, ಕಳೆದ 20 ವರ್ಷಗಳಿಂದ ಶಾಂತಿ ಮಂತ್ರ ಜಪಿಸುತ್ತಿದ್ದೆ ಎಂದು ಹೇಳಿಕೊಳ್ಳುತ್ತಿದ್ದ ಮಾಜಿ ಸಚಿವ ಸೊಗಡು ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಗರದ ಸದಾಶಿವನಗರದಲ್ಲಿ ನಡೆದ ಕೊಲೆ ಪ್ರಕರಣ ಸಾಕ್ಷಿ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.
ಈ ಪ್ರಕರಣವನ್ನು ಜಿಲ್ಲಾಡಳಿತ ವಿಶೇಷವಾಗಿ ಗಮನಿಸಬೇಕು. ಶಾಂತಿ ಕದಡುವ ವ್ಯಕ್ತಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಜ್ಯೋತಿಗಣೇಶ್ ಆಗ್ರಹಿಸಿದರು. ತುಮಕೂರು ನಗರದ ಜನತೆ ಎಚ್ಚರಿಕೆ ವಹಿಸಬೇಕು. ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.
ವಿರೋಧ ಪಕ್ಷಗಳ ವೈಫಲ್ಯ: ಕಳೆದ 5 ವರ್ಷಗಳಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ತುಮಕೂರು ನಗರದಲ್ಲಿ ವಿರೋಧಪಕ್ಷಗಳಾಗಿ ಕಾರ್ಯನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾದವು. ಅದರ ಪರಿಣಾಮ ತುಮಕೂರು ನಗರ ಅಭಿವೃದ್ಧಿಯಲ್ಲಿ ಹಿಂದುಳಿಯುವಂತಾಯಿತು. ಅಧಿಕಾರಿಗಳ ಅದ್ವಾನದ ಆಡಳಿತ, ಶಾಸಕರು ಹಾಗೂ ಮಂತ್ರಿಗಳಾಗಿದ್ದ ಸೊಗಡು ಶಿವಣ್ಣನವರ ದುರಾಡಳಿತ, ನಗರಸಭೆ, ಭ್ರಷ್ಟಾಚಾರವನ್ನು ಎತ್ತಿಹಿಡಿದ ಪಕ್ಷ ಕೆಜೆಪಿ ಎಂದು ಹೆಮ್ಮೆಯಿಂದ ಹೇಳಿಕೊಂಡ ಜ್ಯೋತಿಗಣೇಶ್, ತುಮಕೂರು ನಗರದ ಮೂಲೆ-ಮೂಲೆ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿವೆ. ಆದರೆ ಕಳೆದ 20 ವರ್ಷಗಳಿಂದ ಶಾಸಕರಾಗಿದ್ದ ಶಾಸಕ ಸೊಗಡು ಅವರು ಈ ಸಮಸ್ಯೆಗಳ ನಿವಾರಣೆಗೆ ಗಮನ ಹರಿಸಲೇ ಇಲ್ಲ. ಅವರಿಗೆ ನಗರದ ಶೇ. 1 ರಷ್ಟು ಸಮಸ್ಯೆಗಳ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಸಮಸ್ಯೆಗಳ ನಿವಾರಣೆಗೆ ಆದ್ಯತೆ: ನಗರದ ಕುಡಿಯುವ ನೀರಿನ ಸಮಸ್ಯೆ, ಕಸ ವಿಲೇವಾರಿ, ಬಸ್ ನಿಲ್ದಾಣ ಅವ್ಯವಸ್ಥೆ, ಮಳಿಗೆಗಳ ಮರು ಹಂಚಿಕೆ, ಒಣಗಿದ ಮರಗಳ ಕಟಾವು, ನಗರದಲ್ಲಿ ಹೊಸ ಶೌಚಾಲಯ ನಿರ್ಮಾಣ ಸೇರಿದಂತೆ ಇತರೆ ಎಲ್ಲ ಸಮಸ್ಯೆಗಳಿಗೆ ಆದ್ಯತೆ ಮೇರೆಗೆ ಒತ್ತು ನೀಡಿ, ಸಮಸ್ಯೆ ನಿವಾರಣೆಗೆ ಮುಂದಾಗುತ್ತೇವೆ. ಕೆಲ ವಿಷಯಗಳಲ್ಲಿ ಅಂದರೆ ಕುಡಿಯುವ ನೀರಿನಂತರ ಸಮಸ್ಯೆಗಳಲ್ಲಿ ಖಾಸಗಿ ಸಹಭಾಗಿತ್ವ ಕೂಡ ಅತ್ಯಗತ್ಯವಾಗಬಹುದು. ಧಾರವಾಡದಲ್ಲಿ ಸಚಿವ ಎಚ್.ಕೆ. ಪಾಟೀಲ್ ಮಾದರಿ ರೀತಿಯಲ್ಲಿ ಮುಂದುವರೆಯಬಹುದು. ಈ ಮೇಲಿನ ಎಲ್ಲ ವಿಷಯಗಳಲ್ಲಿ ಶಾಸಕ ರಫೀಕ್ ಅಹಮದ್ ಹಾಗೂ ಸರ್ಕಾರಕ್ಕೆ ಸಹಕಾರ ನೀಡಲಾಗುವುದು ಎಂದು ಜ್ಯೋತಿಗಣೇಶ್ ಭರವಸೆ ನೀಡಿದರು.
ಜಿಎಸ್ಬಿ ಬಿಟ್ಟು ಎಲ್ಲರಿಗೆ ಕೃತಜ್ಞತೆ: ತಮ್ಮ ತಂದೆ ಜಿ.ಎಸ್. ಬಸವರಾಜು ಅವರನ್ನು ಬಿಟ್ಟು ಉಳಿದೆಲ್ಲರಿಗೆ ಅಂದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ತಮ್ಮ ಪರ ಕೆಲಸ ಮಾಡಿದ ಕಾರ್ಯಕರ್ತರು, ಮತದಾರರಿಗೆ ಎಲ್ಲರಿಗೆ ಕೃತಜ್ಞತೆ ಸಲ್ಲಿಸಿದರು. ತುಮಕೂರು ನಗರ ನೂತನ ಶಾಸಕ ಡಾ. ರಫೀಕ್ ಅಹಮದ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಜಿಲ್ಲಾಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಹೆಬ್ಬಾಕ ರವಿಶಂಕರ್, ಕೆಜೆಪಿ ರಾಜ್ಯ ಉಪಾಧ್ಯಕ್ಷ ಸಿ.ವಿ. ಮಹದೇವಯ್ಯ, ಮುಖಂಡರಾದ ಕೊಪ್ಪಳ್ ನಾಗರಾಜ್ ಪಕ್ಷದ ಪದಾಧಿಕಾರಿಗಳು, ಜಿಲ್ಲಾ ವಕ್ತಾರ ವಿರೂಪಾಕ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಿಂಗಳಾಂತ್ಯದೊಳಗೆ ಒತ್ತುವರಿ ವಿರುದ್ಧ ಹೋರಾಟ
ತುಮಕೂರು: ಪಾರ್ಕ್ ಒತ್ತುವರಿ, ರಾಯಗಾಲುವೆ ಮೇಲಿನ ಕಟ್ಟಡ ತೆರವು ಸೇರಿದಂತೆ ಒಟ್ಟಾರೆ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಶೀಘ್ರದಲ್ಲೇ ಅಂದರೆ ಈ ತಿಂಗಳ ಅಂತ್ಯದೊಳಗೆ ಹೋರಾಟ ಮಾಡಲಾಗುವುದು ಎಂದು ತುಮಕೂರು ಜಿಲ್ಲಾ ಕೆಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಘೋಷಿಸಿದರು.
ಅವರು ತುಮಕೂರಿನಲ್ಲಿ ಪಕ್ಷದ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ತಿಂಗಳ ಅಂತ್ಯದೊಳಗೆ ಸರ್ಕಾರಿ ಜಾಗ ಒತ್ತುವರಿ ಕುರಿತಂತೆ ಪಕ್ಷದ ವತಿಯಿಂದ ಸುದ್ದಿಗೋಷ್ಠಿ ಕರೆಯಲಾಗುವುದು. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಹೋರಾಟ ರೂಪಿಸಲಾಗುವುದು. ಇದರಲ್ಲಿ ಯಾವುದೇ ರಾಜಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಸ ವಿಲೇವಾರಿಗೆ ಸಂಬಂಧಿಸಿದಂತೆ ಅಜ್ಜಗೊಂಡನಹಳ್ಳಿಯಲ್ಲಿ ಘಟಕ ಆರಂಭವಾಗದಿದ್ದರೆ ಬೇಡ. ಕೆಐಎಡಿಬಿ ವಶಪಡಿಸಿಕೊಂಡಿರುವ ಸಾವಿರಾರು ಎಕರೆ ಜಾಗ ಇದೆ. ಅಲ್ಲೇ ಘಟಕ ಸ್ಥಾಪಿಸಿ, ತ್ಯಾಜ್ಯ ಬಳಸಿ ವಿದ್ಯುತ್ ಉತ್ಪಾದಿಸಬಹುದು. ಇದೇನೂ ದೊಡ್ಡ ವಿಷಯವಲ್ಲ ಎಂದರು.
ಸೊಗಡು ಕುಮ್ಮಕ್ಕು: ಉಪ್ಪಾರಹಳ್ಳಿ ರೇಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣವಾಗದಿದ್ದರೂ, ಅಂದಿನ ಸಚಿವ ಸೊಗಡು ಶಿವಣ್ಣನವರ ಕುಮ್ಮಕ್ಕಿನಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಕುರಿತು ತಮ್ಮ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಯಿತು. ಕಾಮಗಾರಿ ಕಳಪೆಯಾಗಿದೆ. ವಿದ್ಯುತ್ ದೀಪಗಳ ವ್ಯವಸ್ಥೆಯಿಲ್ಲ. ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಆದರೆ ಓಟ್ ಬ್ಯಾಂಕ್ ರಾಜಕಾರಣದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಈ ಉಪ್ಪಾರಹಳ್ಳಿ ರೇಲ್ವೆ ಮೇಲ್ಸೇತುವೆಯನ್ನು ವಾಹನ ಸಂಚಾರಕ್ಕೆ ಬಿಟ್ಟು ಕೊಡಲಾಗಿದೆ ಎಂದು ಹೆಬ್ಬಾಕ ರವಿಶಂಕರ್ ದೂರಿದರು. ಒಟ್ಟಾರೆ ಉಪ್ಪಾರಹಳ್ಳಿ ರೇಲ್ವೆ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ದೂರು ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕೆಜೆಪಿ ಉಪಾಧ್ಯಕ್ಷ ಸಿ.ವಿ. ಮಹದೇವಯ್ಯ (ಸಿವಿಮ), ನಗರ ಘಟಕದ ಕೊಪ್ಪಳ್ ನಾಗರಾಜ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

