ಕೋಟೆ ನಾಡಿನ ಕಿರೀಟ ಯಾರಿಗೆ?
ಕ.ಪ್ರ. ವಾರ್ತೆ, ಚಿತ್ರದುರ್ಗ, ಏ.16
ಕೋಟೆ ನಾಡಾದ ಚಿತ್ರದುರ್ಗ ಲೋಕಸಭಾ ಎಸ್ಸಿ ಮೀಸಲು ಕ್ಷೇತ್ರದ ಚುನಾವಣಾ ಕಣ ಅಂತಿಮ ಘಟ್ಟ ತಲುಪಿದ್ದು, ಗುರುವಾರ ಮತದಾರ ಪ್ರಭು ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಒಬ್ಬರ ಮುಡಿಗೆ ಗೆಲವಿನ ಕಿರೀಟ ತೊಡಿಸುವ ಕ್ಷಣ ಬಂದಿದೆ.
ಬಿಜೆಪಿಯ ಹಾಲಿ ಸಂಸದ ಜನಾರ್ದನಸ್ವಾಮಿ ಅವರಿಗೆ ಕಾಂಗ್ರೆಸ್ನ ಬಿ.ಎನ್. ಚಂದ್ರಪ್ಪ ಮತ್ತು ಜೆಡಿಎಸ್ನ ಗೂಳಿಹಟ್ಟಿ ಶೇಖರ್ ಸವಾಲು ಹಾಕಿದ್ದಾರೆ. ಈ ಮೂವರ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಕಂಡು ಬಂದಿದೆ.
14 ಅಭ್ಯರ್ಥಿ: ಕಣದಲ್ಲಿ ಬಹುಜನ ಸಮಾಜ ಪಾರ್ಟಿಯ ಟಿ.ಡಿ. ರಾಜಗಿರಿ, ಸಂಯುಕ್ತ ಜನತಾದಳದ ಕುಂಬಯ್ಯ, ಆಮ್ ಆದ್ಮಿ ಪಾರ್ಟಿಯ ಮೋಹನ ದಾಸರಿ, ಸಮಾಜವಾದಿ ಪಕ್ಷದ ಎಸ್. ಮೀಟ್ಯಾ ನಾಯ್ಕ್, ಅಂಬೇಡ್ಕರ್ ನ್ಯಾಷನಲ್ ಕಾಂಗ್ರೆಸ್ನ ಎಚ್. ಸಿದ್ದಗಂಗಪ್ಪ, ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಗಣೇಶ್, ಟಿ. ದಯಾನಂದ, ಬಸವನಾಗಿದೇವ ಶರಣರು, ಟಿ. ಭಾವನಾ, ಎನ್.ಎಸ್. ಮಂಜುನಾಥ ನೆರೇನಹಾಳ್ ಹಾಗೂ ಟಿ. ಸೋಮೇಶ್ ಶಿಲ್ಪಿ ಸ್ಪರ್ಧಿಸಿದ್ದಾರೆ. ಇದೇ ಮೊದಲ ಬಾರಿಗೆ ಮಂಗಳಮುಖಿ ಟಿ. ಭಾವನಾ ಕಣದಲ್ಲಿರುವುದು ವಿಶೇಷ.
2081 ಮತಗಟ್ಟೆ: ಕ್ಷೇತ್ರದಲ್ಲಿ 16,60,916 ಮತದಾರರಿದ್ದು, ಇದರಲ್ಲಿ 8,16,227 ಮಹಿಳೆಯರು ಮತ್ತು 8,44,598 ಪುರುಷ ಮತದಾರರಿದ್ದಾರೆ. ಜಿಲ್ಲೆಯಲ್ಲಿ 1571 ಹಾಗೂ ಶಿರಾ 264, ಪಾವಗಡ 246 ಮತಗಟ್ಟೆ ಸೇರಿ 2081 ಮತಗಟ್ಟೆಗಳಿವೆ. ಇದರಲ್ಲಿ 225 ಸೂಕ್ಷ್ಮ ಮತ್ತು 154 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್ ನೇಮಕ ಮಾಡಲಾಗಿದೆ. ಇಲ್ಲಿ ಹೆಚ್ಚಿನ ಬಿಗಿ ಬಂದೋಬಸ್ತ್ಗೆ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಾದರಿ ಮತಗಟ್ಟೆಗಳನ್ನಾಗಿ ಮಾಡಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಆಯ್ದ ಕೇಂದ್ರಗಳಲ್ಲಿ ಜಿಪಂಚಾಯತ್ನಿಂದ ಮಾದರಿ ಮತಗಟ್ಟೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ.
2027 ಸಿಬ್ಬಂದಿ: ಮತದಾನ ಕರ್ತವ್ಯಕ್ಕೆ 2027 ಸಿಬ್ಬಂದಿಯನ್ನು ಆಯಾ ಕ್ಷೇತ್ರಗಳಿಗೆ ಕಳುಹಿಸಲಾಗಿದೆ. ಒಂದು ತಾಲೂಕಿನಿಂದ ಬೇರೆ ತಾಲೂಕಿಗೆ ಚುನಾವಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ಬುಧವಾರ ಬೆಳಗ್ಗೆ 6 ಕ್ಕೆ ವಾಹನ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ತಂತಮ್ಮ ಮತಗಟ್ಟೆಗಳಿಗೆ ತೆರಳಿದ್ದಾರೆ. ಕರ್ತವ್ಯ ನಿರತ ಸಿಬ್ಬಂದಿ, ಪೊಲೀಸ್ ಗೃಹ ರಕ್ಷಕದಳ, ವಾಹನ ಚಾಲಕರು ಸೇರಿದಂತೆ ಎಲ್ಲಾ ಸಿಬ್ಬಂದಿ ಮತದಾನ ಮಾಡಲು ಇ.ಡಿ.ಸಿ, ಬೇರೆ ಕ್ಷೇತ್ರಕ್ಕೆ ಹೋಗುವ ಸಿಬ್ಬಂದಿಗೆ ಅಂಚೆ ಮತಪತ್ರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಚುನಾವಣೆಯನ್ನು ಮುಕ್ತ, ಪಾರದರ್ಶಕ, ಶಾಂತಿಯುತವಾಗಿ ನಡೆಸಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಮದ್ಯ ಮಾರಾಟ ನಿಷೇಧ, ಮತಗಟ್ಟೆ ವ್ಯಾಪ್ತಿಯ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮತ್ತು ಧೂಮಪಾನ ನಿಷೇಧ ಜಾರಿಗೊಳಸಾಗಿದೆ.
ಮೊಬೈಲ್ ನಿಷಿದ್ಧ: ಮತಗಟ್ಟೆ ಒಳಗೆ ಮೊಬೈಲ್ ಬಳಕೆ ಮಾಡುವಂತಿಲ್ಲ. ಯಾರೇ ಮತದಾನಕ್ಕೆ ಬಂದರೂ ಜೊತೆಯಲ್ಲಿ ಮತದಾನ ಮಾಡುವಂತಿಲ್ಲ. ಎಲ್ಲರೂ ಮತಗೌಪ್ಯತೆ ಕಾಪಾಡಿಕೊಳ್ಳಬೇಕು. ಮತದಾರರಿಗೆ ಈ ಚುನಾವಣೆಯಲ್ಲಿ ಎಡಗೈನ ಹೆಬ್ಬೆಟ್ಟಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತದೆ. ಈ ಹಿಂದಿನ ಚುನಾವಣೆಗಳಲ್ಲಿ ಎಡಗೈನ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗಿತ್ತು. ಮತದಾನದ ವೇಳೆ ಮತದಾರರು ಇದನ್ನು ಗಮನಿಸಬೇಕು.
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿನ 1,571 ಮತಗಟ್ಟೆ ವ್ಯಾಪ್ತಿಯಲ್ಲಿ 144ನೇ ಸೆಕ್ಷನ್ ಅನ್ವಯ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ 266, ಚಳ್ಳಕೆರೆ 248, ಚಿತ್ರದುರ್ಗ 260, ಹಿರಿಯೂರು 277, ಹೊಸದುರ್ಗ 232 ಹಾಗೂ ಹೊಳಲ್ಕೆರೆ ಕ್ಷೇತ್ರದಲ್ಲಿ 288 ಮತಗಟ್ಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. 11 ದಾಖಲೆ: ಚುನಾವಣೆಯಲ್ಲಿ ಭಾರತ ಚುನಾವಣಾ ಆಯೋಗದಿಂದ ನೀಡಲಾದ ಭಾವಚಿತ್ರವಿರುವ ಮತದಾನದ ಗುರುತಿನ ಚೀಟಿಯನ್ನು ಗುರುತಿಗಾಗಿ ಹಾಜರುಪಡಿಸಬೇಕು. ಗುರುತಿನ ಚೀಟಿ ಹಾಜರುಪಡಿಸಲು ಸಾಧ್ಯವಿಲ್ಲದ ಮತದಾರರು ಇತರೆ 11 ದಾಖಲೆಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಜೆಡಿಎಸ್ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಜೆಡಿಎಸ್ನ ಗೂಳಿಹಟ್ಟಿ ಶೇಖರ್ ಮೇಲೆ ಪರಿಣಾಮ ಬೀರುವುದು ಖಚಿತ. ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ನಲ್ಲಿ ಐವರು ಶಾಸಕರಿದ್ದಾರೆ. ಆ ಪೈಕಿ ಇಬ್ಬರು ಸಚಿವರು ಇರುವುದು ಕಾಂಗ್ರೆಸ್ಗೆ ಗೆಲವಿನ ಭರವಸೆ ಮೂಡಿಸಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ.
ಗೆಲವು ನಿರೀಕ್ಷೆ: ಇನ್ನು ಸಂಸದ ಜನಾರ್ದನಸ್ವಾಮಿ ಎರಡನೇ ಬಾರಿ ತಮ್ಮ ಅದೃಷ್ಟ ಪಣಕ್ಕಿಟ್ಟಿದ್ದು, ಈ ಬಾರಿ ಕಳೆದ ಬಾರಿಗಿಂತ ಸುಲಭವಾಗಿ ಗೆಲವು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮತ್ತು ಮೊಳಕಾಲ್ಮುರಿನ ಬಿಎಸ್ಆರ್ ಶಾಸಕ ತಿಪ್ಪೇಸ್ವಾಮಿ ಅವರ ಬೆಂಬಲದಿಂದ ಕಣದಲ್ಲಿ ಪ್ರಚಾರದಲ್ಲಿ ತೊಡಗಿದ್ದರು. ಕಳೆದ ಬಾರಿ ಚಳ್ಳಕೆರೆ ತಿಪ್ಪೇಸ್ವಾಮಿ, ಹಿರಿಯೂರಿನ ಸುಧಾಕರ್, ಹೊಸದುರ್ಗದ ಗೂಳಿಹಟ್ಟಿ ಶೇಖರ್, ಹೊಳಲ್ಕೆರೆಯ ಚಂದ್ರಪ್ಪ ಅವರ ಬೆಂಬಲವಿತ್ತು. ಈ ಬಾರಿ ಶಾಸಕರ ಸಂಖ್ಯೆ ಕಡಿಮೆಯಾಗಿದೆ. ಕೆಜೆಪಿ ಮತ್ತು ಬಿಎಸ್ಆರ್ ಮುಖಂಡರು ಬಹಿರಂಗವಾಗಿ ಪ್ರಚಾರ ಕಾರ್ಯ ಕೈಗೊಂಡಿಲ್ಲ. ಇದು ಅವರಿಗೆ ಹಿನ್ನಡೆಯಾಗಿ ಪರಿಣಮಿಸಲೂಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

