ತುಮಕೂರು

ಪತ್ರಕರ್ತ ಏಕೇಶ್ವರ್

Published On :

ತುಮಕೂರು: ಏಕೇಶ್ ಪತ್ರಿಕೆಯ ಸಂಪಾದಕ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಚಿ.ನ. ಏಕೇಶ್ವರ್ ಅವರು ಅಲ್ಪಕಾಲದಿಂದ ಅಸ್ವಸ್ಥತೆಯಿಂದ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. 2 ಬಾರಿ ಕಸಾಪ ಕಾರ್ಯದರ್ಶಿಯಾಗಿದ್ದ ಏಕೇಶ್ವರ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತುಮಕೂರಿನಲ್ಲಿ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿದರು. ಗೋಕಾಕ್ ಚಳವಳಿಯನ್ನು ತೀವ್ರಗೊಳಿಸಲು ಡಾ.ರಾಜ್‌ಕುಮಾರ್ ಅವರನ್ನು ತುಮಕೂರಿಗೆ ಕರೆ ತಂದವರು. ರಾಜ್ ಅವರ ವ್ಯಕ್ತಿತ್ವದಿಂದ ಸ್ಫೂರ್ತಿ ಪಡೆದು ಡಾ.ರಾಜಕುಮಾರ್ ಅಭಿಮಾನಿ ಸಂಘವನ್ನು ನಗರದಲ್ಲಿ ಮೊದಲ ಬಾರಿಗೆ ಸ್ಥಾಪಿಸಿ ಅದರ ಮೊದಲ ಅಧ್ಯಕ್ಷರಾಗಿದ್ದರು. ಕಳೆದ 30 ವರ್ಷಗಳಿಂದ ಏಕೇಶ್ ಅವರು ತುಮಕೂರಿನಲ್ಲಿ ಏಕೇಶ್ ಪತ್ರಿಕೆಯನ್ನು ನಡೆಸುತ್ತಿದ್ದರು.
ಸೇವಾಮನೋಭಾವದ ಏಕೇಶ್ವರ್ ಅವರು ಸೇವಾದಳದ ಆಶಯವನ್ನು ಈಡೇರಿಸಲು ಜಿಲ್ಲೆಯಾದ್ಯಂತ ಸಂಚಾರ ಮಾಡಿ ಪ್ರತಿ ಶಾಲೆಯಲ್ಲೂ ಸೇವಾದಳ ಘಟಕಗಳನ್ನು ಸ್ಥಾಪಿಸಲು ಕಾರಣರಾಗಿದ್ದರು. ವಿದ್ಯಾರ್ಥಿಗಳಲ್ಲಿ ದೇಶ ಸೇವೆ ದೇಶ ಪ್ರೇಮವನ್ನು ಮೂಡಿಸಲು ಪ್ರೇರಣೆ ನೀಡಿದ್ದರು. ಎರಡು ಬಾರಿ ಜಿಲ್ಲಾ ಭಾರತ್ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಹಲವಾರು ಸಂಘಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಇವರು ಕರ್ನಾಟಕ ಕೈಗಾರಿಕಾ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ, ಕಾಳಿದಾಸ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕರಾಗಿ ತುಮಕೂರು ಜಿಲ್ಲಾ ಎ.ಐ.ಟಿ.ಯು.ಸಿ. ಕಾರ್ಮಿಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಪತ್ನಿ, ಪುತ್ರ, ಪುತ್ರಿ  ಇದ್ದಾರೆ. ಇವರ ನಿಧನಕ್ಕೆ ವಿಪ ಸದಸ್ಯ ಹುಲಿನಾಯ್ಕರ್ ಮುಂತಾದವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸಂತಾಪ: ಚಿ.ನ. ಏಕೇಶ್ವರ್ ನಿಧನಕ್ಕೆ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ಸೂಚಿಸಿದೆ. ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ, ಸಂಪಾದಕರಾಗಿ ಹಲವಾರು ಜನೋಪಯೋಗಿ ಕಾರ್ಯ ಕೈಗೊಂಡಿದ್ದ ಚಿ.ನ. ಏಕೇಶ್ವರ್ ನಿಧನದಿಂದ ಪತ್ರಿಕಾ ಕ್ಷೇತ್ರ ಬಡವಾಗಿದೆ ಎಂದು ಸಂಘದ ಅಧ್ಯಕ್ಷ ಸೊಗಡು ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಗರಗದೊಡ್ಡಿ ನಟರಾಜ್ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.