ಸಿಡಿಲು ಬಡಿದು 2 ಹಸು ಸಾವು
ಮಧುಗಿರಿ: ಸಿಡಿಲು ಬಡಿದು 2 ಹಸು ಮೃತಪಟ್ಟರುವ ದಾರುಣ ಘಟನೆ ಮಧುಗಿರಿ ಕಸಬಾ ಕೃಷ್ಣಯ್ಯನ ಪಾಳ್ಯ ಗ್ರಾಮದಲ್ಲಿ ಸೋಮವಾರ ನಡೆದಿದೆ. ರೈತ ಅಶ್ವತ್ಥನಾರಾಯಣ ಅವರು ಸಿದ್ದಪ್ಪ ಎಂಬುವವರಿಗೆ ಸೇರಿದ ಹಸುಗಳನ್ನು ತನ್ನ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ತೆಂಗಿನ ಮರದ ಹತ್ತಿರ ಕಟ್ಟಿ ಹಾಕಿದ್ದಾಗ ಏಕಾಏಕಿ ಸಿಡಿಲು ಬಡಿದು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಸುಮಾರು 50 ಸಾವಿರಕ್ಕೂ ಅಧಿಕ ಬೆಲೆ ಬಾಳುವ ಹಸುಗಳು ಏನ್ನಲಾಗಿದ್ದು ಇದರಿಂದ ರೈತ ಅಶ್ವತ್ಥನಾರಾಯಣ ಕುಟುಂಬ ಕಂಗಾಲಾಗಿದೆ. ಸ್ಥಳಕ್ಕೆ ರವಿನ್ಯೂ ಇನ್ಸ್ಫೆಕ್ಟರ್ ಜಯರಾಮ್ ಭೇಟಿ ನೀಡಿ ಸಾಂತ್ವನ ಹೇಳಿ ರೈತ ಸಂಜೀವಿನಿ ಯೋಜನೆಯಡಿ ಪರಿಹಾರ ಕೊಡುವುದಾಗಿ ಭರವಸೆ ನೀಡಿದರು.
ಹಾಡನ್ನು ಕೇಳಿದರೆ ಸಾಲದು, ಅರ್ಥ ತಿಳಿಯಬೇಕು
ಕೊರಟಗೆರೆ: ಸಂಗೀತದೊಂದಿಗೆ ಹಾಡುಗಳನ್ನು ಕೇಳಿದರೆ ಸಾಲದು ಹಾಡಿನಲ್ಲಿರುವಂತಹ ಅರ್ಥಗಳನ್ನು ತಿಳಿಯಬೇಕು ಎಂದು ಸಾಹಿತಿ ನರಸಿಂಹಮೂರ್ತಿ ತಿಳಿಸಿದರು.
ಅವರು ಪಟ್ಟಣದಲ್ಲಿನ ಶ್ರೀ ರಾಘವೇಂದ್ರ ಇಂಟರ್ ನ್ಯಾಷನಲ್ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ನಮ್ಮಲ್ಲಿನ ತತ್ವಪದ ನೇತಾರ ಶಿಶುನಾಳ ಶರೀಫರ ಹಾಡುಗಳು ಎಂದೆಂದಿಗೂ ಅರ್ಥಗರ್ಭಿತ ಎಂದರು. ನಮ್ಮ ದೇಶವನ್ನು ಹಲವಾರು ದೇಶದವರು ಆಳಿದರು ಏನೇನನ್ನೋ ಕದ್ದೊಯ್ದರು. ಆದರೆ ನಮ್ಮಲ್ಲಿನ ಆಧ್ಯಾತ್ಮವನ್ನು ಕಸಿಯಲು ಸಾಧ್ಯವಾಗಿಲ್ಲ. ಇದು ನಮ್ಮ ದೇಶದ ಸೊಗಡಾಗಿದೆ. ನಾವು ದೇವರಿಗೆ ದೇವಾಲಯಗಳನ್ನು ಕಟ್ಟಲು ಪ್ರಯತ್ನ ಮಾಡುತ್ತೇವೆ. ಇದರ ಅವಶ್ಯಕತೆ ದೇವರಿಗಿಲ್ಲ. ನಾವೆಲ್ಲರೂ ಉತ್ತಮ ನಡತೆಯನ್ನು ರೂಢಿಸಿಕೊಂಡು ಉತ್ತಮ ಬದುಕನ್ನು ಕಟ್ಟಿಕೊಂಡರೆ ಅದೇ ದೇವರಿಗೆ ನಾವು ಕೊಡುವ ಕೊಡುಗೆ ಎಂದು ಹೇಳಿದರು. ಸಾನಿಧ್ಯ ವಹಿಸಿದ ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ವಿದ್ಯಾರ್ಥಿ ನಿಲಯಅರ್ಜಿ ಆಹ್ವಾನ
ತುಮಕೂರು: ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 2014-15ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ, 2ಬಿ, 3ಎ, 3ಬಿ ಹಾಗೂ ಪ.ಜಾತಿ, ಪ.ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ನಮೂನೆಗಳನ್ನು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಎಂ.ಜಿರಸ್ತೆ, ತುಮಕೂರು, ಮೆ.ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಊರ್ಡಿಗೆರೆ, ಮೆ.ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ರೇಲ್ವೇ ಸ್ಟೇಷನ್ ರಸ್ತೆ, ತುಮಕೂರು, ಇಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜೂನ್ 5 ರೊಳಗಾಗಿ ಸಲ್ಲಿಸತಕ್ಕದ್ದು ಹಾಗೂ ನವೀಕರಣ ವಿದ್ಯಾರ್ಥಿಗಳು ಜೂನ್ 1 ರೊಳಗಾಗಿ ಪ್ರವೇಶ ಪಡೆಯತಕ್ಕದ್ದು.
ಪ್ರಥಮ ಪಿಯು ತರಗತಿಗಳಿಗೆ ಆಯ್ಕೆ
ಮೊರಾರ್ಜಿ ದೇಸಾಯಿ ಪದವಿಪೂರ್ವ ವಿಜ್ಞಾನ ಕಾಲೇಜು, ಗೊಲ್ಲಹಳ್ಳಿ (ಸಿದ್ಧಾರ್ಥ ನಗರ) ಇಲ್ಲಿನ 2014-15ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿ.ಯು. ತರಗತಿಗಳಿಗೆ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಮೇ 26 ರ ಸಂಜೆ 5.30 ರೊಳಗಾಗಿ ಕಾಲೇಜಿನ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಸಂಬಂಧಿಸಿ ಶಾಲೆಯ ಪ್ರಾಂಶುಪಾಲರಿಂದ ದೃಡೀಕರಿಸಿ, ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸತಕ್ಕದ್ದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ.ಪಂಚಾಯತಿ ಸಾಮಾನ್ಯ ಸಭೆ
ತುಮಕೂರು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾ.ಪಂ. ಸಾಮಾನ್ಯ ಸಭೆಯನ್ನು ತಾ.ಪಂ. ಅಧ್ಯಕ್ಷೆ ಚಿಕ್ಕಮ್ಮ ಅವರ ಅಧ್ಯಕ್ಷತೆಯಲ್ಲಿ ಮೇ 23 ರಂದು ಬೆಳಿಗ್ಗೆ 11 ಗಂಟೆಗೆ ಕರೆಯಲಾಗಿದೆ.
ಮರುವೇಕೆರೆ ಗ್ರಾಪಂಗೆ ಜಯಮ್ಮಅಧ್ಯಕ್ಷೆ
ಮಧುಗಿರಿ: ತಾಲೂಕಿನ ಮರುವೇಕೆರೆ ಗ್ರಾ.ಪಂ.ಅಧ್ಯಕ್ಷರ ಚುನಾವಣೆ ಸೋಮವಾರ ನಡೆದು ಕಾಂಗ್ರೆಸ್ ಅಭ್ಯರ್ಥಿ ಜಯಮ್ಮ ಸದಾನಂದಾಸ್ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಈಗ 2 ತಿಂಗಳ ಹಿಂದಷ್ಟೇ ಸ್ವಪಕ್ಷದವರೇ ಅಧ್ಯಕ್ಷೆ ಜಯಮ್ಮ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಸಿದ್ದರು. ಈ ಗ್ರಾ.ಪಂನಲ್ಲಿ 14 ಮಂದಿ ಸದಸ್ಯ ಬಲವಿದ್ದು ಈ ಪೈಕಿ 7 ಜನ ಸದಸ್ಯರು ಜಯಮ್ಮ ಅವರನ್ನು ಬೆಂಬಲಿಸಿದರು. ಅವರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಾಧಮ್ಮ 6 ಮತ ಪಡೆದು ಪರಾಭವಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

