ಹೊಲಿಗೆ ತರಬೇತಿಗೆ ಅರ್ಜಿ
ತುಮಕೂರು: ಇಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಹೊಲಿಗೆ ತರಬೇತಿ ಕೇಂದ್ರದಲ್ಲಿ 2014-15ನೇ ಸಾಲಿನಲ್ಲಿ ತರಬೇತಿ ಪಡೆಯಲು ಇಚ್ಛೆಯುಳ್ಳ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸೇರಿದ ಅರ್ಹ ನಿರುದ್ಯೋಗಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಇಚ್ಚೆಯುಳ್ಳವರು ನಿಗದಿತ ಅರ್ಜಿ ನಮೂನೆಯನ್ನು ವಿಸ್ತರಣಾಧಿಕಾರಿಗಳ ಕ:ಕೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತುಮಕೂರು ತಾಲೂಕು, ತುಮಕೂರು ಇಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜೂನ್ 10 ರೊಳಗಾಗಿ ಸಲ್ಲಿಸುವುದು. ಅರ್ಜಿಯೊಂದಿಗೆ 7ನೇ ತರಗತಿ ಅಂಕಪಟ್ಟಿ, ಜನ್ಮ ದಿನಾಂಕದ ದಾಖಲೆ ಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಲಗತ್ತಿಸಬೇಕು ಎಂದು ತುಮಕೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಹಾಸ್ಟೆಲ್ಗಳಿಂದ ಅರ್ಜಿ ಆಹ್ವಾನ
ತಿಪಟೂರು: ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾ ವತಿಯಿಂದ ನಡೆಯುತ್ತಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು ಹಾಗೂ ಆಶ್ರಮ ಶಾಲೆ ಮತ್ತು ಅನುದಾನಿತ ವಿದ್ಯಾರ್ಥಿ ನಿಲಯಗಳ ಹಾಗೂ ಅನಾಥಾಲಯಗಳು ಇವುಗಳಲ್ಲಿ 2014-15ನೇ ಸಾಲಿಗಾಗಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಪ್ರವೇಶ ಬಯಸುವ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಗಳನ್ನು ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಿಪಟೂರು ತಾಲೂಕು ಅಥವಾ ವಿದ್ಯಾರ್ಥಿಗಳು ಸೇರಬಯಸುವ ವಿದ್ಯಾರ್ಥಿ ನಿಲಯಗಳಿಂದ ಉಚಿತವಾಗಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 5 ರೊಳಗಾಗಿ ಸಲ್ಲಿಸುವುದು. ನವೀಕರಣ ವಿದ್ಯಾರ್ಥಿಗಳು ಮೇ 30 ರೊಳಗೆ ಅರ್ಜಿ ಸಲ್ಲಿಸತಕ್ಕದ್ದು.
ಪಿಸಿಬಿ ಅಧ್ಯಕ್ಷರಾಗಿ ಗುರುಮೂರ್ತಿ
ಚಿಕ್ಕನಾಯಕನಹಳ್ಳಿ: ಪಟ್ಟಣದ ಪಿಸಿಬಿ ಬ್ಯಾಂಕ್ ಅಧ್ಯಕ್ಷರಾಗಿ ನಿರ್ದೇಶಕ ಹೊನ್ನೇಬಾಗಿ ಗುರುಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಂತರ ಮಾತನಾಡಿದ ಅವರು ಸಹಕಾರ ಸಂಘಗಳಲ್ಲಿ ರಾಜಕೀಯ ಸಲ್ಲದು.ಇಲ್ಲಿ ಎಲ್ಲರು ರೈತರ ಹಿತ ಮತ್ತು ಕಾಳಜಿಯ ಹೊಣೆಗಾರಿಕೆಯಿಂದ ಆಯ್ಕೆಯಾಗಿ ಬಂದಿದ್ದೇವೆ. ಆದ್ದರಿಂದ ಸಹಕಾರ ಸಂಘಗಳಲ್ಲಿ ಅಧ್ಯಕ್ಷ ಗಾದಿಗೆ ಸ್ಪರ್ಧೆಯಿಲ್ಲದೆ ಆಯ್ಕೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ನನ್ನ ಅವಧಿಯಲ್ಲಿ ಬ್ಯಾಂಕಿನ ಅಭಿವೃದ್ಧಿಗೆ ಮತ್ತು ರೈತರ ಹಿತಕ್ಕಾಗಿ ಶ್ರಮಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಬಿ.ಎನ್.ಶಿವಪ್ರಕಾಶ್,ರವಿಚಂದ್ರ, ಕೃಷ್ಣಯ್ಯ, ಅಂಕನಹಳ್ಳಿ ಶ್ರೀನಿವಾಸ್, ಗಾರೆ ಬೀರಪ್ಪ, ಶಿವಣ್ಣ, ಕಾತ್ಯಾಯಿನಿ ಉಪಸ್ಥಿತರಿದ್ದರು. ಹಿರಿಯ ಲೆಕ್ಕಪರಿಶೋಧಕರಾದ ರುದ್ರಪ್ಪ,ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಹಕಾರಿ ಅಭಿವೃದ್ಧಿ ಅಧಿಕಾರಿ ಎಚ್.ಎಸ್. ಲಿಂಗದೇವರು ಉಪಸ್ಥಿತರಿದ್ದರು. ಬ್ಯಾಂಕಿನ ಸಿಇಓ ಜಗದೀಶ್ ಒಡೆಯರ್ ಸಹರಿಸಿದರು.
ರಸ್ತೆ ಅಭಿವೃದ್ಧಿ ಮಾಡಲು ಮನವಿ
ತುಮಕೂರು: ಶೆಟ್ಟಿಹಳ್ಳಿ, ಉಪ್ಪಾರಹಳ್ಳಿ ಮಾರ್ಗದಲ್ಲಿ 60 ಅಡಿ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಹೋರಾಟಗಾರ ಕೆ.ವಿ. ಪ್ರಕಾಶ್ ಮನವಿ ಮಾಡಿದ್ದಾರೆ.ತುಮಕೂರು ನಗರದ ದಕ್ಷಿಣ ಭಾಗ ದಿನೇ ದಿನೇ ಬೆಳೆಯುತ್ತಿದ್ದು ಮೂಲಭೂತ ಸೌಕರ್ಯಗಳಿಂದ ವಂಚಿತವಾಗುತ್ತಿದೆ. ಇದಕ್ಕೆ ಉದಾಹರಣೆ ಎರಡನೇ ಹಂತದ ಯು.ಜಿ.ಡಿ ಕಾಮಗಾರಿ ಶಂಕುಸ್ಥಾಪನೆ ಆಗಿದ್ದರೂ ಯಾವುದೇ ಕೆಲಸ ಪ್ರಾರಂಭವಾಗದೇ ಇರುವುದರಿಂದ ರಸ್ತೆಗಳ ನಿರ್ಮಾಣ ಅಸಾಧ್ಯವಾಗಿದೆ.ಇನ್ನು ದಕ್ಷಿಣ ಭಾಗಕ್ಕೆ ಎರಡು ರೇಲ್ವೆ ಗೇಟ್ ಇರುವುದರಿಂದ ಈ ಎರಡು ಗೇಟ್ ಸಂಪರ್ಕಿಸುವ ಏಕೈಕ ರಸ್ತೆ ಈ 60 ಅಡಿ ರಸ್ತೆ ಆಗಿರುತ್ತದೆ. ಉಪ್ಪಾರಹಳ್ಳಿ ಗೇಟ್ನಿಂದ ಶೆಟ್ಟಿಹಳ್ಳಿ ಗೇಟ್ ಮುಖಾಂತರ ಶೆಟ್ಟಿಹಳ್ಳಿ ರಸ್ತೆ ತಲುಪಬೇಕಾದರೆ ಹರಸಾಹಸ ಮಾಡಬೇಕಾಗುತ್ತದೆ. ದಕ್ಷಿಣ ಭಾಗದ ಅನೇಕ ಬಡಾವಣೆಗಳಿಗೆ, ಶೆಟ್ಟಿಹಳ್ಳಿ, ಪಾಲಸಂದ್ರ, ಪಂಡಿತನಹಳ್ಳಿ ಹ್ಯಾಂಡ್ ಪೋಸ್ಟ್ಗೆ ಹೋಗುವ ಸಾರ್ವಜನಿಕರು ಈ ರಸ್ತೆ ಮೂಲಕವೇ ಹೋಗಬೇಕು.ಆದರೆ ಉಪ್ಪಾರಹಳ್ಳಿ-ಶೆಟ್ಟಿಹಳ್ಳಿ ಗೇಟ್ ನಡುವೆ ದಕ್ಷಿಣ ಭಾಗಕ್ಕೆ ಸಿಡಿಪಿ ಪ್ಲಾನ್ ಪ್ರಕಾರ 60 ಅಡಿ ರಸ್ತೆ ಇದ್ದರೂ ಸಹ ಪ್ರಸ್ತುತ ಸಂಚಾರಕ್ಕೆ ಅತಿ ಕಿರಿದಾದ ರಸ್ತೆಯಾಗಿದೆ. ಇಲ್ಲಿ ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿಸತ್ತಿದ್ದು ಈ ರಸ್ತೆಯನ್ನು ಶೀಘ್ರವೇ ದ್ವಿಪಥ ರಸ್ತೆಯನ್ನಾಗಿ ಮಾಡಲು ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಿ ನಾಗರಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕೆಂದು ಮನವಿ ಮಾಡಿದ್ದಾರೆ.
ನಟ ರವಿಚಂದ್ರನ್ ಜನ್ಮದಿನ ಇಂದು
ಇಲ್ಲಿನ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಭಿಮಾನಿ ಸಂಘದ ವತಿಯಿಂದ ಮೇ 30 ರಂದು ರವಿಚಂದ್ರನ್ ಹುಟ್ಟು ಹಬ್ಬದ ಅಂಗವಾಗಿ ವಯೋವೃದ್ಧರಿಗೆ ಹಣ್ಣು ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.ಮೈದಾಳದಲ್ಲಿರುವ ವೃದ್ಧಾಶ್ರಮದಲ್ಲಿ ವಯೋವೃದ್ದರಿಗೆ ಉಚಿತವಾಗಿ ಹಣ್ಣು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ರಮೇಶ್ ತಿಳಿಸಿದ್ದಾರೆ.
ಜೂ.4 ಕೊನೆ ದಿನ
ನ್ಯಾಕ್ನಿಂದ ಎ ಗ್ರೇಡ್ ಪಡೆದಿರುವ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ 2014-15ನೇ ಸಾಲಿನ ಪ್ರಥಮ ಬಿ.ಎ.,ಬಿ.ಕಾಂ., ಬಿ.ಬಿ.ಎಂ. ಪದವಿಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ಜೂನ್ 4 ಕೊನೆಯ ದಿನ.ಕಾಲೇಜಿನಲ್ಲಿ ಬಿ.ಎ. ತರಗತಿಯಲ್ಲಿ ಎಚ್ಇಕೆ (ಇತಿಹಾಸ, ಅರ್ಥಶಾಸ್ತ್ರ, ಐಶ್ಛಿಕ ಕನ್ನಡ), ಜೆಕೆಪಿ (ಪತ್ರಿಕೋದ್ಯಮ, ಐಶ್ಚಿಕ ಕನ್ನಡ, ರಾಜ್ಯಶಾಸ್ತ್ರ), ಎಚ್ಇಪಿ, ಎಚ್ಇಎಸ್, ಇಎನ್ಜಿಎಸ್ಪಿ (ಐಶ್ಚಿಕ ಇಂಗ್ಲಿಷ್, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ), ಹಾಗೂ ಬಿ.ಕಾಂ., ಬಿಬಿಎಂ ಕೋರ್ಸುಗಳು ಲಭ್ಯವಿವೆ. ಜೂನ್ 5 ರಂದು ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಪ್ರಾಂಶುಪಾಲ ಡಾ. ಜಯರಾಮು ತಿಳಿಸಿದ್ದಾರೆ.
ಪ್ರಾಥಮಿಕ ಸಹಕಾರ ಸಂಘಕ್ಕೆ ಆಯ್ಕೆ
ರಾಮನಾಥಪುರ: ರಾಮನಾಥಪುರ ಹೋಬಳಿ ಕಾಳೇನಹಳ್ಳಿ ಗ್ರಾಮದ ಕೆ.ಟಿ. ಯೋಗಣ್ಣ ಪ್ರಾಥಮಿಕ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದಾರೆ. 10 ಸದಸ್ಯರ ಸಂಖ್ಯಾ ಬಲದ ಅರಕಲಗೂಡು ತಾಲೂಕಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ನಡೆಯಿತು. ಕೆ.ಟಿ.ಯೋಗಣ್ಣ 7 ಮತ ಪಡೆಯುವ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ವೇಳೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೊನ್ನವಳ್ಳಿ ಸತೀಶ್, ಹೋಳೆನರಸೀಪುರ ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎಸ್. ಶಂಕರ್, ಗ್ರಾ.ಪಂ. ಸದಸ್ಯ ಗೋವಿಂದೇಗೌಡ ಇತರರು ಇದ್ದರು. ಚುನಾವಣಾಧಿಕಾರಿಯಾಗಿ ಮಾದೇಗೌಡ ಭಾಗವಹಿಸಿದ್ದರು.
ಅಭಿನಂದನೆ: ರಾಮನಾಥಪುರ ಜಿಲ್ಲಾ ಪಂಚಾಯತಿ ಸದಸ್ಯೆ ಸರೋಜಮ್ಮ ರಾಮೇಗೌಡ, ಮಾಜಿ ಸದಸ್ಯ ಎಚ್.ಎಸ್. ಶಂಕರ್, ರುದ್ರಪಟ್ಟಣ ಗ್ರಾ.ಪಂ. ಸದಸ್ಯ ಗೋವಿಂದೇಗೌಡ, ಶೇಖರ್, ಮಂಜುನಾಥ್, ಮಧುರನಹಳ್ಳಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರವೀಂದ್ರ ಮುಂತಾದವರು ಅಭಿನಂದನೆ ಸಲ್ಲಿಸಿದರು.
ಎಸ್ಬಿಎಂ ಶಾಖೆಯ ಎಟಿಎಂ ಕೇಂದ್ರ ಪ್ರಾರಂಭ
ಹಾಸನ: ಬಹಳ ದಿವಸಗಳಿಂದ ಸಾರ್ವಜನಿಕರ ಒತ್ತಾಯದ ಮೇರೆಗೆ ಹಾಸನ ತಾಲೂಕು ಶಾಂತಿಗ್ರಾಮದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಎಟಿಎಂ ಕೇಂದ್ರವನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ. ಈ ಬ್ಯಾಂಕಿನ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಎಟಿಎಂ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಶಾಂತಿಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ವ್ಯವಸ್ಥಾಪಕ ಎಸ್. ವಿನಯ್ ಕೋರಿದ್ದಾರೆ.
ಕಾನಸ್ಟೇಬಲ್ ಹುದ್ದೆಗೆ ತರಬೇತಿ
ಹಾಸನ: ನಗರದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ವತಿಯಿಂದ ನಡೆಯುತ್ತಿರುವ ಬಿಜಿಎಸ್ ಸ್ಟಡಿ ಸೆಂಟರ್ನಲ್ಲಿ ಪೋಲೀಸ್ ಕಾನ್ಸ್ಟೇಬಲ್ ಹುದ್ದೆಗೆ ತರಬೇತಿ ನೀಡಲಾಗುವುದು ಆಸಕ್ತರು ಬಿಜಿಎಸ್ಸ್ಟಡಿ ಸೆಂಟರ್, ಶ್ರೀ ಆದಿಚುಂಚನಗಿರಿ ಇಂಗ್ಲಿಷ್ ಶಾಲೆ, ರವೀಂದ್ರನಗರ, ಹಾಸನ, ಮೊ.9738334784, 8050839482 ಸಂಪರ್ಕಿಸಿ.
ಐಟಿಐಗೆ ಪ್ರವೇಶ
ಹಾಸನ: ಎಸ್ಸೆಸ್ಸೆಲ್ಸಿ ಅಥವಾ ಜೆಒಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಐ.ಟಿ.ಐ.ನ ಫಿಟ್ಟರ್, ಟರ್ನರ್, ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್(ಇ.ಎಂ), ಎಂ.ಎಂ.ವಿ., ಎಂ.ಆರ್.ಎ.ಸಿ. ವೃತ್ತಿಗಳಿಗೆ ಪ್ರವೇಶ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಿ.ಟಿ.ಎಸ್. ಯೋಜನೆಯಲ್ಲಿರುವ ತಾಂತ್ರಿಕ ಹಾಗೂ ತಾಂತ್ರಿಕೇತರ ವೃತ್ತಿಗಳಿಗೆ ರಾಜ್ಯದ ಯಾವುದೇ ಭಾಗದಿಂದ ಇಲಾಖಾ ವೆಬ್ ಸೈಟ್ ಮೂಲಕ ಅರ್ಜಿ ಪಡೆದು ಜೂನ್ 5 ರವರೆಗೆ ಸಲ್ಲಿಸಬಹುದು. ವಿದ್ಯಾರ್ಥಿಗಳ ಆಯ್ಕೆಯು ಮೆರಿಟ್ ಹಾಗೂ ರೋಸ್ಟರ್ ಪದ್ಧತಿಗೆ ಅನುಗುಣವಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸಬೇಕೆಂದು ಬೇಲೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಕೋರಿದ್ದಾರೆ.
ಐಟಿಐಗೆ ಪ್ರವೇಶ
ಚನ್ನರಾಯಪಟ್ಟಣ: ಪಟ್ಟಣದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಎಲೆಕ್ಟ್ರಾನಿಕ್-32 ಕೋಪಾ-20 ಸೀಟುಗಳಿವೆ. 10ನೇ ತರಗತಿಯಲ್ಲಿ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳು ಮೇ 21 ರಿಂದ ಜೂನ್ 5 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಪ್ರಾಚಾರ್ಯರು, ಸರ್ಕಾರಿ ಮಹಿಳಾ ಕೈಗಾರಿಕೆ ತರಬೇತಿ ಸಂಸ್ಥೆ, ಚನ್ನರಾಯಪಟ್ಟಣ, ಹಾಸನ ಜಿಲ್ಲೆ 573116 (ದೂರವಾಣಿ ಸಂಖ್ಯೆ 08176-253087, ) ಇವರನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

