108 ಸೇವೆಗೆ ಸಾರಿಗೆ ಚಾಲಕರು
-ಮೌನೇಶ್ ವಿಶ್ವಕರ್ಮ
ಬಂಟ್ವಾಳ: ಜೀವ ರಕ್ಷಕ 108 ಆ್ಯಂಬುಲೆನ್ಸ್‌ಗೆ ಶುಕ್ರವಾರ ರಾತ್ರಿಯಿಂದ ಖಾಕಿ ಖದರ್ ಬಂದಿದೆ. 108 ಆ್ಯಂಬುಲೆನ್ಸ್ ಸಿಬ್ಬಂದಿ ಶುಕ್ರವಾರ ರಾತ್ರಿ 8 ಗಂಟೆಯಿಂದ ರಾಜ್ಯಾದ್ಯಂತ ಮುಷ್ಕರ ಆರಂಭಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯ ಸಾರಿಗೆ ಬಸ್ ಚಾಲಕರನ್ನು 108 ಆ್ಯಂಬುಲೆನ್ಸ್‌ಗಳ ಚಾಲಕರನ್ನಾಗಿ ನಿಯೋಜಿಸಿದೆ. ಅಲ್ಲದೆ 108 ವಾಹನಗಳಲ್ಲಿ ಆರೋಗ್ಯ ಸೇವೆ ನೀಡಲು ಸರ್ಕಾರಿ ಆಸ್ಪತ್ರೆಗಳ ನರ್ಸ್‌ಗಳನ್ನೂ ನಿಯೋಜಿಸಿದ್ದಾರೆ.
ಈಗಾಗಲೇ ತಮ್ಮ ಕರ್ತವ್ಯದಿಂದ ಹಿಂದೆ ಸರಿದು ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸಿರುವ 108 ಆ್ಯಂಬುಲೆನ್ಸ್ ನೌಕರರು ಭಾನುವಾರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಹೋರಾಡುತ್ತೇವೆ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯೇ ದ.ಕ. ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ್ದ ಜಿಲ್ಲೆಯ 108 ಆ್ಯಂಬುಲೆನ್ಸ್ ಸಿಬ್ಬಂದಿ ಮುಷ್ಕರದ ಮುನ್ಸೂಚನೆ ನೀಡಿ, ತಮ್ಮ ಮುಷ್ಕರದಿಂದ ಜನತೆಗಾಗುವ ತೊಂದರೆಗೆ ಸರ್ಕಾರವೇ ಹೊಣೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದ.ಕ.ದಲ್ಲಿ ಜಿಲ್ಲಾಧಿಕಾರಿಯವರ ಸೂಚನೆಯಂತೆ 108 ಆ್ಯಂಬುಲೆನ್ಸ್‌ಗಳ ತುರ್ತು ಸೇವೆಗೆ ಸಾರಿಗೆ ಬಸ್ ಚಾಲಕರನ್ನು ನೇಮಿಸಿದೆ.
ಬೇಡಿಕೆ ಮನದಟ್ಟು: ಜನತೆಗೆ ಆರೋಗ್ಯ ಸೇವೆ ನೀಡುವ ಸಲುವಾಗಿ ಹಗಲು ರಾತ್ರಿ ಶ್ರಮಿಸುತ್ತಿರುವ 108 ಆ್ಯಂಬುಲೆನ್ಸ್ ಸಿಬ್ಬಂದಿ ಹಲವು ಬೇಡಿಕೆಗಳನ್ನು ಸರ್ಕಾರ ಹಾಗೂ ತಮ್ಮನ್ನು ದುಡಿಸಿಕೊಳ್ಳುತ್ತಿರುವ ಜಿವಿಕೆ ಫೌಂಡೇಷನ್‌ನ ಮುಂದಿರಿಸಿದ್ದಾರೆ. ಕೆಲಸದ ಭದ್ರತೆ ನೀಡಬೇಕು, 15 ಸಾವಿರ ಕನಿಷ್ಠ ವೇತನ ನಿಗದಿಗೊಳಿಸಬೇಕು, ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಸರ್ಕಾರ ನಿರ್ವಹಿಸಬೇಕು, ಕಂಪನಿಗಳು ನೌಕರರಿಗೆ ಕೊಡುತ್ತಿರುವ ಕಿರುಕುಳ ತಪ್ಪಿಸಬೇಕೆಂಬ ಮೊದಲಾದ ಬೇಡಿಕೆಗಳನ್ನು ಮುಂದಿರಿಸಿರುವ 108 ಆ್ಯಂಬುಲೆನ್ಸ್ ಸಿಬ್ಬಂದಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ಸಲುವಾಗಿ ಶನಿವಾರ ರಾತ್ರಿಯೇ ತಮ್ಮ ಊರುಗಳಿಂದ ಬೆಂಗಳೂರು ಬಸ್ ಏರಿದ್ದಾರೆ.
ನನಗೆ ಬಸ್ ಬಿಟ್ಟು ಗೊತ್ತು... ಆದರೆ ಆ್ಯಂಬುಲೆನ್ಸ್‌ನಲ್ಲಿ ಕೆಲಸ ಮಾಡುವುದು ಹೊಸ ಅನುಭವ. ಶನಿವಾರ ಸಂಜೆ ವರೆಗೂ ಯಾವುದೇ ಕರೆ ಬಂದಿರಲಿಲ್ಲ. ಸಂಜೆಯ ಬಳಿಕ ರೋಗಿಯೊಬ್ಬರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದೇನೆ.
-ಅಶೋಕ್ ರಾಯ್, ಬಂಟ್ವಾಳದ 108 ಆ್ಯಂಬುಲೆನ್ಸ್ ವಾಹನಕ್ಕೆ ನಿಯೋಜನೆಗೊಂಡಿರುವ ಕೆಎಸ್‌ಆರ್‌ಟಿಸಿ ಚಾಲಕ
ದ.ಕ. ಜಿಲ್ಲೆಯ 16 ಆ್ಯಂಬುಲೆನ್ಸ್‌ಗಳಿಗೂ ಜಿಲ್ಲಾಧಿಕಾರಿಯವರ ಆದೇಶದಂತೆ ಕೆಎಸ್‌ಆರ್‌ಟಿಸಿ ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶುಕ್ರವಾರ ರಾತ್ರಿಯೇ 4 ಕೇಸ್‌ಗಳನ್ನು ಅಟೆಂಡ್ ಮಾಡಿದ್ದಾರೆ. ಯಾವುದೇ ತೊಡಕಿಲ್ಲದೆ 108 ಆ್ಯಂಬುಲೆನ್ಸ್ ಸೇವೆ ರೋಗಿಗಳಿಗೆ ತಲುಪುತ್ತಿದೆ.
-ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

