ತಪ್ಪಾಯ್ತು ತಿದ್ಕೋತೀವಿ
ಮೈಸೂರಿನ ರಾಘವೇಂದ್ರ ಬಡಾವಣೆಯಿಂದ ಡಿ. ರಾಧಾಕೃಷ್ಣ ಅವರು ಬರೆಯುತ್ತಾರೆ- 'ಮಾ.27ರಂದು ಪತ್ರಿಕೆಯ ಮುಖಪುಟದಲ್ಲಿ 'ಹಾಲಿಗಳಿಗೆ ಮಣೆ' ಎಂಬ ಶೀರ್ಷಿಕೆಯಡಿ ಮೂರು ಪಕ್ಷಗಳ ಚಿನ್ಹೆಯನ್ನು ಛಾಪಿಸಿದ್ದೀರಿ. ಸರಿ. ಆದರೆ ಮೊದಲ ಎರಡು ಪಕ್ಷಗಳ ಚಿನ್ಹೆ, ಕಾಂಗ್ರೆಸ್-ಕೈ ಹಾಗೂ ಬಿಜೆಪಿ ಕಮಲ. ಕೆಜೆಪಿಯ ಚಿನ್ಹೆ ಎಡ್ಡಿ ಚಿತ್ರವಿರುವ ಧ್ವಜವೇ? ಈ ರೀತಿಯಾದ ನಿಮ್ಮ ದ್ವಂದ್ವ ನಿಲುವಿನಿಂದ ಓದುಗನಿಗೆ ಕೆಲವು ಅನುಮಾನಗಳು ಕಾಡುತ್ತವೆ.'
'ನಿಮಗೆ ಯಡ್ಡಿಯ ಭಾವಚಿತ್ರವನ್ನು ಮುಖಪುಟದಲ್ಲಿ ಛಾಪಿಸದಿದ್ದರೆ ನಿದ್ರೆ ಬರುವುದಿಲ್ಲವೇ? ಕೆಜೆಪಿಯ ಚಿನ್ಹೆ ತೆಂಗಿನಕಾಯಿ ಎಂಬುದು ನಿಮಗೆ ತಿಳಿದಿಲ್ಲವೇ? ಅಥವಾ ತಿಳಿಯದ ಹಾಗೆ ನಾಟಕವಾಡುತ್ತಿರುವಿರೇನು? ಇದು ತಪ್ಪೋ? ಸರಿಯೋ? ತಿಳಿಸಿ'
'ಒಂದು ಪತ್ರಿಕೆಯು ಒಬ್ಬ ವ್ಯಕ್ತಿಯ ಪರವಾಗಿ ಮುಖಪುಟದಲ್ಲಿ ಭಾವಚಿತ್ರವನ್ನು ಪ್ರಕಟಿಸುವುದು ಪತ್ರಿಕೆಯು ತೋರಿಸುವ ಪಕ್ಷಭೇದವಾಗುವುದಿಲ್ಲವೇ? ಯಡ್ಡಿಯ ಆಡಳಿತಾವಧಿಯಲ್ಲಿ ಪತ್ರಿಕೆಗಳ ಜಾಹೀರಾತಿಗಾಗಿ ಕೋಟ್ಯಾಂತರ ರುಪಾಯಿ ಖರ್ಚು ಮಾಡಿರುವುದು ಓದುಗರಿಗೆ ತಿಳಿದ ವಿಷಯವಾಗಿದೆ' ಎಂದಿದ್ದಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಮೊತ್ತದ ಜಾಹೀರಾತು ನೀಡಿದರು ಮತ್ತು ಯಾವ ಪತ್ರಿಕೆಗೆ ಅತ್ಯಂತ ಹೆಚ್ಚು ಜಾಹೀರಾತು ನೀಡಿದರು ಎಂಬುದನ್ನು ನಮ್ಮ ಪತ್ರಿಕೆಯೇ ಮುಖಪುಟದಲ್ಲಿ ಪ್ರಕಟಿಸಿತ್ತು. ಯಾವ ಪತ್ರಿಕೆಗೆ ಹೆಚ್ಚಿನ ಜಾಹೀರಾತು ಸಿಕ್ಕಿದೆ ಎಂಬುದನ್ನು ಅದರಲ್ಲಿ ಓದುಗರು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹೆಚ್ಚು ಜಾಹೀರಾತು ನೀಡಿದ್ದರು ಎಂಬ ಕಾರಣಕ್ಕೆ ಅವರ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸುವಷ್ಟು ಪತ್ರಿಕೆಗಳು ದೀನಸ್ಥಿತಿ ತಲುಪಿಲ್ಲ ಎಂಬುದನ್ನು ಓದುಗರು ಅರ್ಥಮಾಡಿಕೊಂಡರೆ ಉತ್ತಮ.
ಕೆಜೆಪಿಯ ಚುನಾವಣಾ ಚಿಹ್ನೆ ತೆಂಗಿನಕಾಯಿ ಎಂಬುದು ಗೊತ್ತಿದೆ. ಗೊತ್ತಿಲ್ಲದಂತೆ ನಾಟಕವಾಡಿ ಸಾಧಿಸಬೇಕಾದ್ದೇನೂ ಇಲ್ಲ. ಯಾರ ಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿದರೂ, ಮುದ್ರಿಸದಿದ್ದರೂ ನಿದ್ರೆ ಬಂದೇ ಬರುತ್ತದೆ. ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ರೆ ಎಂಬಂತೆ ನಿದ್ರೆಗೇನೂ ಕೊರತೆಯಾಗಿಲ್ಲ. ಅದರ ಬಗ್ಗೆ ರಾಧಾಕೃಷ್ಣ ಅವರು ಚಿಂತಿಸಬೇಕಾದ ಅಗತ್ಯವಿಲ್ಲ.
ಕೆಜೆಪಿಯ ಚಿಹ್ನೆ ತೆಂಗಿನಕಾಯಿ ಎಂಬುದು ರಾಧಾಕೃಷ್ಣ ಅವರಿಗೆ ಗೊತ್ತಿದೆ. ಹಾಗಂತ ಎಲ್ಲರಿಗೂ ಗೊತ್ತಿದೆ ಎನ್ನಲಾಗದು. ಆ ಉದ್ದೇಶದಿಂದ ಯಡಿಯೂರಪ್ಪ ಅವರ ಚಿತ್ರವಿರುವ ಧ್ವಜವನ್ನು ಬಳಸಲಾಗಿದೆ.
'ಚುನಾವಣೆ ಮತದಾನದ ಸಂದರ್ಭದಲ್ಲಿ ಪಕ್ಷದ ಹೆಸರಿರುವುದಿಲ್ಲ. ಚಿಹ್ನೆ ಮಾತ್ರ ಇರುತ್ತದೆ. ಆದ್ದರಿಂದ ಯಡಿಯೂರಪ್ಪ ಚಿತ್ರವಿರುವ ಧ್ವಜವನ್ನು ಪ್ರಕಟಿಸುವ ಮೂಲಕ ಕೆಜೆಪಿಗೆ ಅನ್ಯಾಯ ಮಾಡಿದ್ದೀರಿ. ತೆಂಗಿನಕಾಯಿಯನ್ನೇ ಪ್ರಕಟಿಸಿದರೆ, ಜನರಿಗೆ ಕೆಜೆಪಿಯ ಚಿಹ್ನೆ ತೆಂಗಿನಕಾಯಿ ಎಂಬುದು ಮನದಲ್ಲಿ ಅಚ್ಚೊತ್ತಿ, ಮತದಾನ ಮಾಡುವಾಗ ಕೆಜೆಪಿಗೆ ಮತಹಾಕಲು ಅನುಕೂಲವಾಗುತ್ತದೆ' ಎಂದು ಕೆಜೆಪಿಯವರೂ ನಮ್ಮನ್ನು ಟೀಕಿಸಬಹುದು.
ನೀವು ಊಹಿಸಿಕೊಂಡ ಉದ್ದೇಶ ಕಾಣುತ್ತದೆಯೇ ಹೊರತು, ನಾವು ಪ್ರಕಟಿಸಿದ ಉದ್ದೇಶ ಕಾಣುವುದಿಲ್ಲ.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

