ಸಂಪಾದಕೀಯ

ರೈಲು ದರ ನಿಗದಿ ಪ್ರಾಧಿಕಾರ

Published On :

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಭಾರತೀಯ ರೈಲ್ವೆಗೆ ಅದರದ್ದೇ ಆದ ಸ್ಥಾನವಿದೆ. ಖರ್ಚು, ಆದಾಯ, ವಿಸ್ತರಣೆ ಯೋಜನೆ ಹಾಗೂ ಇತರ ಜವಾಬ್ದಾರಿಯನ್ನು ಹೊತ್ತಿರುವ ರೈಲ್ವೆ ಮಂತ್ರಾಲಯಕ್ಕೆ ವಿಶೇಷ ಬಜೆಟ್ ಮಂಡನೆಯ ಸೌಲಭ್ಯವಿದೆ.
ಭಾರತೀಯ ರೈಲ್ವೆ ದೇಶದ ಅತಿ ದೊಡ್ಡ ಉದ್ಯಮವೂ ಹೌದು. ಬೃಹತ್ ಪ್ರಮಾಣದ ಸೇವಾ ಸಂಸ್ಥೆಯೂ ಹೌದು. ಅದರ ಆದಾಯದ ಬಾಬುಗಳಲ್ಲಿ ಪ್ರಯಾಣಿಕರಿಂದ ವಸೂಲು ಮಾಡುವ ಟಿಕೆಟ್ ಹಣ ಒಂದು ಮುಖ್ಯವಾದ ಅಂಶ. ಗಮನಾರ್ಹವಾದ ಪ್ರಮಾಣದ ಹಣ ಆ ಬಾಬಿನಿಂದ ಬರಬೇಕು.
ಆದರೆ ಅಗ್ಗದ ಜನಪ್ರಿಯತೆಯ ರಾಜಕೀಯ, ಆಡಳಿತ ವ್ಯವಸ್ಥೆಯಲ್ಲಿ ನುಸುಳಿದ ಅನಂತರ ಅಧಿಕಾರಕ್ಕೆ ಬಂದ ಯಾವ ರೈಲ್ವೆ ಮಂತ್ರಿಯೂ, ರೈಲ್ವೆ ಪ್ರಯಾಣದ ದರಗಳನ್ನು ಹೆಚ್ಚಿಸುವುದಕ್ಕೆ ದಿಟ್ಟ ನಿರ್ಧಾರ ಶಕ್ತಿಯನ್ನು ಪ್ರದರ್ಶಿಸಲೇ ಇಲ್ಲ. ಆದರೆ ಸಾಮಾನು ಸರಂಜಾಮುಗಳ ಸಾಗಣಿಕೆ ದರಗಳನ್ನು ಅಲ್ಪಸ್ವಲ್ಪ ಆಗಾಗ ಏರಿಸಿದ್ದು ಉಂಟು. ಪ್ರಯಾಣಿಕರಿಗಾಗಿ ಓಡಿಸುವ ರೈಲುಗಳು, ಪ್ರಯಾಣಿಕರಿಗೆ ಒದಗಿಸಬೇಕಾದ ಸೌಲಭ್ಯಗಳ ಮೇಲಿನ ವೆಚ್ಚ ವಿಪರೀತವಾಗಿ ಹೆಚ್ಚುತ್ತಿದೆ. ಆದರೆ ಪ್ರಯಾಣಿಕರ ಟಿಕೆಟ್ ದರಗಳನ್ನು ಏರಿಸಿದ್ದು ಕಡಿಮೆ.
ಇಂದಿಗೂ ಸಾಮಾನು-ಸರಂಜಾಮುಗಳ ಸಾಗಣೆಯಿಂದ ಬರುವ ಹಣದಲ್ಲಿ ವಾರ್ಷಿಕ ಲೆಕ್ಕದಲ್ಲಿ ಸುಮಾರು 32000 ಕೋಟಿ ರುಪಾಯಿಗಳು, ಪ್ರಯಾಣಿಕರ ವಿಭಾಗದ ನಷ್ಟವನ್ನು ತುಂಬುವುದಕ್ಕೇ ಹೋಗುತ್ತಿದೆ.
ಹೀಗಾಗಿ ರೈಲ್ವೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಕ್ಕೆ ಅಗತ್ಯವಾದ ಬಂಡವಾಳದ ಸಂಗ್ರಹ ಕಷ್ಟವಾಗಿದೆ. ಈ ಪರಿಸ್ಥಿತಿಯಿಂದ ರೈಲ್ವೆಯೂ ಸೊರಗಿದೆ. ಪ್ರಯಾಣಿಕರಿಗೂ ಅಗತ್ಯವಿರುವಷ್ಟು ಸೌಲಭ್ಯಗಳು ಸಿಗುತ್ತಿಲ್ಲ. ಒಟ್ಟಾರೆ ರೈಲ್ವೆಯ ಪ್ರಗತಿ ಕುಂಠಿತವಾಗಿದೆ. ರಾಜಕಾರಣಿಗಳು ದರಗಳನ್ನು ಹೆಚ್ಚಿಸುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯನ್ನು ರಾಜಕೀಯವಾಗಿ ನಿರ್ಮಿಸಿದ್ದಾರೆ. ಈ ಪರಿಸ್ಥಿತಿಯಿಂದ ಹೊರಗೆ ಬರಲು ಸರ್ಕಾರವೇ ಗಟ್ಟಿಮನಸ್ಸು ಮಾಡಿ ರೈಲ್ವೆ ದರಗಳ ನಿಗದಿಗೆ ಒಂದು ಪ್ರಾಧಿಕಾರವನ್ನು ರಚಿಸುವ ಸಲಹೆ ಕೆಲವು ವಲಯಗಳಲ್ಲಿ ಕೇಳಿಬಂದಿದೆ. ಈಗ ವಿದ್ಯುತ್ ದರ ನಿಗದಿಗೆ ಅಂತಹ ವ್ಯವಸ್ಥೆ ಇದೆ. ತೈಲ ಬೆಲೆಯ ನಿಗದಿಯ ಸಂಬಂಧದಲ್ಲೂ ಅಂತಹ ವ್ಯವಸ್ಥೆ ನಿಧಾನವಾಗಿ ಜಾರಿಗೆ ಬರುತ್ತಿದೆ. ರೈಲ್ವೆ ದರಕ್ಕೂ ಅಂತಹ ವ್ಯವಸ್ಥೆ ಅಗತ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.