ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಮೈಸೂರು ಜಿಲ್ಲೆಯ ಬೆಟ್ಟದಪುರದಿಂದ ಬಿ.ಕೆ. ಶ್ರೀಕಾಂತ್ ಅವರು ಬರೆಯುತ್ತಾರೆ- 'ಜು.24ರಂದು ಪುಟ 8ರಲ್ಲಿ (ರಾಜ್ಯ) 'ಹಂಪಿಗೆ ನೆರೆಪ್ರವಾಹ' ಎಂಬ ಶೀರ್ಷಿಕೆ ಇದೆ. ನೆರೆ ಅಂದರೂ ಪ್ರವಾಹವೇ ಅಲ್ಲವೇ? ಈ ನೆರೆ ಎಂಬ ಕನ್ನಡ ಪದಕ್ಕೆ 'ಪ್ರವಾಹ', 'ಪಕ್ಕ', 'ಋತುಮತಿಯಾಗು', 'ಸೇರು' (ನೆರೆದಿದ್ದ ಜನಸ್ತೋಮ) ಮುಂತಾದ ಅರ್ಥಗಳಿವೆ.'
'ಜು.22ರಂದು ಪತ್ರಿಕೆಯ ಮುಖಪುಟದಲ್ಲಿ 'ದಿಲ್ಲಿಗೆ ದಶಕದ ಮಳೆ' ಶೀರ್ಷಿಕೆಯ ವಿವರಣೆಯಲ್ಲೂ ಮಳೆ ಪೀಡಿತ ಪ್ರದೇಶ ಎಂದು ಮುದ್ರಿತವಾಗಿದೆ. ಮಳೆ ಬಿದ್ದ ಮೇಲೆ ಮಳೆ ಪೀಡಿತ ಪ್ರದೇಶವೇ ಹೌದು, ಹೆಚ್ಚು ಮಳೆಯಿಂದಾಗುವ ಹಾನಿಗೆ ನೆರೆ ಪೀಡಿತ ಪ್ರದೇಶವೆಂದರೆ ಸೂಕ್ತವಲ್ಲವೇ?'
'ಅದೇ ದಿನ ಪತ್ರಿಕೆಯ ಪುಟ 8ರಲ್ಲಿ 'ಸತ್ತನೆಂದು ಶವಸಂಸ್ಕಾರ ಮಾಡಿದ ಯುವಕ ಮನೆಗೆ ಬಂದ' ಎಂದಿದೆ. ಶವ ಸಂಸ್ಕಾರ ಮಾಡಿದ ಮೇಲೆ ಮನೆಗೆ ಬರದೆ ಕಾಡಿಗೆ ಯಾರೂ ಹೋಗಲ್ಲಾ ಸಾರ್! 'ಶವ ಸಂಸ್ಕಾರ ಮಾಡಿಸಿ ಕೊಂಡ ಯುವಕ' ಎಂದಿದ್ದರೆ ಸರಿಯಿರುತ್ತಿತ್ತು! ಶೀರ್ಷಿಕೆ ಕೊಡುವಾಗ ಬಹಳ ಎಚ್ಚರಿಕೆಯಲ್ಲಿರಬೇಕು' ಎಂದಿದ್ದಾರೆ.
ನನ್ನ ದೃಷ್ಟಿಯಲ್ಲಿ 'ನೆರೆ' ಮತ್ತು 'ಪ್ರವಾಹ'ಕ್ಕೆ ವ್ಯತ್ಯಾಸವಿದೆ. ಉದಾಹರಣೆಗೆ: 'ಪ್ರವಾಹೋಪಾದಿಯಲ್ಲಿ ಆಗಮಿಸಿದ ಜನ ಮೈದಾನದಲ್ಲಿ ನೆರೆದಿದ್ದರು' ಎಂದು ಬರೆಯಬಹುದು.
ಇನ್ನು ನೀರಿನ ವಿಷಯಕ್ಕೆ ಬಂದರೆ, ನೆರೆ ಅಂದರೆ ನೀರುತುಂಬಿಕೊಳ್ಳುವುದು. ನೆರೆ ನೀರು ನಿಂತ ನೀರಿನಂತಿರುತ್ತದೆ. ಆದರೆ ಪ್ರವಾಹ ಅಂದರೆ ಜೋರಾಗಿ ಹರಿಯುವುದು ಎಂಬ ಅರ್ಥವಿದೆ. ನೆರೆ ಮುಳುಗಿಸುತ್ತದೆ. ಪ್ರವಾಹ ಕೊಚ್ಚಿಕೊಂಡು ಹೋಗುತ್ತದೆ. ಆದ್ದರಿಂದ ನೆರೆ ಮತ್ತು ಪ್ರವಾಹ ಒಂದೇ ಅಲ್ಲ. ನಾವು ಕೂಡ ನೆರೆಪ್ರವಾಹ ಎಂದು ಬಳಸಿದ್ದು ಸರಿಯಲ್ಲ.
ಬೆಂಗಳೂರಿನ ನಂದಿನಿ ಬಡಾವಣೆಯಿಂದ ಅಭಿಯೋಜಕರಾಗಿರುವ ಬಸವರಾಜ ಹುಡೇದಗಡ್ಡಿ ಅವರು ಬರೆಯುತ್ತಾರೆ- 'ಯಳಂದೂರು ಪಟ್ಟಣದ ಪುರಾತನ ಕಲ್ಲುಸರಪಳಿಯ ಬಳೆ ಮಂಟಪದ ಬಳಿ ಇರುವ ದಿವಾನ್ ಪೂರ್ಣಯ್ಯನವರ ನೆನಪಿಗಾಗಿ ನಿರ್ಮಿಸಿದ ಜಹಗೀರದಾರ ಕಟ್ಟಡದ ಕುರಿತು ದೇವರಾಜು ಕಪ್ಪಸೋಗೆ 'ಬೊಂಬಾಟ್ ಬಂಗಲೆ' ತಲೆಬರಹದಲ್ಲಿ ಪತ್ರಿಕೆಯ ಬೈಟುಕಾಫಿ ಪುರವಣಿಯ ಟೂರುಕೇರಿ (24.7.13)ರ ಅಂಕಣದಲ್ಲಿ ಬರಹ ರೂಪದಲ್ಲಿ ವಿವರಿಸಿದ್ದಾರೆ.'
'ನಾನು ಓದಿದಂತೆ (ಡಿ.ವಿ. ಗುಂಡಪ್ಪನವರ 1946ರ ಹಿಂದಿನ ಮೈಸೂರು ರಾಜ್ಯಾಡಳಿತದಲ್ಲಿ) ದಿವಾನ್ ಪೂರ್ಣಯ್ಯನವರಿಗೆ ಮೈಸೂರು ಮಹಾರಾಜರು ಯಳಂದೂರು ತಾಲ್ಲೂಕನ್ನು ಜಹಗೀರಾಗಿ ನೀಡಿದ್ದು 1807ರಲ್ಲಿ. ಅವರು ತಾಲ್ಲೂಕಿನಲ್ಲಿ ಪ್ರಗತಿ ಪರ ಕಾರ್ಯ ಜಾರಿಯಲ್ಲಿ ತಂದು 1812ರಲ್ಲಿ ವಿಧಿವಶರಾದರು. ಅವರ ನೆನಪಿನಾರ್ಥವಾಗಿ 1901ರಲ್ಲಿ ಜಹಗೀರ ಬಂಗ್ಲೆ ನಿರ್ಮಾಣವಾಗಿದೆ.'
'ಲೇಖನದಲ್ಲಿ ಬರೆದಂತೆ ಯಳಂದೂರು ತಾಲ್ಲೂಕು ದಿವಾನ್ ಪೂರ್ಣಯ್ಯವವರಿಗೆ ಜಹಗೀರು ಬಂದಿದ್ದು 1907ರಲ್ಲಿ ಅಲ್ಲ ಎನ್ನುವುದನ್ನು ತಮ್ಮ ಗಮನಕ್ಕೆ ತರಬಯಸುವೆನು' ಎಂದಿದ್ದಾರೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.