ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ನೆರೆ-ಪ್ರವಾಹ ಕುರಿತಂತೆ ಅಮೆರಿಕದ ವಾಷಿಂಗ್ಟನ್ ಡಿಸಿಯಿಂದ ಶ್ರೀವತ್ಸ ಜೋಶಿ ಅವರು ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ- 'ಆ.7ರ ಸಂಚಿಕೆಯ 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ ನೆರೆ ಮತ್ತು ಪ್ರವಾಹ ಎಂಬ ಪದಗಳ ಕುರಿತ ಚರ್ಚೆಯನ್ನೋದಿದೆ. ಅದಕ್ಕೆ ಪೂರಕವಾಗಿ ಒಂದೆರಡು ವಿಚಾರಗಳನ್ನು ತಿಳಿಸಬಯಸುತ್ತೇನೆ. ಇದನ್ನು ತಪ್ಪು-ಸರಿ ಎನ್ನುವುದಕ್ಕಿಂತಲೂ ಭಾಷಾಸಕ್ತರಿಗೆ ಒಂದಿಷ್ಟು ಚಿಂತನೆಗೆ ಗ್ರಾಸ ಎಂದು ಪ್ರಕಟಿಸುವಿರಾಗಿ ನಂಬಿದ್ದೇನೆ.'
'ಕ್ರಿಯಾಪದ ರೂಪದಲ್ಲಿ ನೆರೆ ಪದಕ್ಕೆ ಒಟ್ಟುಗೂಡು, ಸೇರು ಮುಂತಾದ ಅರ್ಥಗಳಿವೆ. ನಾಮಪದ ರೂಪದಲ್ಲಿ, ಅದರಲ್ಲೂ ನದಿ ನೀರಿಗೆ ಸಂಬಂಧಿಸಿದಂತೆ ನೆರೆ ಪದಕ್ಕೆ ಪ್ರೊ.ಜಿ.ವಿ ಅವರು ತುಂಬುಪ್ರವಾಹ, ಮಹಾಪೂರ, ಉಬ್ಬರ, ಮುಂತಾದ ಅರ್ಥ ಹೇಳಿದ್ದಾರೆ. ಇಲ್ಲಿ ತುಂಬುಪ್ರವಾಹ, ಮಹಾಪೂರ ಎಂಬ ಪದಗಳಲ್ಲಿ ತುಂಬು, ಮಹಾ ಮುಂತಾದ ವಿಶೇಷಣಗಳಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು.'
'ಪ್ರವಾಹ ಎನ್ನುವುದು ಸಂಸ್ಕೃತ ಪದ. ಅಲ್ಲಿ ಆ ಪದಕ್ಕೆ ನೀರಿನ ಹರಿವು, ಮುಂದಕ್ಕೆ ಹರಿದು ಬರುವುದು, ವಿಷಯಗಳ ಅವಿಚ್ಛಿನ್ನವಾದ ಮುನ್ನಡೆ ಎಂಬ ಅರ್ಥಗಳಿವೆ. ಅಂದರೆ ನದಿಯಲ್ಲಿ ಬೇಸಗೆಯಲ್ಲಿ ಸ್ವಲ್ಪವೇ ನೀರು ಹರಿಯುತ್ತಿದ್ದಾಗಲೂ ಅದು ಪ್ರವಾಹವೇ. ತಂತಿಯಲ್ಲಿ ವಿದ್ಯುತ್ ಹರಿಯುವುದು ವಿದ್ಯುತ್ಪ್ರವಾಹ. ಚೌಡಯ್ಯನವರ ಪಿಟೀಲಿನಿಂದ ಹರಿಯುವುದು ರಾಗಪ್ರವಾಹ. ಒಟ್ಟಿನಲ್ಲಿ ಮೂಲ ಸಂಸ್ಕೃತದ ಪ್ರವಾಹ ಇಂಗ್ಲಿಷ್‌ನಲ್ಲಾದರೆ ಫ್ಲೋ ಅಷ್ಟೇ ಹೊರತು ಫ್ಲಡ್ ಅಲ್ಲ. ಪ್ರವಾಹದೋಪಾದಿ ಎಂದರೆ ಒಂದಾದನಂತರ ಒಂದರಂತೆ ನಡುವೆ ಅಂತರವಿಲ್ಲದೆ ಮುನ್ನಡೆ ಎಂದರ್ಥ. ಸಿಟಿ ಬಸ್ಸುಗಳು ಒಂದರ್ಧ ಗಂಟೆ ಬರಲೇ ಇಲ್ಲ. ಆಮೇಲೆ ಪ್ರವಾಹದೋಪಾದಿಯಲ್ಲಿ ಬಂದವು ಎನ್ನುತ್ತೇವಲ್ಲ ಹಾಗೆ.'
'ಆದರೆ ಕನ್ನಡದಲ್ಲಿ ಸಾಮಾನ್ಯವಾಗಿ ರೂಢಿಯಲ್ಲಿ ಪ್ರವಾಹ ಪದ ನೆರೆ ಎಂಬ ಅರ್ಥದಲ್ಲೇ ಬಳಕೆಯಾಗುತ್ತದೆ. ಶಾಸ್ತ್ರಕ್ಕಿಂತ ರೂಢಿಯೇ ಬಲವುಳ್ಳದ್ದು ಎನ್ನುತ್ತಾರೆ. ಹಾಗಾಗಿ ಪ್ರವಾಹ ಎಂದರೆ ನೆರೆ. ತೀರಾ ಶಾಸ್ತ್ರೀಯವಾಗಿ ಪರಿಗಣಿಸಿದರೆ ಪ್ರೊ.ಜಿ.ವಿ ಅವರೆಂದಂತೆ ತುಂಬುಪ್ರವಾಹ ಅಥವಾ ಮಹಾಪೂರ ಮಾತ್ರ ನೆರೆ ಎನಿಸುತ್ತದೆ.'
'ಬೆಣ್ಣೆ ಕರಗುವ ಮುನ್ನ ನೆರೆ ಬಂತು ಪೆನ್ನಾರ್‌ಗೆ ಅಂತೊಂದು ನಾಣ್ಣುಡಿ ಇದೆ. ಪೆನ್ನಾರ್ ನದಿಯಲ್ಲಿ ಯಾವಾಗಲೂ ಸಾಮಾನ್ಯಮಟ್ಟದಲ್ಲಿ ನೀರು ಹರಿಯುತ್ತಿರುತ್ತದೆ. ಅದು ಪ್ರವಾಹ. ಆದರೆ ಒಮ್ಮೊಮ್ಮೆ ಮಾತ್ರ ನೋಡನೋಡುತ್ತಿದ್ದಂತೆ (ಬೆಣ್ಣೆಕರಗಲು ಬೇಕಾಗುವುದಕ್ಕಿಂತಲೂ ಕಡಿಮೆ ಸಮಯದಲ್ಲಿ)  ನೀರು ಏರುತ್ತದೆ, ಉಕ್ಕಿಹರಿಯುತ್ತದೆ. ಅದು ತುಂಬುಪ್ರವಾಹ ಅಥವಾ ನೆರೆ.'
'ಇನ್ನು, ನೆರೆ ಪ್ರವಾಹ ಪದಪ್ರಯೋಗದ ವಿಚಾರಕ್ಕೆ ಬಂದರೆ ಬಿ.ಕೆ.ಶ್ರೀಕಾಂತ್ ಅವರೆಂದಂತೆ ನೆರೆ ಮಾತ್ರ ಸಾಕಿತ್ತು ಎನ್ನುವುದು ನಿಜವೇ. ಆದರೆ ನೆರೆ ಮತ್ತು ಪ್ರವಾಹ ಪದಗಳ ಸೂಕ್ಷ್ಮ ಅರ್ಥವ್ಯತ್ಯಾಸವನ್ನು ಗಮನಿಸಿದರೆ ನೆರೆಪ್ರವಾಹ ಎನ್ನುವುದು ದ್ವಿರುಕ್ತಿಯಲ್ಲ. ಬೇಸಗೆಯಲ್ಲಿ ತುಂಗಭದ್ರೆಯದು ಸಾಮಾನ್ಯ ಪ್ರವಾಹ (ಹರಿವು). ಆದರೆ ಮಳೆಗಾಲದಲ್ಲಿ ನೆರೆ ಎನಿಸುವಂತೆ ಉಕ್ಕುವ ಪ್ರವಾಹ. ಸುತ್ತಲಿನ ಹಳ್ಳ-ಕೊಳ್ಳಗಳೂ ನದಿಯಲ್ಲಿ ನೆರೆದು ಉಂಟಾಗುವ ಹೆಚ್ಚಿನ ಪ್ರವಾಹ. ಅದೇ ನೆರೆಪ್ರವಾಹ' ಎಂದಿದ್ದಾರೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.