ಸಂಪಾದಕೀಯ

ರಾಜಕೀಯ ಭದ್ರತೆಸಾಮಾಜಿಕ ಏಕತೆ

Published On :

ದೇಶದ 67ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ಅನಂತರದ ಮುಖ್ಯ ಭಾಷಣದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು ರಾಜಕೀಯ ಭದ್ರತೆ, ಸಾಮಾಜಿಕ ಏಕತೆ ಹಾಗೂ ಭಿನ್ನ ಚಿಂತನೆಯನ್ನು ಸಹಿಸುವ ಮನೋಧರ್ಮಗಳನ್ನು ಪ್ರಗತಿಗೆ ಅಗತ್ಯವಾದ ಅನಿವಾರ್ಯವೆನ್ನುವುದನ್ನು ಗುರ್ತಿಸಿರುವುದು ದೇಶದ ಭವ್ಯ ಭವಿಷ್ಯದ ದೃಷ್ಟಿಯಿಂದ ಒಂದು ಒಳ್ಳೆಯ ಸೂಚನೆಯೇ.
ನಿಜ. ಸ್ವಾತಂತ್ರ್ಯೋತ್ಸವದಂತಹ ಗಂಭೀರವಾದ ಹಾಗೂ ಭಾವನಾತ್ಮಕ ಸಮಾರಂಭದಲ್ಲಿ ಇಂತಹ ಆದರ್ಶದ ಪ್ರಸ್ತಾಪ ಒಂದು ಕ್ಲೀಷೆ ಎನಿಸಬಹುದು. ಆದರೆ ಕಳೆದ ಒಂಬತ್ತು ವರ್ಷಗಳಿಗಿಂತ ಹೆಚ್ಚಿನ ಕಾಲ ಪ್ರಧಾನಿ ಪೀಠದಲ್ಲಿ ಕೆಲಸ ಮಾಡಿರುವ ಪ್ರಧಾನಿಗೆ ಈ ಮೂರೂ ವಿಷಯಗಳಲ್ಲಿ ತಮಗೆ ಅಗತ್ಯವಾಗಿದ್ದ ಸಹಕಾರ ಸಿಗಲಿಲ್ಲ ಎನ್ನುವ ನೋವೂ ಈ ಹೇಳಿಕೆಯಲ್ಲಿ ಅಡಕವಾಗಿರುವುದು ಗಮನಾರ್ಹ.
ಈ ವರ್ಷದ ಪ್ರಗತಿಯ ವೇಗ ಕಡಿಮೆಯಾಗಿದ್ದರೂ, ಕಳೆದ ಒಂಬತ್ತು ವರ್ಷಗಳಲ್ಲಿ ಕಂಡುಬಂದಿದ್ದ ಸರಾಸರಿ ಶೇಕಡಾ 7.9ರಷ್ಟು ವಾರ್ಷಿಕ ಪ್ರಗತಿ, ಇದುವರೆಗಿನ ದಶಕದ ದಾಖಲೆಯೇ. ಈ ಅಂಶವನ್ನು ಪ್ರಸ್ತಾಪಿಸಿದಾಗಲೇ, ಮನಮೋಹನ ಸಿಂಗ್, 1991ರ ತೀವ್ರ ಸ್ವರೂಪದ ರಾಜಕೀಯ- ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿ ಸುಧಾರಣೆಯ ಪರವಾಗಿ ಗಟ್ಟಿಯಾಗಿ ನಿಂತು ಹೊಸ ಮಾರ್ಗವನ್ನೇ ತುಳಿದ ಅಂದಿನ ಪ್ರಧಾನಿ ಪಾಮುಲ ಪರ್ತಿ ವೆಂಗಾಲ ನರಸಿಂಹರಾಯರ ಸಾಧನೆಯನ್ನು ಮೆಚ್ಚಿದ್ದು ಗಮನಾರ್ಹ. ಮನಮೋಹನ ಸಿಂಗ್ ಇದುವರೆಗೆ ಇಂತಹ ಪ್ರಸ್ತಾಪವನ್ನು ಎಂದೂ ಬಹಿರಂಗವಾಗಿ ಮಾಡಿರಲಿಲ್ಲ. ಹೊಸದೊಂದು ದಶಕದ ಹೊಸ್ತಿಲಲ್ಲಿ ನಿಂತಿರುವ ರಾಷ್ಟ್ರದ ಭವಿಷ್ಯ ಭವ್ಯವಾಗಿರಬೇಕಾದರೆ, ಸಂಕುಚಿತ- ಆಸಕ್ತ ಹಿತಗಳನ್ನೇ ಆಧರಿಸಿದ ಸಿದ್ಧಾಂತದ ಪ್ರಚಾರ ಜನತಂತ್ರ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದಾಗ, ಅವರು ಯಾರ ಹೆಸರನ್ನೂ ಹೇಳದೇ ಇದ್ದರೂ ಬಿಜೆಪಿಯಲ್ಲಿ ಈಗ ಪ್ರಕಾಶಮಾನ ತಾರೆಯಾಗಿ ವಿಜೃಂಭಿಸುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸವಾಲುಗಳಿಗೆ ಕಾಂಗ್ರೆಸ್ಸಿನ ಉತ್ತರ ಅದು ಎನ್ನುವುದನ್ನು ತಿಳಿದುಕೊಳ್ಳಲು ರಾಜಕೀಯ ಜ್ಞಾನವೇನೂ ಬೇಕಾಗಿಲ್ಲ.
ಪ್ರಾಯಶಃ ಮನಮೋಹನ ಸಿಂಗ್ ಅವರ ಪಾಲಿಗೆ ಕೆಂಪು ಕೋಟೆಯ ಬುರುಜಿನ ಭಾಷಣಕ್ಕೆ ಇದೇ ಕೊನೆಯ ಅವಕಾಶ. ಮುಂದಿನ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನವೇ ಸಾರ್ವತ್ರಿಕ ಚುನಾವಣೆ ಮುಗಿದು ಹೊಸ ಅಧಿಪತ್ಯ ಆರಂಭವಾಗಿರುತ್ತದೆ.
ಮನಮೋಹನ ಸಿಂಗ್ ಚುನಾವಣೆಯ ಪ್ರಸ್ತಾಪವನ್ನೇ ಮಾಡಲಿಲ್ಲ. ಅವರ ಮೂವತ್ತು ನಿಮಿಷಗಳ ಭಾಷಣದಲ್ಲಿ ಪಾಕಿಸ್ತಾನಕ್ಕೆ ಸೂಕ್ತ ರೀತಿಯ ಉತ್ತರವನ್ನು ಕೊಡುವುದು, ಆಂತರಿಕವಾಗಿ ವಿಧ್ವಂಸಕ ಕೆಲಸಗಳಲ್ಲಿ ನಿರತರಾಗಿರುವ ತೀವ್ರಗಾಮಿಗಳ ಹಾವಳಿಯ ನಿಯಂತ್ರಣ, ಬಡತನದ ಸ್ವರೂಪ ಹಾಗೂ ಬಡವರ ಸಂಖ್ಯೆ ಕುರಿತ ವಿವಾದದ ಪ್ರಸ್ತಾಪಗಳೇ ಹೆಚ್ಚು ಗಮನ ಸೆಳೆದಿದ್ದು. ಮನಮೋಹನ ಅವರು ಪ್ರಮುಖವಾಗಿ ಪ್ರಸ್ತಾಪಿಸಿದ ವಿಚಾರವೆಂದರೆ ಈಗ ಸಂಸತ್ತಿನ ಮುಂದಿರುವ ಆಹಾರದ ಭದ್ರತೆಯ ವಿಧೇಯಕ. ಸುಮಾರು 81 ಕೋಟಿ ಭಾರತೀಯರಿಗೆ ಹಸಿವೆಯಿಂದ ಮುಕ್ತಿಯನ್ನು ಕೊಡುವ ಈ ವ್ಯವಸ್ಥೆಯನ್ನೇ ಮುಂದಿನ ಚುನಾವಣೆಯಲ್ಲಿನ ಯಶಸ್ಸಿನ ಮೆಟ್ಟಿಲೆಂದು ಈಗಿನ ಪ್ರಭುತ್ವ ನಂಬಿರುವುದನ್ನು ಪ್ರಧಾನಿ ದೃಢೀಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.