ಸ್ವಾಗತಾರ್ಹ ತುರ್ತು ಶಾಸನ
ಮೂಢನಂಬಿಕೆಗಳನ್ನು ಮಾನ್ಯ ಮಾಡುವ ವರ್ತನೆಯನ್ನು ನಿಷೇಧಿಸುವ ಮಹಾರಾಷ್ಟ್ರ ಸರ್ಕಾರದ ತುರ್ತು ಶಾಸನ ಒಂದು ರೀತಿಯಲ್ಲಿ ಭಾರತೀಯ ಜನತಂತ್ರ ವ್ಯವಸ್ಥೆಯಲ್ಲೇ ವಿಚಾರವಾದಕ್ಕೆ ತಕ್ಕ ಸ್ಥಾನ ಕೊಡುವ ಪ್ರಯತ್ನ. ಆ ದೃಷ್ಟಿಯಿಂದ ಅದು ಸ್ವಾಗತಾರ್ಹ. ದೇಶದಲ್ಲಿ ಮೂಢನಂಬಿಕೆ, ಮಾಟ - ಮಂತ್ರಗಳನ್ನು ವಿರೋಧಿಸುವ ವಿಚಾರವಾದಿ ಜನಜಾಗೃತಿ ಆಂದೋಲನಗಳಿಗೆ ದೊಡ್ಡ ಇತಿಹಾಸವೇ ಇದೆ. ಆದರೆ ಇದುವರೆಗೆ ಯಾವ ರಾಜ್ಯದಲ್ಲೂ ಮೂಢನಂಬಿಕೆಗಳ ಆಚರಣೆಯ ವಿರುದ್ಧ ಸಮಗ್ರ ಶಾಸನ ರಚನೆಯಾಗಿದ್ದಿಲ್ಲ. ಕೆಲವು ವಿಶಿಷ್ಟ ಆಚರಣೆಗಳನ್ನು ನಿಷೇಧಿಸುವ ಶಾಸನಗಳಿವೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ, ನಾಡಿನ ಭವ್ಯ ಪರಂಪರೆಯಂತೆ ಆಚರಿಸುವ ಪದ್ಧತಿಗಳಿಗೂ ಅಂಧಶ್ರದ್ಧೆಯಿಂದ ಅನಾಗರಿಕ ಪದ್ಧತಿಯ ಆಚರಣೆಗೂ ವ್ಯತ್ಯಾಸವಿದೆ ಎನ್ನುವುದನ್ನು. ಮಹಾರಾಷ್ಟ್ರದ ವಿಖ್ಯಾತ ವಿಚಾರವಾದಿ ಧಬೋಲ್ಕರ್ ಅವರ ಕ್ರೂರ ಹತ್ಯೆಯ ಅನಂತರ ದೇಶದ ನಾನಾ ಭಾಗಗಳಲ್ಲಿ ಕಂಡು ಬಂದ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಈಗಿನ ತುರ್ತು ಶಾಸನವನ್ನು ತತ್ಕ್ಷಣಕ್ಕೆ ಒಪ್ಪಬಹುದು. ಆದರೂ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ವಿಧಾನ ಮಂಡಲದ ಚರ್ಚೆಯ ಅನಂತರವೇ ಕಾಯಿದೆಯ ರಚನೆಯಾಗುವುದೇ ಸೂಕ್ತ. ದಭೋಲ್ಕರ್ ಅವರೇ ಒಂದು ವಿಧೇಯಕವನ್ನು ರಚಿಸಿದ್ದರು. ಮಹಾರಾಷ್ಟ್ರದ ತುರ್ತು ಶಾಸನ ಆ ಕರಡನ್ನು ಪರಿಶೀಲಿಸಿ, ಅದರ ಅನೇಕ ಅಂಶಗಳನ್ನು ಅಳವಡಿಸಿಕೊಂಡಿದೆ.
ಕರ್ನಾಟಕದಲ್ಲೂ ಹಿಂದೆ ಬೆಂಗಳೂರು ವಿಶ್ವ ವಿದ್ಯಾಲಯದ ಮಾಜಿ ಕುಲಾಧಿಪತಿ ಡಾ. ನರಸಿಂಹಯ್ಯ ನೇತೃತ್ವದಲ್ಲಿ ಒಂದು ವಿಚಾರವಾದಿ ಆಂದೋಲನ ನಡೆದಿತ್ತು. ಆದರೆ ಅದು ಶಾಸನ ರಚನೆಯ ಮಟ್ಟ ಮುಟ್ಟಲಿಲ್ಲ. ಈಗ ರಾಜ್ಯ ಸರ್ಕಾರವೂ ಇಂತಹ ಶಾಸನದ ರಚನೆಗೆ ಮುಂದಾಗಬೇಕು. ತುರ್ತು ಶಾಸನದ ಅಗತ್ಯವೇನೂ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

