ಸಂಪಾದಕೀಯ

ಇದು ಜನತಾಂತ್ರಿಕ ಮಾರ್ಗ ಅಲ್ಲ

Published On :

ಗುರುವಾರವೂ ಲೋಕಸಭೆಯ ಅಧಿವೇಶನ ಗದ್ದಲದಲ್ಲಿ ಮುಳುಗಿ, ಸೀಮಾಂಧ್ರ ಪ್ರದೇಶದ ಸದಸ್ಯರು ಪಕ್ಷ ಭೇದವಿಲ್ಲದೆ ಜಗಳವಾಡಿದ್ದರಿಂದ, ಯಾವ ಕಾರ್ಯಕಲಾಪವನ್ನೂ ನಡೆಸದೇ ಮುಂದಕ್ಕೆ ಹೋದ ರೀತಿ ನಿಜಕ್ಕೂ ಜನತಂತ್ರದ ದುರಂತವೇ.
  ಈಚಿನ ದಿನಗಳಲ್ಲಿ ಪ್ರತಿನಿತ್ಯ ನಡೆದಂತೆ ಸೀಮಾಂಧ್ರ ಸೀಮೆಯ ಸದಸ್ಯರು ಘೋಷಣೆಗಳನ್ನು ಕೂಗುತ್ತಾ, ಸ್ಪೀಕರ್ ಮೀರಾಕುಮಾರ್ ಅವರ ಆಸನದ ಮುಂದಿರುವ ಖಾಲಿ ಜಾಗಕ್ಕೆ ನುಗ್ಗಿ ಸ್ಪೀಕರ್ ಮೇಜಿನ ಮೇಲಿದ್ದ ಮೈಕ್ರೊಫೋನ್‌ಗಳನ್ನು ಕಿತ್ತುಹಾಕಲು ಪ್ರಯತ್ನಿಸಿದ್ದನ್ನು ಸದನದ ಸಿಬ್ಬಂದಿ ತಡೆದಿದ್ದು ಸದನದ ಇತಿಹಾಸದಲ್ಲಿ ಒಂದು ಕೆಟ್ಟ ದಾಖಲೆ. ಆಗಸ್ಟ್ ಐದರಿಂದಲೂ ಸೀಮಾಂಧ್ರ ಪ್ರದೇಶದ ಸದಸ್ಯರು ಇದೇ ರೀತಿಯ ಗದ್ದಲವನ್ನೆಬ್ಬಿಸಿ, ಆಂಧ್ರ ಪ್ರದೇಶದ ವಿಭಜನೆಯನ್ನು ಪ್ರತಿಭಟಿಸುತ್ತಿದ್ದಾರೆ. ಆದರೆ ಆ ಪ್ರತಿಭಟನೆಯ ರೀತಿ - ನೀತಿ ಲೋಕಸಭೆಯ ಅನೇಕ ನಿಯಮಗಳನ್ನು ಧಿಕ್ಕರಿಸಿ, ಉದ್ದೇಶ ಪೂರ್ವಕವಾಗಿಯೇ ದಾಂಧಲೆ ನಡೆಸಿದಂತಿತ್ತು.
  ಈ ಹಂತದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಮಲನಾಥ ಗದ್ದಲ ಮಾಡುತ್ತಿದ್ದ ಸದಸ್ಯರನ್ನು ಸದನದ ಅಧಿವೇಶನ ಮುಗಿಯುವವರೆಗೂ ಸಸ್ಪೆಂಡ್ ಮಾಡಬೇಕೆನ್ನುವ ಸೂಚನೆಯನ್ನು ಮಂಡಿಸಿದಾಗ, ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳ ಸದಸ್ಯರೂ, ಸಂಸದರನ್ನು ಸಸ್ಪೆಂಡ್ ಮಾಡುವ ಪ್ರಕ್ರಿಯೆಯನ್ನು ಪ್ರತಿಭಟಿಸಿದ್ದು ಆಶ್ಚರ್ಯವೇ.  ನಿಜ. ಈಚಿನ ದಿನಗಳಲ್ಲಿ ಸಂಸತ್ತಿನ ಸದನಗಳ ನಡವಳಿಕೆಯ ನಿಯಮಗಳನ್ನು ಉಲ್ಲಂಘಿಸಿ ಗದ್ದಲ ಮಾಡುವುದು, ಸ್ಪೀಕರ್ ಆದೇಶವನ್ನು ಧಿಕ್ಕರಿಸುವುದು ಮಾಮೂಲಿ ಎನ್ನುವಂತಾಗಿದೆ. ಆದರೂ ಕೆಲವೇ ಸದಸ್ಯರು, ಅವರಲ್ಲಿ ಕೆಲವರು ಆಡಳಿತ ಪಕ್ಷಕ್ಕೆ ಸೇರಿದ್ದರೂ, ಅವಾಂತರ ವಾತಾವರಣವನ್ನು ಸೃಷ್ಟಿಸುವುದನ್ನು ಸಹಿಸುವುದು ಸದನದ ಕಾರ್ಯಕಲಾಪ ನಡೆಸುವ ಹೊಣೆಯನ್ನು ಹೊತ್ತ ಸ್ಪೀಕರ್‌ಗೆ ಅಸಾಧ್ಯ. ಸಹನೆಗೂ ಒಂದು ಮಿತಿ ಇರಲೇಬೇಕು.
  ತೆಲಂಗಾಣ ರಾಜ್ಯ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಈಗ ತೆಲಂಗಾಣ ಹಾಗೂ ಸೀಮಾಂಧ್ರ ಪ್ರದೇಶಗಳ ಜನ ಪ್ರತಿನಿಧಿಗಳ ಉಗ್ರ ಪ್ರತಿಕ್ರಿಯೆಯ ಪ್ರದರ್ಶನದ ಹಿಂದಿರುವ ತೀವ್ರ ಸ್ವರೂಪದ ಭಾವನೆಗಳು ಅರ್ಥವಾಗುವಂತಹದ್ದು. ಆದರೆ ಸಂಸತ್ತಿನ ಸದನಗಳ ಅಧಿವೇಶನವೇ ನಡೆಯದಂತೆ ಮಾಡುವ ರೀತಿಯ ಉದ್ವೇಗದ ಪ್ರದರ್ಶನ ಜನತಾಂತ್ರಿಕ ವ್ಯವಸ್ಥೆಗೇ ಎಸೆದ ಸವಾಲು. ಅದರಲ್ಲಿ ಅನುಮಾನವೇ ಇಲ್ಲ.
  ತೆಲಂಗಾಣ ರಾಜ್ಯ ನಿರ್ಮಾಣದ ಉದ್ದೇಶವನ್ನು ಕಾಂಗ್ರೆಸ್ ಪ್ರಕಟಿಸಿದ್ದ ರೀತಿ - ನೀತಿಯೇ ಸಂಸದೀಯ ಸದನದಲ್ಲಿ ಹತ್ತಿರುವ ಬೆಂಕಿಗೆ ಕಾರಣ ಎನ್ನುವ ಆರೋಪವೂ ಇದೆ. ಪ್ರತಿಪಕ್ಷಗಳ ಸದಸ್ಯರು ಸೀಮಾಂದ್ರ ಪ್ರದೇಶದ ಸದಸ್ಯರ ವರ್ತನೆಯನ್ನು ಸಮರ್ಥಿಸುವ ರೀತಿಯಲ್ಲಿ ಅವರನ್ನು ಸಸ್ಪೆಂಡ್ ಮಾಡುವ ಅಧಿಕೃತ ನಿರ್ಣಯವನ್ನು ಪ್ರತಿಭಟಿಸಿದ ರೀತಿ-ನೀತಿಯೂ ಸಂಸದೀಯ ನಿಯಮಗಳನ್ನು ಧಿಕ್ಕರಿಸಿದಂತೆಯೇ ಕಂಡುಬಂದಿತ್ತು. ಇವೆಲ್ಲದರ ಪರಿಣಾಮವಾಗಿ ಲೋಕಸಭೆ ಗುರುವಾರ ಯಾವುದೇ ವಿಧೇಯಕವನ್ನೂ ಪರಿಶೀಲಿಸದೇ ಮುಂದಕ್ಕೆ ಹೋಯಿತು. ಇನ್ನೊಂದು ದಿನ ವ್ಯರ್ಥವಾಗಿ ಕಳೆದು ಹೋಯಿತು. ಸಂಸತ್ತಿನ ನಡವಳಿಕೆಯ ನಿಯಂತ್ರಣ ವ್ಯವಸ್ಥೆಯ ಸಾರ್ವಭೌಮಾಧಿಕಾರ ಸದನದ್ದೇ. ನಿಯಮಗಳನ್ನು ರಚಿಸಿರುವುದೂ ಸದನವೇ. ನಿಯಮಗಳ ಉಲ್ಲಂಘನೆಗೆ ಶಿಕ್ಷೆ ವಿಧಿಸುವ ಅಧಿಕಾರವೂ ಸದನದ್ದೇ.
  ಇಂತಹ ಸಾರ್ವಭೌಮಾಧಿಕಾರವನ್ನು ಸಂವಿಧಾನದಲ್ಲಿ ಸಂಸದೀಯ ಸದನಗಳಿಗೆ ನೀಡಿದ ಉದ್ದೇಶ, ಅಲ್ಲಿ ಯಾವ ಜನವರ್ಗದ ಸದಸ್ಯರ ಹಕ್ಕಿಗೂ ಹೊರಗಿನವರಿಂದ ಚ್ಯುತಿ ಬರಬಾರದು ಎನ್ನುವುದೇ. ಗುರುವಾರ ಸದನದಲ್ಲಿ ನಡೆದಿದ್ದು ಸದನದ ಒಂದು ದೊಡ್ಡ ಭಾಗದ ಸದಸ್ಯರು ಎಲ್ಲ ನಿಯಮಗಳನ್ನೂ ಸಾರಾಸಗಟು ತಿರಸ್ಕರಿಸಿದವರ ವರ್ತನೆಯನ್ನೇ ಬೆಂಬಲಿಸಿದಂತೆ ಆಗಿದೆ. ಹಾಗಿದ್ರೆ ಲೋಕಸಭೆಗೆ ನಿಯಮಾವಳಿಯಾದರೂ ಯಾಕೆ ಬೇಕು?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.