ತಪ್ಪಾಯ್ತು ತಿದ್ಕೋತೀವಿ
ಉತ್ತರ ಕನ್ನಡದ ಹೊನ್ನಾವರದಿಂದ ಶಂಕರನಾರಾಯಣ ಭಟ್ ಅವರು ಬರೆಯುತ್ತಾರೆ- 'ಆ.19ರ ಸಂಪಾದಕೀಯದಲ್ಲೇ ಆದ ತಪ್ಪುಗಳು ತೀರ ಬೇಸರ ತಂದಿವೆ. ನಾಲ್ಕನೇ ಪ್ಯಾರಾದಲ್ಲಿ 'ಕೋಲ್ ಇಂಡಿಯಾ ಲಿಮಿಟೆಡ್' ಎಂಬುದನ್ನು 'ಕೋಲಿಂಡಿಯಾ ಲಿಮಿಟೆಡ್' ಅಂತ ಬರೆದಿದ್ದೀರಿ. ಇದು ಸರಿಯೇ?'
'ಐದನೇ ಪ್ಯಾರಾದಲ್ಲಿ 'ಸರ್ಕಾರ ಫೈಲುಗಳು ಕಳೆದು ಹೋಗಿರುವ ಪ್ರಕರಣದ ತನಿಖೆಗೆ ಕಲ್ಲಿದ್ದಲು ಮಂತ್ರಾಲಯದ ಅಡಿಷನಲ್ ಕಾರ್ಯದರ್ಶಿಯ ನೇತೃತ್ವದಲ್ಲಿ ಒಂದು ತನಿಖಾ ಸಮಿತಿಯನ್ನು ನೇಮಿಸಿ, ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಿಲ್ಲ ಎಂದು ಹೇಳಿ ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸಿದ್ದಾರೆ' ಅಂತ ಬರೆಯಲಾಗಿದೆ. 'ಸರ್ಕಾರ ಪ್ರದರ್ಶಿಸಿದೆ' ಅಂತಾಗಬೇಕಿತ್ತೋ ಏನೋ?'
'ಅದೇ ಪ್ಯಾರಾದಲ್ಲಿ 'ಅದಕ್ಕೆ ಕಾರಣ ಈ ಅವ್ಯವಹಾರದಲ್ಲಿ ಯಾವುದೋ ಉನ್ನತ ಮೂಲದ ಶಕ್ತಿಗೂ ಪ್ರವೇಶವಾಗಿದೆ ಎಂದಾಯಿತು' ಎಂಬಲ್ಲಿ ಇಲ್ಲಿ ಶಕ್ತಿಯು ಆಗಬೇಕಿತ್ತು. ಪುಟ 9 'ಎಲ್ಲಿ ಹೋಯಿತು ಸಾಮಾಜಿಕ ಕಳಕಳಿ' ಶೀರ್ಷಿಕೆ, ಎರಡನೇ ಪ್ಯಾರಾ 6ನೇ ಸಾಲು... 'ಜನಗರೂ ಸಹಾಯಕ್ಕೆ ಬರಲಿಲ್ಲ' ಅಂತ ಬರೆದಿದ್ದೀರಿ. ಇದು ಜನರೂ ಆಗಬೇಕಿತ್ತು.'
'ಪುಟ 14ರಲ್ಲಿ 'ಭಾರತ ವಿರೋಧಿಗಳ ಆಪ್ತ' ಶೀರ್ಷಿಕೆ 7ನೇ ಸಾಲು 'ಉಗ್ರರ ಜಂತೆ ನಿಕಟನಂಟು' ಅಂತಾಗಿದೆ. ಕೊನೆಯ ಪ್ಯಾರಾ... 'ಪದೇ ಪದೆ ಓಡಾಡುತ್ತಿದ್ದ ವಿಚಾರ ಗುಪ್ತಚರ ದಳಕ್ಕೆ ಗಮನಕ್ಕೆ ಬಂದಿತ್ತು' ಅಂತಾಗಿದೆ. ಗುಪ್ತಚರ ದಳದ ಗಮನಕ್ಕೆ ಅಂತಾಗಬೇಕಿತ್ತು' ಎಂದಿದ್ದಾರೆ.
ತೀರ್ಥಹಳ್ಳಿಯಿಂದ ಕುತ್ಪಾಡಿ ಜಯಪ್ರಕಾಶ ಹೆಗ್ಡೆ ಅವರು ಬರೆಯುತ್ತಾರೆ- 'ಆ.6ರ ಪತ್ರಿಕೆಯಲ್ಲಿ ಜೂ. ಅಥ್ಲೆಟಿಕ್ಸ್ ಕೂಟದ ಫಲಿತಾಂಶ ಶಿರೋನಾಮೆಯಲ್ಲಿ 18 ವರ್ಷದೊಳಗಿನ ಬಾಲಕಿಯರ 5 ಸಾವಿರ ಮೀ. ನಡಿಗೆಯಲ್ಲಿ 'ಬೆಂಗಳೂರಿನ ಸಾಯಿ ಕೇಂದ್ರದ ಪ್ರತೀಕ್ಷಾ ಪ್ರಥಮ ಎಂದಿದೆ. ಕೆಳಗಡೆ ಫೋಟೋದಲ್ಲಿ 5 ಸಾವಿರ ಮೀ. ನಡಿಗೆಯಲ್ಲಿ ಕೂಟ ದಾಖಲೆ ಸ್ಥಾಪಿಸಿದ ಆಳ್ವಾಸ್ನ ಪ್ರತೀಕ್ಷಾ' ಎಂದು ಅಚ್ಚಾಗಿದೆ. ಯಾವುದು ಸರಿ?' ಎಂದಿದ್ದಾರೆ.
ಶಿವಮೊಗ್ಗದಿಂದ ಮಧು ಅವರು ಬರೆಯುತ್ತಾರೆ- 'ಆ.20ರಂದು ಅಚಾನಕ್ ಆಗಿ ಶಿವಮೊಗ್ಗ ಮತ್ತು ಬೆಂಗಳೂರು ಎರಡೂ ಆವೃತ್ತಿಯ 'ಕನ್ನಡಪ್ರಭ' ಪತ್ರಿಕೆ ನನ್ನ ಕೈಲಿತ್ತು. ಬೆಂಗಳೂರು ಪತ್ರಿಕೆ ಶೀರ್ಷಿಕೆಯಲ್ಲಿ 'ರೈಲಿಗೆ 37 ಬಲಿ', ಶಿವಮೊಗ್ಗ ಪತ್ರಿಕೆ ಶೀರ್ಷಿಕೆ 'ರೈಲಿಗೆ 28 ಬಲಿ' ಎಂದಿದೆ. ಇವೆರಡರಲ್ಲಿ ಯಾವ ಸುದ್ದಿ ಸರಿ?' ಎಂದಿದ್ದಾರೆ.
ಎರಡೂ ಸುದ್ದಿಯೂ ಸರಿಯೇ. ಪ್ರತಿ ದಿನವೂ ಶಿವಮೊಗ್ಗ ಅಥವಾ ಹೊರಗಿನ ಆವೃತ್ತಿಗೂ ಬೆಂಗಳೂರು ಆವೃತ್ತಿ ಪತ್ರಿಕೆಗೂ ವ್ಯತ್ಯಾಸ ಇದ್ದೇ ಇರುತ್ತದೆ. ಶಿವಮೊಗ್ಗ ಆವೃತ್ತಿ ಮೊದಲೇ ಮುದ್ರಣಗೊಳ್ಳುತ್ತದೆ. ಬೆಂಗಳೂರು ನಗರ ಆವೃತ್ತಿ ಮುದ್ರಣ ತಡವಾಗಿ ನಡೆಯುತ್ತದೆ. ಆದ್ದರಿಂದ ಸುದ್ದಿಯಲ್ಲಾದ ಬೆಳವಣಿಗೆಗಳನ್ನು ಸುದ್ದಿಗೆ ಸೇರಿಸಿ, ಮುದ್ರಣಕ್ಕೆ ಕಳುಹಿಸಲು ಅವಕಾಶವಿರುತ್ತದೆ.
ದೊಡ್ಡ ಘಟನೆಗಳು ಸಂಭವಿಸಿದಾಗ ಕ್ಷಣ ಕ್ಷಣಕ್ಕೂ ಹೊಸ ಮಾಹಿತಿಗಳು ಬರುತ್ತಿರುತ್ತವೆ. ಆದ್ದರಿಂದ ಶಿವಮೊಗ್ಗ ಆವೃತ್ತಿ ಮುದ್ರಣಕ್ಕೆ ಹೋದ ನಂತರ ದೊರೆತ ಮಾಹಿತಿಗಳನ್ನು ಬೆಂಗಳೂರು ಆವೃತ್ತಿಗೆ ಸೇರಿಸಲಾಗಿರುತ್ತದೆ. ಆದ್ದರಿಂದ ವ್ಯತ್ಯಾಸ ಕಾಣಿಸುತ್ತದೆ. ಹಾಗಂತ ಶಿವಮೊಗ್ಗ ಆವೃತ್ತಿಯಲ್ಲಿ ಬಂದ ಸುದ್ದಿ ತಪ್ಪಲ್ಲ.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

