ಸಂಪಾದಕೀಯ

ಬ್ಯಾಂಕಿನ ಸಾಲದ ಬಡ್ಡಿ ಬರೆ

Published On :

ಪ್ರತಿ ದಿನದ ಪತ್ರಿಕೆಗಳನ್ನು ಓದುವಾಗ ಸಾರ್ವಜನಿಕ ಸಾಲ ನೀಡುತ್ತಿರುವ ಬ್ಯಾಂಕುಗಳು ಕೋಟಿ ಕೋಟಿ ಲಾಭ ಗಳಿಸುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಸ್ಟೇಟ್ ಬ್ಯಾಂಕ್ 715 ಕೋಟಿ ಲಾಭ, ಕಾರ್ಪೋರೇಷನ್ ಬ್ಯಾಂಕ್ 620 ಕೋಟಿ ಲಾಭ, ಸಿಂಡಿಕೇಟ್ ಬ್ಯಾಂಕ್ 675 ಕೋಟಿ ಲಾಭ, ಕೆನರಾ ಬ್ಯಾಂಕ್ 700 ಕೋಟಿ ಲಾಭ, ಗ್ರಾಮೀಣ ಬ್ಯಾಂಕುಗಳಿಗೆ ಕೋಟಿ ಕೋಟಿ ಲಾಭ! ಜೀವನದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ, ಮನೆ ಸಾಲ, ವಾಹನ ಸಾಲ, ಬೆಳೆಸಾಲ, ವೈದ್ಯಕೀಯ ಉಪಚಾರಕ್ಕಾಗಿ ಸಾಲ. ಹೀಗೇ ಸಾಲ, ಸಾಲ, ಸಾಲ. ಜನಸಾಮಾನ್ಯನ ಜೀವನವೇ ಸಾಲದಲ್ಲಿ ಮುಳುಗಿರುವಾಗ -ಬ್ಯಾಂಕುಗಳು ಕೋಟಿ, ಕೋಟಿ ಲಾಭ ದೋಚುತ್ತಿರುವುದನ್ನು ಗಮನಿಸಿದರೆ- ಸಾಲಗಾರ ಯಾವ ರೀತಿ ಬಡ್ಡಿ ಹಣವನ್ನು ಬ್ಯಾಂಕುಗಳಿಗೆ ಭರಿಸುತ್ತಾನೆ ಹಾಗೂ ಬ್ಯಾಂಕುಗಳು ಯಾವ ಪರಿ ಸಾಲಗಾರನ ಜೀವ ಹಿಂಡುತ್ತಿವೆ ಎಂಬುದು ತಿಳಿದು ಬರುತ್ತದೆ.   ಬ್ಯಾಂಕ್ ಅಧಿಕಾರಿಗಳು, ನೌಕರರುಗಳಿಗೆ ಕೈ ತುಂಬಾ ಸಂಬಳ. ವಿವಿಧ ಅನವಶ್ಯಕ ಸೌಲಭ್ಯಗಳು, ವೈಭವೋಪೇತ ಜೀವನ ಇವೆಲ್ಲಾ ಬಡ್ಡಿ ತುಂಬುವ ಸಾಲಗಾರನ ಋಣವಾಗಿರುತ್ತದೆ. ಬಡ ರೈತನು ಬೆಳೆ ಸಾಲ ಮಾಡಿ, ಬೆಳೆ ಕೈಗೆ ಸಿಗದೆ ಬ್ಯಾಂಕಿನ ಸಾಲ ಬಡ್ಡಿ ತುಂಬಲಾಗದೇ, ಹೆಂಡತಿ ಮಕ್ಕಳನ್ನು ಬೀದಿಗೆ ತಳ್ಳಿ, ನಿರ್ಗತಿಕರನ್ನಾಗಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನಲ್ಲಾ, ಆಗ ಬ್ಯಾಂಕಿನವರಿಗೆ ತಾವು ಕೋಟಿ ಕೋಟಿ ಲಾಭ ಮಾಡಿಕೊಳ್ಳುವ ಬದಲು, ಜನಸಾಮಾನ್ಯರಿಗೆ ಹೊರೆಯಾಗದ ಹಾಗೆ -ಯೋಗ್ಯದರದಲ್ಲಿ ಬಡ್ಡಿ ತೆಗೆದುಕೊಂಡರೆ ಜನಸಾಮಾನ್ಯರ, ಸಾಲಗಾರನ ಜೀವನ ಸುಧಾರಿಸಲು ಸಹಾಯ ಮಾಡಿದಂತಾಗುವುದೆಂಬ ಅರಿವಾಗುವುದಿಲ್ಲವೇ? ಸಾಲಗಾರನನ್ನು ಹಣ್ಣುಗಾಯಿ, ನೀರುಗಾಯಿ ಮಾಡಿ, ಜೀವನ ಸರ್ವನಾಶ ಮಾಡಿ ಕೋಟಿ ಕೋಟಿ ಲಾಭ ಗಳಿಸುವುದು ಯಾವ ಪುರುಷಾರ್ಥಕ್ಕೆ? ಮಾರಾಯ್ರೇ!   ಅವಶ್ಯಕ, ಅನಿವಾರ್ಯ ಕಾರಣಕ್ಕಾಗಿ ಸಾಲ ಪಡೆದ ಸಾಲಗಾರನು, ಜೀವನಪೂರ್ತಿ ಸಾಲ/ಬಡ್ಡಿ ಕಟ್ಟುವುದರಲ್ಲೇ ಜೀವನ ಮುಕ್ತಾಯಗೊಳಿಸುತ್ತಿದ್ದಾನೆಂಬ ಕಠೋರ ಸತ್ಯವನ್ನು ಬ್ಯಾಂಕಿನವರಿಗೆ -ಅರ್ಥವಾದ ದಿನ, ಸಾಲಗಾರನ ಜೀವನ ಸುಧಾರಿಸಬಹುದೇನೋ?
 - ಕೆ.ಎಸ್. ಭಟ್ಟ, ಕುಮಟಾ

ಫೈಲುಗಳು ಮಾಯ ಮಾಡಿದ ಭ್ರಷ್ಟರು
'ಮೆಗಾ ಸೀರಿಯಲ್‌'ಗಳಂತೆ ಪ್ರಸಾರವಾದ ರಾಶಿ -ರಾಶಿ ಹಗರಣಗಳು, ಇವುಗಳ ಆಳ-ಅಗಲಗಳನ್ನು ಕಂಡು ಹಿಡಿಯಲು ನೇಮಕಗೊಂಡು ನಡೆಸಿದ ತನಿಖೆಗಳು-ಇವು ಒಂದು ರೀತಿ 'ಚೊಂಬು ಹೋಗಿದ್ದಕ್ಕೆ ಗಂಗಳ ಕೊಟ್ಟು ಕಣಿ ಕೇಳಿದ್ರು' -ಎಂಬ ಗಾದೆಯಂತಾದವು. ಪಾಪ! ತನಿಖೆ ನಡೆಸಲು ಹಗಲಿರುಳು ಕಷ್ಟಪಟ್ಟು, ನೂರಾರು-ಸಾವಿರಾರು ಪುಟಗಳ ತನಿಖಾ ವರದಿಯನ್ನು ತಯಾರಿಸಿದ ತನಿಖಾ ತಂಡಗಳ ಶ್ರಮ 'ನೀರಿನಲ್ಲಿ ಹುಣಸೇಹಣ್ಣು ತೊಳೆದಂತಾಗಿದೆ.' ಕಾರಣ, ಇದುವರೆಗೂ ಕೇವಲ ಬೆರಳೆಣಿಕೆಯ ಮಂದಿಗಷ್ಟೇ ಅಲ್ಪ ಬಿಸಿ ತಟ್ಟಿದೆ. ಪೂರ್ಣಪ್ರಮಾಣದಲ್ಲಿ ಯಾರಿಗೂ ಶಿಕ್ಷೆಯಾಗುತ್ತಿಲ್ಲ. ಇದಕ್ಕಿಂತ ದುರಂತವೆಂದರೆ, ಪ್ರಮುಖ ತನಿಖಾ ವರದಿಯ ಫೈಲುಗಳೇ ಕಾಣೆಯಾಗಿರುವುದು ಭ್ರಷ್ಟಾಚಾರದ ಮತ್ತೊಂದು ಮಗ್ಗುಲನ್ನು ಪರಿಚಯಿಸಿವೆ. ಇದರ ಜೊತೆಗೆ ಧೂಳು ಹಿಡಿದಿರುವ ಫೈಲುಗಳ ಲೆಕ್ಕವಂತೂ ಚಿತ್ರಗುಪ್ತನಿಗೂ ನಿಲುಕದು!
'ಮಾಹಿತಿಹಕ್ಕು ಕಾಯಿದೆ'ಯಿಂದ ನುಣುಚಿಕೊಳ್ಳುವಲ್ಲಿ, ತಮ್ಮ ವೇತನವನ್ನು ದುಪ್ಪಟ್ಟು ಮಾಡಿಕೊಳ್ಳುವಲ್ಲಿ, ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ರಕ್ಷಿಸಿಕೊಳ್ಳುವಲ್ಲಿ ತೋರುವ ರಾಜಕೀಯ ಪಕ್ಷಗಳ ಒಗ್ಗಟ್ಟು, ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಏಕಿಲ್ಲ?
- ಮಾಗಡಿ ಶ್ರೀನಿವಾಸ್, ಬಾಳೆಕಟ್ಟೆ, ರಾಮನಗರ ಜಿಲ್ಲೆ


-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.