ಸಂಪಾದಕೀಯ

ಬಡವರಿಗೆ ಕರುಣೆ ತೋರಿಸಿ

Published On :

ಚಾಣಾಕ್ಷತನಕ್ಕೆ ಹೆಸರಾದ ಕೇಂದ್ರ ವಿತ್ತ ಸಚಿವ ಕೆ.ಚಿದಂಬರಂ ನಾಳೆಯ ಪ್ರಯೋಗಕ್ಕೆ ಇಂದೇ ಸೂಕ್ತ ಸೂಚನೆಯನ್ನು ನೀಡುವುದರಲ್ಲಿ ನಿಷ್ಣಾತರು. ಗುರುವಾರ ಅವರು ವಿತ್ತ ಮಂತ್ರಾಲಯದ ವ್ಯವಹಾರಗಳಿಗೆ ಸಂಬಂಧಿಸಿದ ಸಂಸದೀಯ ಸಮಿತಿಯಲ್ಲಿ ಸದ್ಯದ ಆರ್ಥಿಕ ಬಿಕ್ಕಟ್ಟಿನ ವಿಚಾರವನ್ನು ಪ್ರಸ್ತಾಪಿಸಿ, ಸೂಚ್ಯವಾಗಿ ಬ್ಯಾಂಕ್‌ಗಳ ಬಡವರ ಸಾಲ ಮನ್ನಾ ಆಗಬಹುದಾದ ಇಂಗಿತವನ್ನು ನೀಡಿದ್ದಾರೆ.
ಅವರೇನೂ ಅದನ್ನು ನೇರವಾಗಿ ಹೇಳಿಲ್ಲ. ಕಷ್ಟಕಾಲದಲ್ಲಿ ಬಡವರೇ ಹೆಚ್ಚಿನ ಕಷ್ಟವನ್ನು ಅನುಭವಿಸುವುದು ಸಹಜ. ತಮ್ಮ ಜೀವನದ ಅಗತ್ಯಗಳಿಗಾಗಿ ಅನೇಕರು ಬ್ಯಾಂಕ್‌ಗಳಿಂದ ಅಲ್ಪಾವಧಿ ಸಾಲವನ್ನು ಪಡೆದಿದ್ದಾರೆ. ಈಗಿನ ಕಷ್ಟ ಕಾಲದಲ್ಲಿ ಅವರಿಗೆ ಬದುಕುವುದೇ ದುರ್ಬರವಾಗಿರುವಾಗ ಹಿಂದಿನ ಸಾಲ - ಬಡ್ಡಿಯ ಕಂತುಗಳನ್ನು ಕಟ್ಟುವುದು ಕಡು ಕಷ್ಟವಾಗುತ್ತದೆ. ಬ್ಯಾಂಕ್‌ಗಳು ಆ ಜನವರ್ಗದ ವಿಚಾರದಲ್ಲಿ ಸಹಾನುಭೂತಿಯಿಂದ ಕರುಣೆಯನ್ನು ತೋರಿಸಬೇಕು ಎನ್ನುವ ಅರ್ಥಬರುವ ರೀತಿಯಲ್ಲಿ ದೇಶದ ವಿತ್ತ ಮಂತ್ರಿ ಮಾತಾಡಿದರೆ ಅದು ನೀಡುವ ಸಂದೇಶವಾದರೂ ಏನು ?
ಇದೇನೂ ನಮ್ಮ ದೇಶಕ್ಕೆ ಹೊಸದಲ್ಲ. ಚುನಾವಣೆ ಸಮಯದಲ್ಲಿ ವೋಟು ಬ್ಯಾಂಕ್‌ಗಳ ಜನ ಸಮುದಾಯಗಳಿಗೆ ಸಾಲಮನ್ನ, ಬಡ್ಡಿ ವಿನಾಯಿತಿಯಂತಹ ಸೌಲಭ್ಯಗಳನ್ನು ಪ್ರಕಟಿಸುವುದು ವಾಡಿಕೆ. ಆದರೆ ಚಿದಂಬರಂ ಅವರಂತಹ ಬುದ್ಧಿವಂತರು, ಸೂಚ್ಯವಾಗಿ, ಬಡವರು ಈಗ ಕರುಣೆಗೆ ಅರ್ಹರು ಎಂದು ಹೇಳಿದರೆ ಸಾಲದೇ? ಈ ಹೇಳಿಕೆಯನ್ನೇ ಆಳುವ ಕೂಟದ ಪಕ್ಷಗಳ ಕಾರ್ಯಕರ್ತರು ಊರೂರುಗಳಲ್ಲಿ ಬಡವರಿಗೆ ಬ್ಯಾಂಕ್ ಸಾಲ ಮನ್ನಾ ಆಗಲಿದೆ ಎನ್ನುವ ಫಲಕಗಳನ್ನು ಪ್ರದರ್ಶಿಸುವುದು ಖಚಿತ. ಪ್ರತಿಪಕ್ಷಗಳೂ ಅದನ್ನು ವಿರೋಧಿಸುವುದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.