ಸಂಪಾದಕೀಯ

ಭಿಕ್ಷುಕನಿಗೆ ನಮಸ್ಕರಿಸಿದ ಸ್ವಾಮೀಜಿ

Published On :

ಋಷಿಕೇಶದ ಶಿವಾನಂದಾಶ್ರಮದ ಮುಖ್ಯಸ್ಥರಾಗಿ ಸ್ವಾಮಿ ಚಿದಾನಂದರಿದ್ದರು. ಅವರು ಮೂಲತಃ ಕರ್ನಾಟಕದವರೇ. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಮಾಡಿ ನಂತರ ಮದ್ರಾಸಿನಲ್ಲಿ ಬಿ.ಎ.ಪದವಿ ಗಳಿಸಿದರು. ಪ್ರಾಣಿ-ಪಕ್ಷಿಗಳೆಂದರೆ ಅವರಿಗೆ ತುಂಬಾ ಕಾಳಜಿ. ಗಾಯಗೊಂಡ ಬೀದಿನಾಯಿಗಳಿಗೆ, ಪೆಟ್ಟುತಿಂದ ಅನೇಕ ಪಕ್ಷಿಗಳಿಗೆ ಅವರು ಶುಶ್ರೂಷೆ ಮಾಡಿ ಸಂತೋಷಿಸುತ್ತಿದ್ದರು. ಅದೇ ರೀತಿ ರೋಗಿಗಳು, ದುರ್ಬಲರನ್ನು ಕಂಡರೂ ಅವರಿಗೆ ತಮ್ಮ ಕೈಲಾದ ಸೇವೆ ಮಾಡುತ್ತಿದ್ದರು. ಅವರಿಗೆ ಆಧ್ಯಾತ್ಮದ ಕಡೆ ಒಲವಿದ್ದುದರಿಂದ  ಶಿವಾನಂದಾಶ್ರಮವನ್ನು ಸೇರಿದರು. ಅಲ್ಲಿ 1949ರಲ್ಲಿ ಸ್ವಾಮಿ ಶಿವಾನಂದರಿಂದ ಸನ್ಯಾಸ ಸ್ವೀಕರಿಸಿ ಅಲ್ಲಿಯೇ ನೆಲಸಿದರು. ಮುಂದೆ ದಿವ್ಯ ಜೀವನ ಸಂಘದ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದರು.
ಒಮ್ಮೆ ಸ್ವಾಮಿ ಚಿದಾನಂದರು ಕರ್ನಾಟಕಕ್ಕೆ ಭೇಟಿನೀಡಿದಾಗ ಚಿಕ್ಕಮಗಳೂರಿಗೂ ಭೇಟಿ ಇತ್ತಿದ್ದರು. ಅವರನ್ನು ಸ್ವಾಗತಿಸಲು ಪ್ರಭಾವಿ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಊರಿನ ಗಣ್ಯರು, ವೇದಘೋಷಕರು, ನಾಗಸ್ವರದವರು, ಪೊಲೀಸು ಅಧಿಕಾರಿಗಳು ಮುಂತಾದ ಸಮಾಜದ ಶ್ರೇಷ್ಠರು ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕಮಗಳೂರಿನ ಬಸ್ ನಿಲ್ದಾಣದ ಬಳಿ ಕಾದು ನಿಂತಿದ್ದರು. ಚಿದಾನಂದರು ಕಾರಿನಿಂದ ಇಳಿಯಬೇಕು ಅಷ್ಟರಲ್ಲಿ ಒಬ್ಬ ಹೆಳವ ಭಿಕ್ಷುಕ ತೆವಳುತ್ತಾ ರಸ್ತೆಯಲ್ಲಿ ಸಾಗುತ್ತಿದ್ದ. ರಸ್ತೆಗೆ ಅಡ್ಡಬಂದ ಅವನನ್ನು ವಾಚಾಮಗೋಚರವಾಗಿ ಬಯ್ಯುತ್ತಾ ಪೊಲೀಸರು ದರ್ಪದಿಂದ ಅವನನ್ನು ದರದರನೆ ಎಳೆದುಹಾಕಿ ಸ್ವಾಮಿಗಳಿಗೆ ದಾರಿ ಮಾಡಿಕೊಡುವ ಸನ್ನಾಹದಲ್ಲಿದ್ದರು.
ಅಸಹಾಯಕ ಭಿಕ್ಷುಕ ಮಾತ್ರ ತನ್ನ ಮೇಲೆ ಕರುಣೆ ತೋರಬೇಕೆಂದು ಅಂಗಲಾಚುವ ದೃಶ್ಯ ಚಿದಾನಂದರ ದೃಷ್ಟಿಗೆ ಬಿತ್ತು. ಅವರಿಗೆ ತಡೆಯಲಾಗಲಿಲ್ಲ. ಕಾರಿನಿಂದಿಳದವರೇ ಆ ಕೊಳಕು ಭಿಕ್ಷುಕನ ಬಳಿ ಬಂದು ತಮ್ಮ ಕಮಂಡಲದಲ್ಲಿದ್ದ ಗಂಗಾಜಲದಿಂದ ಆತನ ಮುಖ ತೊಳೆದು, ತಾವು ಹೊದ್ದಿದ್ದ ಬೆಲೆಬಾಳುವ ಶಾಲನ್ನು ಅವನಿಗೆ ಹೊದಿಸಿ, ತಮ್ಮ ಕಾರಿನಲ್ಲಿದ್ದ ಹಣ್ಣುಗಳನ್ನೆಲ್ಲ ಅವನಿಗೆ ನೀಡಿ, ಕೈಲಿದ್ದ ಹಣ ನೀಡಿ ನಮಸ್ಕರಿಸಿದರು. ಇದನ್ನು ನೋಡುತ್ತಿದ್ದ ಅಪಾರ ಜನರು ಸ್ವಾಮೀಜಿಯವರ ಕರುಣಾಪೂರ್ಣ ನಡವಳಿಕೆಯನ್ನು ಕಂಡು ಮೂಕವಿಸ್ಮಿತರಾದರು.
ಆ ಭಿಕ್ಷುಕ ಸ್ವಾಮೀಜಿಯ ಕಾಲುಗಳನ್ನು ಹಿಡಿದು, ಗಂಗೆಯಿಂದ ನನ್ನನ್ನು ಪಾವನಗೊಳಿಸಿದ ಮೇಲೆ ನನಗಿಲ್ಲಿ ಇನ್ನೇನು ಕೆಲಸ ಎಂದುಕೊಂಡು ಬದಿಗೆ ಸರಿದು ಹೋದ. ಕಾರ್ಯಕ್ರಮ ಮುಗಿಸಿ ಚಿದಾನಂದರು ವಾಪಸ್ಸು ಹೋಗುವಾಗ ಆ ಭಿಕ್ಷುಕ ಕುಳಿತಿದ್ದ ಜಾಗವನ್ನು ನೋಡಿದಾಗ ಅಲ್ಲಿ ಆತ ಕಾಣಿಸಲಿಲ್ಲ. ಸ್ವಲ್ಪ ಮುಂದೆ ಹೋಗಿ ಮೋರಿಯ ಬಳಿ ಆತ ಅಸುನೀಗಿದ್ದ! ಚಿದಾನಂದರು ಋಷಿಕೇಶಕ್ಕೆ ತೆರಳಿದರೆ, ಆ ಭಿಕ್ಷುಕ ನೇರವಾಗಿ ಕೈಲಾಸ ಸೇರಿದ್ದ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.