ಕೇಂದ್ರ ಕೊಟ್ಟರೂ ರಾಜ್ಯ ಕೊಡದು
ದೇಶಾದ್ಯಂತ ಇರುವ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಶಿಕ್ಷಕರಿಗೆ ಕೇಂದ್ರ ಸರ್ಕಾರವು 2006ರಿಂದ ಅನ್ವಯವಾಗುವಂತೆ ನೂತನ ಯು. ಜಿ. ಸಿ. ವೇತನಶ್ರೇಣಿಯನ್ನು ಜಾರಿಗೊಳಿಸಿರುವುದು ಸರಿಯಷ್ಟೆ. ಅದನ್ನನುಸರಿಸಿ ನಮ್ಮ ರಾಜ್ಯಸರ್ಕಾರವೂ 2009 ರಲ್ಲಿ ಪೂರ್ವಾನ್ವಯವಾಗಿ ಈ ಆದೇಶವನ್ನು ಜಾರಿಗೆ ಕೊಟ್ಟು ಕಾಲೇಜು ಶಿಕ್ಷಕರ ಕೃತಜ್ಞತೆಗೆ ಪಾತ್ರವಾಯಿತು. ಇದರಲ್ಲಿ ಮೊದಲ ಐದು ವರ್ಷಗಳ ಸಂಪೂರ್ಣ ವೆಚ್ಚವನ್ನು ಯು.ಜಿ.ಸಿಯೇ ಅಂದರೆ ಕೇಂದ್ರಸರ್ಕಾರವೇ ಭರಿಸಲಿದೆ. ರಾಜ್ಯಸರ್ಕಾರ ವೇತನಶ್ರೇಣಿಯನ್ನು ಜಾರಿಗೊಳಿಸಿತೇ ಹೊರತು 2006 ರಿಂದ 2009 ರ ವರೆಗಿನ ವೇತನಬಾಕಿಯನ್ನು ಇದುವರೆಗೂ ನೀಡಿಲ್ಲ. ರಾಷ್ಟ್ರದ ಬಹುತೇಕ ರಾಜ್ಯಗಳು ಈಗಾಗಲೇ ಈ ವೇತನಬಾಕಿಯನ್ನು ನೀಡಿವೆ. ಕಾಲೇಜು ಶಿಕ್ಷಕರು ಹಿಂದಿನ ಸರ್ಕಾರಕ್ಕೆ ಮತ್ತು ಈಗಿನ ಸರ್ಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿದ್ದಾಗ್ಯೂ ಕರ್ನಾಟಕ ಸರ್ಕಾರ ಏನೇನೊ ಕುಂಟುನೆಪಗಳನ್ನು ಹೇಳುತ್ತ ವೇತನಬಾಕಿಯನ್ನು ನೀಡದೆ ಸತಾಯಿಸುತ್ತ ಬಂದಿರುವುದು ಏಕೆಂದೇ ಅರ್ಥವಾಗುತ್ತಿಲ್ಲ. ಕೇಂದ್ರಸರ್ಕಾರ ಆ ಸಮಸ್ತ ವೆಚ್ಚವನ್ನು ಕೂಡಲೇ ತುಂಬಿಕೊಡುತ್ತದಾದ ಕಾರಣ ಇದರಲ್ಲಿ ರಾಜ್ಯಸರ್ಕಾರ ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಬದಲಿಗೆ ಯಾವ ಸದುದ್ದೇಶದಿಂದ ಇದನ್ನು ಕೇಂದ್ರ ಜಾರಿಗೊಳಿಸಿದೆಯೋ ಅದನ್ನು ತಾನೂ ಜಾರಿಗೊಳಿಸಿದ ಕೀರ್ತಿ ಗಳಿಸುವುದರ ಜೊತೆಗೆ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಶಿಕ್ಷಕರ ವಿಶ್ವಾಸವನ್ನು ಗಳಿಸುವುದು. ಆದ್ದರಿಂದ ಕೇಂದ್ರದ ದೇವರು ವರ ಕೊಟ್ಟಮೇಲೂ ರಾಜ್ಯಸರ್ಕಾರ, ವರ ಕೊಡದಿರುವ ಪೂಜಾರಿ ಆಗದಿರಲೆಂದು ಆಶಿಸುತ್ತೇನೆ.
-ಡಾ. ಆರ್. ಲಕ್ಷ್ಮೀನಾರಾಯಣ, ಬೆಂಗಳೂರು
ಮಠ, ಸಮುದಾಯ ಭವನಗಳಿಗೆ ಹಣ ಬೇಕೆ?
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಎಚ್ ಆಂಜನೇಯ ಅವರು ಹಿಂದುಳಿದ ವರ್ಗಗಳ ಸಮುದಾಯ ಭವನ ನಿರ್ಮಾಣಕ್ಕೆ ಮತ್ತು ಮುಸ್ಲಿಂ ಸಮುದಾಯದ ಶಾದಿ ಮಹಲ್ ನಿರ್ಮಾಣಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ತಲಾ 1 ಕೋಟಿ ಹಾಗು 50 ಲಕ್ಷ ರುಪಾಯಿ ಹೆಚ್ಚುವರಿ ಹಣ ನೀಡಲಾಗುವುದು ಎಂದು ಪ್ರಕಟಿಸಿರುವುದು ಅನವಶ್ಯಕ. ಪ್ರಕಟಿಸುವ ಮುನ್ನ ಈ ಸಮುದಾಯ ಭವನಗಳಿಗೆ ಹೆಚ್ಚುವರಿ ಹಣದ ಅವಶ್ಯಕತೆ ಇದೆಯೇ ಎಂದು ಯೋಚಿಸಿದ್ದರೆ ಒಳಿತಿತ್ತು. ಕೋಟಿಗಟ್ಟಲೇ ಹಣ ಸುರಿದು ಸಮುದಾಯ ಭವನಗಳನ್ನು ನಿರ್ಮಿಸಿ ವರ್ಷದ ಎಲ್ಲೋ ಕೆಲ ದಿನಗಳು ಮಾತ್ರವೇ ಬಳಕೆಯಾಗುತ್ತಿರುವ ಭವನಗಳೇ ಹೆಚ್ಚಿವೆ. ಈ ನಿಟ್ಟಿನಲ್ಲಿ ಅದೇ ಹಣವನ್ನು ಹಿಂದುಳಿದ ವರ್ಗಗಳ ಸಮುದಾಯಗಳನ್ನು ಗುರುತಿಸಿ ಅವರ ಏಳಿಗೆಗೆ ಯೋಜನೆಯನ್ನು ರೂಪಿಸಲು ಬಳಸಿದರೆ ಉತ್ತಮ. ಇನ್ನು ಮಠಗಳ ವಿಚಾರದಲ್ಲಿ ನಾವು ಉಳ್ಳವರಿಗೆ ಹಣ ನೀಡುವುದಿಲ್ಲ, ಇಲ್ಲದವರಿಗೆ ನೆರವು ನೀಡುತ್ತೇವೆ ಎಂದಿರುವುದು ಸಹ ಅನವಶ್ಯಕ. ಯಾವುದೇ ಮಠಗಳಿಗೂ ಸರ್ಕಾರ ಹಣ ನೀಡುವ ಅವಶ್ಯಕತೆ ಇಲ್ಲ. ಇಂದು ಮಠ ಮಂದಿರಗಳು ನಮ್ಮನ್ನು ಧನಾತ್ಮಕವಾಗಿ ಯೋಚನೆಗೆ ಹಚ್ಚಿಸುತ್ತಿಲ್ಲ. ಬದಲಾಗಿ ಜಾತಿ ಹೋರಾಟ, ಪೊಳ್ಳು ರಾಜಕೀಯಕ್ಕೇ ಪ್ರೋತ್ಸಾಹ ನೀಡುತ್ತಿವೆ. ದೇಶ ವಿದೇಶದಲ್ಲಿ ರಾಜಕೀಯ ಅಸ್ತಿತ್ವನ್ನು ಸ್ಥಾಪಿಸಿಕೊಳ್ಳಲು ವಿದೇಶಿ ಬ್ಯಾಂಕುಗಳಲ್ಲಿ ಹಣನ್ನು ಇಡಲು ಮಠದ ಸ್ವಾಮೀಜಿಗಳಿಗೆ ಸರ್ಕಾರವು ಸಾರ್ವಜನಿಕರ ಹಣ ನೀಡುವ ಅಗತ್ಯ ಇಲ್ಲ.
-ಗಣೇಶ್, ಕೆರೆಕುಳಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

