ಕಾಶ್ಮೀರದ ವಿಶೇಷ ಸ್ಥಾನಮಾನ
ಅರವತ್ತು ವರ್ಷಗಳ ಹಿಂದೆ, ನಮ್ಮ ಸಂವಿಧಾನ ರೂಪಗೊಂಡಾಗ, ಜಮ್ಮು-ಕಾಶ್ಮೀರ ರಾಜ್ಯಕ್ಕೆ ವಿಶೇಷವಾದ ಸ್ಥಾನ-ಮಾನ ಒದಗಿಸುವುದು ಅನಿವಾರ್ಯವಾಗಿತ್ತು. ಸಂವಿಧಾನದ 370ನೇ ವಿಧಿಯಲ್ಲಿ ಆ ರಾಜ್ಯದ ವಿಶೇಷ ಸ್ಥಾನ-ಮಾನವನ್ನು ಸ್ಪಷ್ಟಪಡಿಸಲಾಗಿದೆ. ಈ ವ್ಯವಸ್ಥೆಯನ್ನು ಭಾರತೀಯ ಜನಸಂಘಕ್ಕೂ ಮುಂಚೆ ರಾಜಕೀಯವಾಗಿ ಸಕ್ರಿಯವಾಗಿದ್ದ ಹಲವು ಹಿಂದೂ ಸಂಘಟನೆಗಳು ಒಪ್ಪಿರಲಿಲ್ಲ. ಭಾರತೀಯ ಜನತಾ ಪಾರ್ಟಿಯ ನಿಲವು ಮೊದಲಿನಿಂದಲೂ ಆ ವಿಧಿಯನ್ನು ರದ್ದುಪಡಿಸಬೇಕು ಎಂದೇ ಇತ್ತು. ಈಗಲೂ ಅದೇ ನಿಲವು ಇದೆ.
ಆದರೆ ಇದ್ದಕ್ಕಿದ್ದಂತೆ, ಆ ಪಕ್ಷದ ಪ್ರಧಾನಿ ಪೀಠದ ಅಭ್ಯರ್ಥಿ ನರೇಂದ್ರ ಮೋದಿ ಅವರು ಜಮ್ಮುವಿನಲ್ಲಿ ನಡೆದ ಒಂದು ಬೃಹತ್ ರ್ಯಾಲಿಯಲ್ಲಿ ಸಂವಿಧಾನದ 370ನೇ ವಿಧಿಯಿಂದ ಈ ಆರು ದಶಕಗಳಲ್ಲಿ ಕಾಶ್ಮೀರದ ಜನಸಾಮಾನ್ಯ ವರ್ಗಗಳಿಗೆ ಆಗಿರುವ ಅನುಕೂಲ ಹಾಗೂ ಸಿಕ್ಕಿರುವ ಸೌಲಭ್ಯಗಳನ್ನು ಕುರಿತು ರಾಷ್ಟ್ರೀಯ ಚರ್ಚೆಯಾಗಬೇಕೆಂದಿರುವುದು ದೊಡ್ಡ ಸುದ್ದಿಯಾಗಿದೆ. ಅನೇಕರ ದೃಷ್ಟಿಯಲ್ಲಿ ನರೇಂದ್ರ ಮೋದಿ ಈ ವಿಚಾರದಲ್ಲಿ ಬೆಜೆಪಿಯ ನಿಲವನ್ನು ಸಡಿಲಗೊಳಿಸಿದ್ದಾರೆ ಎನ್ನುವ ಅಭಿಪ್ರಾಯ ಪ್ರಕಟವಾಗಿದೆ. ನಿಜ. ಬಿಜೆಪಿ ನಾಯಕರು, ಜಮ್ಮು ಕಾಶ್ಮೀರದ ವಿಚಾರದಲ್ಲಿ ಏನನ್ನು ಹೇಳಿದರೂ ಅದಕ್ಕೆ ವಿಪರೀತಾರ್ಥವನ್ನು ಕಲ್ಪಿಸುವುದು ಅನೇಕರ ಪಾಲಿಗೆ ಕರ್ತವ್ಯ ನಿರ್ವಹಣೆಯ ಒಂದು ಅಂಶ.
ದೇಶದಲ್ಲಿ ಯಾವುದೇ ವಿಷಯವೇ ಆದರೂ, ಅದು ಚರ್ಚಾತೀತವೇನೂ ಅಲ್ಲ. ಚರ್ಚೆಯಿಂದ ಆಗುವ ಉಪಯೋಗವಾದರೂ ಏನು ಎನ್ನುವ ವಿಚಾರ ಬೇರೆ. ಅದು ಚರ್ಚೆಯಲ್ಲಿ ಪಾಲುಗೊಳ್ಳುವ ಜನರು ಪ್ರತಿಪಾದಿಸುವ ನಿಲವು ಹಾಗೂ ಪ್ರಕಟಿಸುವ ಅನುಭವವನ್ನೇ ಅವಲಂಬಿಸಿದೆ. ಆ ವಿಚಾರದಲ್ಲಿ ಚರ್ಚೆಯೇ ಬೇಡ ಎನ್ನುವ ನಿಲವು ಸಮರ್ಥನೀಯವಲ್ಲ. ಈ ವಿಚಾರದಲ್ಲಿ ನರೇಂದ್ರಮೋದಿ ಅವರ ನಿಲವನ್ನು ಬಿಜೆಪಿಯ ಸಂಸದೀಯ ಸದನಗಳ ನಾಯಕರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್ಜೈಟ್ಲಿ ಅವರಿಬ್ಬರೂ ಒಂದೇ ವೇದಿಕೆಯಲ್ಲಿ ಬೆಂಬಲಿಸಿರುವುದು ಗೊಂದಲವನ್ನು ತಪ್ಪಿಸುವ ಪ್ರಯತ್ನ. ಅದು ಒಳ್ಳೆಯದೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

