ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಪತ್ರಿಕೆಯಲ್ಲಿ ಬರುವ ಪ್ರತಿ ವಿಚಾರವನ್ನು ತುಲನಾತ್ಮಕವಾಗಿ ನೋಡುವ, ಹಾಗೆಯೇ ನಂಬುವ ಸಾಕಷ್ಟು ದೊಡ್ಡ ಓದುಗ ಬಳಗವಿದೆ. 'ತಪ್ಪಾಯ್ತು ತಿದ್ಕೋತೀವಿ' ಅಂಕಣಕ್ಕೆ ಕಾಯಂ ಮಿಂಚಂಚೆ ಕಳುಹಿಸುವ ರಾಜೀವ ಪಟವರ್ಧನ್ ಅವರು ಅಂಕಿ ಅಂಶಗಳ ಕುರಿತ ಇಬ್ಬಗೆ ವರದಿಯನ್ನು ಪ್ರಶ್ನಿಸಿದ್ದಾರೆ.
'ಜೂನ್ 2ರ ಮುಖಪುಟದಲ್ಲಿ 'ಶುಕ್ರವಾರ ಸುರಿದಿದ್ದು ದಾಖಲೆ ಮಳೆ- ಒಂದೇ ದಿನ 100 ಮಿ.ಮೀ ವರ್ಷಧಾರೆ, ನೂರು ವರ್ಷದಲ್ಲೇ ಅಧಿಕ' ಎಂಬ ಶೀರ್ಷಿಕೆಯಲ್ಲಿ 'ಗಡಿ ದಾಟಿದ ಮಳೆ' ಎಂಬ ಉಪವರದಿ ಪ್ರಕಟವಾಗಿದೆ. 1891ರ ಜೂನ್ ತಿಂಗಳಲ್ಲಿ 'ಒಂದೇ ದಿನ' 101.6 ಮಿ.ಮೀ ಮಳೆ ಸುರಿದದ್ದು ದಾಖಲೆಯಾಗಿತ್ತು. ಶುಕ್ರ ವಾರ ಭಾರಿ ಪ್ರಮಾಣದಲ್ಲಿ ಮಳೆಯಾ ದುದ್ದರಿಂದ 122 ವರ್ಷದ ಬಳಿಕ ಒಂದೇ ದಿನದಲ್ಲಿ ಸುರಿದ ಮಳೆಯ ಪ್ರಮಾಣ ಮತ್ತೆ 100 ಮಿ.ಮೀ ಗಡಿ ದಾಟುವಂತಾಗಿದೆ.'
'ನ.25ರ ಪುಟ 3ರಲ್ಲಿ ಮಳೆಗೆ ಸಂಬಂಧಿಸಿ '44 ವರ್ಷದ ನಂತರ ದಾಖಲೆ' ಎಂಬ ವರದಿಯೊಂದು ಪ್ರಕಟವಾಗಿದೆ. ಈ ಸುದ್ದಿಯಲ್ಲಿ 1916ರ ನವೆಂಬರ್‌ನಲ್ಲಿ 114.5 ಮಿ.ಮೀ ಹಾಗೂ 1969ರ ನವೆಂಬರ್‌ನಲ್ಲಿ 114 ಮಿ.ಮೀ ಮಳೆಯಾಗಿದೆ ಎಂದು ಪ್ರಕಟಿಸಿದ್ದೀರಿ.'
'ಈಗ ನನ್ನ ಪ್ರಶ್ನೆಯೆಂದರೆ ನಾನು ವೃತ್ತಪತ್ರಿಕೆಗಳನ್ನು ಸಂಗ್ರಹ ಮಾಡುವುದರಿಂದ ಈ ವರದಿ ಗೊಂದಲ ಮೂಡಿಸಿದೆ. ಇವೆರಡರಲ್ಲಿ ಯಾವುದು ಸರಿ ಎಂದು ದಯವಿಟ್ಟು ತಿಳಿಸಿ' ಎಂದು ಮನವಿಮಾಡಿದ್ದಾರೆ.
ನಿಮಗೆ ಗೊಂದಲ ಮೂಡಿರುವುದರಲ್ಲಿ ಆಶ್ಚರ್ಯವಿಲ್ಲ. ಹಾಗೆಯೇ ಸುದ್ದಿಯಲ್ಲೂ ಯಾವುದೇ ತಪ್ಪಿಲ್ಲ. ಆದರೆ ಸುದ್ದಿಯನ್ನು ಸಮರ್ಪಕವಾಗಿ ಪ್ರಸ್ತುತಪಡಿಸುವಲ್ಲಿ ತಪ್ಪಾಗಿದೆ. ಇವೆರಡು ದಾಖಲೆಗಳು ಆಯಾ ತಿಂಗಳಿನ ಮಳೆಯ ಅಂಕಿಅಂಶಕ್ಕೆ ಸೀಮಿತ. ಎರಡೂ ಸುದ್ದಿಯ ಪ್ರಾರಂಭದಲ್ಲಿ ಜೂನ್ ಹಾಗೂ ನವೆಂಬರ್ ತಿಂಗಳಿನಲ್ಲಿ ಸುರಿದ ದಾಖಲೆ ಮಳೆ ಎಂದಾಗಿದ್ದರೆ ಯಾವುದೇ ಸಂಶಯಕ್ಕೆ ಎಡೆಯಾಗುತ್ತಿರಲಿಲ್ಲ.
ಚೀತಾ ಮತ್ತು ಚಿರತೆ ಗೊಂದಲಕ್ಕೆ ಖ್ಯಾತ ವನ್ಯಜೀವಿ ಶಾಸ್ತ್ರಜ್ಞ ಉಲ್ಲಾಸ ಕಾರಂತ್ ಅವರು ತಮ್ಮ ಅಭಿಪ್ರಾಯ ಕಳುಹಿಸಿಕೊಟ್ಟಿದ್ದಾರೆ. '1940ರ ಆಸುಪಾಸಿನಲ್ಲಿ ಕರ್ನಾಟಕದಲ್ಲಿ ಚೀತಾ (Aciyonix Jubatus)  ಕಾಣಿಸಿಕೊಂಡಿತ್ತು. ಲೆಪರ್ಡ್ ಅಥವಾ ಪ್ಯಾಂಥರ್(ಚಿರತೆ) ಆಗಾಗ ಕಾಣಸಿಗುತ್ತದೆ. ಆದರೆ ಬಹುತೇಕರಿಗೆ ಚೀತಾಕ್ಕೆ ಕನ್ನಡದಲ್ಲಿ ಸೂಕ್ತ ಶಬ್ದವಿರುವುದು ತಿಳಿದಿಲ್ಲ, ಚೀತಾಗೆ ಶಿವಾಂಗಿ ಎಂದು ಬಳಸಬೇಕು. ಲೆಪರ್ಡ್‌ಗೆ ಮಾತ್ರ ಚಿರತೆ ಎನ್ನುತ್ತಾರೆ. ಕರ್ನಾಟಕದ ನಾನಾ ಭಾಗಗಳಲ್ಲಿ ಚಿರತೆಗೆ ಚಿರ್ಚು, ಇಬ್ಬ, ಕಿರುಬ, ಬೆಂಗ, ಪಿಲಿ ಎಂದೂ ಕರೆಯುತ್ತಾರೆ. ಇದೇ ರೀತಿ ಕರ್ನಾಟಕದಲ್ಲಿ ಕಾಡುಪ್ರಾಣಿಗಳಿಗೆ ಸಾಕಷ್ಟು ಸ್ಥಳೀಯ ಹೆಸರಿವೆ. ಪತ್ರಕರ್ತರಿಗೂ ಇದರ ಬಗ್ಗೆ ತಿಳಿದಿಲ್ಲ. ಇದನ್ನು ಪ್ರಚುರಪಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ನಾನು ಈ ಹಿಂದೆ ಲೇಖನವನ್ನೂ ಬರೆದಿದ್ದೆ  ಎಂದು ಅವರು ಹೇಳಿದ್ದಾರೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.