ಮತ್ತೆ ಗೊಂದಲದಲ್ಲಿ ಆಧಾರ್
ಆಧಾರ್ ಕಾರ್ಡ್ಗಳನ್ನು ಸರ್ಕಾರದ ಯಾವ ಸೌಲಭ್ಯಕ್ಕೂ ಕಡ್ಡಾಯ ಮಾಡಬಾರದೆಂದು ಸುಪ್ರೀಮ್ ಕೋರ್ಟ್ ಮತ್ತೊಮ್ಮೆ ಆದೇಶ ನೀಡಬೇಕಾದ ಗೊಂದಲದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.
ಪ್ರಧಾನವಾಗಿ, ಅಡುಗೆ ಅನಿಲದ ಸಬ್ಸಿಡಿಯನ್ನು ಪಡೆಯಲು, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯ ಜತೆಗೆ ಆಧಾರ್ ಕಾರ್ಡ್ನ ನಂಬರ್ ಜೋಡಿಸಿದರೆ ಅವರಿಗೆ ಸಿಗಬೇಕಾದ ಸಬ್ಸಿಡಿ ಹಣ ನೇರವಾಗಿ ಅವರ ಖಾತೆಗೇ ಜಮಾ ಆಗುತ್ತದೆ ಎನ್ನುವ ನಿಯಮದ ಕಾರ್ಯಾಚರಣೆಯ ವಿವರಗಳಿಗೆ ಹೆಚ್ಚು ಪ್ರಚಾರ ಸಿಗದಿರುವುದರಿಂದ ಈ ಗೊಂದಲ ಬೃಹದಾಕಾರದ ಸ್ವರೂಪವನ್ನು ಪಡೆದಿದೆ.
ಎಲ್ಲ ನಾಗರಿಕರಿಗೂ ಇನ್ನೂ ಆಧಾರ್ ಕಾರ್ಡ್ ಸಿಕ್ಕಿಲ್ಲ. ಈಗ ಆನ್ಲೈನ್ ವ್ಯವಸ್ಥೆಯಲ್ಲಿ ಅರ್ಜಿ ಸಲ್ಲಿಸಿ, ಆ ಅರ್ಜಿಯ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಿಸಿದರೂ ಸಾಕು. ಸಬ್ಸಿಡಿಯ ಹಣ ಪಡೆಯಬಹುದೆಂದು ಹೇಳಲಾಗುತ್ತಿದೆ. ಆದರೆ ಈಗ ಗ್ರಾಹಕರಿಗೆ, ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಸುಪ್ರೀಮ್ ಕೋರ್ಟ್ ಹೇಳಿದ್ದರೂ, ಒತ್ತಡ ಬಂದ ನಂತರ ಸಚಿವ ವೀರಪ್ಪ ಮೊಯಿಲಿ ಅವರೂ ಆ ಮಾತನ್ನೇ ಸ್ಥಿರೀಕರಿಸಿದ್ದರೂ, ಆಧಾರ್ ಕಾರ್ಡ್ ಅಥವಾ ಆನ್ಲೈನ್ ಅರ್ಜಿ ನಂಬರ್ ಇಲ್ಲದೇ ಸಬ್ಸಿಡಿ ಪಡೆಯುವಂತಿಲ್ಲ ಎನ್ನುವ ಪ್ರಚಾರವೇ ಬಲವಾಗಿದೆ.
ಇಷ್ಟೇ ಸಾಲದೆಂಬಂತೆ, ಎಲ್ಲ ಬ್ಯಾಂಕ್ಗಳೂ ತಮ್ಮ ಎಟಿಎಂ ಜಾಲವನ್ನು ಆಧಾರ್ ಕಾರ್ಡ್ಗೆ ಅನುಗುಣವಾಗಿ ಹೊಂದಿಕೊಳ್ಳುವಂತೆ, ವ್ಯವಸ್ಥೆ ಮಾಡಬೇಕೆನ್ನುವ ಆದೇಶವನ್ನು ರಿಸರ್ವ್ ಬ್ಯಾಂಕ್ ನೀಡಿದರೂ, ಅದನ್ನು ಅಳವಡಿಸುವುದು ಕಷ್ಟ ಎಂದು ಅನೇಕ ಬ್ಯಾಂಕ್ಗಳು ಹೇಳಿವೆ. ಈ ಎ.ಟಿ.ಎಂ. ಗೊಂದಲ ಎಲ್ಲಿಗೆ ಹೋಗಿ ನಿಲ್ಲತ್ತೋ ಗೊತ್ತಿಲ್ಲ.
ಆಧಾರ್ ಕಾರ್ಡ್ಗಳ ಹಂಚಿಕೆಯ ಕೆಲಸ ಪೂರ್ಣಗೊಳಿಸುವ ಮುನ್ನವೇ ಕಾರ್ಡ್ಗಳನ್ನು ಕಡ್ಡಾಯ ಮಾಡುವ ಚಿಂತನೆಯನ್ನು ಪ್ರಕಟಿಸುವ ಅಗತ್ಯವೇ ಇರಲಿಲ್ಲ. ಜನರನ್ನು ನಂಬುವುದಕ್ಕೇ ಸರ್ಕಾರ ಸಿದ್ಧವಾಗಿರುವಂತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

