ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ವಿದ್ಯಾರಣ್ಯಪುರದಿಂದ ಎಚ್. ಆನಂದರಾಮ ಶಾಸ್ತ್ರಿ ಅವರು ಬರೆಯುತ್ತಾರೆ- 'ಪ್ರೊ. ಎಂ.ಎನ್. ಸುಂದರರಾಜ್ ಅವರು 'ಔರಂಗಜೇಬನ ನ್ಯಾಯ ನಿಷ್ಠುರತೆ'ಯ ಬಗ್ಗೆ 'ಹಿರಿಯರ ಹಾದಿ' ಅಂಕಣದಲ್ಲಿ ಬರೆಯುತ್ತ ಘಟನೆಯೊಂದನ್ನು ವಿವರಿಸಿದ್ದಾರೆ. ಹೀಗೆ ಇತಿಹಾಸದ ಬಗ್ಗೆ ಮತ್ತು ಐತಿಹಾಸಿಕ ಘಟನೆಗಳ ಬಗ್ಗೆ ಬರೆಯುವಾಗ ತಾವು ಪರಾಮರ್ಶಿಸಿದ ಸಂಬಂಧಿತ ಗ್ರಂಥಗಳ ಉಲ್ಲೇಖನೀಡುವುದು ಒಳಿತು. ಹಾಗೆ ಮಾಡುವುದರಿಂದ ಓದುಗರಿಗೆ ದಿಕ್ಕು ತೋರಿಸಿದಂತಾಗುತ್ತದೆ. ಮುಂದಿನ ಓದಿಗೆ ಸಹಕರಿಸಿದಂತಾಗುತ್ತದೆ ಮತ್ತು ಆಧಾರ ಗ್ರಂಥಗಳನ್ನು ಸ್ಮರಿಸಬೇಕಾದ ತಮ್ಮ ಕರ್ತವ್ಯವನ್ನು ನಿಭಾಯಿಸಿದಂತೆಯೂ ಆಗುತ್ತದೆ.'
'ಏಕೆಂದರೆ ಮೊಘಲರನ್ನೂ ಒಳಗೊಂಡಂತೆ, ಭಾರತದ ಇತಿಹಾಸದಲ್ಲಿ ಬರುವ ಅನೇಕ ಆಳರಸರ ಬಗ್ಗೆ ಇಂಥ ಘಟನೆಗಳು/ಕಥೆಗಳು ಇತಿಹಾಸದ ಪುಸ್ತಕಗಳಲ್ಲಿ ಹೇರಳವಾಗಿದ್ದು, ಪರಸ್ಪರ ವೈರುಧ್ಯದಿಂದ ಕೂಡಿದ ಕಥೆಗಳನ್ನು/ಚಿತ್ರಣಗಳನ್ನು ನಾವು ಬೇರೆ ಬೇರೆ ಪುಸ್ತಕಗಳಲ್ಲಿ ಕಾಣಬಹುದು. ಆಧಾರಸಹಿತವೂ ಪಕ್ಷಪಾತ ರಹಿತವೂ ಆದ ಇತಿಹಾಸ ಗ್ರಂಥಗಳು ಇರುವಂತೆಯೇ ವಿರುದ್ಧ ನೆಲೆಯ ಗ್ರಂಥಗಳೂ ಇವೆ. ಆದ್ದರಿಂದ ಇತಿಹಾಸದ ಕುರಿತು ಬರೆಯುವಾಗ ಆಕರ ಗ್ರಂಥಗಳ ವಿವರವನ್ನೂ ನಮೂದಿಸುವುದು ಉತ್ತಮ.'
'ಇಷ್ಟಕ್ಕೂ ಔರಂಗಜೇಬನದು ನ್ಯಾಯನಿಷ್ಠುರ ಗುಣವೇನಲ್ಲ. ವ್ಯಾವಹಾರಿಕ ಜಾಣ್ಮೆ ಮತ್ತು ಸಮಯೋಚಿತ ನಯ ಇವುಗಳನ್ನು ಆತ ತನ್ನ ಏಳಿಗೆಗಾಗಿ ಬಳಸಿಕೊಳ್ಳುತ್ತಿದ್ದ ಈ ಗುಣಗಳಿಂದಾಗಿಯೇ ಆತನಿಗೆ (ತಂದೆ) ಅಕ್ಬರನ ಆಸ್ಥಾನದ ಉನ್ನತ ಶ್ರೇಣಿಯ ವಿದ್ವಾಂಸರೂ ಸ್ನೇಹಿತರಾಗಿದ್ದರು. ಸಹೋದರ ಮುರಾದ್ನನ್ನು ಆತ ಸೆರೆಮನೆಯಲ್ಲಿಟ್ಟು, ಕೊಲ್ಲಿಸಿದ ಬಗ್ಗೆ ಎಂ.ಎನ್. ಅವರು ಸ್ಥೂಲನೋಟ ಬೀರಿದ್ದಾರೆ. ಅಂದಿನ ಆ ಆಗುಹೋಗುಗಳ ಕುರಿತ ಕೆಲ ಸೂಕ್ಷ್ಮಗಳು ಇಂತಿವೆ...'
'ಯುವರಾಜ ಮುರಾದನು ತನ್ನ ಕಂದಾಯ ಮಂತ್ರಿ ಅಲಿ ನಖೀಯನ್ನು ಕೊಂದು ಸೂರತ್ ನಗರವನ್ನು ಸೂರೆಮಾಡಿ ದೆಹಲಿಯ ಗದ್ದುಗೆ ಕಬಳಿಸಲು ಸನ್ನದ್ಧನಾಗತೊಡಗಿದಾಗ, ಔರಂಗಜೇಬನು ಒಂದು ಕಡೆ ಪಂಜಾಬ್, ಅಘ್ಘಾನಿಸ್ತಾನ, ಕಾಶ್ಮೀರ, ಸಿಂಧ್ ಮತ್ತು ಒಂದಷ್ಟು ಸಂಪತ್ತು ಇವುಗಳನ್ನು ಸಹೋದರ ಮುರಾದ್ಗೆ ನೀಡುವ ಒಪ್ಪಂದ ಮಾಡಿಕೊಂಡು, ಇನ್ನೊಂದು ಕಡೆ ಅದೇ ಮುರಾದನ ಮೇಲೆ ಕಣ್ಣಿಟ್ಟು, ಮುರಾದನ ಸಿಂಹಾಸನ ವಾಂಛೆ ಬಲಿತಿದ್ದನ್ನು ಗಮನಿಸಿ, ಅವನನ್ನು ಬಂಧಿಸಿಟ್ಟಿದ್ದಲ್ಲದೇ, ಬಂಧಿಸಿಟ್ಟ ಮೂರು ವರ್ಷಗಳ ತರುವಾಯ, ಅಲಿ ನಖೀಯ ಎರಡನೇ ಮಗನಿಗೆ ಹೆಳಿಕೊಟ್ಟು, ಮುರಾದನ ವಿರುದ್ಧ ನಖೀ ಕೊಲೆಯ ದೂರು ದಾಖಲಿಸಿ, ಸಹೋದರ ಮುರಾದನನ್ನು ದೋಷಿಯೆಂದು ತೀರ್ಮಾನಿಸಿ, ಡಿಸೆಂಬರ್ 4, 1661ರಂದು ಗ್ವಾಲಿಯರ್ ಕೋಟೆಯಲ್ಲಿ ಆತನ ಶಿರಚ್ಛೇದನ ಮಾಡಿಸಿದ.'
'ಅಂದಹಾಗೆ, ಜುಲೈ 21, 1658ರಂದು ದೆಹಲಿಯ ಸಿಂಹಾಸನವನ್ನೇರಿದಾಗ ಔರಂಗಜೇಬನು ತನಗೆ ಕೊಟ್ಟುಕೊಂಡಿದ್ದ (ಅಧಿಕೃತ) ಬಿರುದು 'ಅಬು-ಲ್ ಮುಝಫ್ಫರ್ ಮುಹಿಯುದ್ದೀನ್ ಮಹಮ್ಮದ್ ಔರಂಗಜೇಬ್ ಬಹಾದುರ್ ಆಲಮ್ಗೀರ್ ಬಾದ್ಶಾಹ್ ಘಾಝೀ' ಈ ಎಲ್ಲ ವಿವರಗಳನ್ನು ನಾನು ಓದಿರುವುದು 'ದಿ ಹಿಸ್ಟರಿ ಆ್ಯಂಡ್ ಕಲ್ಚರ್ ಆಫ್ ದಿ ಇಂಡಿಯನ್ ಪೀಪಲ್' (ಸಂಪುಟ7, ಭಾರತೀಯ ವಿದ್ಯಾಭವನ) (ಸಂ- ಆರ್.ಸಿ. ಮುಜುಮ್ದಾರ್) ಮತ್ತು 'ಹಿಸ್ಟರಿ ಆಫ್ ಔರಂಗಜೇಬ್' (ಸಂಪುಟ 5, ಸಂ- ಜೆ.ಎನ್. ಸರ್ಕಾರ) ಈ ಇಂಗ್ಲಿಷ್ ಗ್ರಂಥಗಳಲ್ಲಿ' ಎಂದಿದ್ದಾರೆ.
ಇಂದಿಗೂ ನಾವು ಓದಿದ್ದು, ತಿಳಿದಿದ್ದು ನಿಜವಾದ ಇತಿಹಾಸವೇ ಎಂಬ ಅನುವಾನವಿದೆ. ಆದ್ದರಿಂದ ಇತಿಹಾಸದ ಯಾವುದೇ ಸಂಗತಿಯ ಬಗ್ಗೆ ಅಥವಾ ಬಹುತೇಕ ಸಂಗತಿಗಳ ಕುರಿತು ಅನುಮಾನ, ಹಲವು ದೃಷ್ಟಿಕೋನಗಳಿವೆ. ಇನ್ನು ಪ್ರೊ. ಎಂ.ಎನ್. ಸುಂದರರಾಜ್ ಅವರಿಗೆ ನೀಡಿರುವ ಅಂಕಣದ ಸ್ಥಳಾವಕಾಶ ಸೀಮಿತವಾಗಿರುವುದರಿಂದ ಅಲ್ಲಿ ಪುಸ್ತಕಗಳನ್ನು ಹೆಸರಿಸಲು ಸಾಧ್ಯವಾಗುವುದಿಲ್ಲ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

