ದೆಹಲಿಯ ವಿಚಿತ್ರ ರಾಜಕೀಯ
ರಾಷ್ಟ್ರೀಯ ರಾಜಧಾನಿಯಾದ ದೆಹಲಿಯಲ್ಲಿ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ, ಆಮ್ ಆದ್ಮಿ ಪಾರ್ಟಿಯ ಯಶಸ್ಸು ಒಂದು ವಿಚಿತ್ರ ಪರಿಸ್ಥಿತಿಯನ್ನೇ ನಿರ್ಮಿಸಿದೆ. ಹಿಂದೆಂದೂ ಕಂಡು- ಕೇಳದ ವಿಚಿತ್ರ ಪರಿಸ್ಥಿತಿ ಇದು.
ಚುನಾವಣೆಯಲ್ಲಿ ಲೋಕಸಭೆಯೂ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಸಂಸದೀಯ ಸದನಗಳಲ್ಲಿ ಅತಂತ್ರ ಅಥವಾ ತ್ರಿಶಂಕು ಅವಸ್ಥೆಯ ನಿರ್ಮಾಣವಾಗುವುದು ಇತ್ತೀಚಿನ ದಿನಗಳಲ್ಲಿ ಹೊಸದೇನೂ ಅಲ್ಲ. ಈಗಿನ ದೆಹಲಿಯ ಸ್ಥಿತಿಯ ವೈಚಿತ್ರ್ಯ ಎಂದರೆ ಸರ್ಕಾರದ ರಚನೆಗೆ ಸಂಖ್ಯಾಬಲದ ದೃಷ್ಟಿಯಿಂದ ದೊಡ್ಡದಾದ ಪಕ್ಷ ಇತರರ ಬೆಂಬಲ ಕೇಳುವುದಕ್ಕೆ ಬದಲಾಗಿ, ಒಂದು ಪಕ್ಷಕ್ಕೆ ಉಳಿದ ಎರಡೂ ಪಕ್ಷಗಳು ತಾವೇ ತಾವಾಗಿ ಬೆಂಬಲವನ್ನು ಪ್ರಕಟಿಸಿರುವುದು.
ವಿಧಾನ ಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಾರ್ಟಿಗೆ ಬಹುಮತ ಗಳಿಸುವುದು ಸಾಧ್ಯವಾಗುವುದಿಲ್ಲ ಎನ್ನುವುದು ಅರಿವಾದಾಗ ಅದು ಸರ್ಕಾರದ ರಚನೆಗೆ ಮುಂದಾಗಲಿಲ್ಲ. ಆ ಸಮಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗಳು ತಾವಾಗಿಯೇ, ಸ್ವಯಂ ಪ್ರೇರಣೆಯಿಂದ ಆಮ್ ಆದ್ಮಿ ಪಕ್ಷಕ್ಕೆ ಸರ್ಕಾರ ರಚಿಸಲು ಬೆಂಬಲ ಕೊಡುವುದಾಗಿ ಪ್ರಕಟಿಸಿದವು. ಕಾಂಗ್ರೆಸ್ ಅಧಿಕೃತವಾಗಿ ಪತ್ರವನ್ನು ರವಾನಿಸಿತು. ವಾಸ್ತವದಲ್ಲಿ ಇದೊಂದು ತಂತ್ರ. ಆಮ್ ಆದ್ಮಿ ಪಕ್ಷವನ್ನು ಇಕ್ಕಟ್ಟಿಕೆ ಸಿಕ್ಕಿಸುವ ಪ್ರಯತ್ನ. ಈಗ ಬೇಷರತ್ ಬೆಂಬಲ ಎಂದರೂ ಭವಿಷ್ಯದಲ್ಲಿ ಅದು ಹಾಗೇ ಉಳಿಯುವುದಿಲ್ಲ. ಯಾವುದೋ ಒಂದು ಸಣ್ಣ ವಿಚಾರದ ಸಂಬಂಧದ ಭಿನ್ನಾಭಿಪ್ರಾಯವೇ ದೊಡ್ಡದಾಗಿ, ಸರ್ಕಾರವನ್ನು ಪತನಗೊಳಿಸಿರುವ ಉದಾಹರಣೆಗಳು ಹೇರಳವಾಗಿವೆ. 1950ರ ದಶಕದಲ್ಲೇ ತಿರುವಾಂಕೂರು- ಕೊಚ್ಚಿ ಸಂಸ್ಥಾನದಲ್ಲಿ ಕಾಂಗ್ರೆಸ್ ಪಟ್ಟಂಥಾನುಪಿಳ್ಳೆ ಅವರ ಸರ್ಕಾರವನ್ನು ಉರುಳಿಸಿದ ಘಟನೆಯಿಂದ ಹಿಡಿದು 1990ರ ದಶಕದಲ್ಲಿ ಚಂದ್ರಶೇಖರ್, ದೇವೇಗೌಡರು, ಇಂದರ್ ಗುಜ್ರಾಲ್ ಅವರ ನೇತೃತ್ವದ ಸರ್ಕಾರವನ್ನು ಬೀಳಿಸಿದ ಉದಾಹರಣೆಗಳಿವೆ.
ಆದ್ದರಿಂದಲೇ ಆಮ್ ಆದ್ಮಿ ಪಕ್ಷ ಕೇಳದೆಯೇ ಸಿಕ್ಕಿದ ಬೆಂಬಲವನ್ನು ದಿಢೀರನೆ ಸ್ವೀಕರಿಸಲು ಮುಂದಾಗಲಿಲ್ಲ. ಆದರೆ ದೇಶದ ರಾಜಕೀಯ ವಲಯಗಳಲ್ಲಿ ಹಲವು ಪ್ರಬುದ್ಧರು ಚುನಾವಣೆಯ ಅನಂತರ, ಸಾಧ್ಯವಾದರೆ, ಅವಕಾಶ ಸಿಕ್ಕರೆ, ಸರ್ಕಾರವನ್ನು ರಚಿಸಲು ಪ್ರಯತ್ನಿಸುವುದು ಪಕ್ಷಗಳ ಕರ್ತವ್ಯ ಎಂದಿದ್ದಾರೆ. ಆ ಪ್ರಯತ್ನ ವಿಫಲವಾದರೆ, ಸಂವಿಧಾನದಲ್ಲಿ ಅಳವಡಿಸಲಾಗಿರುವ ಪರಿಹಾರ ಮಾರ್ಗ ಇದ್ದೇ ಇದೆ.
ಆದರೆ ದೆಹಲಿಯಲ್ಲಿ ಈಗ ಆಮ್ ಆದ್ಮಿ ಪಕ್ಷಕ್ಕೆ ಒಂದು ಕಡೆ ಕಾಂಗ್ರೆಸ್, ಇನ್ನೊಂದು ಕಡೆ ಬಿಜೆಪಿ ಬೆಂಬಲ ಕೊಡುವುದಾಗಿ ಹೇಳಿದರೂ, ಆಪ್ ನಾಯಕ ಅರವಿಂದ ಕೇಜ್ರಿವಾಲ ಅವರು ಎರಡೂ ಪಕ್ಷಗಳಿಗೆ ಹದಿನೆಂಟು ಅಂಶಗಳ ಷರತ್ತುಗಳನ್ನು ಹಾಕಿ, ಆ ಷರತ್ತುಗಳಿಗೆ ಒಪ್ಪಿಗೆ ಸಿಕ್ಕರೆ ಮುಂದಿನ ಪ್ರಯತ್ನ ಎಂದಿರುವುದು ವಿಚಿತ್ರವಾದ ಬೆಳವಣಿಗೆ. ನಿಜ. ಈಗ ದೆಹಲಿಯಲ್ಲಿ ಕಂಡು ಬಂದಿರುವ ವಿಚಿತ್ರ ಪರಿಸ್ಥಿತಿಯಲ್ಲಿ ಸರ್ಕಾರವನ್ನು ರಚಿಸುವ ಪ್ರಯತ್ನಕ್ಕೆ ಕೈ ಹಾಕುವುದಕ್ಕೆ ಆಮ್ ಆದ್ಮಿ ಪಕ್ಷಕ್ಕೆ ಇಷ್ಟವಿಲ್ಲದೇ ಇರಬಹುದು. ಅದನ್ನು ನೇರವಾಗಿ ಹೇಳುವ ಪ್ರಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಪ್ರದರ್ಶಿಸುವುದನ್ನು ಬಿಟ್ಟು, ಬೆಂಬಲ ನೀಡಲು ಮುಂದಾಗಿರುವ ಪಕ್ಷಗಳಿಗೆ ಅವು ಒಪ್ಪಲಾಗದ ಷರತ್ತುಗಳನ್ನು ವಿಧಿಸಿರುವುದು, ಚಾಣಕ್ಯತನದ ಪ್ರದರ್ಶನ ಅಷ್ಟೇ. ಅಲ್ಲಿ ಪಾರದರ್ಶಕತೆ ಇಲ್ಲ.
ಆಮ್ ಆದ್ಮಿ ಪಾರ್ಟಿ ವಿಧಿಸಿರುವ ಷರತ್ತುಗಳಲ್ಲಿ ಅನೇಕ ಷರತ್ತುಗಳನ್ನು ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲೇ ವಿರೋಧಿಸಿವೆ. ರಾಜ್ಯಗಳಲ್ಲೂ ವಿರೋಧಿಸಿವೆ. ಹೀಗಾಗಿ ಆ ಷರತ್ತುಗಳನ್ನು ದೆಹಲಿಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿ ಒಪ್ಪುವುದು ಅಸಾಧ್ಯದ ಮಾತೇ.
ಈ ಬೆಂಬಲ ನೀಡಿಕೆಯ ಆಶ್ವಾಸನೆಯ ತಂತ್ರಗಾರಿಕೆಗೆ ಪ್ರತಿಯಾಗಿ ಷರತ್ತುಗಳನ್ನು ಒಪ್ಪುವುದಾದರೆ ಸರ್ಕಾರದ ರಚನೆಯ ಪರಿಶೀಲನೆಯ ಮಾತಿನಂತಹ ತಂತ್ರಗಾರಿಕೆಯ ಆಟದಿಂದ ಯಾವ ಪ್ರಯೋಜನವೂ ಇಲ್ಲ.
ದೆಹಲಿಯಲ್ಲಿ ಈಗಲೂ ಅಸ್ತಿತ್ವದಲ್ಲಿರುವ ವಿಧಾನಸಭೆಯ ಅಸ್ತಿತ್ವ ಇನ್ನೊಂದು ಸರ್ಕಾರ ಅಧಿಕಾರ ಸ್ವೀಕರಿಸುವವರೆಗೂ ಉಳಿದಿರುವುದಿಲ್ಲ. ಸಂವಿಧಾನದಲ್ಲಿ ನಮೂದಾಗಿರುವಂತೆ, ಅದರ ಚುನಾಯಿತ ಅವಧಿ ಡಿಸೆಂಬರ್ ಹದಿನೇಳಕ್ಕೆ ಅಂತ್ಯವಾಗಬೇಕು. ವಿಧಾನ ಸಭೆಗೆ ಚುನಾವಣೆ ನಡೆದು ಫಲಿತಾಂಶದ ಪ್ರಕಟಣೆಯೂ ಆಗಿದೆ. ಈ ಪರಿಸ್ಥಿತಿಯಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಂದ ರಾಷ್ಟ್ರಪತಿ ಭವನಕ್ಕೆ ಯಾವುದೇ ರೀತಿಯ ಸಂದೇಶ ತಲುಪದೇ ಹೋದರೆ, ರಾಷ್ಟ್ರಪತಿ ತಮ್ಮ ಸಂವಿಧಾನದತ್ತ ಅಧಿಕಾರವನ್ನು ಚಲಾಯಿಸಲೇ ಬೇಕಾಗುತ್ತದೆ. ಇದೆಲ್ಲವೂ ಗೊತ್ತಿದ್ದರೂ, ಆಮ್ ಆದ್ಮಿ ಪಾರ್ಟಿಯ ನೇತಾರ ಅರವಿಂದ ಕೇಜ್ರಿವಾಲ ಸರ್ಕಾರದ ರಚನೆ ಕುರಿತಂತೆ ನಿರ್ಧಾರಕ್ಕೆ ಹತ್ತು ದಿನಗಳ ಅವಧಿಯನ್ನು ಕೇಳಿರುವುದು ನಿಜವಾಗಲೂ ಯಾವ ಪುರುಷಾರ್ಥ ಸಾಧನೆಗೆ?
ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಸಾಧನೆ ಮೆಚ್ಚುಗೆಗೆ ಅರ್ಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಸರ್ಕಾರದ ರಚನೆಗೆ ಅಗತ್ಯವಾದ ಸಂವಿಧಾನದ ಬೆಂಬಲವನ್ನು ಗಳಿಸಿಕೊಳ್ಳುವಷ್ಟು ಸ್ಥಾನಗಳಲ್ಲಿ ಗೆದ್ದಿಲ್ಲ. ಇತರರ ಜತೆ ಹೊಂದಾಣಿಕೆಗೆ ಸಿದ್ಧವಿಲ್ಲ. ಅದನ್ನು ಒಪ್ಪಬಹುದು. ಆದರೆ ಸರ್ಕಾರದ ರಚನೆಯ ಪ್ರಯತ್ನದ ವೈಫಲ್ಯಕ್ಕೆ ಇತರ ಪಕ್ಷಗಳನ್ನೇ ಹೊಣೆಗಾರರನ್ನಾಗಿ ಮಾಡಲು ಪ್ರಯತ್ನಿಸಿರುವುದು ಸರಿಯಲ್ಲ. ರಾಜಕೀಯ ಕೇವಲ ತಂತ್ರಗಾರಿಕೆಯ ಪ್ರದರ್ಶನದ ಅಖಾಡವಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

