ಕಾವ್ಯಮಾರ್ಗಗಳ ಸಮನ್ವಯಕಾರ
ಕನ್ನಡದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಕುವೆಂಪು ಪರಂಪರೆಯನ್ನು ಶ್ರದ್ಧೆಯಿಂದ ಮುಂದುವರಿಸಿಕೊಂಡು ಬಂದವರು. ಅವರ ನಿಧನದೊಂದಿಗೆ ನವೋದಯ ತಲೆಮಾರಿನ ಕೊಂಡಿಯೊಂದು ಕತ್ತರಿಸಿಕೊಂಡಿದೆ. ಜಿಎಸ್‌ಎಸ್ ಎಂದೇ ಹೆಸರಾಗಿದ್ದ ಶಿವರುದ್ರಪ್ಪನವರು ಕುವೆಂಪು ಅವರ ಪ್ರೀತಿಯ ಶಿಷ್ಯರಾಗಿದ್ದರು. ಕನ್ನಡ ಭಾವಗೀತೆಯನ್ನು ಇನ್ನೊಂದು ಎತ್ತರಕ್ಕೆ ಎತ್ತಿದ ಕವಿ ಅವರು.
'ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ' ಎಂದು ತಮ್ಮ ಕಾವ್ಯೋದ್ಯೋಗದ ಅನಿವಾರ್ಯತೆಯನ್ನು ಸಾರಿದ ಶಿವರುದ್ರಪ್ಪ 'ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ' ಎಂಬ ನಿರ್ಲಿಪ್ತತೆಯನ್ನು ರೂಢಿಸಿಕೊಂಡಿದ್ದರು. ಸಾಮಾಜಿಕ ಸಂಬಂಧಗಳ ಬಗ್ಗೆ ಕವಿಗೆ ಅಪಾರವಾದ ಕಾಳಜಿ. ಅವರು ಬರೆದ 'ಗೋಡೆ' ಹಾಗೂ 'ನನ್ನ ನಿನ್ನ ನಡುವೆ' ಎಂಬ ಎರಡು ಕವನಗಳಲ್ಲಿ ಅವರು ಈ ಸಂಬಂಧಗಳನ್ನು ಕಾಪಾಡಿಕೊಳ್ಳುವ ಬಗ್ಗೆ ತಮ್ಮ ಚಿಂತನೆಗಳನ್ನು ಹರಿಬಿಟ್ಟಿದ್ದಾರೆ. ಶಿವರುದ್ರಪ್ಪನವರ ಬಗ್ಗೆ ಕನ್ನಡದ ಜನತೆ ಅಪಾರವಾದ ಪ್ರೀತಿಯನ್ನು ತೋರಿಸಿದೆ. ಕುವೆಂಪು ಅವರ ಬಳಿಕ ಇವರನ್ನು ರಾಷ್ಟ್ರಕವಿ ಎಂದು ಕರ್ನಾಟಕ ಸರ್ಕಾರ ಘೋಷಿಸಿತು. ಪಂಪ ಪ್ರಶಸ್ತಿಯನ್ನು ಇವರಿಗೆ ನೀಡಿತು. ದಾವಣಗೆರೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಇವರಿಗೆ ನೀಡಲಾಗಿತ್ತು.
ಜಿಎಸ್‌ಎಸ್ ಕೇವಲ ಕವಿಯಲ್ಲ, ಅವರು ಕಾವ್ಯ ಮೀಮಾಂಸೆಯನ್ನು ಕಟ್ಟಿಕೊಟ್ಟವರು ಹಾಗೂ ವಿಮರ್ಶೆಯನ್ನೂ ಬೆಳೆಸಿದವರು. 'ಕಾವ್ಯಾರ್ಥ ಚಿಂತನ'ವೆಂಬ ಅವರ ಮೇರು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಲಭಿಸಿತ್ತು. ವಿಮರ್ಶೆಯ ಪೂರ್ವಪಶ್ಚಿಮ, ಗತಿ ಬಿಂಬ, ಅನುರಣನ ಅವರ ಪ್ರಮುಖ ವಿಮರ್ಶೆಯ ಕೃತಿಗಳು. ಹದಿನಾಲ್ಕು ಕವನ ಸಂಕಲನಗಳು, ನಾಲ್ಕು ಪ್ರವಾಸ ಕಥನಗಳು, ಹದಿಮೂರು ವಿಮರ್ಶೆ ಹಾಗೂ ಇತರ ಕೃತಿಗಳು ಸಾಹಿತ್ಯಕ್ಕೆ ಅವರ ಕೊಡುಗೆ.
ನವೋದಯ ಕಾಲದಲ್ಲಿ 'ಸಾಮಗಾನ'ದ ಮೂಲಕ ಕಾವ್ಯಕ್ಷೇತ್ರಕ್ಕೆ ಬಂದ ಅವರು ಕೇವಲ ಭಾವ ಲೋಕದಲ್ಲಿ ಮುಳುಗದೆ ಸಾಮಾಜಿಕ ಬದ್ಧತೆಯನ್ನು ತೋರಿಸುವ ಹಲವು ಕವಿತೆಗಳನ್ನು ಬರೆದಿದ್ದಾರೆ. ನವೋದಯದ ಆದರ್ಶ ಮತ್ತು ಕನಸುಗಾರಿಕೆ ಅವರ ಕಾವ್ಯದ ಜೀವಾಳ. ಜೊತೆಯಲ್ಲಿ ಬಂಡಾಯದವರ ತೀಕ್ಷ್ಣ ಸಾಮಾಜಿಕ ವಿಮರ್ಶೆಯನ್ನೂ ನಾವು ಅವರ ಕವನಗಳಲ್ಲಿ ಗುರುತಿಸಬಹುದು. ಈ ಕಾರಣಕ್ಕಾಗಿಯೇ ಕಣವಿಯವರ ಜೊತೆಯಲ್ಲಿ ಇವರನ್ನು ಸಮನ್ವಯ ಕವಿ ಎಂದು ಗುರುತಿಸಲಾಗುತ್ತಿತ್ತು. ಕುವೆಂಪು ಅವರ ನೇರ ಪ್ರಭಾವಕ್ಕೆ ಒಳಗಾದರೂ ಅನುಕರಣೆಯಿಂದ ತಪ್ಪಿಸಿಕೊಂಡಿದ್ದು ಅವರ ಹೆಚ್ಚುಗಾರಿಕೆ. ಕುವೆಂಪು ರೀತಿಯಲ್ಲಿ ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಚಳವಳಿಯನ್ನು ಅವರು ಕಟ್ಟಿದವರಲ್ಲ. ಆದರೆ ಅವರ ಕಾವ್ಯದ ಆಂತರ್ಯದಲ್ಲಿ ಕಾಣುವ ದಿಟ್ಟತನ, ಆತ್ಮವಿಶ್ವಾಸವು ಅಪೂರ್ವವಾದದ್ದು.
ಜಿ.ಎಸ್.ಶಿವರುದ್ರಪ್ಪನವರು ಬಿಟ್ಟುಹೋಗಿರುವ ಕಾವ್ಯಾದರ್ಶಗಳು ಅನುಕರಣೀಯವಾದವು. ಉತ್ಕೃಷ್ಟ ಕಾವ್ಯ ಹೇಗೆ ಹುಟ್ಟುತ್ತದೆ ಎಂಬುದನ್ನು ಮಾತ್ರ ಹೇಳಲಿಲ್ಲ ಅಂಥ ಕಾವ್ಯವನ್ನೂ ಅವರು ಕಟ್ಟಿಯೂ ತೋರಿಸಿದರು. ಕಾವ್ಯ ಮತ್ತು ವಿಮರ್ಶೆಯ, ಪಾಶ್ಚಾತ್ಯ ಮತ್ತು ಪೌರಾತ್ಯ ವಿಮರ್ಶೆಯ ಸವ್ಯಸಾಚಿ ಅವರು. ಕಾವ್ಯ ಧರ್ಮ ಮತ್ತು ಜೀವನ ಧರ್ಮವನ್ನು ಸಮನ್ವಯಗೊಳಿಸಿದವರು ಅವರು. ಅವರ ಅಗಲಿಕೆ ಉಂಟುಮಾಡಿರುವ ನಿರ್ವಾತ ತುಂಬಲಾಗದಂಥದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

