ಸಂಪಾದಕೀಯ

ಆದರ್ಶ್: ರಾಹುಲ್ ಮೌನ ತಪ್ಪು

Published On :

ಕಾರ್ಗಿಲ್ ಸಮರದಲ್ಲಿ ಪ್ರಾಣ ತೆತ್ತ ಯೋಧರ ಪತ್ನಿಯರಿಗೆ ಅನುಕೂಲವಾಗುವಂತೆ ರೂಪಿಸಿದ್ದ ಮುಂಬೈನ ಆದರ್ಶ ಹೌಸಿಂಗ್ ಕಾಂಪ್ಲೆಕ್ಸ್ ಯೋಜನೆಯಲ್ಲಿ ದೇಶದ ಪ್ರಭಾವಿ ವಲಯಗಳ ದೊಡ್ಡ ತಲೆಗಳೇ ಅವ್ಯವಹಾರವನ್ನು ನಡೆಸಿದ್ದ ಆರೋಪಗಳ ತನಿಖೆಗೆ ಮಹಾರಾಷ್ಟ್ರ ಸರ್ಕಾರ ನೇಮಿಸಿದ್ದ ನ್ಯಾಯಾಂಗ ತನಿಖೆ ಸಮಿತಿಯ ವರದಿಯನ್ನು ಮಹಾರಾಷ್ಟ್ರ ಸರ್ಕಾರ ವಿಲೇವಾರಿ ಮಾಡಿದ ರೀತಿ ಸರಿಯಿಲ್ಲ ಎಂದು ಮಹಾರಾಷ್ಟ್ರದ ಎಂ.ಪಿ. ಹಾಗೂ ಕೇಂದ್ರ ಸಚಿವ ಮಿಲಿಂದ್ ದೇವಾರಿಯಾ ಹೇಳಿರುವುದು ತುಂಬಾ ಗಮನಾರ್ಹ.
ಮಿಲಿಂದ್ ದೇವಾರಿಯಾ ರಾಹುಲ್ ಬ್ರಿಗೇಡ್ನ ಸಕ್ರಿಯ ಸದಸ್ಯರು. ಅವರಿಗೆ ಮಹಾರಾಷ್ಟ್ರ ಸರ್ಕಾರದಲ್ಲಿ ನಡೆಯುವ ಎಲ್ಲ ವ್ಯವಹಾರಗಳೂ ಚೆನ್ನಾಗಿಯೇ ಗೊತ್ತಾಗುತ್ತದೆ, ಅಂತಹ ಜಾಲವನ್ನು ಅವರು ರೂಪಿಸಿಕೊಂಡಿದ್ದಾರೆ. ಆದರ್ಶ್ ಕಾಂಪ್ಲೆಕ್ಸ್ನ ಎಲ್ಲ ವ್ಯವಹಾರಗಳನ್ನೂ ಕುರಿತ ತನಿಖೆ ನಡೆಸಿದ ನ್ಯಾಯಾಂಗ ತನಿಖಾ ಆಯೋಗದ ತಂಡದ ಶಿಫಾರ್ಸುಗಳಲ್ಲಿ ಮೂರು ಅಂಶಗಳನ್ನು ಬಿಟ್ಟು ಉಳಿದೆಲ್ಲ ಅಂಶಗಳನ್ನೂ ಸಚಿವ ಸಂಪುಟ ಹಾಗೂ ಸರ್ಕಾರಗಳು, ಸಾರ್ವಜನಿಕ ಹಿತದೃಷ್ಟಿಯಿಂದ ತಿರಸ್ಕರಿಸಲಾಗಿದೆ ಎನ್ನುವುದು ಮುಖ್ಯಮಂತ್ರಿ ಪೃಥ್ವಿರಾಜ ಚೌಹಾಣ್ ಅವರ ಮಾತು. ಆಯೋಗದ ವರದಿಯಲ್ಲಿ, ಈಗಾಗಲೇ ಪ್ರಚಾರವಾಗಿರುವಂತೆ, ಮಾಜಿ ಮುಖ್ಯಮಂತ್ರಿಗಳಾದ ಅಶೋಕ ಚವಾಣ್, ವಿಲಾಸರಾವ್ ದೇಶಮುಖ್ ಹಾಗೂ ಹಿಂದಿನ ಮುಖ್ಯಮಂತ್ರಿ ಈಗಿನ ಗೃಹಮಂತ್ರಿ ಸುಶೀಲ ಕುಮಾರ ಶಿಂಧೆ ಅವರ ಪಾತ್ರವೂ ಪ್ರಸ್ತಾಪವಾಗಿದೆ. ಇನ್ನೂ ಕೆಲವು ಹಿರಿಯ ಅಧಿಕಾರಿಗಳು, ರಕ್ಷಣಾ ಪಡೆಗಳ ಅಧಿಕಾರಿಗಳು, ರಾಜಕಾರಣಿಗಳ ಹೆಸರುಗಳೂ ಇವೆ. ಮಿಲಿಂದ ದೇವಾರಿಯಾ ಅವರ ಹೇಳಿಕೆಯ ಅನಂತರವೂ ರಾಹುಲ ಗಾಂಧಿ ಅವರು ಈ ವಿಚಾರದಲ್ಲಿ ಮೌನವಾಗಿರುವುದು ರಾಜಕೀಯ ಸಜ್ಜನಿಕೆಯ ಲಕ್ಷಣವಲ್ಲ. ರಾಹುಲ ಗಾಂಧಿ ಹಲವು ಸಂದರ್ಭಗಳಲ್ಲಿ ತಮ್ಮ ಸ್ಥಾನ ಹಾಗೂ ಅಧಿಕಾರವನ್ನು ಬಳಸಿ ಅಕ್ರಮಗಳನ್ನು ತಡೆಗಟ್ಟಿದ್ದಾರೆನ್ನುವ ವರದಿಗಳು ಪ್ರಕಟವಾಗಿವೆ. ಆ ಹಿನ್ನೆಲೆಯಲ್ಲಿ ಈಗ ದೇಶಪ್ರೇಮದ ಸೂಕ್ಷ್ಮ ಪ್ರಶ್ನೆಯಾದ ಆದರ್ಶ್ ಕಾಂಪ್ಲೆಕ್ಸ್ ವಿಚಾರದಲ್ಲೂ ನ್ಯಾಯ ದೊರಕಿಸಿ ಕೊಡುವುದು ಅವರ ಕರ್ತವ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.