ಕಾರ್ಪೊರೇಟ್ ವಲಯ- ಲೋಕಪಾಲರು
ಸಂಸತ್ತಿನ ಉಭಯ ಸದನಗಳಲ್ಲೂ ಒಪ್ಪಿಗೆ ಪಡೆದು, ರಾಷ್ಟ್ರಪತಿಯ ಅಂಗೀಕಾರದ ಮುದ್ರೆ ಬಿದ್ದ ಅನಂತರ ಕಾಯಿದೆಯ ರೂಪದಲ್ಲಿ ಜಾರಿಗೆ ಬರಲಿರುವ ಲೋಕಪಾಲ ವ್ಯವಸ್ಥೆ ಸರ್ಕಾರ, ಸರ್ಕಾರಿ ವಲಯದ ಉದ್ಯಮಗಳ ಮೇಲೆ ಪರಿಣಾಮ ಬೀರುವಂತೆಯೇ ಕಾರ್ಪೊರೇಟ್ ವಲಯದ ಮೇಲೂ ಪರಿಣಾಮ ಬೀರಲಿದೆ.
ನೇರವಾಗಿ, ಕಾರ್ಪೊರೇಟ್ ವಲಯಕ್ಕೆ ಸಂಬಂಧಿಸಿದಂತೆಯೇ ಲೋಕಪಾಲ ವ್ಯವಸ್ಥೆಯಲ್ಲಿ ಹಲವಾರು ನಿಯಮಗಳು ಜಾರಿಗೆ ಬರಲೇ ಬೇಕು. ಲೋಕಪಾಲ ವ್ಯವಸ್ಥೆಯ ಯಶಸ್ಸು ಹಾಗೂ ಸೋಲಿಗೆ ಕಾರ್ಪೊರೇಟ್ ವ್ಯವಹಾರವೂ ಹೊಣೆಯನ್ನು ಹೊರಲೇ ಬೇಕು. ಈಗಾಗಲೇ ಎಲ್ಲರ ಗಮನಕ್ಕೂ ಬಂದಿರುವಂತೆ ಎರಡನೇ ತಲೆಮಾರಿನ ಟೆಲಿಕಾಮ್ ತರಂಗಾಂತರ ಗುಚ್ಛಗಳ ಹಂಚಿಕೆಯ ಹಗರಣದಲ್ಲಿ ಕಾರ್ಪೊರೇಟ್ ವಲಯದ ಪಾತ್ರ ಗಮನಾರ್ಹವಾಗಿತ್ತು. ಅದೇ ರೀತಿ ಅಕ್ರಮ ಗಣಿಗಾರಿಕೆ, ಕಲ್ಲಿದ್ದಲು ಗಣಿಗಳ ಹಂಚಿಕೆಯ ವ್ಯವಹಾರದಲ್ಲೂ ಆ ಪಾತ್ರ ಅನುಮಾನಕ್ಕೆ ಅವಕಾಶವೇ ಇಲ್ಲದಂತೆ ಪ್ರಚಾರ ಪಡೆದಿದೆ. ನಿಜ. ದೇಶದ ಕಾರ್ಪೊರೇಟ್ ವಲಯದ ಎಲ್ಲ ಸಂಸ್ಥೆಗಳೂ ಅಪ್ರಾಮಾಣಿಕವಲ್ಲ. ಬಹುತೇಕ ಸಂಸ್ಥೆಗಳ ವ್ಯವಹಾರ ಪ್ರಾಮಾಣಿಕವಾಗಿಯೇ ನಡೆದಿರಬಹುದು. ಈಗ ಕಾರ್ಪೊರೇಟ್ ವಲಯದ ಬೃಹತ್ ಸಂಸ್ಥೆಗಳೆಲ್ಲವೂ ನೂತನ ಲೋಕಪಾಲ ವ್ಯವಸ್ಥೆಯ ನಿಯಮಗಳ ವಿವರಗಳು ಹಾಗೂ ಅದರ ಜಾರಿಯಲ್ಲಿ ಸಂಸ್ಥೆಗಳ ಪಾತ್ರ ಕುರಿತಂತೆ ತಜ್ಞರ ಅಭಿಪ್ರಾಯವನ್ನು ಪಡೆಯಲು ಮುಂದಾಗಿವೆ. ಇದು ಒಳ್ಳೆಯ ಸೂಚನೆ. ಹೊಸ ವ್ಯವಸ್ಥೆಯಲ್ಲಿ ಸಂಸ್ಥೆಗಳ ವ್ಯವಹಾರ ಹಾಗೂ ವರ್ತನೆಯಲ್ಲಿ ನಿರ್ದೇಶಕರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಆ ಸ್ಥಿತಿಯನ್ನು ಎದುರಿಸಲು ಹಾಗೂ ನಿಭಾಯಿಸಲು ಕಾರ್ಪೊರೇಟ್ ವಲಯ, ಸಂಸ್ಥೆಗಳ ಮಟ್ಟದಲ್ಲಿ ವಿಶೇಷ ಚಿಂತನೆ ಹಾಗೂ ಕಾರ್ಯ ಪಡೆಗಳನ್ನು ರಚಿಸಿಕೊಳ್ಳುವುದು ಸೂಕ್ತ. ಸಂಸ್ಥೆಗಳು ತಮ್ಮ ಅನುಭವವನ್ನು ಲೋಕಪಾಲ ವ್ಯವಸ್ಥೆಯ ಜತೆ ಹಂಚಿಕೊಳ್ಳುವುದೂ ಒಳ್ಳೆಯದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

