ತಪ್ಪಾಯ್ತು ತಿದ್ಕೋತೀವಿ
ಮಂಡ್ಯ ಜಿಲ್ಲೆ ಪಾಂಡವಪುರದಿಂದ ಹರಳಹಳ್ಳಿ ಪುಟ್ಟರಾಜು ಅವರು ಬರೆಯುತ್ತಾರೆ- 'ಪ್ರತಿಯೊಂದು ಪತ್ರಿಕೆಗಳು ತಮ್ಮ ಮುಖಪುಟ ಸುದ್ದಿಗಳನ್ನು ವಿಶೇಷ ಹಾಗೂ ವಿಶಿಷ್ಟ ರೀತಿಯಲ್ಲಿ ರೂಪಿಸಬೇಕೆಂಬ ಹಂಬಲ, ತುಡಿತ ಹಾಗೂ ಆಕಾಂಕ್ಷೆಯನ್ನು ಇಟ್ಟುಕೊಂಡಿರುತ್ತವೆ. ತಾನು ಕೊಡುವ ಸುದ್ದಿಗಳ ಸತ್ವಕ್ಕಿಂತ ಶೀರ್ಷಿಕೆಗಳೇ ಹೆಚ್ಚು ಓದುಗರನ್ನು ಸೇಳೆಯಬೇಕೆಂಬ ಆಸೆ, ಆಕಾಂಕ್ಷೆ ಎಲ್ಲಾ ಪತ್ರಿಕೆಗಳಲ್ಲೂ ಇರುತ್ತದೆ. ಇದಕ್ಕೆ ನಮ್ಮ ಕನ್ನಡಪ್ರಭವೂ ಹೊರತಾಗಿಲ್ಲ.
ಆದರೆ ಹೆಚ್ಚು ನೆಮ್ಮದಿ ಹಾಗೂ ಖುಷಿ ತರುವ ಸಂಗತಿಯೆಂದರೆ ನಮ್ಮ ನೆಚ್ಚಿನ ಕನ್ನಡಪ್ರಭವು ತಾನು ನಿತ್ಯ ತನ್ನ ಓದುಗರಿಗೆ ಕೊಡುವ ಸುದ್ದಿಗಳ ಸತ್ವವನ್ನು ಎಂದೂ ಸೊರಗಲುಬಿಡದೇ, ಆದಷ್ಟು ಹಾಗೂ ತನಗೆ ತೋಚಿದ್ದಷ್ಟರಮಟ್ಟಿಗೆ ಉತ್ತಮ ರೀತಿಯಲ್ಲಿ ಸುದ್ದಿಗಳನ್ನು ಪ್ರಕಟಿಸುತ್ತಿರುವುದು ಸಮಾಧಾನಕರ ಸಂಗತಿ. ಆದರೆ ಸಮಸ್ಯೆಯಾಗಿರುವುದು ನೀವು ಕೊಡುವ ಪ್ರಾಸಬದ್ಧ, ವರ್ಣರಂಜಿತ ಶೀರ್ಷಿಕೆಗಳಲ್ಲಿ...
ಕೊಟ್ ಕಿತ್ಕೊಂಡ್ರು, ವಿಘ್ನರೂಪಂ, ರಾಜಿನಾಮೆಗೆ ಪಂಚನಾಮೆ, ಕಾಂಗ್ರೆಸ್ ಜಲಫಿರಂಗಿ, ಎಫ್ಡಿಐಗೆ ಮತಾಸ್ತು, ಮೂಖರ್ಜಿ ಮಾತು, ನರ್ಸಿಂಗ್ ಪರೀಕ್ಷೆಯಲ್ಲಿ ಕಾಪಿ ಡ್ರೆಸಿಂಗ್ - ಇಂತಹ ಹಲವಾರು ಶೀರ್ಷಿಕೆಗಳನ್ನು ನೋಡಲು ಹಾಗೂ ಓದಲು ಅಡ್ಡಿಯೇನಿಲ್ಲ. ಆದರೆ ನೀವು ಕೊಡುವ ಈ ಶೀರ್ಷಿಕೆಗಳು ಪತ್ರಿಕೆಯನ್ನು ಓದುವ ಎಲ್ಲ ಸಹೃದಯ ಓದುಗರ ಮನಸೆಳೆಯುವಲ್ಲಿ ವಿಫಲವಾಗಿವೆ ಎಂದೇ ಹೇಳಬಹುದು. ಏಕೆಂದರೆ ನಿಮ್ಮ ಈ ಶೀರ್ಷಿಕೆಗಳು ನೀವು ಕೊಡುವ ಸುದ್ದಿಗೆ ಒಳಾರ್ಥ ಹಾಗೂ ಗೂಡಾರ್ಥವನ್ನು ಹೆಚ್ಚು ಪ್ರತಿಬಿಂಬಿಸುತ್ತವೆ ಎಂಬುದು ಪತ್ರಿಕೆಯನ್ನು ಆಳವಾಗಿ ಬಲ್ಲ ಓದುಗರಿಗೆ ಇವನ್ನು ಅರ್ಥಮಾಡಿಕೊಳ್ಳುವಲ್ಲಿ ಸಮಸ್ಯೆಯಾಗದು. ಆದರೆ ತೀರಾ ಕಡಿಮೆ ಅಕ್ಷರ ಜ್ಞಾನವುಳ್ಳ ಓದುಗರಿಗೆ ಈ ರೀತಿಯ ಶೀರ್ಷಿಕೆಯ ಒಳಾರ್ಥ (ಮತಾಸ್ತು, ಮೂಖರ್ಜಿ, ಸುಪ್ರಭತಾ, ನರ್ಸಿಂಗ್ ಡ್ರೆಸಿಂಗ್ ಮುಂತಾದವು) ಅವರಿಗೆ ಅರ್ಥವಾಗುವುದಾದರೂ ಹೇಗೆ?
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದುಗರನ್ನು ಸೆಳೆಯಲು ಈ ರೀತಿ ಇಂತಹ ಶೀರ್ಷಿಕೆಗಳು ನಿಮಗೆ ಎಷ್ಟು ಅನಿವಾರ್ಯವೋ, ಅದೇ ರೀತಿ ಯಾವುದೇ ಅನುಮಾನ, ಅಪಾರ್ಥ ಹಾಗೂ ಗೊಂದಲಕ್ಕೆ ಎಡೆಮಾಡಿಕೊಡದೇ? ಶೀರ್ಷಿಕೆಯನ್ನು ನೀಡಿದ ತಕ್ಷಣ ಇಡೀ ವರದಿಯನ್ನೇ ಗ್ರಹಿಸುವಷ್ಟರಮಟ್ಟಿಗೆ ಜತೆಗೆ ಅದು ಎಲ್ಲಾ ಜ್ಞಾನವರ್ಗದ ಓದುಗರ ಮಾನಸಿಕ ಮಟ್ಟಕ್ಕೆ ನಿಲುಕುವಂತಹ ಶೀರ್ಷಿಕೆಯಾಗಿರುವುದು ಅಷ್ಟೇ ಮುಖ್ಯ ಅಲ್ಲವೇ? ಏಕೆಂದರೆ ನಿಮ್ಮ ಪ್ರಾಸ ಓದುಗರಿಗೆ ತ್ರಾಸವಾಗಬಾರದೆಂಬುದು ನಮ್ಮ ಸದಾಶಯ ಎಂದಿದ್ದಾರೆ.
ಪತ್ರಿಕೆಗೆ ವಿವಿಧ ಆಸಕ್ತಿಯ, ಹವ್ಯಾಸದ ಓದುಗರಿರುತ್ತಾರೆ. ಪ್ರತಿ ಓದುಗನ ನಿರೀಕ್ಷೆಯೂ ಬೇರೆಯೇ ಆಗಿರುವ ಸಾಧ್ಯತೆಗಳೂ ಇವೆ. ಮೊಟ್ಟೆದರ ಹಾಕಿಲ್ಲ ಎಂದು ಬೇಸರಿಸಿಕೊಳ್ಳುವ ಓದುಗರಿರುತ್ತಾರೆ. ತುಂಬ ಮಡಿವಂತರು ಮೊಟ್ಟೆ ದರ ಯಾಕೆ ಪ್ರಕಟಿಸುತ್ತೀರಿ ಅದರ ಬದಲು ಮಲ್ಲಿಗೆ ದರ ಪ್ರಕಟಿಸಿ ಎನ್ನುತ್ತಾರೆ. ಆದ್ದರಿಂದ ಪತ್ರಿಕೆ ರೂಪಿಸುವಾಗ ವಿವಿಧ ಆಸಕ್ತಿಯ ಓದುಗರನ್ನು ಗಮನದಲ್ಲಿರಿಸಿಕೊಂಡು ಪತ್ರಿಕೆ ರೂಪಿಸಲಾಗುತ್ತದೆ. ಒಂದು ಶೀರ್ಷಿಕೆ, ಸುದ್ದಿ, ಲೇಖನ ಎಲ್ಲ ಓದುಗರಿಗೂ ಇಷ್ಟವಾಗುವುದಿಲ್ಲ. ಆದರೆ ಒಂದಷ್ಟು ಸಂಖ್ಯೆಯ ಓದುಗರು ಅದಕ್ಕಿರುತ್ತಾರೆ. ಆದ್ದರಿಂದಲೇ ಪತ್ರಿಕೆಯ ಸುದ್ದಿ, ಲೇಖನಗಳಲ್ಲಿ ವೈವಿಧ್ಯವಿರಬೇಕು ಎಂದು ಹೇಳುವುದು.
ಕೆಲವು ಓದುಗರಿಗೆ ಶೀರ್ಷಿಕೆ ನೇರವಾಗಿ ಅರ್ಥವಾಗದೇ ಇರಬಹುದು. ಆದರೆ ಸುದ್ದಿ ಓದಿದಾಗ ಇದು ಖಂಡಿತ ಅರ್ಥವಾಗುತ್ತದೆ. ಅಂತಹ ಶೀರ್ಷಿಕೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಓದುಗರಲ್ಲಿ ಬೆಳೆಸಿದಂತೆಯೂ ಆಗುತ್ತದೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

