ಸಂಪಾದಕೀಯ

ರೋಗಿಗಳ ಗತಿಯೇನು? (ಪತ್ರಪ್ರಭ)

Published On :

ವ್ಯೆದ್ಯರ ಮುಷ್ಕರವು ರೋಗಿಗಳನ್ನು ಹಾಗೂ ಅವರ ಪೋಷಕರನ್ನು ಕಂಗಾಲಾಗಿಸಿದೆ.  ಮುಷ್ಕರದ ಫಲವಾಗಿ ಸಾವು ನೋವುಗಳು ಪ್ರಾರಂಭವಾಗಿದೆ. ವ್ಯೆದ್ಯರ ಈ ಮುಷ್ಕರದಿಂದ ಖಾಸಗಿ ಆಸ್ಪತ್ರೆ ಹಾಗೂ ವ್ಯೆದ್ಯರಿಗೆ ಸುಗ್ಗಿಯಾಗಿದೆ.  ಆದರೆ ಮರಣೋತ್ತರ ಪರೀಕ್ಷೆಗೆ ಶವವನ್ನು ಇಟ್ಟುಕೊಂಡು ದುಃಖ ತಪ್ತರು ಕಾಯಬೇಕಾದ ಪರಿಸ್ಥಿತಿ ಬಂದಿರುವುದು ಶೋಚನೀಯ. ಅವರ ಗೋಳನ್ನು ಕೇಳುವವರಿಲ್ಲದಾಗಿದೆ. ಮರಣೋತ್ತರ ಪರೀಕ್ಷೆಗೆ ಖಾಸಗಿ ಆಸ್ಪತ್ರೆಗೆ ಅಧಿಕಾರವನ್ನು ನೀಡುವುದು ಮತ್ತು ಅದಕ್ಕೆ ತಗಲಬೇಕಾದ ಖರ್ಚನ್ನು ಸರ್ಕಾರವೇ ಭರಿಸುವ ಕೆಲಸವಾಗಬೇಕು. ವೈದ್ಯರು ಸಾಮೂಹಿಕ ರಾಜೀನಾಮೆಗೆ ಬೆದರಿಕೆ ಹಾಕಿದರೆ, ಅವರ ಜಾಗಕ್ಕೆ ಬಂದು ಕೆಲಸ ಮಾಡಲು ಅನೇಕ ನಿರುದ್ಯೋಗಿ ವೈದ್ಯರು ಕಾಯುತ್ತಿದ್ದಾರೆ. ಅಂತಹವರ ನೇಮಕಾತಿ ಮಾಡಿ ರೋಗಿಗಳನ್ನು ಸಂಕಷ್ಟದಿಂದ ಪಾರು ಮಾಡಬೇಕು. ಹೊಸದಾಗಿ ನೇಮಕವಾಗುವ ವ್ಯೆದ್ಯರಿಗೂ ತಾವು ರಾಜಿನಾಮೆ ಕೊಡಲು ಬೆದರಿಸಿದ ಮಾರ್ಗವನ್ನು ತುಳಿದರೆ ತಮಗೂ ಇದೇ ಸ್ಥಿತಿ ಬರುವುದೆಂದು ಗೊತ್ತಾಗಬೇಕು. ನ್ಯಾಯಸಮ್ಮತವಾದ ಬೇಡಿಕೆಯನ್ನು ಸರಕಾರವು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ, ಹಾಗೂ ವ್ಯೆದ್ಯರು ತಮ್ಮ ಬೇಡಿಕೆಯಲ್ಲಿ ರಾಜಿ ಮಾಡಿಕೊಳ್ಳದಿದ್ದಲ್ಲಿ, ಜನರ ಆಕ್ರೋಶಕ್ಕೆ ಬಲಿಯಾಗಬೇಕಾಗುತ್ತದೆ. ಮುಷ್ಕರ ಅಂತ್ಯವಾಗುವವರೆವಿಗೂ ಸರ್ಕಾರವು ಬದಲಿ ವ್ಯವಸ್ಥೆ ಮಾಡಿ ರೋಗಿಗಳ ಹಿತವನ್ನು ರಕ್ಷಿಸುವುದು ಹಾಗೂ ಕಾಪಾಡುವುದು ತ್ವರಿತವಾಗಿ ಆಗ ಬೇಕಾದ ಕೆಲಸ.
ಕೆ.ವಿ. ಸೀತಾರಾಮಯ್ಯ, ಹಾಸನ

ಬೇಗ ಬಗೆಹರಿಯಲಿ
ರಾಜ್ಯಾದ್ಯಂತ ವೈದ್ಯರ ಮುಷ್ಕರದಿಂದಾಗಿ ರೋಗಿಗಳು ಪರದಾಡುವಂತಾಗಿದೆ. ಎಷ್ಟೋ ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ರೋಗಿಗಳು ಸಾವನ್ನಪ್ಪಿರುವ ಘಟನೆಗಳು ಸಹ ರಾಜ್ಯದ ಅಲ್ಲಲ್ಲಿ ಕಂಡುಬರುತ್ತಿವೆ. ಪರಿಸ್ಥಿತಿ ಇಷ್ಟೊಂದು ಉಲ್ಬಣಿಸಿರುವಾಗ ಸರ್ಕಾರಿ ಆಸ್ಪತ್ರೆಗೆ ಬರುವ ಬಡಜನರ ಪ್ರಾಣದ ಜತೆ ವೈದ್ಯರು ಹಾಗೂ ಸರ್ಕಾರ ಚೆಲ್ಲಾಟವಾಡುತ್ತಿರುವುದು ಖಂಡನೀಯ. ವೈದ್ಯರ ನ್ಯಾಯಯುತ ಬೇಡಿಕೆಗಳು ಏನೇ ಇರಲಿ, ಅವುಗಳನ್ನು ಮಾತುಕತೆಯ ಮೂಲಕ ಈಡೇರಿಸುವುದು ಸರ್ಕಾರ ಆದ್ಯ ಕರ್ತವ್ಯ. ಅದನ್ನು ಸರ್ಕಾರ ಇಷ್ಟರಲ್ಲೇ ಮಾಡಬೇಕಿತ್ತು. ಆದರೆ ಆ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಇನ್ನು ವೈದ್ಯರಾದರೂ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಉಪಚರಿಸುವ ಸೌಜನ್ಯವನ್ನು ತೋರದೇ ಕೆಲವೆಡೆ ಆಸ್ಪತ್ರೆಗಳಿಗೆ ಬೀಗ ಜಡಿದು ಮುಷ್ಕರದಲ್ಲಿ ಪಾಲ್ಗೊಂಡಿರುವುದು ಎಷ್ಟು ಸರಿ? ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಸರ್ಕಾರ ಹಾಗೂ ವೈದ್ಯರ ನಡುವೆ ನಡೆಯುತ್ತಿರುವ ಜಟಾಪಟಿಯಿಂದ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ, ಅವರು ಸಾವು ನೋವುಗಳ ಮಧ್ಯೆ ಬಳಲಿ ಬೆಂಡಾಗಿ ಪರಿತಪಿಸುತ್ತಿರುವ ಸಂದರ್ಭ ಸೃಷ್ಟಿಸುತ್ತಿರುವುದು ತರವೇ?   ಹೀಗಾಗಿ ಆದಷ್ಟು ಬೇಗ ಸರ್ಕಾರ, ವೈದ್ಯರ ಮುಷ್ಕರಕ್ಕೆ ಇತಿಶ್ರೀ ಹಾಡಿ ರೋಗಿಗಳ ಕಷ್ಟ ದುಃಖಗಳಿಗೆ ಸ್ಪಂದಿಸಲಿ.
-ಹರಳಹಳ್ಳಿಪುಟ್ಟರಾಜು, ಪಾಂಡವಪುರ, ಮಂಡ್ಯ

ಫಲಿತಾಂಶ ಪ್ರಕಟಿಸಿ
ನವೆಂಬರ್ ತಿಂಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಮೊದಲನೇ ವರ್ಷದ ಮೂರನೆ ಸೆಮಿಸ್ಟರ್ ಬಿ.ಎ./ಬಿ.ಎಸ್ಸಿ/ಬಿ.ಕಾಂ./ಬಿ.ಬಿ.ಎಂ. ಪರೀಕ್ಷೆಗಳನ್ನು ನಡೆಸಿತು. ಈಗಾಗಲೇ ಐದನೇ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಬಂದಿದೆ. ಮೌಲ್ಯಮಾಪನ ಕಾರ್ಯ ಮುಗಿದು ಅರವತ್ತು ದಿನವಾಗಿದ್ದು ಕಾಲೇಜಿನ ತರಗತಿಗಳು ಆರಂಭವಾಗಿ ಒಂದು ತಿಂಗಳಾಗಿದೆ. ಉಳಿದ ಪರೀಕ್ಷೆಗಳ ಫಲಿತಾಂಶಗಳು ಬಾರದೆ ಭ್ರಮನಿರಸನವಾಗಿದೆ. ಇದೀಗ ತಾನೇ ಹೊಸ ಉಪಕುಲಪತಿಗಳು ವಿಶ್ವವಿದ್ಯಾನಿಲಯಕ್ಕೆ ಹೆಜ್ಜೆ ಹಾಕಿದ್ದು ತಡವಾಗಿರುವ ಫಲಿತಾಂಶವನ್ನು ಬೇಗನೆ ಪ್ರಕಟಿಸಬೇಕೆಂದು ನೊಂದ ವಿದ್ಯಾರ್ಥಿಗಳ ಪರವಾಗಿ ವಿನಂತಿ.
-ಸಂತೋಷ್.ಡಿ., ಸರ್ಕಾರಿ ಪ್ರಾಥಮಿಕ ದರ್ಜೆ ಕಾಲೇಜು, ಕೆ.ಆರ್.ಪುರ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.