ಆಡಿಟ್ ವರದಿ ಯಾರಿಗೆ ಬೇಕು?
ಸಂವಿಧಾನದ ವಿಧಿನಿಯಮಗಳಂತೆ ರಾಜ್ಯ ಸರ್ಕಾರದ ಇಲಾಖೆಗಳ ವೆಚ್ಚದ ವ್ಯವಹಾರವನ್ನು ಆಡಿಟರ್ ಜನರಲ್ ಪರಿಶೀಲಿಸಿ ಕಂಡುಬಂದ ಲೋಪದೋಷಗಳನ್ನು ವಿಧಾನಸಭೆಯ ಮೂಲಕ ಸರ್ಕಾರದ ಗಮನಕ್ಕೆ ತರಬೇಕು. ಇಂತಹ ಆಡಿಟ್ ವರದಿಗಳು ಆಗಿಂದಾಗ್ಗೆ ಪ್ರಕಟವಾಗುತ್ತವೆ. ಅದನ್ನು ವಿಧಾನಸಭೆ ನೇರವಾಗಿ ಚರ್ಚಿಸುವುದಿಲ್ಲ.
ಸದನದ ಸರ್ಕಾರಿ ಲೆಕ್ಕ ಪತ್ರಗಳ ಸಮಿತಿ ಆ ವರದಿಯನ್ನು ಪರಿಶೀಲಿಸಿ, ತನ್ನ ಶಿಫಾರ್ಸುಗಳನ್ನು ಸರ್ಕಾರಕ್ಕೆ ನೀಡುತ್ತದೆ. ಸರ್ಕಾರ ಅನಂತರ ಸಂಬಂಧ ಪಟ್ಟ ವಿಚಾರದಲ್ಲಿ ಕೈಗೊಳ್ಳಬಹುದಾದ ಕ್ರಮಕ್ಕೆ ಮುಂದಾಗಬೇಕು.
ಸರ್ಕಾರದ ವೆಚ್ಚದಲ್ಲಿ ಆಗಬಹುದಾದ ಅವ್ಯವಹಾರ, ಮೋಸದ ವ್ಯವಹಾರಗಳನ್ನು ಬಯಲಿಗೆ ತರುವ ಸ್ವತಂತ್ರ - ಸ್ವಾಯತ್ತ ಆಡಿಟ್ ವ್ಯವಸ್ಥೆ ಇದು. ಆದರೆ ಕಾಲಚಕ್ರದ ಉರುಳಲ್ಲಿ ಸಿಕ್ಕಿ ಬಿದ್ದು ಈ ಆಡಿಟ್ ವರದಿಗಳೂ ತಮ್ಮ ಉಪಯುಕ್ತತೆ ಹಾಗೂ ಪ್ರಾಮುಖ್ಯವನ್ನು ಕಳೆದುಕೊಂಡಂತಿದೆ.
ಕರ್ನಾಟಕದ ಈಗಿನ ವಿಧಾನ ಸಭೆಯ ಕಟ್ಟಕಡೆಯ ಅಧಿವೇಶನದಲ್ಲಿ ಎರಡು ಆಡಿಟ್ ವರದಿಗಳನ್ನು ಮಂಡಿಸಲಾಗಿತ್ತು. ಅವೆರಡನ್ನೂ ಒಟ್ಟಿಗೇ ಓದಿದರೆ ಸರ್ಕಾರದಲ್ಲಿ ಯಾವುದೇ ಇಲಾಖೆಯಲ್ಲಾದರೂ ಸರಿಯಾಗಿ ಕೆಲಸ ನಡೆಯುತ್ತಿದೆಯೇ, ಅವ್ಯವಹಾರ ನಡೆಯದೇ ಇರುವ ಇಲಾಖೆ ಇದೆಯೇ ಎನ್ನುವ ಅನುಮಾನ ಕಾಡುವುದು ಖಚಿತ. ಈ ಆಡಿಟ್ ವರದಿಗಳಲ್ಲಿ ಪ್ರಕಟವಾಗಿರುವ ಲೋಪದೋಷಗಳನ್ನು ಮಾಧ್ಯಮ ಪ್ರಪಂಚದಲ್ಲಿ ಸಾಕಷ್ಟು ವಿವರವಾಗಿಯೇ ಚರ್ಚಿಸಲಾಗಿದೆ. ಕೆಲವು ಪ್ರಕರಣಗಳಂತೂ ಗಾಬರಿ ಹುಟ್ಟಿಸುವಂತಹದ್ದು. ಹಿಂದೆ ಪ್ರಕಟವಾದ ವರದಿಯಲ್ಲಿ ಅಕ್ರಮ ಗಣಿಗಾರಿಕೆಯ ಅವಾಂತರಗಳ ಚಿತ್ರವಿತ್ತು. ಈಗಿನ ವರದಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಜನಾರೋಗ್ಯ ಇಲಾಖೆ, ರಾಜ್ಯ ಸರ್ಕಾರಿ ಉದ್ಯಮಗಳು ಹಾಗೂ ಶಿಕ್ಷಣ ಇಲಾಖೆಯ ಹಲವು ಪ್ರಕರಣಗಳನ್ನು ಕುರಿತ ಪ್ರಸ್ತಾಪವಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಇರುವ ದಾಖಲೆಗಳಲ್ಲಿನ ಮಾಹಿತಿಗೂ ವಾಸ್ತವಕ್ಕೂ ಸಂಬಂಧವೇ ಇಲ್ಲ. ಆರೋಗ್ಯ ಇಲಾಖೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಔಷಧಿಗಳನ್ನಿಡಲು ಜಾಗವೇ ಇಲ್ಲ. ಕೆಲವು ಪೆಟ್ಟಿಗೆಗಳ ಮೇಲೆ ಸತ್ತ ಇಲಿಗಳು ಬಿದ್ದಿದ್ದವು.
ಬೆಂಗಳೂರು ಜಲಮಂಡಳಿಯಲ್ಲಿ ಕೊಳ್ಳದೇ ಇರುವ ಮಾಲಿಗೆ ನಕಲಿ ಬಿಲ್ಗಳನ್ನು ಸೃಷ್ಟಿಸಿ, ಮೋಸದಿಂದ ಹಣ ಪಡೆಯಲಾಗಿದೆ. ರಾಜ್ಯ ಸರ್ಕಾರದ ಮಾಲೀಕತ್ವದ ಹದಿನಾಲ್ಕು ಉದ್ಯಮಗಳಲ್ಲಿ ಯಾವುದೇ ಕೆಲಸ ನಡೆಯದೇ ಇದ್ದರೂ ಸಿಬ್ಬಂದಿ ಇದೆ, ಸಂಬಳ ಭತ್ಯ ಪಾವತಿಯಾಗುತ್ತಿದೆ.
ಮೈಸೂರು ಮಿನರಲ್ಸ್ - ಜಿಂದಾಲ್ ಒಪ್ಪಂದದಲ್ಲಿ ಖಾಸಗಿ ಸಂಸ್ಥೆಗೆ ಲಾಭವಾದರೆ ಸರ್ಕಾರಿ ಕಂಪನಿಗೆ ನಷ್ಟವಾಗುತ್ತಿದೆ.
ಹೀಗೇ ಆಡಿಟ್ ವರದಿ ವಿವರಗಳನ್ನು ಓದುತ್ತಾ ಹೋದಾಗ ಸರ್ಕಾರದಲ್ಲಿ ಹೀಗೂ ಉಂಟೇ ಎನ್ನುವ ಅನುಮಾನ ಮೂಡುವುದು ಸಹಜ. ನಿಜ. ಇಂತಹ ಅನಿಸಿಕೆಯಲ್ಲಿ ಉತ್ಪ್ರೇಕ್ಷೆ ಇರಬಹುದು. ಆದರೆ ಆರೋಪಗಳು ಪ್ರಕಟವಾದಾಗಲೇ ಸರ್ಕಾರದ ಸಿಬ್ಬಂದಿಗೆ ಎಚ್ಚರಿಕೆಯಾಗುವುದು ಎಂದರೆ ಹೇಗೆ?
ಕಳೆದ ಹಲವಾರು ವರ್ಷಗಳಲ್ಲಿ ಯಾವ ಇಲಾಖೆಯಲ್ಲೂ ಆಡಿಟ್ ವರದಿಯ ಆಧಾರದ ಮೇಲೆ ಗಮನಾರ್ಹವಾದ ರೀತಿಯಲ್ಲಿ ಸುಧಾರಣೆಯಾದ ವರದಿ ಪ್ರಕಟವಾಗಿಲ್ಲ. 1982 ರಲ್ಲಿ, ಗುಂಡೂರಾಯರ ಕಾಲದಲ್ಲಿ ಬೆಳಕಿಗೆ ಬಂದ ವ್ಯವಹಾರಗಳು ಇನ್ನೂ ಹಾಗೇ ಇವೆ.
ಈಗ ಪ್ರಕಟವಾಗಿರುವ ವರದಿಯನ್ನು ವಿಧಾನ ಸಭೆಯ ಸಮಿತಿ ಪರಿಶೀಲಿಸುವುದಕ್ಕೆ ಇನ್ನೊಂದು ವರ್ಷ ಬೇಕು. ಅನಂತರ ಆ ಸಮಿತಿಯ ಶಿಫಾರ್ಸನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸರ್ಕಾರ ಮುಂದಾಗಬೇಕು. ಅದಕ್ಕೆಷ್ಟು ದಿನ ಬೇಕೋ ಗೊತ್ತಿಲ್ಲ. ಹಾಗಿದ್ರೆ ಈ ಆಡಿಟ್ ವರದಿ ಪ್ರಸ್ತಾಪಿತ ಅಂಶ ಮತ್ತು ಅದರ ಬಳಕೆ ಮಾಧ್ಯಮ ಪ್ರಪಂಚಕ್ಕೇ ಸೀಮಿತವೇನು? ಕಾಡುವ ಪ್ರಶ್ನೆ ಅದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

